ಬಿಯರ್ ಮಗ್ ಹಿಡಿದು ಹೈಕೋರ್ಟ್ ವರ್ಚುವಲ್ ವಿಚಾರಣೆಗೆ ಹಾಜರಾದ ಹಿರಿಯ ವಕೀಲ!
ಗುಜರಾತ್ ಹೈಕೋರ್ಟ್‌ನಲ್ಲಿ ನಡೆದ ಒಂದು ಆಘಾತಕಾರಿ ಘಟನೆಯು ನ್ಯಾಯಾಲಯದ ಘನತೆಗೆ ಧಕ್ಕೆ ತಂದಿದೆ. ವರ್ಚುವಲ್ ವಿಚಾರಣೆಯ ಸಂದರ್ಭದಲ್ಲಿ, ಹಿರಿಯ ವಕೀಲ ಭಾಸ್ಕರ್ ತನ್ನಾ ಬಿಯರ್ ಮಗ್‌ನಲ್ಲಿ ಪಾನೀಯ ಸೇವಿಸುತ್ತಾ, ಫೋನ್‌ನಲ್ಲಿ ಮಾತನಾಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ದೇಸಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ಬಿಯರ್ ಮಗ್ ಹಿಡಿದು ಬಂದ ಲಾಯರ್

ಗಾಂಧಿನಗರ: ಗುಜರಾತ್ ಹೈಕೋರ್ಟ್‌ನಲ್ಲಿ (Gujarat High Court) ನಡೆದ ಒಂದು ಆಘಾತಕಾರಿ ಘಟನೆಯು ನ್ಯಾಯಾಲಯದ ಘನತೆಗೆ (Dignity of Court) ಧಕ್ಕೆ ತಂದಿದೆ. ವರ್ಚುವಲ್ ವಿಚಾರಣೆಯ ಸಂದರ್ಭದಲ್ಲಿ ಹಿರಿಯ ವಕೀಲ ಭಾಸ್ಕರ್ ತನ್ನಾ (Bhaskar Tanna) ಬಿಯರ್ ಮಗ್‌ನಲ್ಲಿ (Beer Mug) ಪಾನೀಯ ಸೇವಿಸುತ್ತಾ, ಫೋನ್‌ನಲ್ಲಿ ಮಾತನಾಡುತ್ತಿರುವುದು ಕಂಡುಬಂದಿದೆ. ಇದನ್ನು "ಅತ್ಯಂತ ಆಕ್ಷೇಪಾರ್ಹ" ವರ್ತನೆ ಎಂದ ನ್ಯಾಯಾಲಯವು, ತನ್ನಾ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಕ್ರಮವನ್ನು ಆರಂಭಿಸಿದೆ.
ನ್ಯಾಯಮೂರ್ತಿಗಳಾದ ಎ.ಎಸ್. ಸುಪೆಹಿಯಾ ಮತ್ತು ಆರ್.ಟಿ.ವಚನಿ ಅವರ ದ್ವಿಸದಸ್ಯ ಪೀಠವು, ಈ ಕೃತ್ಯವು ನ್ಯಾಯಾಲಯದ ಶಿಸ್ತು ಮತ್ತು ಕಾನೂನಿನ ಆಡಳಿತಕ್ಕೆ ಧಕ್ಕೆ ತರುವಂತಹದ್ದಾಗಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ತನ್ನಾ ಅವರ ವರ್ತನೆಯು ಹಿರಿಯ ವಕೀಲರ ಗೌರವವನ್ನು ಧಿಕ್ಕರಿಸುತ್ತದೆ. ಇಂತಹ ಕೃತ್ಯವನ್ನು ನಿರ್ಲಕ್ಷಿಸಿದರೆ, ಕಾನೂನಿನ ಘನತೆಗೆ ಹಾನಿಯಾಗುವ ಸಾಧ್ಯತೆಯಿದೆ ಎಂದು ನ್ಯಾಯಮೂರ್ತಿ ಸುಪೆಹಿಯಾ ಹೇಳಿದ್ದಾರೆ.
ನ್ಯಾಯಾಲಯವು ರಿಜಿಸ್ಟ್ರಿಗೆ ತನ್ನಾ ಅವರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಆರಂಭಿಸಲು ಆದೇಶಿಸಿದ್ದು, ಮುಂದಿನ ವಿಚಾರಣೆಗೆ ವರದಿ ಸಲ್ಲಿಸುವಂತೆ ಸೂಚಿಸಿದೆ. ಜತೆಗೆ ತನ್ನಾ ಅವರನ್ನು ವರ್ಚುವಲ್ ವಿಚಾರಣೆಯಿಂದ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಈ ಆದೇಶವನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಲಾಗುವುದು ಮತ್ತು ಅವರ ಅನುಮತಿಯೊಂದಿಗೆ ಇತರ ಪೀಠಗಳಿಗೂ ತಿಳಿಸಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
"ಹಿರಿಯ ವಕೀಲರು ಕಿರಿಯ ವಕೀಲರಿಗೆ ಮತ್ತು ಸಮಾಜಕ್ಕೆ ಆದರ್ಶಪ್ರಾಯರಾಗಿರಬೇಕು. ಆದರೆ ತನ್ನಾ ಅವರ ಈ ಕೃತ್ಯವು ನ್ಯಾಯಾಲಯದ ಘನತೆಗೆ ಧಕ್ಕೆ ತಂದಿದೆ" ಎಂದು ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದೆ. ತನ್ನಾ ಅವರ ಹಿರಿಯ ವಕೀಲ ಸ್ಥಾನಮಾನವನ್ನು ಮರುಪರಿಶೀಲಿಸುವುದಾಗಿ ನ್ಯಾಯಾಲಯ ತಿಳಿಸಿದ್ದು, ಈ ವಿಷಯದ ವಿಚಾರಣೆಯನ್ನು ಎರಡು ವಾರಗಳ ನಂತರ ನಡೆಸಲಾಗುವುದು.
ಈ ಘಟನೆಗೂ ಮುಂಚೆ, ಶೌಚಾಲಯದಲ್ಲಿ ಕುಳಿತು ವರ್ಚುವಲ್ ಆಗಿ ಗುಜರಾತ್ ಹೈಕೋರ್ಟ್‌ನ ವಿಚಾರಣೆಗೆ ಹಾಜರಾದ ವ್ಯಕ್ತಿಯ ವಿಡಿಯೋ ವೈರಲ್ ಆಗಿತ್ತು. ಇದು ನ್ಯಾಯಾಲಯದ ಶಿಸ್ತಿನ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿತ್ತು.