Supreme Court: ಕಮಲ್ ಹಾಸನ್ ಕ್ಷಮೆ ಕೋರುವ ಅಗತ್ಯವಿಲ್ಲ ಎಂದ ಸುಪ್ರೀಂ ಕೋರ್ಟ್
Kamal Haasan: ಕಮಲ್ ಹಾಸನ್ ಅಭಿನಯದ 'ಥಗ್ ಲೈಫ್' ತಮಿಳು ಚಿತ್ರತಂಡಕ್ಕೆ ಸುಪ್ರೀಂ ಕೋರ್ಟ್ನಲ್ಲಿ ಬಿಗ್ ರಿಲೀಫ್ ಸಿಕ್ಕಿದೆ. ಕರ್ನಾಟಕದಲ್ಲಿ 'ಥಗ್ ಲೈಫ್' ಬಿಡುಗಡೆಗೆ ಅಡ್ಡಿಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ಹೇಳಿದೆ. ಜತೆಗೆ ಪ್ರತಿಭಟನಾಕಾರರು ಆಗ್ರಹಿಸಿದಂತೆ ಕಮಲ್ ಹಾಸನ್ ತಮ್ಮ ಹೇಳಿಕೆಗೆ ಕ್ಷಮೆಯಾಚಿಸುವ ಅಗತ್ಯವಿಲ್ಲ ಎಂದಿದೆ.


ಹೊಸದಿಲ್ಲಿ: ನಟ, ರಾಜಕಾರಣಿ ಕಮಲ್ ಹಾಸನ್ (Kamal Haasan) ಅಭಿನಯದ 'ಥಗ್ ಲೈಫ್' (Thug Life) ತಮಿಳು ಚಿತ್ರತಂಡಕ್ಕೆ ಸುಪ್ರೀಂ ಕೋರ್ಟ್ನಲ್ಲಿ (Supreme Court) ಬಿಗ್ ರಿಲೀಫ್ ಸಿಕ್ಕಿದೆ. ಕರ್ನಾಟಕದಲ್ಲಿ 'ಥಗ್ ಲೈಫ್' ಬಿಡುಗಡೆಗೆ ಎದುರಾದ ಬೆದರಿಕೆಯ ಹಿನ್ನೆಲೆಯಲ್ಲಿ ಚಿತ್ರ ರಿಲೀಸ್ಗೆ ಅಡ್ಡಿಪಡಿಸುವವರ ವಿರುದ್ದ ಕ್ರಮ ಕೈಗೊಳ್ಳುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ಹೇಳಿದೆ. ಜತೆಗೆ ಈ ಬಗ್ಗೆ ಕ್ರಿಯಾ ಯೋಜನೆ ತಯಾರಿಸುವಂತೆಯೂ ಸೂಚಿಸಿದೆ.
ಈ ಮಧ್ಯೆ ರಾಜ್ಯ ಸರ್ಕಾರವು ಚಿತ್ರ ಬಿಡುಗಡೆಯಾದ ತಕ್ಷಣ ಎಲ್ಲ ಚಿತ್ರಮಂದಿರಗಳಿಗೆ ಸಂಪೂರ್ಣ ಭದ್ರತೆ ಒದಗಿಸಲಾಗುವುದು ಎಂದು ಭರವಸೆ ನೀಡಿದೆ. ಜತೆಗೆ ʼಥಗ್ ಲೈಫ್ʼ ಚಿತ್ರದ ಬಿಡುಗಡೆಗೆ ಬೆದಿಕೆ ಒಡ್ಡಿದ ಕನ್ನಡ ಪರ ಸಂಘಟನೆಗೆಳಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ಪ್ರತಿಭಟನಾಕಾರರು ಆಗ್ರಹಿಸಿದಂತೆ ಕಮಲ್ ಹಾಸನ್ ತಮ್ಮ ಹೇಳಿಕೆಗೆ ಕ್ಷಮೆಯಾಚಿಸುವ ಅಗತ್ಯವಿಲ್ಲ ಎಂದೂ ಸುಪ್ರೀಂ ಕೋರ್ಟ್ ತನ್ನ ಮಹತ್ವದ ತೀರ್ಪಿನಲ್ಲಿ ಅಭಿಪ್ರಾಯ ಪಟ್ಟಿದೆ. ಒಬ್ಬರ ಹೇಳಿಕೆಯಿಂದ ಮತ್ತೊಬ್ಬರ ಭಾವನೆಗಳಿಗೆ ನೋವುಂಟಾಗಿದೆ ಎಂಬ ಕಾರಣಕ್ಕಾಗಿ ಚಿತ್ರ ಬಿಡುಗಡೆಯನ್ನು ಸ್ಥಗಿತಗೊಳಿಸುವುದು, ಸ್ಟ್ಯಾಂಡ್ ಅಪ್ ಶೋಗಳನ್ನು ರದ್ದುಗೊಳಿಸುವುದು ಅಥವಾ ಕಲಾವಿದ ಕವಿತೆ ವಾಚನವನ್ನು ತಡೆಯುವುದು ಬೇಡ ಎಂದು ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಮನಮೋಹನ್ ಅವರಿದ್ದ ಪೀಠ ತಿಳಿಸಿದೆ.
ಸುಪ್ರೀಂ ಕೋರ್ಟ್ ಸೂಚನೆಯಲ್ಲಿ ಏನಿದೆ?
ʼಥಗ್ ಲೈಫ್ʼ ಚಿತ್ರ ಪ್ರದರ್ಶನವನ್ನು ವಿರೋಧಿಸುವ ಗುಂಪುಗಳಿಂದ ಬರುವ ಬೆದರಿಕೆಗಳಿಂದ ರಕ್ಷಣೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಇತ್ತೀಚೆಗೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಕರ್ನಾಟಕದಲ್ಲಿ ಸಿನಿಮಾ ರಿಲೀಸ್ಗೆ ಒಪ್ಪಿಗೆ ನೀಡಿ, ʼʼಯಾವುದೇ ಬೆದರಿಕೆಗಳಿಗೆ ಅವಕಾಶವಿಲ್ಲ. ಇಷ್ಟವಿದ್ದವರು ಸಿನಿಮಾ ನೋಡಬಹುದು, ಇಲ್ಲದಿದ್ದರೆ ಬಿಡಬಹುದುʼʼ ಎಂದು ಹೇಳಿತ್ತು. 'ಥಗ್ ಲೈಫ್' ಚಿತ್ರದ ಪ್ರದರ್ಶನಕ್ಕೆ ಅನುಮತಿ ನೀಡುವಂತೆ ಕೋರಿ ಮಹೇಶ್ ರೆಡ್ಡಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಏನಿದು ವಿವಾದ?
ಜೂ. 5ರಂದು ಚೆನ್ನೈಯಲ್ಲಿ ನಡೆದ ʼಥಗ್ ಲೈಫ್ʼ ಸಿನಿಮಾದ ಆಡಿಯೋ ಲಾಂಚ್ನಲ್ಲಿ ಭಾಗವಹಿಸಿದ್ದ ನಟ ಕಮಲ್ ಹಾಸನ್ ʼʼಕನ್ನಡ ಭಾಷೆ ತಮಿಳು ಹುಟ್ಟಿದೆʼʼ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನು ವಿರೋಧಿಸಿ ಕರ್ನಾಟಕದಲ್ಲಿ ಭಾರಿ ಪ್ರತಿಭಟನೆ ನಡೆದಿತ್ತು. ಕಮಲ್ ಹಾಸನ್ ಕ್ಷಮೆ ಕೋರಬೇಕೆಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿದ್ದವು. ಕಮಲ್ ಕ್ಷಮೆ ಕೋರದ ಹೊರತು ರಾಜ್ಯದಲ್ಲಿ ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದವು. ಆದರೆ ಕಮಲ್ ಹಾಸನ್ ಕ್ಷಮೆ ಕೋರಿರಲಿಲ್ಲ. ಹೀಗಾಗಿ ವಿಶ್ವಾದ್ಯಂತ ತೆರೆಕಂಡು 2 ವಾರ ಕಳೆದರೂ ಕರ್ನಾಟಕದಲ್ಲಿ ʼಥಗ್ ಲೈಫ್ʼ ಬಿಡುಗಡೆಯಾಗಿಲ್ಲ. ಮಣಿ ರತ್ನಂ ನಿರ್ದೇಶನದ ಈ ಚಿತ್ರದಲ್ಲಿ ಕಮಲ್ ಹಾಸನ್ ಜತೆಗೆ ತ್ರಿಶಾ, ಸಿಂಬು, ಅಭಿರಾಮಿ ಮತ್ತಿತರರು ನಟಿಸಿದ್ದಾರೆ. ಸದ್ಯ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿದೆ.