Pahalgam Terror Attack: ರೆಡಿ ಆಯ್ತು ಪಾಕಿಸ್ತಾನವನ್ನು ಕಟ್ಟಿ ಹಾಕಲು ಮತ್ತೊಂದು ಪ್ಲಾನ್; ಕಾನೂನು ತೊಡಕು ಬಂದರೂ ಬಿಡೆವು ಎಂದ ಕೇಂದ್ರ
ಭಾರತ ಸಿಂಧೂ ನದಿ ನೀರು ಒಪ್ಪಂದವನ್ನು ರದ್ದು ಮಾಡಿ ವೈರಿ ರಾಷ್ಟ್ರಕ್ಕೆ ಬಿಗ್ ಶಾಕ್ ನೀಡಿದೆ. ಇದೀಗ ಪಾಕಿಸ್ತಾನಕ್ಕೆ ಒಂದೇ ಒಂದು ಹನಿ ನೀರು ಸಿಗದಂತೆ ನೋಡಿಕೊಳ್ಳಲು ಭಾರತ ಮೂರು ಯೋಜನೆಗಳ ಮೇಲೆ ಕೆಲಸ ಮಾಡುತ್ತಿದೆ ಎಂದು ಜಲಶಕ್ತಿ ಸಚಿವ ಸಿಆರ್ ಪಾಟೀಲ್ ತಿಳಿಸಿದ್ದಾರೆ.


ನವದೆಹಲಿ: ಪಹಲ್ಗಾಮ್‌ನಲ್ಲಿ (Pahalgam Terror Attack) ಉಗ್ರರು ಸೋಮವಾರ ಅಟ್ಟಹಾಸ ಮೆರೆದಿದ್ದಾರೆ. ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಭಾರತ ಸರ್ಕಾರ ಹಲವು ನಿರ್ಧಾರವನ್ನು ಕೈಗೊಂಡಿದೆ. ಭಾರತ ಸಿಂಧೂ ನದಿ ನೀರು ಒಪ್ಪಂದವನ್ನು ರದ್ದು ಮಾಡಿ ವೈರಿ ರಾಷ್ಟ್ರಕ್ಕೆ ಬಿಗ್ ಶಾಕ್ ನೀಡಿದೆ. ಇದೀಗ ಪಾಕಿಸ್ತಾನಕ್ಕೆ ಒಂದೇ ಒಂದು ಹನಿ ನೀರು ಸಿಗದಂತೆ ನೋಡಿಕೊಳ್ಳಲು ಭಾರತ ಮೂರು ಯೋಜನೆಗಳ ಮೇಲೆ ಕೆಲಸ ಮಾಡುತ್ತಿದೆ ಎಂದು ಜಲಶಕ್ತಿ ಸಚಿವ ಸಿಆರ್ ಪಾಟೀಲ್ ತಿಳಿಸಿದ್ದಾರೆ. ನೀರು ಸರಬರಾಜು ಆಗದಂತೆ ನೋಡಿಕೊಳ್ಳಲು ಭಾರತ ದೀರ್ಘಾವಧಿಯ ಯೋಜನೆ, ಅಲ್ಪಾವಧಿಯ ಯೋಜನೆ ಮತ್ತು ಮಧ್ಯಂತರ ಯೋಜನೆಯನ್ನು ತೆಗೆದುಕೊಂಡು ಬರಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪ್ರತೀಕಾರದ ಕ್ರಮವಾಗಿ ಪಾಕಿಸ್ತಾನದೊಂದಿಗಿನ 1960 ರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಲಾಗಿದ್ದು, ಅದರ ಕುರಿತು ಮುಂದಿನ ಕ್ರಮಗಳ ಕುರಿತು ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದಲ್ಲಿ ಶುಕ್ರವಾರ ಸಭೆ ನಡೆಯಿತು. ತನ್ನ ನಿರ್ಧಾರವನ್ನು ಜಾರಿಗೆ ತರುವ ಸಂದರ್ಭದಲ್ಲಿ ಕಾನೂನು ಸವಾಲುಗಳು ಸೇರಿದಂತೆ ಪ್ರತಿಯೊಂದು ಸವಾಲನ್ನು ಎದುರಿಸಲು ಭಾರತ ಸಿದ್ಧವಿದೆ ಎಂದು ತಿಳಿದು ಬಂದಿದೆ. "ಪಾಕಿಸ್ತಾನ ವಿಶ್ವ ಬ್ಯಾಂಕ್ ಅನ್ನು ಸಂಪರ್ಕಿಸಲು ನಿರ್ಧರಿಸಿದರೂ, ಭಾರತ ತನ್ನ ಪ್ರತಿಕ್ರಿಯೆಯನ್ನು ಸಿದ್ಧಪಡಿಸಿದೆ ಮತ್ತು ಪರಿಣಾಮಕಾರಿಯಾಗಿ ಎದುರಿಸಲಿದೆ" ಎಂದು ಮೂಲಗಳು ತಿಳಿಸಿವೆ.
ದೀರ್ಘಾವಧಿಯ ಯೋಜನೆಗಳು
ಸರ್ಕಾರಿ ಮೂಲಗಳ ಪ್ರಕಾರ, ಸಭೆಯಲ್ಲಿ ಅಣೆಕಟ್ಟುಗಳ ಹೂಳು ತೆಗೆಯುವುದು, ನದಿ ನೀರನ್ನು ಹೇಗೆ ತಿರುಗಿಸುವುದು ಮತ್ತು ಹೊಸ ಅಣೆಕಟ್ಟುಗಳನ್ನು ನಿರ್ಮಿಸುವುದು ಸೇರಿದಂತೆ ಹಲವಾರು ದೀರ್ಘಕಾಲೀನ ಯೋಜನೆಗಳ ಕುರಿತು ಚರ್ಚಿಸಲಾಯಿತು. ಈ ನಿರ್ಧಾರವನ್ನು ಜಾರಿಗೆ ತರುವಾಗ ಭಾರತೀಯ ನಾಗರಿಕರಿಗೆ ಯಾವುದೇ ಅನಾನುಕೂಲತೆ ಉಂಟಾಗದಂತೆ ಸರ್ಕಾರ ಖಚಿತಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಮಂಗಳವಾರ ಪಹಲ್ಗಾಮ್‌ನಲ್ಲಿ ಲಷ್ಕರ್-ಎ-ತೈಬಾ (ಎಲ್‌ಇಟಿ)ಯ ಒಂದು ಭಾಗವಾದ ರೆಸಿಸ್ಟೆನ್ಸ್ ಫ್ರಂಟ್ ಭಯೋತ್ಪಾದಕರು 26 ಪ್ರವಾಸಿಗರನ್ನು ಹಾಡಹಗಲೇ ಗುಂಡಿಕ್ಕಿ ಕೊಂದ ನಂತರ, ಭಾರತವು ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕೆಳಮಟ್ಟಕ್ಕಿಳಿಸುವುದಾಗಿ ಘೋಷಿಸಿದೆ ಮತ್ತು ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಭದ್ರತಾ ಸಮಿತಿ (ಸಿಸಿಎಸ್) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪಾಕಿಸ್ತಾನದ ಪ್ರತಿಕ್ರಿಯೇನು?
ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿಯು ಸಿಂಧೂ ಜಲ ಒಪ್ಪಂದದಡಿಯಲ್ಲಿ ನದಿ ನೀರನ್ನು ನಿರ್ಬಂಧಿಸಲು ಅಥವಾ ಬೇರೆಡೆಗೆ ತಿರುಗಿಸಲು ಭಾರತ ಮಾಡುವ ಯಾವುದೇ ಪ್ರಯತ್ನವನ್ನು "ಯುದ್ಧದ ಕೃತ್ಯ" ಎಂದು ಪರಿಗಣಿಸಲಾಗುವುದು ಎಂದು ಹೇಳಿತ್ತು. ಸಿಂಧೂ ನದಿ ತನ್ನ 240 ಮಿಲಿಯನ್ ನಾಗರಿಕರ ಜೀವನಾಡಿ ಎಂದು ಪಾಕ್ ಹೇಳಿದೆ.