Dr N Someshwara Column: ಇಂಥ ಮಕ್ಕಳನ್ನು ಹೆರದಿರುವುದು ಕೂಡ ಸಮಾಜಸೇವೆಯೇ !
ಭಕ್ತಿ ಭಂಡಾರಿ ಬಸವಣ್ಣನವರು, ‘ಮರ್ತ್ಯ ಲೋಕವೆಂಬುದು ಕರ್ತಾರನ ಕಮ್ಮಟವಯ್ಯ!’ ಎಂದಿ ದ್ದಾರೆ. ಅವರ ವಚನದ ಈ ಸಾಲನ್ನು ಓದಿದಾಗ “ಈ ಮರ್ತ್ಯಲೋಕವು ಜಗನ್ನಿಯಾಮಕನಾದ ಭಗವಂತನ ಟಂಕಸಾಲೆ. ಈ ಟಂಕಸಾಲೆಯಲ್ಲಿ ಲೋಹಗಳ ಮೇಲೆ ಮುದ್ರೆಯೊತ್ತಿ ಬೆಲೆಯುಳ್ಳ ನಾಣ್ಯವನ್ನಾಗಿ ಮಾಡುವವನೇ ಆ ದೇವರು

ಅಂಕಣಕಾರ ಡಾ.ನಾ.ಸೋಮೇಶ್ವರ

ಹಿಂದಿರುಗಿ ನೋಡಿದಾಗ
ಡಿಎಸ್ ಮಕ್ಕಳ ಮುಖದಲ್ಲಿ ವಿಶಿಷ್ಟ ಲಕ್ಷಣಗಳು ಕಂಡುಬರುತ್ತವೆ. ಸಾಮಾನ್ಯ ಮಕ್ಕಳಿಗಿಂತ ಚಿಕ್ಕ ತಲೆ. ಚಪ್ಪಟೆಯಾಗಿರುವ ಮುಖದಲ್ಲಿ ಒಂದು ಚಪ್ಪಟೆ ಮೂಗು. ಬಾದಾಮಿಯನ್ನು ಹೋಲುವಂಥ ಪುಟ್ಟ ಕಣ್ಣುಗಳು. ಚಿಕ್ಕಬಾಯಿ. ಭುಜಕ್ಕೆ ಹೊಂದಿಕೊಂಡಂಥ ಹ್ರಸ್ವ ಕುತ್ತಿಗೆ. ನಾಲಿಗೆಯು ಯಾವಾ ಗಲು ಬಾಯಿಯಿಂದ ಹೊರಚಾಚಿಕೊಂಡಿರುತ್ತವೆ. ಚಿಕ್ಕ ದುಂಡು ಕಿವಿಗಳು. ಭಕ್ತಿ ಭಂಡಾರಿ ಬಸವಣ್ಣನವರು, ‘ಮರ್ತ್ಯ ಲೋಕವೆಂಬುದು ಕರ್ತಾರನ ಕಮ್ಮಟವಯ್ಯ!’ ಎಂದಿ ದ್ದಾರೆ. ಅವರ ವಚನದ ಈ ಸಾಲನ್ನು ಓದಿದಾಗ “ಈ ಮರ್ತ್ಯಲೋಕವು ಜಗನ್ನಿಯಾಮಕನಾದ ಭಗವಂತನ ಟಂಕಸಾಲೆ. ಈ ಟಂಕಸಾಲೆಯಲ್ಲಿ ಲೋಹಗಳ ಮೇಲೆ ಮುದ್ರೆಯೊತ್ತಿ ಬೆಲೆಯುಳ್ಳ ನಾಣ್ಯವನ್ನಾಗಿ ಮಾಡುವವನೇ ಆ ದೇವರು.
ನಾವೆಲ್ಲ ಮುದ್ರೆಯೊತ್ತಿಸಿಕೊಂಡು ನಾಣ್ಯವಾಗಬೇಕಾಗಿರುವ ಲೋಹದ ಚೂರುಗಳು. ನಾವು ಯಾವ ಬೆಲೆಯ ನಾಣ್ಯವಾಗಲಿರುವೆವೋ ತಿಳಿಯದು. ಆ ಮೌಲ್ಯದ ನಿಷ್ಕರ್ಷೆಯು ಐಹಿಕದಲ್ಲಿ ನಾವು ಹೇಗೆ ಬಾಳುತ್ತೇವೆಂಬುದರ ಮೇಲೆ ಅವಲಂಬಿಸಿದೆ..." ಎಂಬ ಸ್ಥೂಲ ಅರ್ಥವು ನನಗೆ ಹೊಳೆಯಿತು. ಜತೆಗೆ ಮತ್ತೂ ಒಂದು ಪ್ರಶ್ನೆ ಉದ್ಭವಿಸಿತು.
ಇದನ್ನೂ ಓದಿ: Dr N Someshwara Column: ರಾಸಾಯನಿಕಗಳ ಇತ್ಯಾತ್ಮಕ-ನೇತ್ಯಾತ್ಮಕ ಜಗತ್ತು
‘ಡೌನ್ ಲಕ್ಷಣಾವಳಿ’ ಮುಂತಾದ ಕ್ರೋಮೋಸೋಮುಗಳ ವೈಪರೀತ್ಯದಿಂದ ಹುಟ್ಟುವ ಮಕ್ಕಳಿಗೆ ಮುದ್ರೆಯನ್ನೊತ್ತಿ ನಾಣ್ಯವನ್ನು ಮಾಡಬೇಕಾದಾಗ, ಯಾಕೆ ಅವನು ಜೂಗರಿಸಿದ ಎನ್ನುವ ಪ್ರಶ್ನೆಯು ಬೇತಾಳನ ಪ್ರಶ್ನೆಯ ಹಾಗೆ ಕಾಡಲಾರಂಭಿಸಿತು. ಈ ಭೂಮಿಯ ಮೇಲೆ ಇರುವ ಸಕಲ ಚರಾಚರಗಳನ್ನು ಆ ಭಗವಂತನೇ ಸೃಜಿಸುತ್ತಾನೆ ಎನ್ನುವ ನಂಬಿಕೆಯ ಹಿನ್ನೆಲೆಯಲ್ಲಿ ಈ ಪ್ರಶ್ನೆಯು ನನ್ನ ಮನಸ್ಸಿನಲ್ಲಿ ಮೂಡಿತು.
ಏನಿದು ಡೌನ್ ಲಕ್ಷಣಾವಳಿ, ಇದು ಹೇಗೆ ಬರುತ್ತದೆ, ಇದರ ಲಕ್ಷಣಗಳೇನು ಇತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳುವುದು ಸೂಕ್ತ. ಮನುಷ್ಯನ ದೇಹದಲ್ಲಿ 23 ಜೊತೆ ಕ್ರೋಮೋಸೋಮುಗಳಿವೆ. ಇವು ಗಳಲ್ಲಿ 23 ಕ್ರೋಮೋಸೋಮುಗಳು ತಾಯಿಯ ಅಂಡಾಣುವಿನ ಮೂಲಕ ಬಂದರೆ, ಉಳಿದ 23 ಕ್ರೋಮೋಸೋಮುಗಳು ತಂದೆಯ ವೀರ್ಯಾಣುವಿನಿಂದ ಬರುತ್ತವ. ಈ 23 ಜೊತೆಯ ಕ್ರೋಮೋ ಸೋಮುಗಳಲ್ಲಿ ಮೊದಲ 22 ಜೊತೆಯ ಕ್ರೋಮೋಸೋಮುಗಳನ್ನು ಕ್ರಮವಾಗಿ 1ರಿಂದ 22ರವರೆಗೆ ಗುರುತಿಸುವ ಪದ್ಧತಿಯಿದೆ.
23ನೆಯ ಕ್ರೋಮೋಸೋಮು ಲಿಂಗ ನಿರ್ಧಾರಕ ಕ್ರೋಮೋಸೋಮು. ಹೆಣ್ಣುಮಕ್ಕಳಲ್ಲಿ ‘ಎಕ್ಸ್ ಎಕ್ಸ್’ ಇದ್ದರೆ, ಗಂಡು ಮಕ್ಕಳಲ್ಲಿ ‘ಎಕ್ಸ್ ವೈ’ ಇರುತ್ತದೆ. ಈ ‘ವೈ’ ಕ್ರೋಮೋಸೋಮ್ ಪುರುಷರಲ್ಲಿ ಮಾತ್ರವಿರುತ್ತದೆ. ತಾಯಿಯ ಅಂಡಾಣುವಿನಲ್ಲಿರುವ ೨೧ನೆಯ ಕ್ರೋಮೋಸೋಮಿನ ಜತೆಯಲ್ಲಿ, ಮತ್ತೊಂದು 21ನೆಯ ಕ್ರೋಮೋಸೋಮ್ ಅಂಟಿಕೊಂಡಿರುವ ಸಾಧ್ಯತೆಯು ಅಪರೂಪಕ್ಕೆ ಸಂಭವಿಸುತ್ತದೆ.
ಹೀಗೆ ಎರಡು 21ನೆಯ ಕ್ರೋಮೋಸೋಮನ್ನು ಒಳಗೊಂಡ ಅಂಡಾಣುವು ಗರ್ಭಕಟ್ಟಿದರೆ, ಆ ಮಗುವು ಡೌನ್ ಲಕ್ಷಣಾವಳಿಯ ಜತೆಯಲ್ಲಿ ಹುಟ್ಟುತ್ತದೆ. ಸಾಮಾನ್ಯವಾಗಿ ಈ ವೈಪರೀತ್ಯವು ಅಂಡಾಣುವಿನಲ್ಲೇ ಸಂಭವಿಸುತ್ತದೆ. ಅಪರೂಪಕ್ಕೆ ಪುರುಷರ ವೀರ್ಯಾಣುವಿನಲ್ಲಿರುವ 21ನೆಯ ಕ್ರೋಮೋಸೋಮಿನಲ್ಲಿ ಈ ಅವಘಡ ಸಂಭವಿಸಬಹುದು.
ಹಾಗಾಗಿ ಡೌನ್ ಲಕ್ಷಣಾವಳಿಯ ಮಗುವಿನಲ್ಲಿ ಮೂರು 21 ಕ್ರೋಮೋಸೋಮುಗಳು ಇರುವ ಕಾರಣ, ಈ ಸ್ಥಿತಿಯಲ್ಲಿ ಟ್ರೈಸೋಮಿ-21 ಎಂದು ಕರೆಯುವುದುಂಟು. ಹಾಗಾಗಿ ಡೌನ್ ಲಕ್ಷಣಾ ವಳಿಯ ಶಿಶುಗಳಲ್ಲಿ ಸಹಜ 23+23=46 ಕ್ರೋಮೋಸೋಮುಗಳಿರುವ ಬದಲು, 23+23+1=47 ಕ್ರೋಮೋಸೋಮುಗಳು ಇರುತ್ತವೆ. ಇಂಥ ಹಲವು ನಮೂನೆಯ ಕ್ರೋಮೋಸೋಮ್ ವೈಪರೀತ್ಯ ಗಳನ್ನು ಒಳಗೊಂಡ ಮಕ್ಕಳು ಇಂದಿಗೂ ಹುಟ್ಟುತ್ತಲೇ ಇದ್ದಾರೆ ಎನ್ನುವುದು ಸತ್ಯ. ಆದರೆ ಆ ವಿವರಗಳು ಸದ್ಯಕ್ಕೆ ನಮಗೆ ಅನಗತ್ಯ.
ಡೌನ್ ಲಕ್ಷಣಾವಳಿಯನ್ನು ಡೌನ್ ಸಿಂಡ್ರೋಮ್ ಎಂದು ಇಂಗ್ಲಿಷಿನಲ್ಲಿ ಕರೆಯುವುದರ ಜತೆಯಲ್ಲಿ ಸಂಕ್ಷಿಪ್ತವಾಗಿ ‘ಡಿಎಸ್’ ಎಂದು ಕರೆಯುವರು. ಈ ಜಗತ್ತಿನಲ್ಲಿ ಹುಟ್ಟುವ ಪ್ರತಿ 700 ಮಕ್ಕಳಲ್ಲಿ ಒಂದು ಮಗುವು ಡಿಎಸ್ ಜತೆಗೆ ಹುಟ್ಟುತ್ತದೆ ಎನ್ನುತ್ತವೆ ಅಂಕಿ-ಸಂಖ್ಯೆಗಳು. ಇಂಥ ಮಕ್ಕಳು ಜಗತ್ತಿ ನಾದ್ಯಂತ ಹುಟ್ಟಬಲ್ಲವು. ಕಾಲ ದೇಶಗಳ ಪರಿವೆಯಿಲ್ಲ. ಜಾತಿ, ಭಾಷೆ, ಧರ್ಮಗಳ ಗೊಡವೆಯಿಲ್ಲ. ಇಂಥ ಮಕ್ಕಳು ಎಲ್ಲ ಕಾಲದಲ್ಲಿ ಹುಟ್ಟುತ್ತಿದ್ದವು ಎನ್ನುವುದಕ್ಕೆ ಪುರಾವೆಯಿದೆ.
ಡಿಎಸ್ ಮಕ್ಕಳ ಮುಖದಲ್ಲಿ ವಿಶಿಷ್ಟ ಲಕ್ಷಣಗಳು ಕಂಡುಬರುತ್ತವೆ. ಸಾಮಾನ್ಯ ಮಕ್ಕಳಿಗಿಂತ ಚಿಕ್ಕ ತಲೆ. ಚಪ್ಪಟೆಯಾಗಿರುವ ಮುಖದಲ್ಲಿ ಒಂದು ಚಪ್ಪಟೆ ಮೂಗು. ಬಾದಾಮಿಯನ್ನು ಹೋಲುವಂಥ ಪುಟ್ಟ ಕಣ್ಣುಗಳು. ಚಿಕ್ಕಬಾಯಿ. ಭುಜಕ್ಕೆ ಹೊಂದಿಕೊಂಡಂಥ ಹ್ರಸ್ವ ಕುತ್ತಿಗೆ. ನಾಲಿಗೆಯು ಯಾವಾ ಗಲು ಬಾಯಿಯಿಂದ ಹೊರಚಾಚಿಕೊಂಡಿರುತ್ತವೆ.
ಚಿಕ್ಕ ದುಂಡು ಕಿವಿಗಳು. ಅಗಲವಾದ, ಆದರೆ ಪುಟ್ಟದಾದ ಬಾಹುಗಳು. ಅಂಗೈಯಲ್ಲಿ ಆಯುರೇಖೆ ಮತ್ತು ಹೃದಯ ರೇಖೆಗಳ ಸ್ಥಾನದಲ್ಲಿ ಒಂದೇ ಒಂದು ಮಂಗನ ರೇಖೆ (ಸಿಮಿಯನ್ ಲೈನ್). ಪುಟ್ಟ ಕಾಲುಗಳು. ಕಾಲಿನ ಹೆಬ್ಬೆರಳು ಮತ್ತು ಎರಡನೆಯ ಬೆರಳಿನ ನಡುವೆ ಅಸಹಜ ಪ್ರಮಾಣದ ಅಂತರ. ಕುಳ್ಳು ದೇಹ. ಸ್ನಾಯುಗಳು ಶಕ್ತಿಯಿಲ್ಲದೆ ಜೋಲುತ್ತವೆ. ಕೀಲುಗಳು ದುರ್ಬಲವಾಗಿರುತ್ತವೆ. ಮಗು ವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗಳು ತೀರಾ ತಡವಾಗಿ ಕಂಡುಬರುತ್ತವೆ.
ತೆವಳುವುದು, ಕುಳಿತುಕೊಳ್ಳುವುದು, ನಿಲ್ಲುವುದು, ನಡೆಯುವುದು ಎಲ್ಲ ತಡ. ಭಾಷೆಯೂ ನಿಧಾನ. ಕಲಿಕೆ, ನೆನಪು, ಏಕಾಗ್ರತೆ, ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಎಲ್ಲವೂ ನಿಧಾನ. ಜನ್ಮದತ್ತ ಹೃದಯ ವೈಕಲ್ಯಗಳು, ಜೀರ್ಣಾಂಗ ದೋಷಗಳು, ದುರ್ಬಲ ರೋಗರಕ್ಷಣಾ ವ್ಯವಸ್ಥೆ, ಗೊರಕೆ ಮತ್ತು ಉಸಿರಾಟದ ತೊಂದರೆ, ಅಧಿಕ ದೇಹತೂಕ, ಬೆನ್ನುಹುರಿಯ ತೊಂದರೆ, ರಕ್ತ ಕ್ಯಾನ್ಸರ್, ಅಕಾಲಿಕ ಆಲ್ಜೈಮರ್ ಕಾಯಿಲೆ... ಹೀಗೆ ಡಿಎಸ್ ವೈಪರೀತ್ಯಗಳ ಗೂಡಾಗಿರುತ್ತದೆ.
ಮಧ್ಯ ಅಮೆರಿಕದ ಮೆಕ್ಸಿಕೋ ದೇಶದಲ್ಲಿ ಓಲ್ಮೆಕ್ ಎಂಬ ನಾಗರಿಕತೆಯು ಬೆಳಗಿತು. ಕ್ರಿ.ಪೂ. 1200ರಿಂದ ಆರಂಭವಾಗಿ ಕ್ರಿ.ಪೂ. 400ರವರೆಗೆ ಈ ಸಂಸ್ಕೃತಿಯು ಇಂದಿನ ಲಾ ವೆಂಟ, ಟ್ರೆಸ್ ಜ಼ಪೋಟೆಸ್, ಲಗುನ ದಿ ಲಾಸ್ ಸೆರ್ರಸ್ ಮುಂತಾದ ಪ್ರದೇಶಗಳಲ್ಲಿ ವಿಸ್ತೃತವಾಗಿ ವ್ಯಾಪಿಸಿತ್ತು. ಇವರು ಕಲ್ಲಿನಲ್ಲಿ ಹಾಗೂ ಜೇಡಿ ಮಣ್ಣಿನಲ್ಲಿ ಬೃಹತ್ ಪ್ರಮಾಣದ ಹಾಗೂ ಸೂಕ್ಷ್ಮ ಕೆತ್ತನೆಗಳನ್ನು ಮಾಡುವುದರಲ್ಲಿ ಪ್ರಸಿದ್ಧರು.
ಇವರ ಶಿಲ್ಪಗಳಲ್ಲಿ ಡಿಎಸ್ ಲಕ್ಷಣಗಳನ್ನು ಹೋಲುವ ಅನೇಕ ಶಿಲ್ಪಗಳಿವೆ ಎಂಬುದು ತಜ್ಞರ ಅಭಿಮತ. ಅದರಲ್ಲೂ ಸ್ಮೈಲಿಂಗ್ ಫಿಗರ್ ಎಂಬ ಶಿಲ್ಪವು ಡಿಎಸ್‌ನ ಎಲ್ಲ ಲಕ್ಷಣಗಳನ್ನು ಒಳ ಗೊಂಡಿವೆ. ಬಹುಶಃ ಇದೇ ನಮಗೆ ದೊರೆತಿರುವ ಮೊದಲ ಇತಿಹಾಸಪೂರ್ವ ಕಾಲದ ದಾಖಲೆ. ಕೆಲವು ಮೂಳೆಗಳನ್ನು ಅಧ್ಯಯನ ಮಾಡಿದಾಗ, ಅವುಗಳಲ್ಲಿ ಡಿಎಸ್ ಲಕ್ಷಣಗಳಿರುವುದನ್ನು ಗಮನಿಸಲಾಗಿದೆ. ಯುರೋಪಿನ ನವೋದಯ ಅಥವಾ ರಿನೇಸಾನ್ಸ್ ಅವಧಿಯ ಶಿಲ್ಪಗಳು ಹಾಗೂ ವರ್ಣಚಿತ್ರಗಳಲ್ಲಿ ಡಿಎಸ್ ಲಕ್ಷಣಗಳಿರುವ ಮಕ್ಕಳಿರುವುದನ್ನು ಗಮನಿಸಲಾಗಿದೆ.
19ನೆಯ ಶತಮಾನದವರೆಗೆ ಡಿಎಸ್ ಸ್ವರೂಪವು ಜನರಿಗೆ ಅರ್ಥವಾಗದಿರುವ ಕಾರಣ, ಈ ಮಕ್ಕಳ ನ್ನು ಕಾರಾಗೃಹದಲ್ಲಿ ಇರಿಸುತ್ತಿದ್ದರು. ಯಾವ ಹೊಸ ಕೌಶಲವನ್ನೂ ಕಲಿಯಲಾಗದ ಇವರನ್ನು ದಂಡಪಿಂಡಗಳೆಂದು ಪರಿಗಣಿಸಿ, ಹುಚ್ಚರ ಜತೆಯಲ್ಲಿ ಇವರನ್ನು ಹುಚ್ಚರೆಂದು ಭಾವಿಸಿ, ಸಮಾಜ ದಲ್ಲಿ ಬೆರೆಯುವುದಕ್ಕೆ ನಿರ್ಬಂಧಿಸುತ್ತಿದ್ದರು.
ಡಿಎಸ್ ಮಗುವನ್ನು ಮೊದಲ ಬಾರಿಗೆ ಅಧ್ಯಯನ ಮಾಡಿದವನು, ಬ್ರಿಟನ್ನಿನ ವೈದ್ಯ ಜಾನ್ ಲಾಂಗ್ಡ ನ್ ಹೇಡನ್ ಡೌನ್. ಡೌನ್ ತನ್ನ 14ನೆಯ ವಯಸ್ಸಿನಲ್ಲಿ ಹಳ್ಳಿಯ ಔಷಧ ತಯಾರಕ ನೊಬ್ಬನ (ಅಪೋಥೆಕರಿ) ಸಹಾಯಕನಾಗಿ ಸೇರಿಕೊಂಡ. ಆಗ ಅವನು ಡಿಎಸ್ ಪೀಡಿತ ಹೆಣ್ಣು ಮಗಳನ್ನು ಮೊದಲ ಬಾರಿಗೆ ನೋಡಿದ. ಈಕೆಯ ಅನಾರೋಗ್ಯದ ಬಗ್ಗೆ ಅತೀವ ಕುತೂಹಲ ವುಂಟಾಯಿತು.
ಹಾಗೆಯೇ ಮನೋವೈಕಲ್ಯವಿರುವ ಮಕ್ಕಳ ಬಗ್ಗೆ ತೀವ್ರ ಆಸಕ್ತಿಯನ್ನು ತಳೆದ. ತನ್ನ 18ನೆಯ ವಯಸ್ಸಿನಲ್ಲಿ ಲಂಡನ್ನಿಗೆ ಹೋಗಿ ವೈದ್ಯಕೀಯ ಶಿಕ್ಷಣಕ್ಕೆ ಸೇರಿದ. ಚಿನ್ನದ ಪದಕವನ್ನು ಪಡೆದ. ಅವನ ಮುಂದೆ ವೈದ್ಯಕೀಯ ಕ್ಷೇತ್ರದ ಹೆಬ್ಬಾಗಿಲು ತೆರೆದಿದ್ದರು ಸಹ, ಅವನು ಸರ್ರೆಯಲ್ಲಿದ್ದ ಅರ್ಲ್ಸ್‌ವುಡ್ ಮೆಂಟಲ್ ಅಸೈಲಮ್ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಆಗಿ 1858ರಲ್ಲಿ ಕೆಲಸಕ್ಕೆ ಸೇರಿದ.
1866ರಲ್ಲಿ ಹುಚ್ಚಿನ ಸಮಸ್ಯೆಗೆ (ಈಡಿಯಸಿ) ಸಂಬಂಧಿಸಿದಂತೆ ಹೊಸ ವರ್ಗೀಕರಣವನ್ನು ಪ್ರಕಟಿ ಸಿದ. ಡಿಎಸ್ ಅನ್ನು ಮಂಗೋಲಿಸಂ ಎಂದು ಕರೆದ. ಏಕೆಂದರೆ ಡಿಎಸ್ ಮಗುವಿನ ಮುಖ ಲಕ್ಷಣ ಗಳು ಬಹುಪಾಲು ಮಂಗೋಲಿಯನ್ ಜನರ ಮುಖಲಕ್ಷಣಗಳನ್ನು ಹೋಲುತ್ತಿತ್ತು. 1965ರಲ್ಲಿ ಮಂಗೋಲಿಯನ್ನರು ವಿಶ್ವಸಂಸ್ಥೆಗೆ ದೂರನ್ನು ನೀಡಿದ ಮೇಲೆ, ಮಂಗೋಲಿಸಂ ಎಂಬ ಹೆಸರನ್ನು ಬಿಟ್ಟು ಡೌನ್ಸ್ ಸಿಂಡ್ರೋಮ್ ಎಂಬ ಹೆಸರನ್ನು ವಿಶ್ವಸಂಸ್ಥೆಯವರು ಅಧಿಕೃತಗೊಳಿಸಿದರು.
ಈ ಮೂಲಕ ಜಾನ್ ಲಾಂಗ್ಡನ್ ಹೇಡನ್ನನಿಗೆ ಗೌರವವನ್ನು ನೀಡಿದರು. ಆಸ್ಪತ್ರೆಯಲ್ಲಿ ಜಾನ್ ಇತ್ಸೇನ್ ಡಾಮಿನಿಕ್ ಎಸ್ಕಿರಾಲ್ (1772-1840) ಹಾಗೂ ಇಡ್ವ ಸೇಗಿನ್ (1812-1880) ಎಂಬ ಇಬ್ಬರು ವೈದ್ಯರು ಡಿಎಸ್ ಇರುವವರನ್ನು ಜೈಲಿನಿಂದ ಹೊರಗೆ ಬಿಡಬೇಕೆಂದು ವಾದಿಸಿದರು. ಡಿಎಸ್ ಇರುವ ಮಕ್ಕಳು ನಿಧಾನವಾಗಿ ಕಲಿಯಬಲ್ಲ ಸಾಮರ್ಥ್ಯವಿರುವವರಾದ ಕಾರಣ, ಅವರಿಗೆ ವಿಶೇಷ ಶಿಕ್ಷಣವನ್ನು ಕೊಡಬೇಕೆಂದರು.
ಅಮೆರಿಕದಲ್ಲಿ ಡೊರೋತಿಯ ಡಿಕ್ಸ್ (1802-1887) ಈ ದುರ್ಬಲ ಮಿದುಳಿನ ಮಕ್ಕಳಿಗೆ ವಿಶೇಷ ಶಿಕ್ಷಣ ಕ್ರಮವನ್ನು ರೂಪಿಸಿದಳು. ಡಿಎಸ್ ಮಕ್ಕಳನ್ನು, ಎಲ್ಲ ಮನುಷ್ಯರ ಹಾಗೆ ಭಾವಿಸಬೇಕೆಂದು ಹೋರಾಡಿದ ಡೌನ್, ಎಸ್ಕಿರಾಲ್, ಸೇಗಿನ್ ಹಾಗೂ ಡಿಕ್ಸ್ ಅವರಿಗೆ ಮನುಕುಲವು ಆಭಾರಿಯಾಗಿದೆ. ಡಿಎಸ್ ಮಕ್ಕಳ ಬದುಕು ಸಹನೀಯವಾಗಿದೆ. ಭಾಷಾ ಚಿಕಿತ್ಸೆಯ (ಸ್ಪೀಚ್ ತೆರಪಿ) ಮಕ್ಕಳಿಗೆ ಮಾತ ನಾಡುವುದನ್ನು ಹಾಗೂ ಇತರರ ಜತೆಯಲ್ಲಿ ಸಂವಹನ ನಡೆಸುವುದನ್ನು ಕಲಿಸುತ್ತಿದ್ದೇವೆ.
ಕುಶಲಕಲೆಗಳನ್ನು ಕಲಿಯಲು ವಿಶೇಷ ಆಕ್ಯುಪೇಶನಲ್ ಥೆರಪಿ ನೀಡಬಹುದು. ಕಾಯಚಿಕಿತ್ಸೆ ಯಿಂದ ಸ್ನಾಯುಗಳಲ್ಲಿ ಬಲ ತುಂಬಬಹುದು. ಹರ್ಮೈನ್ ಗುಂಪಿನ ಔಷಧಗಳನ್ನು ನೀಡಿ ಮಿದು ಳನ್ನು ಸ್ವಲ್ಪ ಚುರುಕುಗೊಳಿಸಬಹುದು. ಕಾಂಡಕೋಶ ಚಿಕಿತ್ಸೆ (ಸ್ಟೆಮ್ ಸೆಲ್ ಥೆರಪಿ) ಮಿದುಳಿನ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ ಎನ್ನಲಾಗಿದೆ. ಈ ಮಕ್ಕಳಲ್ಲಿ ಆಲ್ಜೈಮರ್ ಕಾಯಿಲೆಯು ಅಕಾಲಿಕವಾಗಿ ಕಂಡುಬರುವ ಕಾರಣ, ಅದನ್ನು ನಿಧಾನಗೊಳಿಸಲು ಔಷಧಗಳನ್ನು ನೀಡಲು ಅನುಕೂಲತೆಗಳಿವೆ.
ಡಿಎಸ್ ಮಕ್ಕಳಲ್ಲಿ ಗಂಭೀರ ಸ್ವರೂಪದ ಜನ್ಮದತ್ತ ಹೃದಯ ವೈಕಲ್ಯಗಳು ಕಂಡುಬಂದಾಗ, ಅವನ್ನು ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಬಹುದು. ಆಧುನಿಕ ವೈದ್ಯಕೀಯ ಸೌಲಭ್ಯಗಳ ಮೂಲಕ, ಸುಮಾರು 25 ವರ್ಷಗಳವರೆಗೆ ಮಾತ್ರ (1980) ಬದುಕುತ್ತಿದ್ದ ಡಿಎಸ್ ಮಕ್ಕಳನ್ನು ಇಂದು ಸುಮಾರು 60 ವರ್ಷಗಳವರೆಗೆ (2024) ಬದುಕಿಸಬಹುದಾಗಿದೆ.
ಇವರಿಗೆ ಎಲ್ಲರಂತೆ ಸಹಜ ಬದುಕನ್ನು ನೀಡುವ ಅಧ್ಯಯನಗಳು ಜಗತ್ತಿನಾದ್ಯಂತ ನಡೆಯುತ್ತಿವೆ. ಇಂದು ನಮ್ಮ ಮುಂದೆ ಇರುವ ಬಹುದೊಡ್ಡ ಸವಾಲೆಂದರೆ, ಡಿಎಸ್ ಮಕ್ಕಳು ಹುಟ್ಟದಂತೆ ಮುನ್ನೆ ಚ್ಚರಿಕೆಯನ್ನು ತೆಗೆದುಕೊಳ್ಳುವುದು. ಮೊದಲಿಗೆ ತಾಯಂದಿರು 35 ವರ್ಷಗಳ ಮೊದಲೇ ಅಗತ್ಯ ಪ್ರಮಾಣದ ಮಕ್ಕಳನ್ನು ಹೆತ್ತು ತಮ್ಮ ಕುಟುಂಬವನ್ನು ಪೂರ್ಣಗೊಳಿಸಿಕೊಳ್ಳಬೇಕು.
35ರ ನಂತರ ಮಕ್ಕಳು ಬೇಕೆಂದರೆ ಅವರು ಜೆನೆಟಿಕ್ ಕೌನ್ಸೆಲಿಂಗ್ ಪಡೆದುಕೊಳ್ಳಲೇಬೇಕು. ಗರ್ಭಾ ವಧಿಯ ಕೆಲವು ಪರೀಕ್ಷೆಗಳು ಡಿಎಸ್ ಸಮಸ್ಯೆಯನ್ನು ಸಕಾಲದಲ್ಲಿ ಗುರುತಿಸಬಹುದು. ಗರ್ಭ ಧಾರಣೆಯ ಮೊದಲನೆಯ ವಾರದಲ್ಲಿ ಮಾಡುವ ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ನ್ಯೂಕಲ್ ಟ್ರಾನ್ಸ್ ಲ್ಯೂಸೆನ್ಸಿ ಕಂಡುಬಂದರೆ, ಆ ಗರ್ಭವನ್ನು ಮುಂದುವರಿಸಬಾರದು. ತಾಯಿಯ ರಕ್ತವನ್ನು ಪರೀ ಕ್ಷಿಸಿ, ಅದರ ಕಣಗಳಲ್ಲಿರುವ ಡಿಎನ್‌ಎ ಅಧ್ಯಯನ ಮಾಡಿ (ನಾನ್-ಇನ್ವೇಸಿವ್ ಪ್ರಿನೇಟಲ್ ಟೆಸ್ಟಿಂ ಗ್) ಡಿಎಸ್ ಸಂಭವ ಸಾಧ್ಯತೆಯನ್ನು ತಿಳಿಯಬಹುದು.
ಆಮ್ನಿಯಾಸೆಂಟೆಸಿಸ್ ಮತ್ತು ಕೊರಿಯಾನ್ ವಿಲ್ಲಸ್ ಸ್ಯಾಂಪ್ಲಿಂಗ್ ಪರೀಕ್ಷೆಯಲ್ಲಿ ಭ್ರೂಣದ ಗರ್ಭ ಜಲವನ್ನು ಹಾಗೂ ಉಲ್ಬಪದರದ ಭಾಗವನ್ನು ಪಡೆದು ಪರೀಕ್ಷಿಸಿ ಡಿಎಸ್ ಅನ್ನು ಖಚಿತಪಡಿಸ ಬಹುದು.
ಕೊನೆಯ ಪ್ರಶ್ನೆ. ಡಿಎಸ್ ಇರುವವರು ಮದುವೆಯಾಗಬಹುದೆ? ಮಕ್ಕಳನ್ನು ಪಡೆಯಬಹುದೆ? ಈ ಬಗ್ಗೆ ಸರಳ ಉತ್ತರವಿಷ್ಟೇ. ಅವರು ಆರೋಗ್ಯಕರವಾದ ಮಕ್ಕಳನ್ನು ಪಡೆಯಲು ಸಾಧ್ಯವಿದೆ. ಆದರೆ ಪ್ರತಿಯೊಬ್ಬರೂ ಜೆನೆಟಿಕ್ ಕೌನ್ಸೆಲಿಂಗ್ ಪಡೆದು, ಆನಂತರವೇ ಮದುವೆ ಹಾಗೂ ಮಕ್ಕಳ ಬಗ್ಗೆ ಯೋಚಿಸಬೇಕಾಗುತ್ತದೆ. ಇದಕ್ಕೆ ಸುದೀರ್ಘ ಪೂರ್ವಭಾವಿ ಯೋಜನೆ ಅಗತ್ಯ.
ಸ್ತೀ-ಪುರುಷರು 30 ವರ್ಷಗಳ ಮೊದಲೇ ತಮ್ಮ ಕುಟುಂಬವನ್ನು ಪೂರ್ಣಗೊಳಿಸಿಕೊಳ್ಳಬೇಕು. ಸಮತೋಲಿತ ಆಹಾರ ಸೇವಿಸಬೇಕು. ಜಂಕ್ ಆಹಾರವನ್ನು ಪೂರ್ಣ ತ್ಯಜಿಸಬೇಕು. ಹಾಗೆಯೇ ಅಪಾಯಕಾ ರಾಸಾಯನಿಕಗಳ ಪರಿಸರದಿಂದ ದೂರವಿರಬೇಕು. ಹೆತ್ತವರಿಗೆ ಹಾಗೂ ಸಮಾಜಕ್ಕೆ ಹೊರೆಯಾಗಬಹುದಾದ ಮಕ್ಕಳನ್ನು ಹೆರದೇ ಇರುವುದು ಸಹ ಒಂದು ದೊಡ್ಡ ಸಮಾಜಸೇವೆ ಎನ್ನುವುದನ್ನು ನೆನಪಿನಲ್ಲಿಡೋಣ.