Tuna Fish: ಹೇರ್ ಫಾಲ್ ಹೆಚ್ಚಾಗ್ತಿದ್ಯಾ? ದೃಷ್ಟಿ ದೋಷ ಇದ್ಯಾ? ಮೂಳೆ ಸವೆಯುತ್ತಿದೆಯೇ? ಹಾಗಿದ್ರೆ ಈ ಮೀನು ತಿನ್ನಿ
ಮೀನು ಮಾಂಸಹಾರಿಗಳಿಗೆ ತುಂಬಾ ಪ್ರಿಯ ಆಹಾರ. ಅದರಲ್ಲೂ ಕರಾವಳಿ ತೀರದವರಿಗೆ ಮೀನೆಂದರೆ ಪಂಚಪ್ರಾಣ. ಕಾಟ್ಲಾ, ಭೂತಾಯಿ, ಬಂಗುಡೆ, ಕೇನ್, ಸಾಲ್ಮನ್....ಹೀಗೆ ನಾನಾ ರೀತಿಯ ಹೆಸರಿನ ಮೀನುಗಳು ಇವೆ. ಮೀನು ಸೇವನೆ ನಾಲಿಗೆ ರುಚಿಗಾಗಿ ಮಾತ್ರವಲ್ಲ, ಇದರಿಂದ ಹಲವು ರೀತಿಯ ಆರೋಗ್ಯ ಲಾಭವೂ ಇದೆ. ಮೀನಿನಲ್ಲಿ ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಮೆಗ್ನೀಷಿಯಮ್, ತಾಮ್ರ ಮತ್ತು ಸತುವಿನಂತಹ ಖನಿಜಗಳು ಸಮೃದ್ಧವಾಗಿವೆ. ಅದರಲ್ಲೂ ನೀವು 'ಟ್ಯೂನಾ' ಎನ್ನುವ ಮೀನಿನ ಆರೋಗ್ಯ ಪ್ರಯೋಜನ ತಿಳಿದರೆ ನಿಜಕ್ಕೂ ನೀವು ಇದನ್ನು ಖರೀದಿಸಲು ಹಿಂದೇಟು ಹಾಕುವುದಿಲ್ಲ.



ಗಾತ್ರದಲ್ಲಿ ಚಿಕ್ಕದಾಗಿದ್ದರೂ ಪೋಷಕಾಂಶಗಳಿಂದ ತುಂಬಿರುವ ಈ ಮೀನು ಹೆಚ್ಚಾಗಿ ರೆಸ್ಟೋರೆಂಟ್ಗಳಲ್ಲಿ ಬಳಕೆ ಮಾಡಲಾಗುತ್ತದೆ. ಇದರ ಪ್ರಯೋಜನಗಳನ್ನು ತಿಳಿದುಕೊಂಡರೆ ನಿಮಗೂ ಆಶ್ವರ್ಯ ಎನಿಸಬಹುದು.ಇದರಲ್ಲಿ ಔಷಧೀಯ ಗುಣಗಳು ಹೇರಳವಾಗಿದ್ದು ಒತ್ತಡವನ್ನು ಕಡಿಮೆ ಮಾಡುವ ಮತ್ತು ಮೂಳೆಗಳನ್ನು ಬಲಪಡಿಸುವಂತಹ ಹಲವು ಆರೋಗ್ಯ ಲಾಭವನ್ನು ಹೊಂದಿದೆ.

ಚಿಕ್ಕ ಗಾತ್ರದ ಹೊಳೆಯುವ ಈ ಬೆಳ್ಳಿ ಮೀನು ನೀಲಿ-ಹಸಿರು ಬೆನ್ನು ಮತ್ತು ಮೊನಚಾದ ತ್ರಿಕೋನ ಬಾಯಿಯನ್ನು ಹೊಂದಿದೆ. ಇದು ಯಾವುದೇ ಇತರ ರೆಕ್ಕೆಗಳಿಲ್ಲದೆ ಕೇವಲ ಫೋರ್ಕ್ಡ್ ಬಾಲವನ್ನು ಹೊಂದಿದೆ. 21 ಸೆಂ.ಮೀ ಉದ್ದದವರೆಗೆ ಬೆಳೆಯುವ ಈ ಮೀನು ಆರೋಗ್ಯಕ್ಕೆ ಬಹಳಷ್ಟು ಒಳಿತು.

ಮಾರುಕಟ್ಟೆಯಲ್ಲಿ ಅಗ್ಗದ ಬಜೆಟ್ ಮೀನುಗಳಲ್ಲಿ ಒಂದಾದ ಈ ಟ್ಯೂನ ಮೀನು ಹಲವು ಸಮಸ್ಯೆ ಗಳನ್ನು ತಡೆಯುತ್ತದೆ. ಟ್ಯೂನ ಮೀನಿನಲ್ಲಿ ಒಮೆಗಾ-3, ವಿಟಮಿನ್ ಬಿ12, ಪ್ರೋಟೀನ್, ವಿಟಮಿನ್ ಡಿ ಹೇರಳವಾಗಿದೆ. ಇದೇ ಕಾರಣಕ್ಕೆ ಈ ಮೀನಿಗೆ ಭಾರೀ ಬೇಡಿಕೆಯಿದೆ. ಹಾಗಾಗಿ ವಾರದಲ್ಲಿ ಎರಡು ಬಾರಿಯಾದರೂ ಈ ಮೀನನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ.

ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿರುವ ಇದು ಚರ್ಮದ ಸಮಸ್ಯೆಗಳನ್ನು ತಡೆಗಟ್ಟಲು ಮತ್ತು ಚರ್ಮವನ್ನು ಹೊಳೆಯುವಂತೆ ಮಾಡಲು ಸಹಕಾರಿ. ಇದರಲ್ಲಿರುವ ಕಡಿಮೆ ಕೊಬ್ಬಿನ ಅಂಶಗಳು ಮತ್ತು ಉತ್ತಮ ಕೊಬ್ಬಿನಾಮ್ಲಗಳು ನಿಮ್ಮ ಕೂದಲು ಉದುರುವುದನ್ನು ಮತ್ತು ಚರ್ಮ ಸುಕ್ಕು ಗಟ್ಟುವುದನ್ನು ತಡೆದು ಶೈನ್ ಆಗುವಂತೆ ಮಾಡುತ್ತದೆ.

ಮೀನು ತಿನ್ನುವುದು ಕಣ್ಣಿಗೆ ಒಳ್ಳೆಯದು ಎಂದು ತಜ್ಞರು ಸಲಹೆ ನೀಡುತ್ತಾರೆ. ಈ ಮೀನಿನಲ್ಲಿರುವ ಒಮೆಗಾ -3 ಕೊಬ್ಬಿನಾಮ್ಲಗಳು ಕಣ್ಣಿನ ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ.

ಈ ಮೀನಿನಲ್ಲಿ ಪ್ರೋಟೀನ್ ಹೆಚ್ಚಳವಾಗಿದ್ದು ಇದು ಸ್ನಾಯುಗಳು ಬಲಗೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ವ್ಯಾಯಾಮ ಮತ್ತು ಕ್ರೀಡಾಪಟುಗಳು ಪ್ರೋಟೀನ್ ಆಹಾರಕ್ಕಾಗಿ ಈ ಮೀನುಗಳನ್ನು ಧಾರಾಳವಾಗಿ ತೆಗೆದುಕೊಳ್ಳಬಹುದು..

ನಿಮಗೆ ಮಲಗಿದರೂ ನಿದ್ರೆ ಬರದೆ ಇದ್ದರೆ ಅಥವಾ ಸರಿಯಾಗಿ ನಿದ್ರೆ ಪೂರ್ತಿಯಾಗದಿದ್ದರೆ ನಿಯ ಮಿತವಾಗಿ ಈ ಮೀನು ಸೇವಿಸಿ. ಈ ಮೀನಿನಲ್ಲಿ ಇರುವಂತಹ ವಿಟಮಿನ್ ಡಿ ನಿದ್ರೆ ಸರಾಗವಾಗಿ ಆಗುವಂತೆ ಮಾಡುವುದು.

ಇದರಲ್ಲಿ ವಿಟಮಿನ್ ಸಿ, ಸತು, ಮ್ಯಾಂಗನೀಸ್ ಹೆಚ್ಚಿನ ಪ್ರಮಾಣದಲ್ಲಿ ಇದ್ದು ಚಯಪಚಯ ಕ್ರಿಯೆ ಉತ್ತಮಗೊಳಿಸುತ್ತದೆ, ನಿಮ್ಮ ದೇಹದಲ್ಲಿ ಶಕ್ತಿ ಹೆಚ್ಚಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಟ್ಯೂನಾ ಮೀನು ತಿನ್ನುವುದರಿಂದ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಟ್ಯೂನಾದಲ್ಲಿರುವ ಓಮೆಗಾ-3 ದಿಂದ ಮಾನಸಿಕ ಒತ್ತಡ ನಿವಾರಣೆ ಮಾಡಲಿದೆ. ಟ್ಯೂನಾ ಮೀನನ್ನು ಸಾಂಪ್ರದಾಯಿಕ ಸಾರು, ಗ್ರೇವಿ ರೀತಿಯಲ್ಲಿ ಬಳಕೆ ಮಾಡಬಹುದು. ಇದು ವಿಶೇಷವಾಗಿ ರುಚಿಕರವಾದ ಉಪ್ಪಿನಕಾಯಿ ಅಥವಾ ಸ್ಯಾಂಡ್ವಿಚ್ಗಳಿಗೂ ಬಳಕೆ ಮಾಡಬಹುದು.