Arms Trade: ಶಸ್ತ್ರಾಸ್ತ್ರ ವ್ಯಾಪಾರ: ಹೆಚ್ಚು ಪ್ರಾಬಲ್ಯ ಹೊಂದಿರುವ ದೇಶ ಯಾವುದು?
ಭಯೋತ್ಪಾದಕರ ವಿರುದ್ಧ ಸಮರ ಸಾರಿರುವ ಭಾರತ ಈಗ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ತಂತ್ರಜ್ಞಾನದ ಖರೀದಿಗೆ ಮುಂದಾಗಿದೆ. ಇದರ ಬೆನ್ನಲ್ಲೇ ಭಾರತದ ಸೂಪರ್ ಸಾನಿಕ್ ಕ್ಷಿಪಣಿ ಬ್ರಹ್ಮೋಸ್ಗೆ ಬೇರೆ ಬೇರೆ ದೇಶಗಳಿಂದ ಬೇಡಿಕೆಯೂ ಬಂದಿದೆ. ಅದರಲ್ಲೂ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಬೇಡಿಕೆ ಹಠಾತ್ತನೆ ಹೆಚ್ಚಾಗಿದೆ. 17 ದೇಶಗಳು ಈ ಕ್ಷಿಪಣಿ ಖರೀದಿ ಮಾಡಲು ಮುಂದಾಗಿವೆ. ವಿಶ್ವದಲ್ಲಿ ಶಸ್ತ್ರಾಸ್ತ್ರ ವ್ಯಾಪಾರದಲ್ಲಿ ಹೆಚ್ಚು ತೊಡಗಿಕೊಂಡಿರುವ ಮತ್ತು ಶಕ್ತಿಶಾಲಿಯಾಗಿರುವ ದೇಶಗಳು ಯಾವುದು ಗೊತ್ತಿದೆಯೇ?



ಜಾಗತಿಕವಾಗಿ ಬಹುತೇಕ ದೇಶಗಳು ಶಸ್ತ್ರಾಸ್ತ್ರ ವ್ಯಾಪಾರದಲ್ಲಿ ತೊಡಗಿಸಿಕೊಂಡಿವೆ. ಇದರಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ಉಗ್ರರ ವಿರುದ್ಧ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ನಡೆಸಿದ ಬಳಿಕ ಭಾರತದ ಸೂಪರ್ ಸಾನಿಕ್ ಬ್ರಹ್ಮೋಸ್ ಕ್ಷಿಪಣಿಯ ಬೇಡಿಕೆ ಹಠಾತ್ತನೆ ಹೆಚ್ಚಾಗಿದೆ. 17 ದೇಶಗಳು ಈ ಕ್ಷಿಪಣಿ ಖರೀದಿ ಮಾಡಲು ಮುಂದಾಗಿವೆ.

2020–2024ರವರೆಗೆ ಶಸ್ತ್ರಾಸ್ತ್ರ ರಫ್ತಿನಲ್ಲಿ ಅಮೆರಿಕ ಆಗ್ರ ಸ್ಥಾನದಲ್ಲಿದೆ. ಶೇ. 43ರಷ್ಟು ಶಸ್ತ್ರಾಸ್ತ್ರಗಳನ್ನು ಇದು ರಫ್ತು ಮಾಡುತ್ತದೆ. ರಷ್ಯಾದೊಂದಿಗೆ ಸಂಘರ್ಷಕ್ಕೆ ಇಳಿದಿರುವ ಉಕ್ರೇನ್ ಅತೀ ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತದೆ. ಇದು ಶೇ. 8.8ರಷ್ಟು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಶಸ್ತ್ರಾಸ್ತ್ರಗಳ ಆಮದಿನಲ್ಲಿ ಅಗ್ರಸ್ಥಾನದಲ್ಲಿದೆ.

ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಆಮದುದಾರರಲ್ಲಿ ಉಕ್ರೇನ್, ಭಾರತ, ಕತಾರ್, ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ ಸೇರಿದೆ. ಈ ದೇಶಗಳು ಅತೀ ಹೆಚ್ಚಿನ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತವೆ. ರಷ್ಯಾದೊಂದಿಗಿನ ಯುದ್ಧದಿಂದಾಗಿ ಆಮದುದಾರರಲ್ಲಿ ಉಕ್ರೇನ್ ಮೊದಲ ಸ್ಥಾನದಲ್ಲಿದೆ. 2020- 2024ರ ನಡುವೆ ಇದು ಜಾಗತಿಕವಾಗಿ ಶೇ. 8.8ರಷ್ಟು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡಿದೆ. ಉಕ್ರೇನ್ ಹೆಚ್ಚಾಗಿ ಪೋಲೆಂಡ್, ಯುಎಸ್, ಜರ್ಮನಿಯಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡಿದೆ.

ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಆಮದುದಾರರಲ್ಲಿ ಭಾರತ 2ನೇ ಸ್ಥಾನದಲ್ಲಿದೆ. 2020 ಮತ್ತು 2024ರ ನಡುವೆ ಜಾಗತಿಕ ಶಸ್ತ್ರಾಸ್ತ್ರ ಆಮದುಗಳಲ್ಲಿ ಶೇ. 8.3ರಷ್ಟು ಶಸ್ತ್ರಾಸ್ತ್ರಗಳನ್ನು ಭಾರತ ಆಮದು ಮಾಡಿಕೊಂಡಿದೆ. ಭಾರತವು ರಷ್ಯಾ, ಇಸ್ರೇಲ್ ಮತ್ತು ಫ್ರಾನ್ಸ್ನಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡಿದೆ.

ಕತಾರ್ ಮೂರನೇ ಸ್ಥಾನದಲ್ಲಿದೆ. 2020 ಮತ್ತು 2024 ರ ನಡುವೆ ಜಾಗತಿಕ ಶಸ್ತ್ರಾಸ್ತ್ರ ಆಮದು ಪ್ರಮಾಣ ಶೇ. 6.8ರಷ್ಟಿದೆ. ಕತಾರ್ ಹೆಚ್ಚಾಗಿ ಅಮೆರಿಕದಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡಿದೆ. ಉಳಿದಂತೆ ಯುಕೆ ಮತ್ತು ಇಟಲಿಯಿಂದಲೂ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡಿದೆ.

ಸೌದಿ ಅರೇಬಿಯಾ ನಾಲ್ಕನೇ ಸ್ಥಾನದಲ್ಲಿದ್ದು, ಕತಾರ್ನ ಪ್ರಮಾಣದಲ್ಲೇ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡಿದೆ. 2020 ಮತ್ತು 2024ರ ನಡುವೆ ಜಾಗತಿಕ ಶಸ್ತ್ರಾಸ್ತ್ರ ಆಮದುಗಳಲ್ಲಿ 6.8 ರಷ್ಟು ಪಾಲನ್ನು ಸೌದಿ ಅರೇಬಿಯಾ ಪಡೆದಿದೆ. ಇದು ಹೆಚ್ಚಾಗಿ ಯುಎಸ್ ನಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡಿದೆ. ಅಲ್ಪ ಪ್ರಮಾಣದಲ್ಲಿ ಸ್ಪೇನ್, ಫ್ರಾನ್ಸ್ನಿಂದಲೂ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡಿದೆ.

ಶಸ್ತ್ರಾಸ್ತ್ರಗಳನ್ನು ಆಮದಿನಲ್ಲಿ ಪಾಕಿಸ್ತಾನ ಐದನೇ ಸ್ಥಾನದಲ್ಲಿದೆ. ಇದು 2020 ಮತ್ತು 2024ರ ನಡುವೆ ಜಾಗತಿಕವಾಗಿ ಶೇ. 4.6ರಷ್ಟು ಶಸ್ತ್ರಾಸ್ತ್ರ ಆಮದು ಮಾಡಿಕೊಂಡಿದೆ. ಶೇ. 80ರಷ್ಟು ಶಸ್ತ್ರಾಸ್ತ್ರಗಳನ್ನು ಚೀನಾದಿಂದ ಆಮದು ಮಾಡಿಕೊಂಡಿರುವ ಪಾಕಿಸ್ತಾನ ಸೇರಿದಂತೆ ಟರ್ಕಿ ಮತ್ತು ನೆದರ್ಲ್ಯಾಂಡ್ ನಿಂದಲೂ ಶಸ್ತ್ರಾಸ್ತ್ರ ಖರೀದಿಸಿದೆ.

ವಿಶ್ವದಲ್ಲೇ ಶಸ್ತ್ರಾಸ್ತ್ರಗಳ ರಫ್ತಿನಲ್ಲಿ ಅಮೆರಿಕ, ಫ್ರಾನ್ಸ್, ರಷ್ಯಾ, ಚೀನಾ ಮತ್ತು ಜರ್ಮನಿ ಐದು ರಾಷ್ಟ್ರಗಳು ಕ್ರಮವಾಗಿ ಅಗ್ರಸ್ಥಾನದಲ್ಲಿವೆ. ಮೊದಲ ಸ್ಥಾನದಲ್ಲಿರುವ ಯುಎಸ್ 2020 ಮತ್ತು 2024ರ ನಡುವೆ ಜಾಗತಿಕವಾಗಿ ಶಸ್ತ್ರಾಸ್ತ್ರ ರಫ್ತಿನಲ್ಲಿ ಶೇ. 43ರಷ್ಟು ಪಾಲನ್ನು ಹೊಂದಿದೆ. ಸೌದಿ ಅರೇಬಿಯಾ, ಉಕ್ರೇನ್ ಮತ್ತು ಜಪಾನ್ ಇದರ ಹೆಚ್ಚಿನ ಶಸ್ತ್ರಾಸ್ತ್ರ ಖರೀದಿದಾರರಾಗಿದ್ದಾರೆ.

2020 ಮತ್ತು 2024 ರ ನಡುವಿನ ಜಾಗತಿಕ ಶಸ್ತ್ರಾಸ್ತ್ರ ರಫ್ತಿನಲ್ಲಿ ಶೇ. 9.6ಪಾಲನ್ನು ಹೊಂದಿರುವ ಫ್ರಾನ್ಸ್ ಎರಡನೇ ಸ್ಥಾನದಲ್ಲಿದ್ದು, ಭಾರತ, ಕತಾರ್ ಮತ್ತು ಗ್ರೀಸ್ ಅತೀ ದೊಡ್ಡ ಖರೀದಿ ರಾಷ್ಟ್ರಗಳಾಗಿವೆ. ಭಾರತ ಜಾಗತಿಕವಾಗಿ ಶೇ. 28ರಷ್ಟು ಶಸ್ತ್ರಾಸ್ತ್ರಗಳನ್ನು ಫ್ರಾನ್ಸ್ನಿಂದ ಖರೀದಿ ಮಾಡಿದೆ.

ಜಾಗತಿಕ ಶಸ್ತ್ರಾಸ್ತ್ರ ರಫ್ತಿನಲ್ಲಿ ಶೇ. 7.8 ಪಾಲನ್ನು ಹೊಂದಿರುವ ರಷ್ಯಾ ಮೂರನೇ ಸ್ಥಾನದಲ್ಲಿದೆ. ರಷ್ಯಾದಿಂದ ಶೇ. 38ರಷ್ಟು ಶಸ್ತ್ರಾಸ್ತ್ರಗಳನ್ನು ಭಾರತ ಖರೀದಿ ಮಾಡಿದೆ. ಉಳಿದಂತೆ ಚೀನಾ ಮತ್ತು ಖಜಕಿಸ್ತಾನ್ ಕೂಡ ರಷ್ಯಾದಿಂದ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಿವೆ

ನಾಲ್ಕನೇ ಸ್ಥಾನದಲ್ಲಿರುವ ಚೀನಾ 2020 ಮತ್ತು 2024 ರ ನಡುವಿನ ಜಾಗತಿಕ ಶಸ್ತ್ರಾಸ್ತ್ರ ರಫ್ತಿನಲ್ಲಿ ಶೇ. 5.9ರಷ್ಟು ಕೊಡುಗೆ ನೀಡಿದೆ. ಪಾಕಿಸ್ತಾನ ಇದರ ಬಹುದೊಡ್ಡ ಖರೀದಿದಾರನಾಗಿದೆ. ಉಳಿದಂತೆ ಥೈಲ್ಯಾಂಡ್ ಮತ್ತು ಸರ್ಬಿಯಾ ಕೂಡ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಚೀನಾದಿಂದ ಖರೀದಿ ಮಾಡುತ್ತವೆ.

ಐದನೇ ಸ್ಥಾನದಲ್ಲಿರುವ ಜರ್ಮನಿ 2020–2024ರ ಅವಧಿಯಲ್ಲಿ ಜಾಗತಿಕ ಶಸ್ತ್ರಾಸ್ತ್ರ ರಫ್ತಿನಲ್ಲಿ ಶೇ. 5.6 ಪಾಲನ್ನು ಹೊಂದಿದೆ. ಉಕ್ರೇನ್, ಈಜಿಪ್ಟ್,, ಇಸ್ರೇಲ್ ಗೆ ಜರ್ಮನಿಯು ಹೆಚ್ಚಿನ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುತ್ತಿದೆ. ಉಕ್ರೇನ್ ಮತ್ತು ಈಜಿಪ್ಟ್ ಶೇ. 19ರಷ್ಟು ಶಸ್ತ್ರಾಸ್ತ್ರಗಳನ್ನು ಜರ್ಮನಿಯಿಂದಲೇ ಆಮದು ಮಾಡಿಕೊಳ್ಳುತ್ತಿವೆ.