Zeenat Aman: ʼಸತ್ಯಂ ಶಿವಂ ಸುಂದರಂʼ ಸಿನಿಮಾದ ಕಿಸ್ಸಿಂಗ್ ವಿಡಿಯೊ ಹಂಚಿಕೊಂಡ ಹಿರಿಯ ನಟಿ ಜೀನತ್ ಅಮನ್; ಹೇಳಿದ್ದೇನು?
1978ರಲ್ಲೆ ತೆರೆಕಂಡ ಹಿಂದಿಯ ʼಸತ್ಯಂ ಶಿವಂ ಸುಂದರಂʼ ಚಿತ್ರದಲ್ಲಿ ನಟಿ ಜೀನತ್ ಅಮನ್ ಖ್ಯಾತ ನಟ ಶಶಿ ಕಪೂರ್ ಜತೆ ತೆರೆ ಹಂಚಿಕೊಂಡಿದ್ದರು. ಆ ಸಿನಿಮಾ ಈಗಲೂ ಜನಪ್ರಿಯ. ಇದೀಗ ಇದೇ ಸಿನಿಮಾದ ಕಿಸ್ಸಿಂಗ್ ದೃಶ್ಯವನ್ನು ನಟಿ ಜೀನತ್ ಅಮನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ವೈರಲ್ ಆಗುತ್ತಿದೆ.

Zeenat Aman

ಮುಂಬೈ: 1980ರ ದಶಕದ ಸಿನಿಮಾ ರಂಗದಲ್ಲಿ ಖ್ಯಾತಿ ಪಡೆದ ನಟಿಯರಲ್ಲಿ ಜೀನತ್ ಅಮನ್ (Zeenat Aman) ಕೂಡ ಒಬ್ಬರು. ಅಮಿತಾಬ್ ಬಚ್ಚನ್, ರಿಷಿ ಕಪೂರ್, ರಾಜೇಶ್ ಖನ್ನಾ, ಸಂಜೀವ್ ಕುಮಾರ್, ಧರ್ಮೇಂದ್ರ, ಫಿರೋಜ್ ಖಾನ್ ಸೇರಿದಂತೆ ಆ ಕಾಲದ ಟಾಪ್ ನಟರೊಂದಿಗೆ ನಟಿಸುವ ಅವಕಾಶ ಜೀನತ್ ಅವರಿಗೆ ಸಿಕ್ಕಿತ್ತು. ಅವರ ಬಹುತೇಕ ಸಿನಿಮಾಗಳು ಹಿಟ್ ಲಿಸ್ಟ್ ಸೇರಿವೆ. ಶಶಿ ಕಪೂರ್ ಜತೆಗೆ ಮೊದಲ ಬಾರಿಗೆ ಜೀನತ್ ತೆರೆ ಹಂಚಿಕೊಂಡಿದ್ದ ಚಿತ್ರ ʼಸತ್ಯಂ ಶಿವಂ ಸುಂದರಂʼ 1978ರಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾ ಈಗಲೂ ಬಹಳ ಜನಪ್ರಿಯ. ಇದೀಗ ಇದೇ ಸಿನಿಮಾದ ಕಿಸ್ಸಿಂಗ್ ದೃಶ್ಯವನ್ನು ನಟಿ ಜೀನತ್ ಅಮನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿ ಕೊಂಡಿದ್ದು ವೈರಲ್ ಆಗುತ್ತಿದೆ.
ತಮ್ಮ ವೃತ್ತಿ ಜೀವನದಲ್ಲಿ ಈ ಚಿತ್ರ ಮುಖ್ಯ ಪಾತ್ರವಹಿಸಿದೆ ಎಂದು ಅವರು ತಿಳಿಸಿದ್ದಾರೆ. ʼʼಶಶಿ ಕಪೂರ್ ಬಹುತೇಕ ಸಿನಿಪ್ರಿಯರ ಮನ ಗೆದ್ದ ನಟರಾಗಿದ್ದು, ಶಾಲಾ ವಿದ್ಯಾರ್ಥಿಗಳೂ ಅವರಿಗೆ ಮನ ಸೋತಿದ್ದರು. ಅಂತೆಯೇ ನಾನು ಕೂಡ ಅವರನ್ನು ಮೊದಲ ಬಾರಿಗೆ ಬೋರ್ಡಿಂಗ್ ಶಾಲೆಯಲ್ಲಿದ್ದಾಗ ಪ್ರತ್ಯಕ್ಷವಾಗಿ ನೋಡಿದ್ದೆ. ಅವರು ಶೇಕ್ಸ್ಪಿಯರ್ ನಾಟಕವನ್ನು ಪ್ರದರ್ಶಿಸಲು ವೇದಿಕೆ ಮೇಲೆ ಬಂದಾಗ ಅವರ ಅಭಿನಯ ಕಂಡು ನಾವೆಲ್ಲ ಮೂಕವಿಸ್ಮಿತರಾಗಿದ್ದೆವುʼʼ ಎಂದು ತಿಳಿಸಿದ್ದಾರೆ.
ಬಾಲಿವುಡ್ ಎವರ್ ಗ್ರೀನ್ ಸಿನಿಮಾ ʼಸತ್ಯಂ ಶಿವಂ ಸುಂದರಂʼನ ಈ ದೃಶ್ಯ ಹಂಚಿಕೊಳ್ಳಲು ಕೂಡ ನಿಖರ ಕಾರಣವನ್ನು ನಟಿ ಜೀನತ್ ಅಮನ್ ತಿಳಿಸಿದ್ದಾರೆ. ʼʼಇದು ನನ್ನ ವೃತ್ತಿಜೀವನದಲ್ಲಿ ಒಂದು ದೊಡ್ಡ ಕ್ಷಣವಾಗಿತ್ತು. ಈ ಸಿನಿಮಾದಲ್ಲಿ ನನ್ನ ಮೊದಲ ಆನ್ ಸ್ಕ್ರೀನ್ ಕಿಸ್ ಇದಾಗಿದ್ದು, ಚಿತ್ರೀಕರಿಸುವಾಗ ನನಗೆ ನಿಜವಾಗಿಯೂ ಮುಜುಗರ, ಭಯ ಆಗಲಿಲ್ಲ. ಶೂಟಿಂಗ್ ಮಾಡುತ್ತಿದ್ದಾಗ ಕೆಲವರು ವ್ಯತಿರಿಕ್ತವಾಗಿ ವರ್ತಿಸಿದ್ದು ಇದೆ. ಆದರೆ ಶಶಿಕಪೂರ್ ಅವರ ಅಭಿನಯ ಬಹಳ ನ್ಯಾಚುರಲ್ ಆಗಿದ್ದು ಮುಜುಗರವಾಗದಂತೆ ಅಭಿನಯಿಸಲು ನೆರವು ನೀಡಿದರುʼʼ ಎಂದು ಹಿರಿಯ ನಟಿ ಬರೆದುಕೊಂಡಿದ್ದಾರೆ.
ʼʼಶಶಿ ಕಪೂರ್ ಅವರ ಮನೆ ನಮ್ಮ ನಿವಾಸದ ಬಳಿಯೇ ಇತ್ತು. ಅವರು ಪ್ರತಿದಿನ ಸಂಜೆ 6 ಗಂಟೆಗೆ ವಾಕ್ ಹೋಗುವುದು ತಿಳಿದಿತ್ತು. ನನಗೆ ನಟ ಶಶಿ ಕಪೂರ್ ಅಚ್ಚುಮೆಚ್ಚಿನ ನಟನಾಗಿದ್ದರು. ಹೀಗಾಗಿ ಅವರನ್ನು ನೋಡಲು ನಾನು ಗೆಳತಿಯರ ಜತೆಗೆ ಹೋಗುತ್ತಿದ್ದೆ. ಅವರ ಜೊತೆಗೆ ವೃತ್ತಿ ಬದುಕು ಆರಂಭ ಆಗುತ್ತೆ ಎಂಬ ಸಣ್ಣ ಊಹೆಯೂ ನನಗೆ ಇರಲಿಲ್ಲ. ಶಶಿ ಕಪೂರ್ ಅವರಂತಹ ಮೇರು ನಟರೊಂದಿಗೆ ಅಭಿನಯಿಸುವ ಅವಕಾಶ ಸಿಕ್ಕಿದ್ದು ನಿಜಕ್ಕೂ ಭಾಗ್ಯʼʼ ಎಂದಿದ್ದಾರೆ.
ಜೀನತ್ ಅಮನ್ ಅವರು ಶಶಿ ಕಪೂರ್ ಜತೆಗೆ ʼರೋಟಿʼ, ʼಕಪಡಾ ಔರ್ ಮಕಾನ್ʼ, ʼಚೋರಿ ಮೇರಾ ಕಾಮ್ʼ, ʼವಕೀಲ್ ಬಾಬಹʼ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. 73 ವರ್ಷದ ಜೀನತ್ ಇತ್ತೀಚೆಗೆ ʼದಿ ರಾಯಲ್ಸ್ʼ ವೆಬ್ ಸೀರಿಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅವರು ರಾಜಮನೆತನದ ಮಾಜಿ ಸಾಹಿಬಾ ಪಾತ್ರವನ್ನು ನಿರ್ವಹಿಸಿದ್ದಾರೆ.