Viral News: ವಧುವಿನ ವೇಷ ಧರಿಸಿ ವಂಚನೆ; ಗಂಡನ ಮನೆಗೆ ರಾತ್ರೋರಾತ್ರಿ ಕನ್ನ ಹಾಕಿದ ಖತರ್ನಾಕ್ ಕಳ್ಳಿ
ಮದುವೆಯಾಗಿ ಗಂಡನ ಮನೆಗೆ ಬಂದ ವಧು ಅತ್ತೆ ಮತ್ತು ಪತಿಗೆ ಮತ್ತು ಬರುವ ಔಷಧಿ ನೀಡಿ ರಾತ್ರೋರಾತ್ರಿ ನಗದು ಮತ್ತು ಚಿನ್ನ ತೆಗೆದುಕೊಂಡು ಪರಾರಿಯಾಗಿದ್ದಾಳೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳನ್ನು ಹಿಡಿಯಲು ಬಲೆ ಬೀಸಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಾಂದರ್ಭಿಕ ಚಿತ್ರ.

ಲಖನೌ: ಮದುವೆಯಾಗಿ ವರನ ಮನೆಯಿಂದ ವಧು, ನಗದು, ಚಿನ್ನ ಲೂಟಿ ಮಾಡಿದ ಘಟನೆ ಈ ಹಿಂದೆ ಹಲವು ಬಾರಿ ವರದಿಯಾಗಿತ್ತು. ಇದೀಗ ಆಗ್ರಾದಲ್ಲಿ ಮತ್ತೊಂದು ಅಂತಹದ್ದೇ ಘಟನೆ ಬೆಳಕಿಗೆ ಬಂದಿದೆ. ಇತ್ತೀಚೆಗೆ ಮದುವೆಯಾಗಿ ಗಂಡನ ಮನೆಗೆ ಬಂದ ವಧು ಅತ್ತೆ ಮತ್ತು ಪತಿಗೆ ಮತ್ತು ಬರುವ ಔಷಧಿ ನೀಡಿ ರಾತ್ರೋರಾತ್ರಿ ನಗದು ಮತ್ತು ಚಿನ್ನ ತೆಗೆದುಕೊಂಡು ಪರಾರಿಯಾಗಿದ್ದಾಳೆ. ಇದರಿಂದ ನವವಿವಾಹಿತನ ಕನಸು, ವೈವಾಹಿಕ ಜೀವನ ನುಚ್ಚುನೂರಾಗಿದೆ. ವಧು ತನ್ನ ಪತಿ ಮತ್ತು ಅತ್ತೆಗೆ ರಾತ್ರಿ ಮತ್ತು ಬರುವ ಔಷಧಿ ಮಿಕ್ಸ್ ಮಾಡಿದ ಹಾಲು ಕುಡಿಸಿ 1.30 ಲಕ್ಷ ರೂ.ಗಳಿಗೂ ಹೆಚ್ಚು ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಮನೆಯಿಂದ ಪರಾರಿಯಾಗಿದ್ದಾಳೆ ಎಂಬುದಾಗಿ ತಿಳಿದುಬಂದಿದೆ. ಈ ಸುದ್ದಿ ಈಗ ವೈರಲ್ (Viral News) ಆಗಿದೆ.
ನಡೆದಿದ್ದೇನು?
ವಧು ಬಡತನ ಹಿನ್ನೆಲೆಯಿಂದ ಬಂದವಳಾಗಿದ್ದು, ಮದುವೆಯ ಖರ್ಚುಗಳಿಗೆ ಸಹಾಯ ಮಾಡಬೇಕು ಎಂದು ಹೇಳಿ ವರನ ಕುಟುಂಬದವರ ಬಳಿ 1.20 ಲಕ್ಷ ರೂ.ಗಳನ್ನು ಪಡೆದಿದ್ದಳು. ಮದುವೆಯ ಬಳಿಕ ಪತಿಯ ಮನೆಗೆ ಬಂದ ವಧು ರಾತ್ರಿ ತನ್ನ ಪತಿ ಮತ್ತು ಅತ್ತೆ ಇಬ್ಬರಿಗೂ ಮತ್ತು ಬರುವ ಔಷಧಿ ಮಿಕ್ಸ್ ಮಾಡಿದ ಹಾಲು ಕುಡಿಸಿ, ಅವರು ಪ್ರಜ್ಞೆ ತಪ್ಪಿದಾಗ, ವರನ ನಿಶ್ಚಿತಾರ್ಥದ ಉಂಗುರ ಮತ್ತು ಆತನ ತಾಯಿಯ ಕಾಲುಂಗುರ ಮತ್ತು ಮನೆಯಲ್ಲಿದ್ದ ಸರ ಸೇರಿದಂತೆ ನಗದು ಮತ್ತು ಚಿನ್ನ, ಬೆಳ್ಳಿ ಆಭರಣಗಳೊಂದಿಗೆ ಪರಾರಿಯಾಗಿದ್ದಾಳೆ.
ಮರುದಿನ ಬೆಳಗ್ಗೆ, ಬೆಲೆಬಾಳುವ ವಸ್ತುಗಳು ಹಾಗೂ ವಧು ಕಾಣೆಯಾಗಿದ್ದನ್ನು ಕಂಡು ಕುಟುಂಬದವರಿಗೆ ಶಾಕ್ ಆಗಿದೆ. ಪೊಲೀಸ್ ದೂರು ನೀಡಿದ್ದಾರೆ. ವಧುವಿನ ಕಳ್ಳತನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಧು ಪರಾರಿಯಾದ ವಾಹನದ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಕಂಡುಬಂದಿದೆ.
ಈ ಸುದ್ದಿಯನ್ನೂ ಓದಿ:Viral Video: ಡಿಜೆ ಹಾಡಿನ ವಿಚಾರಕ್ಕೆ ಜಗಳ; ಕ್ಷಣಾರ್ಧದಲ್ಲಿ ರಣರಂಗವಾದ ಮದುವೆ ಮನೆ-ವಿಡಿಯೊ ವೈರಲ್!
ಅಲ್ಲದೇ ತನಿಖೆಯಲ್ಲಿ ವಧುವಿನ ಆಧಾರ್ ಕಾರ್ಡ್ ನಕಲಿ ಎಂದು ತಿಳಿದು ಬಂದಿದೆ ಮತ್ತು ಮದುವೆಗೆ ಹಾಜರಾದ ಆಕೆಯ ಮಾವ ಮತ್ತು ಚಿಕ್ಕಮ್ಮನ ಸಂಬಂಧಿಕರು ವಂಚಕರು ಎಂದು ಗೊತ್ತಾಗಿದೆ. ಇದೇ ರೀತಿಯ ಕೃತ್ಯಗಳನ್ನು ನಡೆಸುತ್ತಿರುವ ದೊಡ್ಡ ಗ್ಯಾಂಗ್ ಇದರಲ್ಲಿ ಭಾಗಿಯಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ ಮತ್ತು ಈಗ ಅಪರಾಧಿಗಳನ್ನು ಗುರುತಿಸಲು ಮತ್ತು ಬಂಧಿಸಲು ಬಲೆ ಬೀಸಿದ್ದಾರೆ.