Stomach Cancer: ಈ ಸಮಸ್ಯೆ ಹೊಟ್ಟೆಯ ಕ್ಯಾನ್ಸರ್‌ನ ಲಕ್ಷಣಗಳು; ಹುಷಾರು!
ಹೊಟ್ಟೆಯ ಕ್ಯಾನ್ಸರ್ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಡುತ್ತಿರುತ್ತದೆ. ಇದು ಕೆಟ್ಟ ಆಹಾರ ಪದ್ಧತಿಯಿಂದ ಸಂಭವಿಸುತ್ತದೆ. ಇದನ್ನು ಆರಂಭದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ಪಡೆದರೆ ಉತ್ತಮ. ಇಲ್ಲವಾದರೆ ಜೀವಕ್ಕೆ ಅಪಾಯಕಾರಿ ಎಂದು ಎಚ್ಚರಿಸುತ್ತಾರೆ ತಜ್ಞರು. ಹೊಟ್ಟೆಯ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು ಹೀಗಿವೆ ನೋಡಿ.

ಸಾಂದರ್ಭಿಕ ಚಿತ್ರ.

ಬೆಂಗಳೂರು: ಹೊಟ್ಟೆಯ ಕ್ಯಾನ್ಸರ್ (Stomach Cancer) ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು, ಇದರ ಮೂಲಕ ಹೊಟ್ಟೆಯ ಒಳಪದರದಲ್ಲಿ ಮಾರಕ ಕೋಶಗಳು ರೂಪುಗೊಳ್ಳುತ್ತವೆ. ಇದು ಜೀರ್ಣಕ್ರಿಯೆ ಮತ್ತು ಒಟ್ಟಾರೆ ಆರೋಗ್ಯವನ್ನು ಅಡ್ಡಿಪಡಿಸುತ್ತದೆ. ಇದನ್ನು ಆರಂಭದಲ್ಲಿ ಪತ್ತೆ ಮಾಡಿ ಚಿಕಿತ್ಸೆ ಪಡೆದರೆ ಪ್ರಾಣಾಪಾಯದಿಂದ ಪಾರಾಗಬಹುದು. ಇಲ್ಲವಾದರೆ ಇದು ಜೀವಕ್ಕೆ ಅಪಾಯವಾಗಬಹುದು. ಹಾಗಾಗಿ ಹೊಟ್ಟೆಯ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳನ್ನು ತಿಳಿದುಕೊಳ್ಳಿ.
ಅಜೀರ್ಣ ಮತ್ತು ಎದೆಯುರಿ
ಸಾಮಾನ್ಯವಾಗಿ ಅಜೀರ್ಣ ಮತ್ತು ಎದೆಯುರಿ ಹೆಚ್ಚಿನ ಜನರಲ್ಲಿ ಕೆಲವೊಮ್ಮೆ ಕಾಣಿಸಿಕೊಳ್ಳುತ್ತದೆ. ಆದರೆ ಇದು ನಿರಂತರವಾಗಿ ಕಾಣಿಸಿಕೊಂಡಾಗ ತಕ್ಷಣ ನೀವು ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.
ಹೊಟ್ಟೆ ನೋವು
ಹೊಟ್ಟೆಯ ಮೇಲ್ಭಾಗದಲ್ಲಿ ನಿರಂತರವಾಗಿ ನೋವು ಅಥವಾ ಸಮಸ್ಯೆ ಕಾಡುತ್ತಿದ್ದರೆ ಅದು ಹೊಟ್ಟೆಯ ಕ್ಯಾನ್ಸರ್‌ನ ಒಂದು ಚಿಹ್ನೆಯಾಗಿರಬಹುದು. ಈ ನೋವು ಸೌಮ್ಯವಾಗಿರಬಹುದು. ಆದರೆ ತಿಂದ ನಂತರ ಇದು ಹೆಚ್ಚಾಗುತ್ತದೆ.
ಹಸಿವಾಗದಿರುವುದು ಮತ್ತು ತೂಕ ನಷ್ಟ
ಯಾವುದೇ ಕಾರಣವಿಲ್ಲದೆ ಗಮನಾರ್ಹ ತೂಕ ನಷ್ಟವು ಹೊಟ್ಟೆಯ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು. ಇದು ಸಾಮಾನ್ಯವಾಗಿ ಹಸಿವು ಕಡಿಮೆಯಾಗುವುದು ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯ ಸಮಸ್ಯೆಗಳು ಸೇರಿದಂತೆ ಹಲವು ಕಾರಣಗಳಿಂದ ಉಂಟಾಗಬಹುದು.
ಬೇಗನೆ ಹೊಟ್ಟೆ ತುಂಬಿದ ಅನುಭವ
ಸ್ವಲ್ಪ ಆಹಾರ ತಿಂದ ನಂತರ ಹೊಟ್ಟೆ ತುಂಬಿದ ಅನುಭವವಾದರೆ, ಅದು ಹೊಟ್ಟೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದರ ಸಂಕೇತವಾಗಿರಬಹುದು.
ವಾಕರಿಕೆ ಮತ್ತು ವಾಂತಿ
ನಿರಂತರವಾಗಿ ವಾಂತಿ, ವಾಕರಿಕೆ ಸಮಸ್ಯೆ ಇದ್ದರೆ ಅದು ಹೊಟ್ಟೆಯ ಕ್ಯಾನ್ಸರ್‌ನ ಆರಂಭಿಕ ಲಕ್ಷಣವಾಗಿರಬಹುದು. ನೀವು ಏನಾದರೂ ತಿಂದಾಗ ಇದು ಮತ್ತಷ್ಟು ಹೆಚ್ಚಾಗುತ್ತದೆ. ಈ ಲಕ್ಷಣವು ಕಾಲಾನಂತರದಲ್ಲಿ ಮುಂದುವರಿದರೆ ನಿರ್ಲಕ್ಷಿಸಬಾರದು.
ನುಂಗಲು ತೊಂದರೆ
ಆಹಾರ ನುಂಗುವಾಗ ನೋವು ಅಥವಾ ಗಂಟಲು ಅಥವಾ ಎದೆಯಲ್ಲಿ ಸಿಲುಕಿಕೊಂಡಂತೆ ಅನುಭವವಾದರೆ, ವೈದ್ಯಕೀಯ ಸಲಹೆ ಪಡೆಯುವುದು ಮುಖ್ಯ.
ಹೊಟ್ಟೆಯ ಊತ
ಹೊಟ್ಟೆಯಲ್ಲಿ ಊತ ಅಥವಾ ಉಬ್ಬಿಕೊಳ್ಳುವುದು ಹೊಟ್ಟೆಯ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು. ಇದು ದ್ರವದ ಶೇಖರಣೆ ಅಥವಾ ಗೆಡ್ಡೆಯ ಬೆಳವಣಿಗೆಯಿಂದ ಉಂಟಾಗಬಹುದು.
ಇತರ ಸಂಭಾವ್ಯ ಲಕ್ಷಣಗಳು
ಆಯಾಸ, ರಕ್ತಹೀನತೆ (ಕಡಿಮೆ ಕೆಂಪು ರಕ್ತ ಕಣಗಳು), ಕಪ್ಪು ಅಥವಾ ರಕ್ತಸಿಕ್ತ ಮಲ, ಮತ್ತು ಕಾಮಾಲೆ (ಚರ್ಮ ಮತ್ತು ಕಣ್ಣುಗಳ ಹಳದಿ) ಸಹ ಹೊಟ್ಟೆಯ ಕ್ಯಾನ್ಸರ್‌ಗೆ ಸಂಬಂಧಿಸಿರಬಹುದು.
ಈ ಸುದ್ದಿಯನ್ನೂ ಓದಿ:Jeera Water: ಖಾಲಿ ಹೊಟ್ಟೆಗೆ ಜೀರಿಗೆ ನೀರು ಕುಡಿಯುವುದರಿಂದ ದೊರೆಯುತ್ತೆ ಇಷ್ಟೆಲ್ಲ ಆರೋಗ್ಯ ಭಾಗ್ಯ
ಈ ಲಕ್ಷಣಗಳು ಇತರ, ಕಡಿಮೆ ಗಂಭೀರ ಪರಿಸ್ಥಿತಿಗಳಿಂದಲೂ ಉಂಟಾಗಬಹುದು. ಆದರೆ ಯಾವುದೇ ಲಕ್ಷಣಗಳನ್ನು ಅನುಭವಿಸಿದರೆ, ವಿಶೇಷವಾಗಿ ಅವು ನಿರಂತರವಾಗಿ ಕಾಡುತ್ತಿದ್ದರೆ ಆಗ ಸರಿಯಾದ ರೋಗ ನಿರ್ಣಯ ಮತ್ತು ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ. ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ, ಸಮತೋಲಿತ ಆಹಾರವನ್ನು ಕಾಪಾಡಿಕೊಳ್ಳುವ ಮೂಲಕ ಮತ್ತು ಅಪಾಯಕಾರಿ ಅಂಶಗಳನ್ನು ತಪ್ಪಿಸುವ ಮೂಲಕ ಹೊಟ್ಟೆಯ ಕ್ಯಾನ್ಸರ್ ಬರದಂತೆ ತಡೆಯಬಹುದು.