Lokayukta Raid: ಬೆಳ್ಳಂ ಬೆಳಗ್ಗೆ ಭ್ರಷ್ಟರಿಗೆ ಲೋಕಾಯುಕ್ತ ಶಾಕ್- ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ರೇಡ್
ರಾಜ್ಯಾದ್ಯಂತ ವಿವಿಧ ಇಲಾಖೆಯ ಅಧಿಕಾರಿಗಳ ಮನೆ, ಕಚೇರಿ ಮೇಲೆ ಗುರುವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ತುಮಕೂರು, ಮಂಗಳೂರು, ವಿಜಯಪುರ, ಬೆಂಗಳೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಈ ದಾಳಿ ನಡೆದಿದ್ದು, ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.


ಬೆಂಗಳೂರು: ರಾಜ್ಯದ ಹಲವು ಅಧಿಕಾರಿಗಳಿಗೆ ಗುರುವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು (Lokayukta Raid) ಶಾಕ್ ನೀಡಿದ್ದಾರೆ. ಭ್ರಷ್ಟಚಾರದ (Corruption) ಆರೋಪದ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಅಧಿಕಾರಿಗಳ ಮನೆಗಳ ಮೇಲೆ ಮುಂಜಾನೆಯೇ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ವಿವಿಧ ಕಡತಗಳ ಪರಿಶೀಲನೆ ನಡೆಸಿದರು. ಆದಾಯಕ್ಕಿಂತ ಹೆಚ್ಚು ಆಸ್ತಿ (Assets than income) ಹೊಂದಿರುವ ಆರೋಪದ ಮೇರೆಗೆ ಅಧಿಕಾರಿಗಳ ಮನೆ, ಕಚೇರಿಯಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರು ಕಲಬುರ್ಗಿ, ಯಾದಗಿರಿ ಸೇರಿದಂತೆ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಗುರುವಾರ ಮುಂಜಾನೆಯೇ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ 12, ತುಮಕೂರು 7, ಬೆಂಗಳೂರು ಗ್ರಾಮಾಂತರದ 8, ಯಾದಗಿರಿ 5, ಮಂಗಳೂರಿನ 4 ಮತ್ತು ವಿಜಯಪುರದ 4 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರು ನಗರ/ ಗ್ರಾಮಾಂತರ
ಬೆಂಗಳೂರು ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯದ ಹೆಚ್ಚುವರಿ ನಿರ್ದೇಶಕರಾದ ಟಿ.ವಿ.ಮುರಳಿ ಹಾಗೂ ಬೆಂಗಳೂರು ಕಾನೂನು ಮಾಪನಶಾಸ್ತ್ರ ಇನ್ಸ್‌ಪೆಕ್ಟರ್ ಹೆಚ್.ಆರ್. ನಟರಾಜ್ ಮತ್ತು ಬೆಂಗಳೂರು ಗ್ರಾಮಾಂತರದ ಹೊಸಕೋಟೆ ತಾಲೂಕು ಕಚೇರಿ ಎಸ್ ಡಿಎ ಅನಂತ್ ಕುಮಾರ್ ಎಂಬವರ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಹಲವು ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.
ತುಮಕೂರು
ತುಮಕೂರಿನಲ್ಲಿ ಒಟ್ಟು ಏಳು ಕಡೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ನಿರ್ಮಿತಿ ಕೇಂದ್ರ ಎಂ.ಡಿ. ರಾಜಶೇಖರ ಎಂಬವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲದೇ ಈ ವೇಳೆ ಸಪ್ತಗಿರಿ ಬಡಾವಣೆಯ ಎಸ್‌ಎಸ್ ಪುರಂನಲ್ಲಿರುವ ರಾಜಶೇಖರ ಅವರ ಸಹೋದರನ ಮನೆ ಮೇಲೂ ದಾಳಿ ನಡೆಸಲಾಗಿದೆ. ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ 10 ಮಂದಿ ಅಧಿಕಾರಿಗಳು ಏಕಕಾಲದಲ್ಲಿ ಈ ದಾಳಿ ನಡೆಸಿದ್ದಾರೆ.
ಕಲಬುರ್ಗಿ
ಕಲಬುರ್ಗಿಯ ಶಹಾಪೂರ ತಹಸೀಲ್ದಾರ್ ಉಮಾಕಾಂತ ಹಳ್ಳೆ ಅವರ ಮನೆ ಮೇಲೂ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಅಕ್ಕಮಹಾದೇವಿ ಬಡಾವಣೆಯಲ್ಲಿರುವ ತಹಸೀಲ್ದಾರ್ ಅವರ ಮನೆ ಮತ್ತು ಕಚೇರಿಯಲ್ಲಿ ಕಡತ ಪರಿಶೀಲನೆ ನಡೆಸಿದ್ದಾರೆ.
ಈ ಸುದ್ದಿಯನ್ನೂ ಓದಿ: Vishweshwar Bhat Column: ಹೆಚ್ಚುತ್ತಿರುವ ಒಂಟಿ ಮರಣ
ಮಂಗಳೂರು, ಯಾದಗಿರಿ
ಮಂಗಳೂರಿನ ಸರ್ವೇ ಸೂಪರ್ ವೈಸರ್ ಮಂಜುನಾಥ್, ವಿಜಯಪುರದ ಡಾ.ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧಿಕಾರಿ ರೇಣುಕಾ, ಯಾದಗಿರಿಯ ಶಹಾಪುರ ತಾಲೂಕು ಕಚೇರಿ ಅಧಿಕಾರಿ ಉಮಾಕಾಂತ್ ಅವರ ಮನೆ ಮತ್ತು ಕಚೇರಿ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ವಿಜಯಪುರ
ವಿಜಯಪುರ ನಗರದ ಸೆಂಟ್ ಜೋಸೆಫ್ ಶಾಲೆಯ ಹಿಂಭಾಗದಲ್ಲಿರುವ ಡಾ. ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ರೇಣುಕಾ ಸಾತಾರ್ಲೆ ಅವರ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಎಸ್.ಪಿ.ಟಿ. ಮಲ್ಲೇಶ್ ಹಾಗೂ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. ಸೊಲ್ಲಾಪುರ ನಗರದ ಕೆಹೆಚ್ಬಿ ಪ್ರದೇಶದಲ್ಲಿರುವ ನಿವಾಸವೊಂದರ ಮೇಲೂ ಡಿವೈಎಸ್ಪಿ ಸುರೇಶ ರೆಡ್ಡಿ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಮನೆಯಲ್ಲಿರುವ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿದೆ.