Hollywood: ಜನಪ್ರಿಯ ಈ ಹತ್ತು ಹಾಲಿವುಡ್ ಚಿತ್ರಗಳು ಶೂಟಿಂಗ್ ನಡೆದಿರುವುದು ಭಾರತದಲ್ಲಿ
ಬಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್, ಟಾಲಿವುಡ್ ಸೇರಿದಂತೆ ಬಹುತೇಕ ಭಾರತೀಯ ಸಿನಿಮಾಗಳಲ್ಲಿ ಸ್ವಲ್ಪ ಭಾಗವಾದರೂ ವಿದೇಶಗಳಲ್ಲಿ ಶೂಟಿಂಗ್ ಮಾಡಲಾಗುತ್ತದೆ. ಹೀಗಿರುವಾಗ ಹಾಲಿವುಡ್ ಮಂದಿ ನಮ್ಮ ದೇಶಕ್ಕೆ ಬಂದು ಶೂಟಿಂಗ್ ಮಾಡಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದರೆ ಅದು ತಪ್ಪು ಕಲ್ಪನೆ. ಯಾಕೆಂದರೆ ಕೆಲವು ಜನಪ್ರಿಯ ಹಾಲಿವುಡ್ ಚಲನಚಿತ್ರಗಳನ್ನು ಭಾರತದಲ್ಲಿ ಚಿತ್ರೀಕರಿಸಲಾಗಿದೆ. ಅವು ಯಾವುದು ಎನ್ನುವ ಕುರಿತು ಇಲ್ಲಿದೆ ಮಾಹಿತಿ.



ಭಾರತೀಯ ಸಿನಿಮಾಗಳು ಮಾತ್ರ ವಿದೇಶಗಳಲ್ಲಿ ಚಿತ್ರೀಕರಿಸುವುದಿಲ್ಲ. ಹಾಲಿವುಡ್ ನ ಸಿನಿಮಾಗಳೂ ಕೂಡ ಭಾರತದಲ್ಲಿ ಚಿತ್ರೀಕರಣಗೊಂಡಿದೆ. "ಆಕ್ಟೋಪಸ್ಸಿ", "ದಿ ಡಾರ್ಜಿಲಿಂಗ್ ಲಿಮಿಟೆಡ್", "ಲೈಫ್ ಆಫ್ ಪೈ" ನಂತಹ ಅನೇಕ ಹಾಲಿವುಡ್ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ಭಾರತದ ವಿವಿಧ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ.

ಹಾಲಿವುಡ್ ಹಲವು ಬ್ಲಾಕ್ಬಸ್ಟರ್ ಚಿತ್ರಗಳನ್ನು ಭಾರತದ ಕೆಲವು ಅದ್ಭುತ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಅದರಲ್ಲಿ ಒಂದು ಆಕ್ಟೋಪಸ್ಸಿ. ಇದನ್ನು ರಾಜಸ್ಥಾನದ ಉದಯಪುರದಲ್ಲಿ ಚಿತ್ರಿಸಲಾಗಿದೆ. 1983ರ ಈ ಚಲನಚಿತ್ರವು ಲೈಕ್ ಪ್ಯಾಲೇಸ್, ಜಗ ಮಂದಿರ, ಸಿಟಿ ಪ್ಯಾಲೇಸ್ ಮತ್ತು ಮಾನ್ಸೂನ್ ಪ್ಯಾಲೇಸ್ನಂತಹ ಸಾಂಪ್ರದಾಯಿಕ ಸ್ಥಳಗಳ ದೃಶ್ಯವನ್ನು ಒಳಗೊಂಡಿದೆ.

ರಾಜಸ್ಥಾನದಲ್ಲಿ ಚಿತ್ರೀಕರಿಸಲ್ಪಟ್ಟ ಇನ್ನೊಂದು ಚಿತ್ರ ದಿ ಡಾರ್ಜಿಲಿಂಗ್ ಲಿಮಿಟೆಡ್. ಓವನ್ ವಿಲ್ಸನ್, ಆಡ್ರಿಯನ್ ಬ್ರಾಡಿ ಮತ್ತು ಜೇಸನ್ ಶ್ವಾರ್ಟ್ಜ್ಮನ್ ಅವರನ್ನು ಒಳಗೊಂಡ 2007ರ ಈ ಚಲನಚಿತ್ರವನ್ನು ಭಾರತದಾದ್ಯಂತ ಚಿತ್ರೀಕರಿಸಲಾಗಿದೆ. ಇದರಲ್ಲಿ ಕೆಲವು ಪ್ರಮುಖ ದೃಶ್ಯಗಳನ್ನು ರೈಲಿನಲ್ಲಿ ಮತ್ತು ರಾಜಸ್ಥಾನದ ಜೋಧಪುರದಲ್ಲಿ ಚಿತ್ರೀಕರಿಸಲಾಗಿದೆ.

ಈಟ್, ಪ್ರೇ, ಲವ್ ಚಿತ್ರವನ್ನು ಹರಿಯಾಣದ ಪಟೌಡಿಯಲ್ಲಿರುವ ಆಶ್ರಮ ಸೇರಿದಂತೆ ಇನ್ನು ಹಲವು ಭಾಗಗಳಲ್ಲಿ ಚಿತ್ರೀಕರಿಸಲಾಗಿದೆ. ಈ ಚಿತ್ರದಲ್ಲಿ ಹೆಚ್ಚಾಗಿ ಭಾರತದ ಅತ್ಯಂತ ಶಾಂತಿಯುತ ತಾಣಗಳನ್ನು ಕಾಣಬಹುದು. ಇದರಲ್ಲಿರುವ ಗಂಗಾ ದೃಶ್ಯವನ್ನು ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಚಿತ್ರೀಕರಿಸಲಾಗಿದೆ.

ಮಿಷನ್ ಇಂಪಾಸಿಬಲ್: ಘೋಸ್ಟ್ ಪ್ರೊಟೊಕಾಲ್ ಚಿತ್ರವನ್ನು ಮಹಾರಾಷ್ಟ್ರ, ಮುಂಬೈನಲ್ಲಿ ಚಿತ್ರೀಕರಿಸಲಾಗಿದೆ. ಟಾಮ್-ಕ್ರೂಸ್ ಅಭಿನಯದ ಮಿಷನ್ ಇಂಪಾಸಿಬಲ್ ಸರಣಿಯ ನಾಲ್ಕನೇ ಕಂತು ಬಹುತೇಕ ಮುಂಬೈನಲ್ಲಿ ಶೂಟಿಂಗ್ ಮಾಡಲಾಗಿದೆ. ಈ ಚಿತ್ರದಲ್ಲಿ ಅತ್ಯಂತ ರೋಮಾಂಚಕ ಆಕ್ಷನ್ ಸೀಕ್ವೆನ್ಸ್ಗಳನ್ನು ಕಾಣಬಹುದು. ಇದನ್ನು ಮುಂಬೈನ ಅತೀ ಎತ್ತರದ ಕಟ್ಟಡದಲ್ಲಿ ಶೂಟಿಂಗ್ ಮಾಡಲಾಗಿದೆ.

ದಿ ಬೆಸ್ಟ್ ಎಕ್ಸೋಟಿಕ್ ಮ್ಯಾರಿಗೋಲ್ಡ್ ಹೊಟೇಲ್ ಚಿತ್ರವನ್ನು ರಾಜಸ್ಥಾನದ ಜೈಪುರ ಮತ್ತು ಉದಯಪುರದಲ್ಲಿ ಚಿತ್ರೀಕರಿಸಲಾಗಿದೆ. ಇದರಲ್ಲಿ ರಾಜಸ್ಥಾನದ ವರ್ಣರಂಜಿತ ಮಾರುಕಟ್ಟೆ ಕಾಲುದಾರಿಗಳು, ಭವ್ಯವಾದ ಅರಮನೆಗಳನ್ನು ಕಾಣಬಹುದಾಗಿದೆ. ಈ ಚಿತ್ರ 2011ರಲ್ಲಿ ತೆರೆಗೆ ಬಂದಿದೆ.

ಲೈಫ್ ಆಫ್ ಪೈ ಚಿತ್ರವನ್ನು ಕೇರಳ, ಪುದುಚೇರಿಯಲ್ಲಿ ಚಿತ್ರೀಕರಿಸಲಾಗಿದೆ. ಪುದುಚೇರಿಯ ಅತ್ಯಾಕರ್ಷಕ ಬೀದಿಗಳು, ಸಸ್ಯೋದ್ಯಾನಗಳು ಮತ್ತು ವಸಾಹತುಶಾಹಿ ಕಟ್ಟಡಗಳು ಪೈ ಅವರ ಬಾಲ್ಯದ ಮನೆಯನ್ನು ನೆನಪಿಸುವಂತಿದೆ. 2012ರಲ್ಲಿ ಈ ಚಿತ್ರ ತೆರೆಗೆ ಬಂದಿದೆ.

ದಿ ಡಾರ್ಕ್ ನೈಟ್ ರೈಸಸ್ ಚಿತ್ರ 2012ರಲ್ಲಿ ತೆರೆಗೆ ಬಂದಿದ್ದು, ಇದರ ಕೆಲವು ಪ್ರಮುಖ ದೃಶ್ಯಗಳನ್ನು ರಾಜಸ್ಥಾನದ ಜೋಧಪುರದಲ್ಲಿರುವ ಪೌರಾಣಿಕ ಮೆಹ್ರಾನ್ಗಢ ಕೋಟೆಯಲ್ಲಿ ಚಿತ್ರೀಕರಿಸಲಾಗಿದೆ. ಬ್ಯಾಟ್ಮ್ಯಾನ್ ಪಾತ್ರಧಾರಿ ಬ್ರೂಸ್ ವೇಯ್ನ್ ನನ್ನು ಸೆರೆಮನೆಗೆ ಹಾಕಿದಾಗ ಈ ಕೋಟೆಯನ್ನು ಜೈಲಾಗಿ ತೋರಿಸಲಾಗಿದೆ.

ಮುಂಬೈ, ಲಕ್ನೋ, ಆಗ್ರಾದಲ್ಲಿ ಚಿತ್ರೀಕರಣಗೊಂಡಿರುವ ಮಿಲಿಯನ್ ಡಾಲರ್ ಆರ್ಮ್ ಭಾರತದ ಅತ್ಯಂತ ಶ್ರೀಮಂತ ಸಂಸ್ಕೃತಿಯನ್ನು ಪ್ರದರ್ಶಿಸಿದೆ. ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಟೆನೆಟ್ ಚಿತ್ರವನ್ನು ಮುಂಬೈನಲ್ಲಿ ಚಿತ್ರೀಕರಿಸಲಾಗಿದ್ದು, ಇದರ ಒಂದು ಪ್ರಾಮುಖ್ಯ ಆಕ್ಷನ್ ಸೀನ್ ಅನ್ನು ಇಲ್ಲಿನ ಅತ್ಯಂತ ಎತ್ತರದ ಕಟ್ಟಡದ ಮೇಲೆ ಚಿತ್ರೀಕರಿಸಲಾಗಿದೆ. ಆಕ್ಷನ್, ಥ್ರಿಲ್ಲರ್ ಚಿತ್ರವಾದ ಎಕ್ಸ್ ಟ್ರಾಕ್ಷನ್ ಬಹುತೇಕ ಭಾಗವನ್ನು ಅಹಮದಾಬಾದ್ ಮತ್ತು ಮುಂಬೈನಲ್ಲಿ ಚಿತ್ರೀಕರಿಸಲಾಗಿದೆ.