ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

M J Akabar Column: ಹಿಂಸೆಯಲ್ಲಿ ಹುಟ್ಟಿ, ಹಿಂಸೆಯಿಂದಲೇ ಬದುಕುತ್ತಿರುವ ಪಾಕ್

ಪ್ರಧಾನಿ ಮೋದಿಯವರದು ಒಂದು ಸಿದ್ಧಾಂತವಿದೆ. ಅವರ ಪ್ರಕಾರ ಭಯೋತ್ಪಾದನೆ ಕೂಡ ಯುದ್ಧ. ಈ ವಿಷಯದಲ್ಲಿ ಏನೇ ನೆಪ ಹೇಳಿದರೂ ಅವರು ಕೇಳುವುದಿಲ್ಲ. ಹೀಗಾಗಿಯೇ ಕಳೆದ ವಾರ ಭಾರತ ಸರಿ ಯಾಗಿ ನ್ಯಾಯ ಸಂದಾಯ ಮಾಡಿದೆ;‌ ದಶಕಗಳಿಂದ ‘ಮೋಸ್ಟ್ ವಾಂಟೆಡ್’ ಪಟ್ಟಿಯಲ್ಲಿದ್ದ ಭಯೋತ್ಪಾ ದಕರು ಭಾರತದ ದಾಳಿಯಲ್ಲಿ ಮಣ್ಣುಪಾಲಾಗಿ ದ್ದಾರೆ. ಈಗ ಕದನವಿರಾಮ ಜಾರಿಗೆ ಬಂದ ನಂತರ ಪಾಕಿಸ್ತಾನಕ್ಕೆ ಎದುರಾಗಿರುವ ರಾಜ ತಾಂತ್ರಿಕ ಸವಾಲೆಂದರೆ, ಭವಿಷ್ಯದಲ್ಲಿ ನಡೆಯುವ ಯಾವುದೇ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಪಾತ್ರ ಇರುವುದಿಲ್ಲ ಎಂದು ಸಾಕ್ಷ್ಯಸಮೇತ ನಿರೂಪಿಸುವ ‘ಭಯೋತ್ಪಾದನೆಯ ಶಿಷ್ಟಾಚಾರ’ವನ್ನು ಅದು ರೂಪಿಸಿ ಕೊಡಬೇಕಾಗಿದೆ.

ಹಿಂಸೆಯಲ್ಲಿ ಹುಟ್ಟಿ, ಹಿಂಸೆಯಿಂದಲೇ ಬದುಕುತ್ತಿರುವ ಪಾಕ್

Profile Ashok Nayak May 17, 2025 10:17 AM

ಅಕ್ಬರ್‌ ನಾಮಾ

ಎಂ.ಜೆ.ಅಕ್ಬರ್

ಪಾಕಿಸ್ತಾನದಲ್ಲಿ ಕೆಲಸಕ್ಕೆ ಬಾರದ ಸಿದ್ಧಾಂತಗಳಿಗೆ ಗಂಟು ಬಿದ್ದು ಅಪ್ರಾಯೋಗಿಕವಾಗಿ ಅಧಿಕಾರ ಚಲಾಯಿಸುತ್ತಿರುವ ಸೇನಾಪಡೆಯ ಮುಖ್ಯಸ್ಥ ಜನರಲ್ ಸೈಯದ್ ಆಸಿಮ್ ಮುನೀರ್ ನೀಡಿದ ಹಸಿರು ನಿಶಾನೆಯ ಮೇರೆಗೆ ಇತ್ತೀಚೆಗೆ ಕಾಶ್ಮೀರದ ಮೇಲೆ ಭಯೋತ್ಪಾದಕರ ದಾಳಿ ನಡೆಯಿತಷ್ಟೆ. ಅದು ಇದೇ ಮುನೀರ್ ತನ್ನ ಹಳಸಲು- ಆದರೆ ವಿಷಕಾರಿ- ನಂಬಿಕೆಯೊಂದನ್ನು ಸಾಕಾರ ಗೊಳಿಸಲು ಮತ್ತೊಮ್ಮೆ ಯತ್ನಿಸಿದ್ದರ ಫಲ.

‘ರಾಷ್ಟ್ರೀಯವಾದಕ್ಕೆ ತಳಪಾಯ ಹಾಕಲು ಇಸ್ಲಾಂ ಒಂದೇ ಸಾಕು’ ಎಂಬುದೇ ಆತನ ನಂಬಿಕೆ. ಭಾರತವನ್ನು ವಿಭಜನೆ ಮಾಡುವಾಗ ಬ್ರಿಟಿಷರು ಎರಡು ದೇಶಗಳ ಸಿದ್ಧಾಂತವನ್ನು ಅನುಮೋದಿಸಿ ದ್ದರು. ಅದು 1971ರ ಡಿಸೆಂಬರ್ 16ರಂದು ತನ್ನ 24ನೇ ವಯಸ್ಸಿಗೆ ಅಸು ನೀಗಿತು. ಉರ್ದುವಿಗಿಂತ ಬಂಗಾಳಿಗೆ ಆದ್ಯತೆ ನೀಡುತ್ತಿದ್ದ ಬಾಂಗ್ಲಾದೇಶಿಗರು ಆ ಸಿದ್ಧಾಂತವನ್ನು ಕೊಂದರು. ಅದರ ಜತೆಗೇ ಅವರು ಭಾಷೆಯ ಆಧಾರದ ಮೇಲೆ ತಮ್ಮ ಸಂವಿಧಾನವನ್ನೂ ರಚಿಸಿಕೊಂಡರು. ಬಂಗಾಳಿಯೇ ಬಾಂಗ್ಲಾದೇಶಿಗರ ಗುರುತು.

ಇಸ್ಲಾಂ ಯಾವತ್ತೂ ಯಾವುದೇ ರಾಜಕೀಯ ವ್ಯವಸ್ಥೆಯ ಏಕೈಕ ತಳಹದಿ ಆಗಿದ್ದಿಲ್ಲ. ಇಸ್ಲಾಂ ಒಂದೇ ಸಾಕಿದ್ದರೆ ಏಕೆ 22 ಅರಬ್ ದೇಶಗಳು ಇರುತ್ತಿದ್ದವು? ಆ ಎಲ್ಲಾ ಅರಬ್ ದೇಶಗಳಲ್ಲಿ ಧರ್ಮವೂ ಒಂದೇ, ಭಾಷೆಯೂ ಒಂದೇ. ಆದರೂ ಅವೆಲ್ಲಾ ಸೇರಿ ಒಂದು ದೇಶವಾಗಿಲ್ಲ. ಇಸ್ಲಾಂ ಎಂಬುದು ನಂಬಿಕೆ; ಅದನ್ನು ಯಾವುದೇ ಒಂದು ದೇಶದಲ್ಲಿ ಕೂಡಿ ಹಾಕಲು ಸಾಧ್ಯವಿಲ್ಲ.

ಇದನ್ನೂ ಓದಿ: M J Akbar Column: ಔರಂಗಜೇಬನ ಬಗ್ಗೆ ಆರ್‌ಎಸ್‌ʼಎಸ್‌ ನಿಲುವು ಸಂಪೂರ್ಣ ಸರಿ

1971ರಲ್ಲಿ ಬಾಂಗ್ಲಾದೇಶದ ಉದಯದ ನಂತರ ಪಾಕಿಸ್ತಾನ ತನ್ನ ಜನ್ಮಸಿದ್ಧಾಂತವನ್ನು ‘ಒಂದು-ದೇಶ ಸಿದ್ಧಾಂತ’ಕ್ಕೆ ಬದಲಿಸಿಕೊಳ್ಳಲಿಲ್ಲ. ಬದಲಿಗೆ ಅದು ದೇಶವೇ ಅಲ್ಲದ ಶೂನ್ಯ ಸಿದ್ಧಾಂತದಡಿ ನರಳತೊಡಗಿತು. ಒಂದೇ ಧ್ವಜದಡಿ ಇದ್ದ ಹತ್ತಾರು ಜನಾಂಗಗಳು ಪರಸ್ಪರ ಸಂಘರ್ಷದಲ್ಲಿ ತೊಡಗದಂತೆ ನೋಡಿಕೊಳ್ಳುವುದಕ್ಕೆ ಹರಸಾಹಸ ಆರಂಭಿಸಿತು. ಬರೋಬ್ಬರಿ ಅರ್ಧ ಶತಮಾನದ ಕಾಲ ಪಾಕಿಸ್ತಾನವು ಸಾವಿನ ನಂತರದ ಜನ್ಮದ ಹುಡುಕಾಟದಲ್ಲಿ ಸೈದ್ಧಾಂತಿಕ ಭೂತವೊಂದನ್ನು ಅಪ್ಪಿಕೊಂಡು ಕುಳಿತಿತ್ತು.

ವಿಷವರ್ತುಲದಲ್ಲಿ ಸಿಲುಕಿದ ‘ಫ್ಯಾಂಟಂ ಯುದ್ಧ’ ಎಂದು ಕರೆಯಬಹುದಾದ ಭಯೋತ್ಪಾದನೆಯೇ ಇಂದು ಪಾಕಿಸ್ತಾನದ ಅನಿವಾರ್ಯ ಮತ್ತು ಆದ್ಯತೆಯ ಅಸ್ಥಿರ ರಾಷ್ಟ್ರೀಯ ಸಿದ್ಧಾಂತವಾಗಿ ಪರಿಣ ಮಿಸಿದೆ. ಅದರ ಜತೆಗೆ ರಾಜಕೀಯವಾಗಿ ಭ್ರಷ್ಟವಾದ ಮತ್ತು ಮಿಲಿಟರಿಯ ವಿಷಯದಲ್ಲಿ ಷಂಡನಾದ ಸರಕಾರವೊಂದು ಅಲ್ಲಿ ಆಡಳಿತ ನಡೆಸುತ್ತದೆ. ಹಾಗಂತ ತರ್ಕ ಮತ್ತು ಇತಿಹಾಸವನ್ನು ಕಡೆಗಣಿಸಿ ಭೂಖಂಡವನ್ನು ಶೋಧಿಸಲು ಹೊರಟ ಮೊದಲ ತಿಕ್ಕಲು ಮನುಷ್ಯನೇನೂ ಜನರಲ್ ಮುನೀರ್ ಅಲ್ಲ.

pak

ಅವನು ಕೊನೆಯ ವ್ಯಕ್ತಿಯೂ ಆಗಿರುವುದಿಲ್ಲ. ಸಿಸೇರಿಯನ್ ಹೆರಿಗೆಯಲ್ಲಿ ಜನಿಸಿದ ಪಾಕಿಸ್ತಾನವು ಕೇವಲ ಹತ್ತೇ ವಾರಗಳಲ್ಲಿ ಆಧುನಿಕ ಭಯೋತ್ಪಾದನೆಯನ್ನು ಕಂಡುಹಿಡಿಯಿತು. 1947ರ ಅಕ್ಟೋ ಬರ್ 22ರಂದು ಅದು 5000 ಭಯೋತ್ಪಾದಕರನ್ನು ಪಾಕಿಸ್ತಾನದ ಸೈನಿಕರ ಭದ್ರತೆಯೊಂದಿಗೆ ರಜೆಯ ಮೇಲೆ ಕಳುಹಿಸಿ, ‘ಹೋಗಿ, ಈದ್ ಗಿಂತ ಮೊದಲು ಕಾಶ್ಮೀರವನ್ನು ವಶಪಡಿಸಿಕೊಂಡು ಬನ್ನಿ’ ಎಂದಿತು.

ಆ ವರ್ಷದ ಅಕ್ಟೋಬರ್ 26ರಂದು ಈದ್ ಇತ್ತು. ಹಾಗೆ ಹೊರಟ ಭಯೋತ್ಪಾದಕರು ಕಂಡಕಂಡಿ ದ್ದನ್ನೆಲ್ಲಾ ಲೂಟಿ ಮಾಡಿದರು. ಸಿಕ್ಕಸಿಕ್ಕವರನ್ನು ಕೊಂದರು. ಅವರ ಉತ್ತರಾಧಿಕಾರಿಗಳು ಇಂದಿಗೂ ಶ್ರೀನಗರವನ್ನು ತಲುಪಲು ಕಾಯುತ್ತಿದ್ದಾರೆ. ಇದನ್ನೆಲ್ಲ ಎಚ್.ವಿ.ಹೋಡ್ಸನ್ ದಾಖಲಿಸಿದ್ದಾರೆ. ಅಸೀಮ ಮೂರ್ಖತನವನ್ನೇ ಹೊದ್ದು ಕುಳಿತಿರುವ ಪಾಕಿಸ್ತಾನ ಒಂದೇ ತಂತ್ರಗಾರಿಕೆ ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ಪರಿಣಾಮಗಳನ್ನು ನೀಡುತ್ತದೆ ಎಂದು ನಂಬಿಕೊಂಡು ಬರುತ್ತಿದೆ.

ಈ ಹುಸಿ ಸಿದ್ಧಾಂತವನ್ನು ಅದು ಕಾರ್ಬನ್ ಪೇಪರ್‌ನಲ್ಲಿ ಬರೆದು ಕಿಸೆಯಲ್ಲಿಟ್ಟುಕೊಂಡಿದೆ. ಅದರ ಪರಿಣಾಮ ಒಂದೇ: ಭಯೋತ್ಪಾದನೆ, ದಾಳಿ ನಡೆಸುವುದು, ಯುದ್ಧ ಮತ್ತು ಸೋಲು. ಪಾಕಿಸ್ತಾನಕ್ಕೆ ಕಲ್ಪನಾಶಕ್ತಿಯೇ ಇಲ್ಲದಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಮೂರ್ಖತನವೆಂಬುದು ಅದರ ವಂಶವಾಹಿನಿಯಲ್ಲೇ ಹರಿದುಬಂದಿದೆ. ಸೋಲಿನಿಂದ ತಾನು ಯಾವತ್ತೂ ಸೋಲುವುದಿಲ್ಲ ಎಂಬ ಭ್ರಮೆಯಲ್ಲೇ ಪಾಕ್ ಇದೆ.

ಭಾರತದ ಪ್ರಧಾನ ಮಂತ್ರಿಗಳು ಹಾಗಲ್ಲ. ಇವರ ಉದ್ದೇಶ ಒಳ್ಳೆಯದು. ದೇಶವನ್ನೂ, ಆರ್ಥಿಕತೆ ಯನ್ನೂ ಒಳ್ಳೆಯ ದಿಕ್ಕಿನಲ್ಲಿ ಕೊಂಡೊಯ್ದು, ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲೇ ಇವರು ಪ್ರಯತ್ನಿಸುತ್ತಾ ಬಂದಿದ್ದಾರೆ. ಆದರೆ, ಮಿಲಿಟರಿ ಸಂಘರ್ಷವನ್ನು ಕೂಡ ನಿರ್ದಿಷ್ಟ ರೀತಿ ಯಲ್ಲೇ ಬಗೆಹರಿಸಲು ಇವರು ಹೊರಟಾಗೆಲ್ಲಾ ವಿವಾದಕ್ಕೆ ತುತ್ತಾಗಿದ್ದಾರೆ. ದೆಹಲಿಗೆ ಶಾಶ್ವತ ಯುದ್ಧ ದಲ್ಲಿ ನಂಬಿಕೆಯಿಲ್ಲ. ಪಾಕಿಸ್ತಾನವೇನೋ ಸಣ್ಣಗೂಡಿನಲ್ಲಿ ಬದುಕುತ್ತಿರಬಹುದು, ಆದರೆ ಭಾರತ ದೊಡ್ಡ ಜಗತ್ತಿನಲ್ಲಿ ಬದುಕುತ್ತಿದೆ.

ಬಾಂಗ್ಲಾದೇಶದ ರಚನೆಯ ನಂತರ ಅಟಲ್ ಬಿಹಾರಿ ವಾಜಪೇಯಿಯವರಿಂದ ‘ದುರ್ಗಾಮಾತೆ’ ಎಂದು ಹೊಗಳಿಸಿಕೊಂಡಿದ್ದ ಇಂದಿರಾ ಗಾಂಧಿ 1971ರ ಡಿಸೆಂಬರ್ 16ರಂದು ಏಕಪಕ್ಷೀಯ ಕದನ ವಿರಾಮ ಘೋಷಣೆ ಮಾಡಿದಾಗ ನಾನಾ ರೀತಿಯ ಪ್ರಶ್ನೆಗಳಿಗೆ ಕಿವಿಗೊಡಬೇಕಾಗಿ ಬಂತು. ಪಾಕಿಸ್ತಾನ ಸೋತು ಸುಣ್ಣವಾಗಿತ್ತು. ಹೀಗಾಗಿ ಭಾರತದ ಸೇನೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಬಹುದಿತ್ತು. ಆದರೆ, ಇಂದಿರಾ ಗಾಂಽ ಯುದ್ಧ ನಿಲ್ಲಿಸಿದ್ದರು.

1972ರಲ್ಲಿ ನಡೆದ ಶಿಮ್ಲಾ ಮಾತುಕತೆಯ ವೇಳೆಯಲ್ಲೂ ಅವರಿಗೆ ತಮ್ಮ ಕಬ್ಬಿಣದ ಹಸ್ತಗಳನ್ನು ಬಳಸಿ ಕಾಶ್ಮೀರದ ಸಮಸ್ಯೆಗೊಂದು ಪರಿಹಾರ ಹುಡುಕುವುದಕ್ಕೆ ಆಗಲಿಲ್ಲ. ಬದಲಿಗೆ, ಯುದ್ಧಖೈದಿ ಗಳಾಗಿದ್ದ 93000 ಯೋಧರನ್ನು ಪಾಕಿಸ್ತಾನ ಬಿಡಿಸಿಕೊಂಡು ಹೋಯಿತು. ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನಕ್ಕೆ ತನ್ನ ಅಳಿವು ಉಳಿವಿನ ಪ್ರಶ್ನೆ ಎನ್ನಿಸುವಂಥ ಅತ್ಯಂತ ಕಠಿಣ ಸಂದೇಶವನ್ನು ನೀಡಿದ ಬಳಿಕವೇ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದಾರೆ.

ಅದಕ್ಕೂ ಮುನ್ನ ಭಾರತೀಯ ಸೇನೆ ಪಾಕಿಸ್ತಾನದ ಅಣ್ವಸಗಳಿರುವ ಜಾಗದ ಪಕ್ಕದಲ್ಲಿರುವ ಸರ್ಗೋಧಾ ಮೇಲೇ ದಾಳಿ ನಡೆಸಿತ್ತು. ಸಾಮಾನ್ಯವಾಗಿ ಭಾರತದ ಕ್ಷಿಪಣಿಗಳು ಗುರಿ ತಪ್ಪುವುದಿಲ್ಲ. ಅದರಲ್ಲೂ ಈ ಬಾರಿ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿದ ಬಳಿಕ ಭಾರತೀಯ ಸೇನೆಯ ಖ್ಯಾತಿ ಹಲವು ಪಟ್ಟು ಹೆಚ್ಚಾಗಿದೆ. ಪಾಕಿಸ್ತಾನ ಅಕ್ಷರಶಃ ನಡುಗಿದೆ.

ಅದನ್ನು ಅಮೆರಿಕವೂ ಅರ್ಥಮಾಡಿಕೊಂಡಿದೆ. ಪಾಕ್ ಮತ್ತು ಅಮೆರಿಕವೆರಡಕ್ಕೂ ಭಾರತದ ದಾಳಿಯ ಸಾಮರ್ಥ್ಯ ಅರಿವಿಗೆ ಬಂದಿದೆ. ಅದಕ್ಕಿಂತ ಹೆಚ್ಚಾಗಿ ಪ್ರಧಾನಿ ಮೋದಿಯವರ ಉಕ್ಕಿನ ಇಚ್ಛಾಶಕ್ತಿ ಅನುಭವಕ್ಕೆ ಬಂದಿದೆ. ಅವರು ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ಗೆ ಹೇಳಿರುವಂತೆ ಮುಂದಿನ ಸಲದ ಪರಿಣಾಮ ಇದಕ್ಕಿಂತ ಘೋರವಾಗಿರುತ್ತದೆ.

ತೀರಾ ಬಿಕ್ಕಟ್ಟು ಸೃಷ್ಟಿಯಾದಾಗ ಮಾತ್ರ ಅಮೆರಿಕ ಪ್ರತಿಕ್ರಿಯಿಸುತ್ತದೆ. 1999ರಲ್ಲಿ ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್‌ ಗೆ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯ ಬಳಿಕ ಕಾರ್ಗಿಲ್‌ನಿಂದ ಹಿಂದೆ ಸರಿಯುವಂತೆ ಸೂಚನೆ ನೀಡಿದ್ದರು. ಷರೀಫ್‌ ತಲೆಬಾಗಿದ್ದರು.

ಈಗ ಅವರ ಸಹೋದರ ಶೆಹಬಾಜ್ ಷರೀಫ್‌ ಡೊನಾಲ್ಡ್ ಟ್ರಂಪ್ ಮುಂದೆ ತಲೆಬಾಗಿದ್ದಾರೆ. ಕಾರಣ ವಿಷ್ಟೆ; ಪಾಕಿಸ್ತಾನವು ಚೀನಾದ ಸ್ನೇಹಿತನೇ ಇರಬಹುದು, ಆದರೆ ಅಮೆರಿಕದಿಂದ ನೆರವು ಪಡೆಯುವ ರಾಷ್ಟ್ರವೂ ಆಗಿದೆ. ಹಾಗಂತ ಪಾಕಿಸ್ತಾನದ ವಂಶವಾಹಿನಿಯಲ್ಲಿರುವ ಚೋದ್ಯ ಇದೊಂದೇ ಅಲ್ಲ. ಪಾಕಿಸ್ತಾನ ಒಂದು ರೀತಿಯಲ್ಲಿ ಅಣ್ವಸಗಳನ್ನು ಹೊಂದಿರುವ ಇಸ್ಲಾಮಿಕ್ ಡಾನ್ ಕಿಹೊತ್ತೆ (ಸ್ಪೇನ್‌ ನ ಪ್ರಸಿದ್ಧ ಕಾದಂಬರಿಯೊಂದರ ಹೀರೋ) ಆಗಿಬಿಟ್ಟಿದೆ.

2001-2002ರಲ್ಲಿ ಭಾರತದ ಪಾರ್ಲಿಮೆಂಟ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದಾಗ ಎರಡೂ ದೇಶಗಳು ಅಣ್ವಸ್ತ್ರಗಳನ್ನು ಇನ್ನೇನು ಬಳಸಿಯೇಬಿ ಡುತ್ತವೆ ಎಂಬಲ್ಲಿಗೆ ಹೋಗಿದ್ದವು. ಆಗ ಪ್ರಧಾನಿ ವಾಜಪೇಯಿ ಮತ್ತು ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಬೆಂಕಿಗೆ ನೀರು ಎರಚುವ ಮೂಲಕ ‘ಶೀತಲ ಆರಂಭದ ನೀತಿ’ ಜಾರಿಗೆ ತಂದರು.

ಅಂದರೆ, ಭಾರತ ತಾನೇ ಮೊದಲಾಗಿ ಯಾರ ಮೇಲೂ ಅಣ್ವಸ್ತ್ರ ದಾಳಿ ನಡೆಸುವುದಿಲ್ಲ. ಆದರೆ ಯಾರಾದರೂ ಕೆಣಕಿದರೆ ಸುಮ್ಮನಿರುವುದಿಲ್ಲ. ಭಾರತ ಸಿಟ್ಟಿಗೆದ್ದು ಪ್ರತಿಕ್ರಿಯಿಸಿದರೆ ಅದರ ಪರಿಣಾಮಕ್ಕೆ ಸೀಮೆಯಿರುವುದಿಲ್ಲ. ಏಕೆಂದರೆ ಅಣು ವಿಕಿರಣದ ಮೋಡಕ್ಕೆ ಗಡಿಯೆಲ್ಲಿ?

ಪಾಕಿಸ್ತಾನದ ಕಡೆಯಿಂದ ನಡೆಯುವ ಭಯೋತ್ಪಾದಕ ದಾಳಿಗೆ ಭಾರತ ಪ್ರತಿಕ್ರಿಯಿಸದೆ ಸುಮ್ಮನೆ ಉಳಿದಿದ್ದು ಒಂದೇ ಸಲ, ಅದು 2008ರ ಮುಂಬೈ ದಾಳಿಯ ನಂತರ. ಆಶ್ಚರ್ಯವೆಂದರೆ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರು, 26/11ರ ದಾಳಿಕೋರರಿಗೆ ಪಾಕಿಸ್ತಾನದ ಹ್ಯಾಂಡ್ಲರ್‌ಗಳಿಂದ ನೇರವಾಗಿ ಸಂದೇಶ ರವಾನೆಯಾಗುತ್ತಿದ್ದುದಕ್ಕೆ ಸಾಕಷ್ಟು ಸಾಕ್ಷ್ಯ ಲಭಿಸಿದ ಮೇಲೂ ಏನೂ ಮಾಡ ಲಿಲ್ಲ. ಅದಕ್ಕೆ ಕಾಂಗ್ರೆಸ್ ಪಕ್ಷ ರಾಜಕೀಯವಾಗಿ ಬೆಲೆ ತೆರಬೇಕಾಯಿತು.

ಪ್ರಧಾನಿ ನರೇಂದ್ರ ಮೋದಿಯವರದು ಒಂದು ಸಿದ್ಧಾಂತವಿದೆ. ಅವರ ಪ್ರಕಾರ ಭಯೋತ್ಪಾದನೆ ಕೂಡ ಯುದ್ಧ. ಈ ವಿಷಯದಲ್ಲಿ ಏನೇ ನೆಪ ಹೇಳಿದರೂ ಅವರು ಕೇಳುವುದಿಲ್ಲ. ಹೀಗಾಗಿಯೇ ಕಳೆದ ವಾರ ಭಾರತ ಸರಿಯಾಗಿ ನ್ಯಾಯ ಸಂದಾಯ ಮಾಡಿದೆ; ದಶಕಗಳಿಂದ ‘ಮೋಸ್ಟ್ ವಾಂಟೆಡ್’ ಪಟ್ಟಿಯಲ್ಲಿದ್ದ ಭಯೋತ್ಪಾದಕರು ಭಾರತದ ದಾಳಿಯಲ್ಲಿ ಮಣ್ಣು ಪಾಲಾಗಿದ್ದಾರೆ. ಈಗ ಕದನ ವಿರಾಮ ಜಾರಿಗೆ ಬಂದ ನಂತರ ಪಾಕಿಸ್ತಾನಕ್ಕೆ ಎದುರಾಗಿರುವ ರಾಜತಾಂತ್ರಿಕ ಸವಾಲೆಂದರೆ, ಭವಿಷ್ಯದಲ್ಲಿ ನಡೆಯುವ ಯಾವುದೇ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಪಾತ್ರ ಇರುವು ದಿಲ್ಲ ಎಂದು ಸಾಕ್ಷ್ಯಸಮೇತ ನಿರೂಪಿಸುವ ‘ಭಯೋತ್ಪಾದನೆಯ ಶಿಷ್ಟಾಚಾರ’ವನ್ನು ಅದು ರೂಪಿಸಿ ಕೊಡಬೇಕಾಗಿದೆ.

ಇದು ಬರೆದಷ್ಟು ಸುಲಭವಲ್ಲ. ಭಯೋತ್ಪಾದನೆಯನ್ನು ನಿಭಾಯಿಸುವುದು ಬಹುಶಃ ಭಾರತದ ಪ್ರತಿಯೊಬ್ಬ ಪ್ರಧಾನಿಗೂ ದೊಡ್ಡ ಸವಾಲಾಗಿಯೇ ಪರಿಣಮಿಸುತ್ತಾ ಬಂದಿದೆ. 1980ರ ಮತ್ತು 1990ರ ದಶಕದಲ್ಲಿ ಭಾರತ ಹೆಚ್ಚುಕಮ್ಮಿ ರಕ್ತದಲ್ಲಿ ತೋಯ್ದುಹೋಗಿತ್ತು. ಪಾಕಿಸ್ತಾನದ ಸರ್ವಾಧಿ ಕಾರಿಗಳು ಮತ್ತು ರಾಜಕಾರಣಿಗಳು ತಮ್ಮ ದೇಶದ ಮೂಲಕ ನಡೆಯುವ ಭಯೋ ತ್ಪಾದನೆಯು ಭಾರತವನ್ನು ಒಡೆಯಲಿದೆ ಎಂದೇ ನಂಬಿದ್ದರು.

ಆದರೆ ಅವರಿಗೆ ಭಾರತವೆಂದರೆ ಏನು ಎಂಬುದೇ ಅರ್ಥವಾಗಿರಲಿಲ್ಲ. ಅವರು ಭಾರತವನ್ನು ಮಧ್ಯ ಯುಗದ ದೇಶವೆಂದು ಭಾವಿಸಿದ್ದರೇ ಹೊರತು ಆಧುನಿಕ ರಾಷ್ಟ್ರವೆಂದು ನೋಡುತ್ತಿರಲಿಲ್ಲ. ಈಗಲೂ ಅವರಿಗೆ ಭಾರತ ಅರ್ಥವಾಗಿಲ್ಲ.

ಜನರಲ್ ಮುನೀರ್ 2022ರ ನವೆಂಬರ್ 20ರಂದು ಸೇನಾ ಪಡೆಯ ಮುಖ್ಯಸ್ಥನಾದಾಗ ನಿವೃತ್ತಿಗೆ ಮೂರು ದಿನಗಳಷ್ಟೇ ಇದ್ದವು. ಅವರ ಅಧಿಕಾರಾವಧಿ ಈ ವರ್ಷದ ನವೆಂಬರ್‌ಗೆ ಕೊನೆಯಾಗುತ್ತದೆ. ಎರಡು ದೇಶಗಳ ಸಿದ್ಧಾಂತದ ಬಗ್ಗೆ ಭಾಷಣ ಬಿಗಿಯುವವರೆಗೂ ಅವರೊಬ್ಬ ಮೌನಿ ಜನರಲ್ ಎಂದೇ ಎಲ್ಲರೂ ಭಾವಿಸಿದ್ದರು. ಹಾಗೆ ನೋಡಿದರೆ, ಮೌನವಾಗಿರುವುದಕ್ಕೇ ಅವರು ಪ್ರಸಿದ್ಧ ರಾಗಿದ್ದರು.

ಮೌನವನ್ನು ಕೇಳಿಸಿಕೊಂಡರೆ ಬೆಲೆ ತೆರಬೇಕಾಗುತ್ತದೆ. ಪಾಕ್‌ನಲ್ಲೀಗ ರಾಜಕೀಯ ಮಧ್ಯಪ್ರವೇಶಕ್ಕೆ ಕಾಲ ಕೂಡಿಬಂದಿದೆ. ಇದ್ದಕ್ಕಿದ್ದಂತೆ ಸೇನಾ ಪಡೆಯ ಮುಖ್ಯಸ್ಥರು ಸಿದ್ಧಾಂತದ ಮಾತನಾಡ ತೊಡಗಿದರೆ ಅದು ರಾಜಕೀಯದ ಮೇಲೆ ಪರಿಣಾಮ ಬೀರಿಯೇ ತೀರುತ್ತದೆ. ಅದು ಮಿಲಿಟರಿ ಕ್ಷಿಪ್ರಕ್ರಾಂತಿಯ ಸುಳಿವೇ? ಅವರಿಗೆ ಇನ್ನೊಂದು ಅವಧಿಗೆ ಸೇನಾಪಡೆಯ ಮುಖ್ಯಸ್ಥರಾಗಿ ವಿಸ್ತರಣೆ ಲಭಿಸಿದರೆ ಅದು ಕುಖ್ಯಾತ ಭಯೋತ್ಪಾದಕ ಹಫೀಜ್ ಸಯೀದ್‌ನ ಇತ್ತೀಚಿನ ಹೊಸ ರಾಜಕೀಯ ಮುಖವಾಡದ ಸಂಘಟನೆಯಾಗಿರುವ ಪಾಕಿಸ್ತಾನ್ ಮರ್ಕಜಿ ಮುಸ್ಲಿಂ ಲೀಗ್‌ಗೆ ಮುಂದಿನ ವರ್ಷ ನಡೆಯಲಿರುವ ಚುನಾವಣೆಯ ಬಳಿಕ ಅಧಿಕಾರಕ್ಕೇರಲು ಅವಕಾಶ ಮಾಡಿಕೊಡಲು ತಯಾರಿಯೇ? ಅಥವಾ ಮೈತ್ರಿ ಸರಕಾರದಲ್ಲಿ ಸಯೀದ್‌ಗೊಂದು ಪಾಲಿರುತ್ತದೆಯೇ? ಮತೀಯ ಭಯೋತ್ಪಾದನೆ ಯ ಪ್ರವರ್ತಕರು ಮುಸ್ಲಿಂ ಲೀಗ್ ಪಕ್ಷವನ್ನು ಇನ್ನೊಮ್ಮೆ ಎಬ್ಬಿಸಿ ಕುಳ್ಳಿರಿಸಿರುವುದಂತೂ ಸ್ಪಷ್ಟ.

ಹಿಂದೆ ಇದೇ ಮುಸ್ಲಿಂ ಲೀಗ್ ಪಕ್ಷ ಸಾಮೂಹಿಕ ಚಳವಳಿಯ ಮೂಲಕ ಪಾಕಿಸ್ತಾನವನ್ನು ಹುಟ್ಟು ಹಾಕಲಿಲ್ಲ, ಅದರ ಬದಲು ಸಾಮೂಹಿಕ ಹತ್ಯಾಕಾಂಡದ ಮೂಲಕ ದೇಶವನ್ನು ಹುಟ್ಟು ಹಾಕಿತ್ತು. 1946 ಆಗಸ್ಟ್ 14ರಂದು ಕಲ್ಕತ್ತಾದಲ್ಲಿ ಆರಂಭವಾದ ದಂಗೆಯೇ ಮುಂದೆ ಪಾಕ್‌ನ ಜನನಕ್ಕೂ ಕಾರಣವಾಯಿತು. ಇದರರ್ಥ ಇಷ್ಟೆ. ಪಾಕಿಸ್ತಾನ ಹುಟ್ಟಿದ್ದೇ ಹಿಂಸಾಚಾರದ ಮೂಲಕ; ಈಗ ಹಿಂಸಾಚಾರದ ಮೂಲಕವೇ ಅದನ್ನು ಜೀವಂತವಾಗಿಡಲಾಗುತ್ತಿದೆ.