Longest Train: ಬೋಗಿಗಳನ್ನು ಲೆಕ್ಕ ಹಾಕೋಕೆ ಒಂದು ಗಂಟೆ ಬೇಕೆ ಬೇಕು! ಭಾರತದ ಅತೀ ಉದ್ದದ ರೈಲು ‘ಸೂಪರ್ ವಾಸುಕಿ’ ಬಗ್ಗೆ ನಿಮಗೆಷ್ಟು ಗೊತ್ತು?
ಭಾರತದ ಅತಿ ಉದ್ದದ ರೈಲು(Longest Train) ಸೂಪರ್ ವಾಸುಕಿ ಸರಕು ರೈಲು. ಕಲ್ಲಿದ್ದಲು ಸಾಗಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ಸರಕು ರೈಲು 295 ವ್ಯಾಗನ್ಗಳನ್ನು ಹೊಂದಿದ್ದು, ಆರು ಎಂಜಿನ್ಗಳನ್ನು ಹೊಂದಿದೆ.ಅದರ ಒಟ್ಟು ಉದ್ದವು ಸರಿಸುಮಾರು 3.5 ಕಿಲೋಮೀಟರ್ಗಳಾಗಿದ್ದು, ಇದು ಒಂದೇ ಬಾರಿಗೆ 27,000 ಟನ್ ಕಲ್ಲಿದ್ದಲನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆಯಂತೆ.


ನವದೆಹಲಿ: ರೈಲು ಪ್ರಯಾಣವು ಭಾರತದಲ್ಲಿ ಹೆಚ್ಚಿನ ಜನರು ಇಷ್ಟಪಡುವಂತಹ ಹಾಗೂ ಅನುಕೂಲಕರವಾದ ಒಂದು ಸಾರಿಗೆ ವಿಧಾನವಾಗಿದೆ. ಆದರೆ ರೈಲುಗಳು ಪ್ರಯಾಣಿಕರಿಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣಿಸಲು ಮಾತ್ರವಲ್ಲ, ಸರಕು ಸಾಗಣೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಸ್ಥಳೀಯ ಶಟಲ್ ಸೇವೆಗಳಿಂದ ಹಿಡಿದು ವಂದೇ ಭಾರತ್ ಎಕ್ಸ್ಪ್ರೆಸ್ನಂತಹ ಆಧುನಿಕ ರೈಲುಗಳವರೆಗೆ, ಭಾರತೀಯ ರೈಲ್ವೆ ಜಾಲವು ವಿಶಾಲ ಹಾಗೂ ವೈವಿಧ್ಯಮಯವಾಗಿದೆ. ಆದರೆ ಭಾರತದ ಅತಿ ಉದ್ದದ ರೈಲು(Longest Train) ಯಾವುದು ಮತ್ತು ಅದು ಎಲ್ಲಿ ಚಲಿಸುತ್ತದೆ ಎಂಬ ವಿಚಾರ ಹೆಚ್ಚಿನ ಜನರಿಗೆ ತಿಳಿದಿಲ್ಲ. ಹಾಗಾದ್ರೆ ಆ ರೈಲು ಯಾವುದೆಂಬುದನ್ನು ತಿಳಿದುಕೊಳ್ಳಿ.
ಭಾರತದ ಅತಿ ಉದ್ದವಾದ ರೈಲು ಯಾವುದು?
ಹೆಚ್ಚಿನ ಜನರು ವಂದೇ ಭಾರತ್ ರೈಲನ್ನು ಅತಿ ಉದ್ದ ರೈಲು ಎಂದು ತಿಳಿದುಕೊಂಡಿದ್ದಾರೆ. ಆದರೆ ಅದು ನಿಜವಲ್ಲ!. ‘ಸೂಪರ್ ವಾಸುಕಿ’ ಭಾರತದ ಅತಿ ಉದ್ದದ ರೈಲು ಎಂಬ ಬಿರುದನ್ನು ಹೊಂದಿದೆಯಂತೆ. ಕಲ್ಲಿದ್ದಲು ಸಾಗಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ಸರಕು ರೈಲು 295 ವ್ಯಾಗನ್ಗಳನ್ನು ಹೊಂದಿದ್ದು, ಆರು ಎಂಜಿನ್ಗಳನ್ನು ಹೊಂದಿದೆಯಂತೆ.
ಅದರ ಉದ್ದವೆಷ್ಟು?
ಸೂಪರ್ ವಾಸುಕಿಯ ಒಟ್ಟು ಉದ್ದವು ಅದರ ಎಂಜಿನ್ಗಳನ್ನು ಒಳಗೊಂಡಂತೆ ಸರಿಸುಮಾರು 3.5 ಕಿಲೋಮೀಟರ್ಗಳಂತೆ. ಭಾರತೀಯ ರೈಲ್ವೆಯು ಈ ಬೃಹತ್ ಸರಕು ರೈಲನ್ನು ಆಗಸ್ಟ್ 15, 2022 ರಂದು ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ನೆನಪಿಗಾಗಿ ಶುರು ಮಾಡಿತಂತೆ. ವಿದ್ಯುತ್ ಸ್ಥಾವರಗಳಿಗೆ ಬೇಕಾದ ಕಲ್ಲಿದ್ದಲು ಪೂರೈಕೆ ಮಾಡುವಂತಹ ಒಂದು ನಿರ್ದಿಷ್ಟ ಉದ್ದೇಶದಿಂದ ಈ ಸೂಪರ್ ವಾಸುಕಿಯನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಒಂದೇ ಬಾರಿಗೆ 27,000 ಟನ್ ಕಲ್ಲಿದ್ದಲನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಅಂದರೆ ಇದು ಒಂದು ದಿನಕ್ಕೆ 3,000 ಮೆಗಾವ್ಯಾಟ್ ಉಷ್ಣ ವಿದ್ಯುತ್ ಸ್ಥಾವರಕ್ಕೆ ವಿದ್ಯುತ್ ಪೂರೈಸಲು ಸಾಕಾಗುತ್ತದೆಯಂತೆ.
ಮಾರ್ಗ ಮತ್ತು ಪ್ರಯಾಣ
ಸೂಪರ್ ವಾಸುಕಿ ಕೊರ್ಬಾ (ಛತ್ತೀಸ್ಗಢ) ದಿಂದ ರಾಜನಂದಗಾಂವ್ (ಮಹಾರಾಷ್ಟ್ರ) ಮಾರ್ಗದಲ್ಲಿ 267 ಕಿ.ಮೀ ದೂರವನ್ನು ಕ್ರಮಿಸುತ್ತದೆ. ಇದು ಸುಮಾರು 11 ಗಂಟೆ 20 ನಿಮಿಷಗಳಲ್ಲಿ ಪ್ರಯಾಣವನ್ನು ಪೂರ್ಣಗೊಳಿಸುತ್ತದೆ.
ಈ ಸುದ್ದಿಯನ್ನೂ ಓದಿ:Viral Video: ಜಲಪಾತದಲ್ಲಿ ಜಲಕ್ರೀಡೆ ಆಡುತ್ತಿದ್ದವರು ಜೀವ ಉಳಿಸಿಕೊಳ್ಳಲು ಎದ್ದೋ ಬಿದ್ದು ಓಡಿದ್ಯಾಕೆ? ಬೆಚ್ಚಿಬೀಳಿಸುವ ವಿಡಿಯೊ ವೈರಲ್
ಈ ರೈಲಿಗೆ ವಾಸುಕಿ ಹೆಸರಿಡಲು ಕಾರಣವೇನು?
'ವಾಸುಕಿ' ಎಂಬ ಹೆಸರು ಹಿಂದೂ ಪುರಾಣದಿಂದ ಬಂದಿದೆ. ವಾಸುಕಿ ಒಬ್ಬ ನಾಗರಾಜ (ಸರ್ಪ ರಾಜ) ಮತ್ತು ಶಿವನ ಭಕ್ತ. ಸಮುದ್ರ ಮಂಥನದಲ್ಲಿ ಅದನ್ನು ಹಗ್ಗವಾಗಿ ಬಳಸಲಾಗಿತ್ತು. ಈ ಹೆಸರು ತಾಳ್ಮೆ, ಶಕ್ತಿ ಮತ್ತು ವಿಶಾಲತೆಯನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಈ ದೈತ್ಯ ರೈಲಿಗೆ ಈ ಹೆಸರನ್ನು ಇಡಲಾಗಿದೆ ಎನ್ನಲಾಗಿದೆ.