Viral News: ಇದು ರಿಯಲ್ ಚಾರ್ಲಿಯ ಕಥೆ; ಶ್ವಾನದೊಂದಿಗೆ 12,000 ಕಿ.ಮೀ. ಸೈಕಲ್ ಪ್ರಯಾಣ ಮಾಡಿದ ಯುವಕ
ಬಿಹಾರದ ಸೋನು ರಾಜ್ ಎಂಬ ಯುವಕ ತನ್ನ ಸಾಕು ನಾಯಿ ಚಾರ್ಲಿಯೊಂದಿಗೆ 11 ತಿಂಗಳಿನಿಂದ ಪ್ರಯಾಣ ಮಾಡುತ್ತಿದ್ದು, ಇದೀಗ 12,000 ಕಿ.ಮೀ.ಗೂ ಹೆಚ್ಚು ದೂರ ಪ್ರಯಾಣಿಸಿದ್ದೇನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರ ಹೃದಯ ಗೆದ್ದಿದೆ.


ಪಾಟ್ನಾ: ಕೆಲವರಿಗೆ ನಾಯಿಗಳೆಂದರೆ ಜೀವಕ್ಕಿಂತ ಹೆಚ್ಚು. ನಾಯಿಯನ್ನು ಮನೆಯ ಸದಸ್ಯನಂತೆ ನೋಡುತ್ತಾರೆ. ಇತ್ತೀಚೆಗೆ ತಮ್ಮ ಸಾಕು ನಾಯಿಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ದಂಪತಿಯ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಬಿಹಾರದ ಸೋನು ರಾಜ್ ಎಂಬ ಯುವಕ ತನ್ನ ಸಾಕು ನಾಯಿ (Dog) ಚಾರ್ಲಿಯೊಂದಿಗೆ 12,000 ಕಿ.ಮೀ. ಸೈಕಲ್ ಪ್ರಯಾಣ ಮಾಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral News) ಆಗಿ ನೆಟ್ಟಿಗರ ಹೃದಯಗಳನ್ನು ಗೆದ್ದಿದೆ. ತನ್ನ ಸಾಕು ನಾಯಿ ಚಾರ್ಲಿಯೊಂದಿಗಿನ ಸೋನುವಿನ ಒಡನಾಟ ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಸೋನು ತನ್ನ ಸಾಕು ನಾಯಿಯೊಂದಿಗೆ ಭಾರತದಾದ್ಯಂತ ಸೈಕಲ್ ಯಾನವನ್ನು ಮಾಡಿದ್ದಾನೆ. ರಾಮೇಶ್ವರಂ, ಕೇದಾರನಾಥ ಮತ್ತು ಬದರಿನಾಥ ಸೇರಿದಂತೆ 12,000 ಕಿ.ಮೀ.ಗಳಿಗೂ ಹೆಚ್ಚು ಪ್ರಯಾಣಿಸಿದ್ದಾಗಿ ತಿಳಿಸಿದ್ದಾನೆ.
ವಿಡಿಯೊ ಇಲ್ಲಿದೆ ನೋಡಿ...
ಇನ್ನು ಈ "ಮುದ್ದಾದ" ಚಾರ್ಲಿಯನ್ನು ಉತ್ತರ ಪ್ರದೇಶದಲ್ಲಿ ದತ್ತು ತೆಗೆದುಕೊಂಡಿರುವುದಾಗಿ ಹೇಳಿದ್ದಾನೆ. ಚಾರ್ಲಿ ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದಾಗ ಸೋನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾನೆ. ಅದನ್ನು ಕಾಪಾಡಿದ ದಿನದಿಂದ ಇಲ್ಲಿಯ ತನಕ ಚಾರ್ಲಿ ಎಂದಿಗೂ ತನ್ನನ್ನು ಬಿಟ್ಟು ಹೋಗಿಲ್ಲ ಎಂದು ಸೋನು ಹೇಳಿದ್ದಾನೆ.
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ವಿಡಿಯೊ ಈಗಾಗಲೇ 5,00,000ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. "ಚಾರ್ಲಿ ಅನೇಕರ ಕನಸಿನ ಜೀವನವನ್ನು ನಡೆಸುತ್ತಿದೆ!" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಆಲ್ ದಿ ಬೆಸ್ಟ್ ದೋಸ್ತ್. ಚಾರ್ಲಿನ ಚೆನ್ನಾಗಿ ನೋಡಿಕೊಳ್ಳಿ" ಎಂದು ಬರೆದಿದ್ದಾರೆ.
ತಮ್ಮ ಮುದ್ದಿನ ನಾಯಿ ಜತೆಗೆ ವ್ಯಕ್ತಿ ಪ್ರವಾಸಕ್ಕೆ ಹೋಗಿದ್ದು ಇದೇ ಮೊದಲಲ್ಲ. ಈ ಹಿಂದೆ ಒಬ್ಬ ವ್ಯಕ್ತಿ ಅವನ ನಾಯಿ ಬೆಲ್ಲಾ ಜತೆ ದೆಹಲಿಯಿಂದ ಲಡಾಖ್‌ಗೆ ಬೈಕ್‌ನಲ್ಲಿ ಪ್ರಯಾಣಿಸಿದ್ದನು. ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಚೌ ಸುರೆಂಗ್ ರಾಜ್‌ಕೋನ್ವರ್ ಎಂಬ ಆ ವ್ಯಕ್ತಿ ನಾಯಿಗಾಗಿ ವಿಶೇಷವಾಗಿ ತನ್ನ ಬೈಕನ್ನು ಕಸ್ಟಮೈಸ್ ಮಾಡಿ ಅದಕ್ಕೆ ಆರಾಮವಾಗಿ ಸವಾರಿ ಮಾಡಲು ತರಬೇತಿ ನೀಡಿದ್ದನು.
ಈ ಸುದ್ದಿಯನ್ನೂ ಓದಿ:Viral Video: ಈ ಕಾರು ಬಲು ಜೋರು! ಇಂತಹ ವಾಹನ ನೀವು ನೋಡಿರೋಕೆ ಸಾಧ್ಯನೇ ಇಲ್ಲ
ಆಟೋದಲ್ಲಿ ನಗರ ಸುತ್ತುವ ಶ್ವಾನ!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬ ತನ್ನ ಮುದ್ದಿನ ನಾಯಿ ಮರಿಯ ಜತೆಗೆ ನಿತ್ಯ ಕೆಲಸಕ್ಕೆ ತೆರಳುತ್ತಿದ್ದಾನೆ. ಹೀಗೆ ಪ್ರಯಾಣಿಕರೊಂದಿಗೆ ನಾಯಿ ಕೂಡ ಇಡೀ ಬೆಂಗಳೂರು ಪ್ರಯಾಣ ಮಾಡುತ್ತದೆ. ಸದ್ಯ ನಾಯಿ ಮತ್ತು ಮಾಲೀಕನ ಈ ಬಾಂಧವ್ಯಕ್ಕೆ ನೆಟ್ಟಿಗರು ಮನ ಸೋತಿದ್ದು ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಆಟೋ ಚಾಲಕನ ಜತೆ ಎಲ್ಲ ಕಡೆ ಬಾಡಿಗೆ ತೆರಳುವಾಗಲೂ ಈ ನಾಯಿ ಸಾಥ್ ನೀಡುತ್ತದೆ. ಈ ಮೂಲಕ ಆಟೋ ಚಾಲಕನ ಶ್ವಾನ ಪ್ರೀತಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ನಾಯಿ ಮರಿ ಹುಟ್ಟಿದ ಕೆಲವೇ ದಿನಕ್ಕೆ ಆಟೋ ಚಾಲಕನಿಗೆ ಸಿಕ್ಕಿದ್ದು ಬಹಳ ಪ್ರೀತಿಯಿಂದ ಇವರು ಸಾಕಿ ಸಲಹಿದ್ದಾರೆ.