ಶೇ. 100ರಷ್ಟು ಫಲಿತಾಂಶ ಪಡೆಯಲು ಮಕ್ಕಳ ಬದುಕಲ್ಲಿ ಚೆಲ್ಲಾಟವಾಡಿದ ಖಾಸಗಿ ಶಾಲೆ; ಅನುಮತಿ ಪಡೆಯದೆ ಬೇರೊಂದು ಶಾಲೆಗೆ ನೋಂದಣಿ: ಇಂಟರ್ನಲ್ ಮಾರ್ಕ್ಸ್ ದೊರೆಯದೆ 10 ವಿದ್ಯಾರ್ಥಿನಿಯರು ಫೇಲ್
Bengaluru News: ಶೇ. 100ರಷ್ಟು ಫಲಿತಾಂಶ ಬರಬೇಕೆಂಬ ಧಾವಂತಕ್ಕೆ ಬಿದ್ದ ಬೆಂಗಳೂರಿನ ವಸಂತ ನಗರದ ಪ್ರತಿಷ್ಠಿತ ಸೇಂಟ್ ಮೇರಿಸ್ ಗರ್ಲ್ಸ್ ಹೈಸ್ಕೂಲ್ 10 ವಿದ್ಯಾರ್ಥಿನಿಯರನ್ನು ಅವರ ಪೋಷಕರ ಗಮನಕ್ಕೆ ತಾರದೆ ಅನಾಥ ಮಕ್ಕಳು ಎಂದು ಸರ್ಕಾರಿ ಶಾಲೆಯಲ್ಲಿ ಅಡ್ಮಿಷನ್ ಮಾಡಿಸಿದೆ. ಸದ್ಯ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ವಿರುದ್ದ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶ ಪಡೆಯಲು ನಗರದ ಶಾಲೆಯೊಂದು ಆಡಿದ್ದ ಕಳ್ಳಾಟ ಇದೀಗ ಬಯಲಾಗಿದೆ. ಓದಿನಲ್ಲಿ ಹಿಂದಿದ್ದ 10 ವಿದ್ಯಾರ್ಥಿನಿಯರನ್ನು ಅವರ ಪೋಷಕರಿಗೆ ಅರಿವಿಲ್ಲದಂತೆ ಬೇರೊಂದು ಶಾಲೆಗೆ ಆಡಳಿತ ಮಂಡಳಿ ನೋಂದಾಯಿಸಿದ್ದ ಅಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಸಂತ ನಗರದ ಪ್ರತಿಷ್ಠಿತ ಸೇಂಟ್ ಮೇರಿಸ್ ಗರ್ಲ್ಸ್ ಹೈಸ್ಕೂಲ್ (St. Mary’s Girls High School) ಈ ರೀತಿಯ ಮೋಸ ಮಾಡಿದ್ದು, ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ವಿರುದ್ದ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ.
ಶೇ. 100ರಷ್ಟು ಫಲಿತಾಂಶ ಬರಬೇಕೆಂಬ ಧಾವಂತಕ್ಕೆ ಬಿದ್ದ ಈ ಶಾಲೆ 10 ವಿದ್ಯಾರ್ಥಿನಿಯರನ್ನು ಅವರ ಪೋಷಕರ ಗಮನಕ್ಕೆ ತಾರದೆ ಅನಾಥ ಮಕ್ಕಳು ಎಂದು ಸರ್ಕಾರಿ ಶಾಲೆಯಲ್ಲಿ ಅಡ್ಮಿಷನ್ ಮಾಡಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಇಂಟರ್ನಲ್ ಮಾರ್ಕ್ಸ್ ಇಲ್ಲದ ಕಾರಣ ವಿದ್ಯಾರ್ಥಿನಿಯರು ಫೇಲ್ ಆಗಿದ್ದಾರೆ. ಮಕ್ಕಳ ಭವಿಷ್ಯದ ಜತೆ ಆಟವಾಡಿದ ಶಾಲಾ ಆಡಳಿತದ ವಿರುದ್ಧ ಪೋಷಕರು ಕಿಡಿಕಾರಿದ್ದಾರೆ.
ಈ ಸುದ್ದಿಯನ್ನೂ ಓದಿ: ಸಂಪುಟ ನಿರ್ಣಯ: ಉತ್ತರ ಕನ್ನಡದ ಅಪ್ಸರಕೊಂಡ-ಮುಗಳಿ ಕಡಲ ವನ್ಯಜೀವಿ ಧಾಮ ಘೋಷಣೆ
ಎಲ್‌ಕೆಜಿಯಿಂದ ಸೇಂಟ್ ಮೇರಿಸ್ ಗರ್ಲ್ಸ್ ಶಾಲೆಯಲ್ಲಿ ಓದುತ್ತಿರುವ ಸಂತ್ರಸ್ತೆ ವಿದ್ಯಾರ್ಥಿನಿಯೊಬ್ಬರು ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಹಾಲ್ ಟಿಕೆಟ್ ವಿತರಿಸುವ ವೇಳೆ ಶಾಲಾ ಸಿಬ್ಬಂದಿ ಅವರಿಗೆಲ್ಲ ಸರ್ಕಾರಿ ಶಾಲೆಯೊಂದರ, ಬೇರೆ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುವಂತೆ ಸೂಚಿಸಿದ್ದರಂತೆ. ಆಗ ಯಾವುದೇ ಕಾರನ ನೀಡಿ ಸಾಗ ಹಾಕಿದ್ದರಂತೆ. ಆದರೆ ಫಲಿತಾಂಶ ಪ್ರಕಟವಾದಾಗ ಎಲ್ಲರಿಗೂ ಅಚ್ಚರಿ ಕಾದಿತ್ತು. ಮಾರ್ಕ್ಸ್ ಕಾರ್ಡ್‌ನಲ್ಲಿ ಇಂಟರ್‌ನಲ್ ಅಸ್ಸೆಸ್‌ಮೆಂಟ್ ಮಾರ್ಕ್ಸ್ ಇಲ್ಲದಿರುವುದು ಕಂಡು ವಿದ್ಯಾರ್ಥಿನಿಯರು ದಂಗಾಗಿದ್ದರು.
ಸಂತ್ರಸ್ತೆ ಹೇಳಿದ್ದೇನು?
ʼʼಈ ಬಗ್ಗೆ ಶಾಲೆಯನ್ನು ಸಂಪರ್ಕಿಸಿದರೂ ಯಾವುದೇ ಸ್ಪಂದನೆ ದೊರೆಯಲಿಲ್ಲ. ಟಿಸಿ ಕೇಳಿದಾಗ ಬಿಬಿಎಂಪಿಯ ಶಾಲೆಯಿಂದ ಪಡೆದುಕೊಳ್ಳುವಂತೆ ಸೂಚಿಸಿದರು. ಇದ್ಯಾಕೆ ಹೀಗೆ ಎನ್ನುವ ಬಗ್ಗೆ ಅನುಮಾನ ಮೂಡಿತು. ಒಂದುವೇಳೆ ಇಂಟರ್‌ನಲ್ ಮಾರ್ಕ್ಸ್ ದೊರೆತಿದ್ದರೆ ನಾನು ಪಾಸಾಗಿರುತ್ತಿದ್ದೆ. ಇದೇ ರೀತಿಯ ಅನುಭವ 10 ವಿದ್ಯಾರ್ಥಿನಿಯರಿಗೂ ಆಗಿದೆʼʼ ಎಂದು ಸಂತ್ರಸ್ತೆಯೊಬ್ಬರು ನೋವು ತೋಡಿಕೊಂಡಿದ್ದಾರೆ.
ಪೋಷಕರೂ ಈ ವಿಚಾರ ತಿಳಿದು ಶಾಕ್‌ಗೆ ಒಳಗಾಗಿದ್ದಾರೆ. ತಮ್ಮ ಮಕ್ಕಳು ಎಂದಿಗೂ ಬಿಬಿಎಂಪಿ ಶಾಲೆಗೆ ಹೋಗೇ ಇಲ್ಲ ಎಂದಿದ್ದಾರೆ. ಅಲ್ಲದೆ ಸೇಂಟ್ ಮೇರಿಸ್ ಗರ್ಲ್ಸ್ ಹೈಸ್ಕೂಲ್‌ಗೆ ನಿಯಮಿತವಾಗಿ ಫೀಸ್ ಪಾವತಿಸಿದ್ದಾಗಿಯೂ ತಿಳಿಸಿದ್ದಾರೆ. ತಮ್ಮ ಅರಿಗೆ ಬಾರದೆಯೇ ಅವರನ್ನು ಸರ್ಕಾರಿ ಶಾಲೆಯಲ್ಲಿ ನೋಂದಾಯಿಸಿರುವುದಾಗಿಯೂ ಆರೋಪಿಸಿದ್ದಾರೆ.
ಸೂಕ್ತ ಕ್ರಮಕ್ಕೆ ಆಗ್ರಹ
ಇದೀಗ ಪೋಷಕರು ಶಾಲೆ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಸದ್ಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಆರೋಪದ ಬಗ್ಗೆ ಶಾಲೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಟ್ಟಿನಲ್ಲಿ ಉತ್ತಮ ಭವಿಷ್ಯ ರೂಪಿಸಬೇಕಿದ್ದ ಶಾಲೆಯೇ ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟವಾಡಿದೆ.