Bengaluru Blast: ಬೆಂಗಳೂರು ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟಿಸಿದ ಶಂಕಿತ ಉಗ್ರ ಆಂಧ್ರಪ್ರದೇಶದಲ್ಲಿ ಸೆರೆ
Bengaluru Blast: ಏಪ್ರಿಲ್ 17, 2013ರಂದು ಬಿಜೆಪಿ ಕಚೇರಿಯ ಹೊರಗೆ ಬಾಂಬ್ ಸ್ಫೋಟಗೊಂಡು ಕನಿಷ್ಠ 16 ಜನರು ಗಾಯಗೊಂಡಿದ್ದರು. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಮೂರು ವಾರಗಳ ಮೊದಲು ಈ ಸ್ಫೋಟ ನಡೆದಿತ್ತು. ಶಂಕಿತ ಉಗ್ರ ನಾಗೂರ್ ಅಬುಬಕ್ಕರ್ ಸಿದ್ದಿಕ್ ಕಳೆದ 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಂದು ಆತನನ್ನು ಬಂಧಿಸಿದ ಅಧಿಕಾರಿ ಹೇಳಿದರು.


ಚೆನ್ನೈ: 2013ರಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಬಿಜೆಪಿ ಕಚೇರಿಯ (BJP Office) ಹೊರಗೆ ನಡೆದ ಸ್ಫೋಟ (Bengaluru Blast) ಸೇರಿದಂತೆ ರಾಜ್ಯದಲ್ಲಿ ಮತ್ತು ಇತರ ಸ್ಥಳಗಳಲ್ಲಿ ನಡೆದ ಹಲವಾರು ಸ್ಫೋಟಗಳಲ್ಲಿ ಭಾಗಿಯಾಗಿ, 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಶಂಕಿತ ಭಯೋತ್ಪಾದಕನನ್ನು (Terrorist) ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಬಂಧಿಸಲಾಗಿದೆ (arrested) ಎಂದು ತಮಿಳುನಾಡು ಪೊಲೀಸರು (Tamil Nadu police) ಮಂಗಳವಾರ ತಿಳಿಸಿದ್ದಾರೆ.
2011ರಲ್ಲಿ ಮಧುರೈನಲ್ಲಿ ಹಿರಿಯ ಬಿಜೆಪಿ ನಾಯಕ ಎಲ್‌ಕೆ ಆಡ್ವಾಣಿ ಅವರ ಯಾತ್ರೆಯ ಮಾರ್ಗದಲ್ಲಿ ಬಾಂಬ್ ಇಟ್ಟ ಪ್ರಕರಣದಲ್ಲಿ ಶಂಕಿತನಾಗಿರುವ ನಾಗೂರ್ ಅಬುಬಕ್ಕರ್ ಸಿದ್ದಿಕ್ ಎಂಬಾತನನ್ನು ಆಂಧ್ರಪ್ರದೇಶಕ್ಕೆ ತೆರಳಿ ತಮಿಳುನಾಡು ಪೊಲೀಸರ ವಿಶೇಷ ತಂಡ ವಶಕ್ಕೆ ಪಡೆದುಕೊಂಡಿದೆ. 1995ರಲ್ಲಿ ಚೆನ್ನೈನ ಹಿಂದೂ ಮುನ್ನಾನಿ ಕಚೇರಿಯಲ್ಲಿ ನಡೆದ ಸ್ಫೋಟ, ನಾಗೂರ್ ತಂಗಮ್ ಮುತ್ತುಕೃಷ್ಣನ್ ಅವರ ನಿವಾಸದ ಹೊರಗೆ ಪಾರ್ಸೆಲ್ ಬಾಂಬ್ ಎಸೆದ ಪ್ರಕರಣ ಮತ್ತು 1999ರಲ್ಲಿ ಚೆನ್ನೈ ಪೊಲೀಸ್ ಆಯುಕ್ತರ ಕಚೇರಿ ಸೇರಿದಂತೆ ಏಳು ಸ್ಥಳಗಳಲ್ಲಿ ಬಾಂಬ್‌ಗಳನ್ನು ಇರಿಸಿದ್ದ ಪ್ರಕರಣಗಳಲ್ಲಿ ಸಿದ್ದಿಕ್ ಭಾಗಿಯಾಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಬೆಂಗಳೂರಿನ ಬಿಜೆಪಿ ಕಚೇರಿಯ ಹೊರಗೆ ನಡೆದ ಸ್ಫೋಟಗಳಲ್ಲಿ ಇವನು ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ನಂಬಲಾಗಿದೆ” ಎಂದು ಅಧಿಕಾರಿ ಹೇಳಿದರು. ಏಪ್ರಿಲ್ 17, 2013ರಂದು ಬಿಜೆಪಿ ಕಚೇರಿಯ ಹೊರಗೆ ಬಾಂಬ್ ಸ್ಫೋಟಗೊಂಡು ಕನಿಷ್ಠ 16 ಜನರು ಗಾಯಗೊಂಡಿದ್ದರು. ರಾಜ್ಯದಲ್ಲಿ ಹೊಸ ವಿಧಾನಸಭೆ ಆಯ್ಕೆ ಮಾಡಲು ಮತದಾನ ನಡೆಯುವ ಕೇವಲ ಮೂರು ವಾರಗಳ ಮೊದಲು ಈ ಸ್ಫೋಟ ನಡೆದಿತ್ತು. “ಸಿದ್ದಿಕ್ ಕಳೆದ 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ” ಎಂದು ಅಧಿಕಾರಿ ಹೇಳಿದರು.
ಈ ಹಿಂದೆ 1998ರಲ್ಲಿ ಹಿರಿಯ ಬಿಜೆಪಿ ನಾಯಕ ಎಲ್‌ಕೆ ಆಡ್ವಾಣಿ ಅವರ ಕೊಯಮತ್ತೂರು ರ್ಯಾಲಿಯಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ ಸುಮಾರು 50 ಜನರು ಸಾವನ್ನಪ್ಪಿದ್ದರು. ಮಧುರೈ ಬಳಿಯ ತಿರುಮಂಗಲದಲ್ಲಿ ಆಡ್ವಾಣಿ ಅವರ ಯಾತ್ರೆಯ ಮಾರ್ಗದಲ್ಲಿ ಬಾಂಬ್ ಇಡುವುದರಲ್ಲಿ ಸಿದ್ದಿಕ್ ನಿರ್ಣಾಯಕ ಪಾತ್ರ ವಹಿಸಿದ್ದಾನೆ ಎಂದು ಅಧಿಕಾರಿ ಹೇಳಿದರು. ಹಿರಿಯ ಬಿಜೆಪಿ ನಾಯಕ ಆಗಮಿಸುವ ಮೊದಲೇ ಅದನ್ನು ನಿಷ್ಕ್ರಿಯಗೊಳಿಸಲಾಯಿತು.
ಮಾರಕ ಕೊಯಮತ್ತೂರು ಸ್ಫೋಟಗಳಿಗೆ ಕಾರಣವಾದವನು ಅಲ್-ಉಮ್ಮಾದ ಸ್ಥಾಪಕ ಸದಸ್ಯ ಮೊಹಮ್ಮದ್ ಅಲಿ ಖಾನ್ ಎನ್ನಲಾಗಿದೆ. 26 ವರ್ಷಗಳಿಂದ ತಲೆಮರೆಸಿಕೊಂಡಿರುವ ಅಲಿ, ತಮಿಳುನಾಡು ಮತ್ತು ಕೇರಳದ ಏಳು ಸ್ಥಳಗಳಲ್ಲಿ ಬಾಂಬ್ ಇಟ್ಟ ಪ್ರಕರಣಗಳಲ್ಲಿಯೂ ಆರೋಪಿಯಾಗಿದ್ದಾನೆ.
ಇದನ್ನೂ ಓದಿ: Terrorist Arrest: ಹೈದರಾಬಾದ್‌ನಲ್ಲಿ ಭಾರೀ ಸ್ಪೋಟಕ್ಕೆ ಸಂಚು ; ಇಬ್ಬರು ಶಂಕಿತರ ಬಂಧನ