ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranjith H Ashwath Column: ಜಾತಿಗಣತಿ ಎಂಬ ಜೇನುಗೂಡು

150 ಕೋಟಿ ರು. ವೆಚ್ಚದಲ್ಲಿ ಸಿದ್ಧವಾಗಿರುವ ಈ ಜಾತಿಗಣತಿಗೆ ಮೊದಲಿನಿಂದಲೂ ಪಕ್ಷಾ ತೀತ ಪರ-ವಿರೋಧ ಚರ್ಚೆಗಳಿವೆ. ಅಹಿಂದ ಸಮುದಾಯದ ಬಹುಪಾಲು ಮಂದಿ ಜಾತಿಗಣತಿ ಬಹಿರಂಗವಾಗ ಬೇಕು ಎಂದಿದ್ದರೆ, ಸಮೀಕ್ಷೆ ನಡೆಸಿರುವುದನ್ನೇ ಮೇಲ್ಜಾತಿಗಳು ಅನುಮಾನಿಸಿ ಮರುಸಮೀಕ್ಷೆಗೆ ಆಗ್ರಹಿಸಿ ದ್ದವು. ಈ ವಿಷಯದಲ್ಲಿ ಕಾಂಗ್ರೆಸ್‌ನಲ್ಲಿಯೇ ಎರಡು ಪ್ರತ್ಯೇಕ ಗುಂಪುಗಳು ಕಾಣಿಸಿಕೊಳ್ಳುತ್ತಿರುವುದು ಸ್ಪಷ್ಟ

ಜಾತಿಗಣತಿ ಎಂಬ ಜೇನುಗೂಡು

ಅಶ್ವತ್ಥಕಟ್ಟೆ

ranjith.hoskere@gmail.com

ಕರ್ನಾಟಕದಲ್ಲಿ ಬಹುನಿರೀಕ್ಷಿತ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯು ಸಾಕಷ್ಟು ವರ್ಷಗಳ ಬಳಿಕ ಕೊನೆಗೂ ಬಹಿರಂಗವಾಗಿದೆ. ಕಳೆದ ಬಾರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಸಿದ್ಧವಾಗಿದ್ದ ಈ ಜಾತಿಗಣತಿಯ ಅಂಕಿ-ಅಂಶ ‘ಅಧಿಕೃತ’ವಾಗಿ ಬಹಿರಂಗವಾಗಲು, ಸಂಪುಟದಲ್ಲಿ ಮಂಡನೆ ಮಾಡಿ ಚರ್ಚೆ ನಡೆಸಲು ಮತ್ತೊಮ್ಮೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಬರಬೇಕಾಯಿತು. ‌2018ರ ಬಳಿಕ ಬಂದ ಎರಡು ಸರಕಾರಗಳೂ, ಜೇನುಗೂಡಿನಂಥ ಅತಿಸೂಕ್ಷ್ಮ ವಿಷಯವಾಗಿದ್ದ ‘ಜಾತಿ ಗಣತಿ’ಯನ್ನು ಸುಭದ್ರವಾಗಿ ಕಾಪಾಡಿಕೊಂಡಿದ್ದವೇ ಹೊರತು, ತೆರೆಯುವ ‘ಪ್ರಯತ್ನ’ವನ್ನು ಮಾಡಲಿಲ್ಲ. ಇದೀಗ ಸ್ವಪಕ್ಷೀಯರ ವಿರೋಧದ ನಡುವೆಯೂ ಸಿದ್ದರಾಮಯ್ಯ ಅವರು ಸಂಪುಟ ಸಭೆಯಲ್ಲಿ ಇದನ್ನು ಮಂಡಿಸಲು ಅವಕಾಶ ನೀಡಿದ್ದು, ಬರುವ ಗುರುವಾರ ಈ ವಿಷಯದ ಚರ್ಚೆಗೆ ‘ವಿಶೇಷ’ ಸಂಪುಟ ಸಭೆಯನ್ನೂ ಕರೆದಿದ್ದಾರೆ. ಆದರೆ ಈ ಎಲ್ಲದರ ನಡುವೆಯೇ ‘ಮುಂದೇನು?’ ಎನ್ನುವ ಪ್ರಶ್ನೆಗೆ ಈವರೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.

ಹೌದು, 150 ಕೋಟಿ ರು. ವೆಚ್ಚದಲ್ಲಿ ಸಿದ್ಧವಾಗಿರುವ ಈ ಜಾತಿಗಣತಿಗೆ ಮೊದಲಿನಿಂದಲೂ ಪಕ್ಷಾ ತೀತ ಪರ-ವಿರೋಧ ಚರ್ಚೆಗಳಿವೆ. ಅಹಿಂದ ಸಮುದಾಯದ ಬಹುಪಾಲು ಮಂದಿ ಜಾತಿಗಣತಿ ಬಹಿರಂಗವಾಗಬೇಕು ಎಂದಿದ್ದರೆ, ಸಮೀಕ್ಷೆ ನಡೆಸಿರುವುದನ್ನೇ ಮೇಲ್ಜಾತಿಗಳು ಅನುಮಾನಿಸಿ ಮರುಸಮೀಕ್ಷೆಗೆ ಆಗ್ರಹಿಸಿದ್ದವು. ಈ ವಿಷಯದಲ್ಲಿ ಕಾಂಗ್ರೆಸ್‌ನಲ್ಲಿಯೇ ಎರಡು ಪ್ರತ್ಯೇಕ ಗುಂಪುಗಳು ಕಾಣಿಸಿಕೊಳ್ಳುತ್ತಿರುವುದು ಸ್ಪಷ್ಟ.

ಅದರಲ್ಲಿಯೂ ರಾಜ್ಯ ರಾಜಕೀಯದಲ್ಲಿ ಪ್ರಬಲ ಎನಿಸಿರುವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದಿಂದ ಈ ಗಣತಿಗೆ ವಿರೋಧವಿದೆ. ಆದರೆ ಈ ವರದಿಗೆ ಮುಸ್ಲಿಮರು, ದಲಿತ ಸಮು ದಾಯ ಸಂಪೂರ್ಣ ಸಮ್ಮತಿಸಿದ್ದರೆ, ಹಿಂದುಳಿದ ವರ್ಗಗಳಿಂದ 50-50 ಅನುಪಾತದಲ್ಲಿ ಒಪ್ಪಿಗೆ ಯಿದೆ.

ಹಾಗೆ ನೋಡಿದರೆ, ಕಾಂತರಾಜು ಅವರು 2015ರಲ್ಲಿ ಸಲ್ಲಿಸಿರುವ ಜಾತಿಗಣತಿಯ ಪ್ರಕಾರ ಕರ್ನಾಟಕವು 5.98 ಕೋಟಿ ಜನರನ್ನು ಒಳಗೊಂಡಿದೆ. ಇದರಲ್ಲಿ 1.09 ಕೋಟಿ ಪರಿಶಿಷ್ಟ ಜಾತಿಯ ಜನಸಂಖ್ಯೆಯಿದ್ದರೆ, ಮುಸ್ಲಿಮರದ್ದು 75 ಲಕ್ಷದ ಆಜುಬಾಜಿನಲ್ಲಿದೆ. ಇನ್ನುಳಿದಂತೆ ರಾಜ್ಯದಲ್ಲಿ ರಾಜಕೀಯವಾಗಿ ಪ್ರಬಲ ಎನಿಸಿದ್ದ ಲಿಂಗಾಯತ ಸಮುದಾಯವನ್ನು ಲಿಂಗಾಯತ, ಪಂಚಮಸಾಲಿ, ಹಿಂದೂ ಸಾದರ, ಹಿಂದೂ ರೆಡ್ಡಿ ಲಿಂಗಾಯತ ಸೇರಿದಂತೆ ವಿವಿಧ ಉಪಜಾತಿಯ ಲೆಕ್ಕದಲ್ಲಿ ವಿಭಜನೆ ಮಾಡುವ ಮೂಲಕ ‘ಲಿಂಗಾಯತ’ ಸಮುದಾಯದ ಜನಸಂಖ್ಯೆಯನ್ನು 66 ಲಕ್ಷ ತೋರಿಸಿ ದ್ದಾರೆ.

ಇದನ್ನೂ ಓದಿ: Ranjith H Ashwath Column: ಮುದುಡಿದ ಕಮಲದ ಜೀವಕಳೆಯ ಗುಟ್ಟೇನು ?

ಒಕ್ಕಲಿಗ ಸಮುದಾಯದಲ್ಲಿ ಸುಮಾರು 61 ಲಕ್ಷ ಜನಸಂಖ್ಯೆಯಿದೆ ಎಂದು ತೋರಿಸಲಾಗಿದೆ. ಈ ಸಂಖ್ಯೆಯನ್ನು ಈಗಾಗಲೇ ಬಹುತೇಕ ಸಮುದಾಯಗಳು ವಿರೋಧಿಸಿದ್ದು, ಲಿಂಗಾಯತರು ಸುಮಾ ರು ಒಂದುವರೆ ಕೋಟಿ ಇದ್ದೇವೆ ಎಂದು ‘ಕ್ಲೇಮ್’ ಮಾಡುತ್ತಿದ್ದಾರೆ. ರಾಜಕೀಯ ಕೆಸರೆರಚಾಟ, ಸಮುದಾಯಗಳ ವಿರೋಧಗಳೆಲ್ಲವನ್ನು ಮೀರಿ ಈಗಿರುವ ಪ್ರಶ್ನೆ, ಕಾಂತರಾಜು ಹಾಗೂ ಜಯ ಪ್ರಕಾಶ್ ಹೆಗ್ಡೆ ಅವರಿಂದ ಸಲ್ಲಿಕೆಯಾಗಿರುವ ಈ ಜಾತಿಗಣತಿಗೆ ಕಾನೂನಿನ ಮಾನ್ಯತೆ ಸಿಗುವುದೇ? ಎನ್ನುವುದಾಗಿದೆ.

ರಾಜಕೀಯ ಮೇಲಾಟಗಳ ಹೊರತಾಗಿ ಬಹುತೇಕರು ಈಗ ಈ ವರದಿಯು ಕಾನೂನಿನ ವ್ಯಾಪ್ತಿಯಲ್ಲಿ ಊರ್ಜಿತವಾಗುವುದೇ? ಎನ್ನುವ ಪ್ರಶ್ನೆಗಳು ಎತ್ತುತ್ತಿದ್ದಾರೆ. ಪ್ರಮುಖವಾಗಿ ರಾಜ್ಯ ಸರಕಾರಗಳಿಗೆ ಗಣತಿಯನ್ನು ಮಾಡುವ ಅಧಿಕಾರವಿಲ್ಲ. ಹೀಗಿರುವಾಗ ಈ ರೀತಿ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ ಹೆಸರಲ್ಲಿ ನಡೆದಿರುವ ‘ಹೆಡ್ ಕೌಂಟ್’ ಅನ್ನು ಒಪ್ಪಲು ಸಾಧ್ಯವೇ? ಎನ್ನುವುದು ಪ್ರಶ್ನೆಯಾಗಿದೆ.

ಇದರೊಂದಿಗೆ ಈ ಸಮೀಕ್ಷೆಯಲ್ಲಿ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯಗಳನ್ನು ಜಾತಿ ಎಂದು ತೋರಿಸಲಾಗಿದೆ. ಆದರೆ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮಗಳಾಗಿವೆ. ಹೀಗಿರುವಾಗ ಈ ಎರಡು ಸಮುದಾಯಗಳನ್ನು ಜಾತಿಯ ಪಾಕೆಟ್‌ನಲ್ಲಿ ಸೇರಿಸಲು ಸಾಧ್ಯವೇ? ಒಂದೊಮ್ಮೆ ಹಾಗೆ ಬಂದರೂ, ಮುಸ್ಲಿಂ ಧರ್ಮದಲ್ಲಿರುವ ಒಳಪಂಗಡಗಳನ್ನು ಪ್ರಸ್ತಾಪಿಸಿಲ್ಲ. ಹೀಗಿರುವಾಗ, ಅದನ್ನು ಒಪ್ಪಲು ಸಾಧ್ಯವೇ? ಹಾಗಾದರೆ ಹಿಂದೂ ಧರ್ಮದ ಹೆಡ್ ಕೌಂಟ್ ಅನ್ನು ಮಾತ್ರ ಏಕೆ ಜಾತಿ, ಉಪಜಾತಿಗಳ ಆಧಾರದಲ್ಲಿ ಮಾಡಲಾಗಿದೆ ಎನ್ನುವ ಪ್ರಶ್ನೆ ಸಹಜವಾಗಿಯೇ ಏಳುತ್ತಿದೆ.

ಇನ್ನು ಜಯಪ್ರಕಾಶ್ ಹೆಗ್ಡೆ ಅವರು ಮೀಸಲನ್ನು ಶೇ.61ಕ್ಕೆ ಹೆಚ್ಚಿಸಬೇಕು ಎನ್ನುವ ಶಿಫಾರಸನ್ನು ಮಾಡಿ, ಅದರಲ್ಲಿ ಕುರುಬ ಜಾತಿಯನ್ನು ಪ್ರವರ್ಗ 1ಬಿ ಎಂದು ಗುರುತಿಸಿ ಮೀಸಲು ಪ್ರಮಾಣವನ್ನು ಶೇ.12ಕ್ಕೆ ಹೆಚ್ಚಿಸಲು ಹಾಗೂ ರಾಜಕೀಯವಾಗಿ ಶಕ್ತಿ ಹೊಂದಿರುವ ಲಿಂಗಾಯತ ಮತ್ತು ಒಕ್ಕಲಿಗ ಜಾತಿಗಳ ಮೀಸಲು ಪ್ರಮಾಣವನ್ನೂ ತಲಾ ಶೇ.3ರಷ್ಟು ಹೆಚ್ಚಿಸಲು ಶಿಫಾರಸು ಮಾಡಿದ್ದಾರೆ.

ಈಗಾಗಲೇ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೀಸಲು ಪ್ರಮಾಣವನ್ನು ಶೇ.50ಕ್ಕೆ ಮಿತಿಗೊಳಿಸಿದೆ. ಈ ಮಿತಿಯನ್ನು ಯಾವುದೇ ಕಾರಣಕ್ಕೂ ಏರಿಸಬಾರದು ಎನ್ನುವ ಸ್ಪಷ್ಟ ಆದೇಶ ವನ್ನು ನೀಡಲಾಗಿದೆ. ಆದರೆ ಕರ್ನಾಟಕದಲ್ಲಿ ಈಗಾಗಲೇ ಪರಿಶಿಷ್ಟ ಜಾತಿ, ಪಂಗಡದ ಮೀಸಲನ್ನು ಶೇ.18ರಿಂದ 24ಕ್ಕೆ ಹೆಚ್ಚಿಸಲಾಗಿದೆ ಹಾಗೂ ಕೇಂದ್ರ ಸರಕಾರದ ಆರ್ಥಿಕವಾಗಿ ಹಿಂದುಳಿದವರ ಮೀಸಲು ಪ್ರಮಾಣ ಶೇ.10ರಷ್ಟು ಜಾರಿಯಲ್ಲಿದೆ. ಈ ಮೂಲಕ ಕರ್ನಾಟಕದಲ್ಲಿ ಮೀಸಲು ಈಗಾಗಲೇ ಶೇ.66 ರಷ್ಟಿದೆ ಎನ್ನುವ ವಾದವನ್ನು ಮಂಡಿಸಿ, ಒಬಿಸಿ ಮೀಸಲನ್ನು ಹೆಚ್ಚಿಸಬಹುದು ಎನ್ನುವ ಶಿಫಾರಸನ್ನು ಶಾಶ್ವತ ಹಿಂದುಳಿದ ಆಯೋಗ ಮಾಡಿದೆ.

ಆದರೆ ಸುಪ್ರೀಂ ಕೋರ್ಟ್‌ನಲ್ಲಿ ಈ ವಾದ ಊರ್ಜಿತವಾಗುವುದೇ ಎನ್ನುವುದು ಈಗಿರುವ ಬಹು ದೊಡ್ಡ ಪ್ರಶ್ನೆಯಾಗಿದೆ. ಈ ಎಲ್ಲವೂ ಕಾನೂನಾತ್ಮಕವಾಗಿರುವ ಸವಾಲುಗಳಾಗಿದ್ದರೂ, ಜಾತಿ ಗಣತಿಯ ಮಂಡನೆಯಿಂದ ರಾಜಕೀಯವಾಗಿ ಕಾಂಗ್ರೆಸ್ ಲಾಭ ಹೆಚ್ಚಿದೆ ಎನ್ನುವುದು ಈ ಸಮೀಕ್ಷೆಯ ಪರವಾಗಿರುವವರ ವಾದವಾಗಿದೆ. ಕಳೆದ ಚುನಾವಣೆಯ ಸಮಯದಲ್ಲಿಯೇ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಜಾತಿಗಣತಿಗೆ ಉತ್ಸುಕತೆಯನ್ನು ತೋರಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಿಂದುಳಿದ ಹಾಗೂ ದಲಿತ ನಾಯಕರಿಗೂ ಈ ಗಣತಿಯ ‘ಬಹಿರಂಗ’ ಅವಶ್ಯಕ ಎನಿಸಿತ್ತು. ರಾಜಕೀಯವಾಗಿ ಈ ಗಣತಿಯನ್ನು ಮಂಡಿಸುವುದು ಅಷ್ಟು ಸುಲಭದ ಕಾರ್ಯವೇನಾಗಿರಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮೂರು ಬಾರಿ ಜಾತಿಗಣತಿಯನ್ನು ಮಂಡಿಸಲು ಸಿದ್ದರಾಮಯ್ಯ ಅವರು ಪ್ರಯತ್ನಿಸಿದ್ದರು. ಆದರೆ ಸಂಪುಟ ದಲ್ಲಿಯೇ ಇದ್ದ ‘ವಿರೋಧ’ದ ಕಾರಣಕ್ಕೆ ಮುಂದೂಡುತ್ತಲೇ ಬಂದರು. ಆದರೀಗ ತೆಲಂಗಾಣದಲ್ಲಿ ಮಂಡನೆಯಾಗುತ್ತಿದ್ದಂತೆ ಅದನ್ನೇ ಮುಂದಿಟ್ಟುಕೊಂಡು ಸಿದ್ದರಾಮಯ್ಯರು ರಾಹುಲ್ ಕಡೆ ಯಿಂದಲೇ ಗ್ರೀನ್ ಸಿಗ್ನಲ್ ಪಡೆದಿದ್ದರಿಂದ ಬಹಿರಂಗ ಪ್ರತಿರೋಧವಿಲ್ಲದೇ ಕಳೆದ ಸಂಪುಟ ಸಭೆ ಯಲ್ಲಿ ಮಂಡನೆಯಾಗಿದೆ. ಆದರೆ ಮುಂದೆ ಈ ವರದಿಯನ್ನು ಅಧ್ಯಯನ ಮಾಡಲು ಮತ್ತೊಂದು ಸಂಪುಟ ಉಪಸಮಿತಿಯನ್ನು ರಚಿಸಿ ಕೈತೊಳೆದುಕೊಂಡರೂ ಅಚ್ಚರಿಯಿಲ್ಲ ಎನ್ನುವುದು ಈಗಿನ ರಾಜಕೀಯ ಮೊಗಸಾಲೆಯ ಮಾತಾಗಿದೆ.

ಹಾಗೆ ನೋಡಿದರೆ, ಈಗ ಬಹಿರಂಗವಾಗಿರುವ ಜಾತಿಗಣತಿಯು ನ್ಯಾಯಾಲಯದ ವ್ಯಾಪ್ತಿಯಲ್ಲಿ ಊರ್ಜಿತವಾಗುವುದೇ? ಕಾನೂನು ವ್ಯಾಪ್ತಿಯಲ್ಲಿ ರಾಜ್ಯ ಸರಕಾರಗಳಿಗೆ ಈ ರೀತಿಯ ಗಣತಿ ನಡೆಸಲು ಸಾಧ್ಯವೇ ಎನ್ನುವ ಚರ್ಚೆಗೆ ಅಂತಿಮ ಉತ್ತರವು ನ್ಯಾಯಾಲಯದಲ್ಲಿಯೇ ಸಿಗಬೇಕಿದೆ. ಆದರೆ ಸದ್ಯದ ಮಟ್ಟಿಗೆ ಈ ಗಣತಿಯಿಂದ ಯಾರಿಗಾದರೂ ಲಾಭ ಎನ್ನುವುದಿದ್ದರೆ, ಅದು ರಾಜಕೀಯ ಲಾಭ ಮಾತ್ರ ಎನ್ನುವುದು ಸ್ಪಷ್ಟ.

ಈ ವರದಿ ಬಹಿರಂಗವಾಗುವ ತನಕ ಲಿಂಗಾಯತ, ಒಕ್ಕಲಿಗ ಸಮುದಾಯವೇ ರಾಜ್ಯ ರಾಜಕೀಯದ ‘ದಿಕ್ಕ’ನ್ನು ತೀರ್ಮಾನಿಸುತ್ತದೆ. ಉತ್ತರ ಹಾಗೂ ಮಧ್ಯ ಕರ್ನಾಟಕದಲ್ಲಿ ಲಿಂಗಾಯತ ಮತ್ತು ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದೊಂದಿಗೆ ಪರಿಶಿಷ್ಟ ಜಾತಿ ಅಥವಾ ಪಂಗಡದ ಮತಗಳಲ್ಲಿ ಯಾವುದಾದರೂ ಒಂದು ಸಮುದಾಯ ಯಾವ ಪಕ್ಷದ ಪರ ನಿಲ್ಲುವುದೋ ಆ ಪಕ್ಷ ಅಽಕಾರ ಗದ್ದುಗೆ ಹಿಡಿಯುತ್ತದೆ ಎನ್ನುವ ಮಾತಿತ್ತು.

ಆದರೆ ಮುಂದಿನ ದಿನದಲ್ಲಿ ಇದೇ ‘ಬಲ’ ಉಳಿಯುವುದೇ ಅಥವಾ ಹಿಂದುಳಿದ ವರ್ಗಗಳ ಪ್ರಮುಖ ಸಮುದಾಯಗಳು ಈ ಸ್ಥಾನವನ್ನು ಪಡೆಯುವುದೋ ಎನ್ನುವುದು ಈಗಿರುವ ಕುತೂಹಲ. ಸುಮಾರು 75 ಲಕ್ಷದಷ್ಟು ಮುಸ್ಲಿಮರ ಸಂಖ್ಯೆಯಿದ್ದರೂ ಆ ಸಮುದಾಯ ಬಿಜೆಪಿಯೊಂದಿಗೆ ಹೋಗುವುದಿಲ್ಲ ಎನ್ನುವ ಖಾತ್ರಿಯಿರುವುದರಿಂದ ರಾಜಕೀಯವಾಗಿ ಮುಸ್ಲಿಮರಿಗೆ ಇದು ಲಾಭ ಕೊಡುವುದಿಲ್ಲ ಎನ್ನುವುದು ರಾಜಕೀಯ ಲೆಕ್ಕಾಚಾರ.

ಆದರೆ ಪ್ರವರ್ಗ 1ಎ, 2ಬಿ, 2ಬಿಯಲ್ಲಿ ಬರುವ ಸಮುದಾಯಗಳು ತಾವೂ ‘ನಿರ್ಣಾಯಕ’ ಎನ್ನುವ ನಿಟ್ಟಿನಲ್ಲಿ ಒಗ್ಗಟ್ಟಿನ ಮಂತ್ರ ಪಠಿಸುತ್ತವೆಯೇ ಎನ್ನುವುದು ಈಗಿರುವ ಪ್ರಶ್ನೆಯಾಗಿದೆ. ಮೇಲ್ನೋ ಟಕ್ಕೆ ಜಾತಿ-ಜಾತಿಗಳ ಲೆಕ್ಕಾಚಾರ ಸಿಕ್ಕರೂ ಇದು ಜನಮಾನಸಕ್ಕೆ ಹೋಗಿ, ಅರಿವು ಮೂಡಲು ಸಮಯ ಬೇಕಾಗುತ್ತದೆ. ಈ ಜೇನುಗೂಡಿಗೆ ಕೈಹಾಕುತ್ತಿದ್ದಂತೆ ರಾಜಕೀಯ ಕ್ರಾಂತಿ ಯಾಗಲಿದೆ ಎನ್ನುವುದು ಕಷ್ಟ.

ಆದರೆ ಪ್ರಬಲ ಸಮುದಾಯದ ನಾಯಕರು ಆಯಕಟ್ಟಿನ ಸ್ಥಾನವನ್ನು ಉಳಿಸಿಕೊಳ್ಳಲು ಕೆನೆಪದರದ ಸಮುದಾಯಗಳಿಗೆ ‘ರೋಸ್ಟರ್’ ಪದ್ಧತಿಯಲ್ಲಿ ಇಷ್ಟು ದಿನ ನೀಡುತ್ತಿದ್ದ ಅಧಿಕಾರದ ಮೀಸಲು ಭವಿಷ್ಯದಲ್ಲಿ ಬದಲಾಗುವ ಸಾಧ್ಯತೆಯಿದೆ. ಅದರಲ್ಲಿಯೂ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ, ಮಹಾನಗರ ಪಾಲಿಕೆಗಳಲ್ಲಿನ ಮೇಯರ್ ಸ್ಥಾನಗಳಿಗೆ ಇಷ್ಟು ದಿನ ನೀಡುತ್ತಿದ್ದ ‘ಮೀಸಲು’ ಕ್ರಮ ಭವಿಷ್ಯದಲ್ಲಿ ಬದಲಾಗುವುದು ನಿಶ್ಚಿತ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದ ‘ಪ್ರಬಲ’ ಸಚಿವರ ಕೊಸರಾಟದ ಹೊರತಾಗಿಯೂ, ರಾಹುಲ್ ಗಾಂಧಿ ಅವರನ್ನು ವಿಶ್ವಾಸಕ್ಕೆ ಪಡೆದುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿಗಣತಿಯ ವರದಿಯನ್ನು ಮಂಡಿಸಿ ದ್ದಾರೆ. ಕಾಂತರಾಜು ಅವರು ಸಿದ್ಧಪಡಿಸಿ ಸಾಕಷ್ಟು ವರ್ಷ ಕಳೆದು, ಬಳಿಕ ಜಯಪ್ರಕಾಶ್ ಹೆಗ್ಡೆ ಅವರಿಂದ ‘ಲೇಪನ’ಗೊಂಡಿರುವ ಈ ಜಾತಿಗಣತಿ ವರದಿಗೆ ಕಾನೂನಿನ ಮಾನ್ಯತೆ ದಕ್ಕುವ ಬಗ್ಗೆ ಈಗಲೂ ಹಲವು ಗೊಂದಲಗಳಿರುವುದು ಸ್ಪಷ್ಟ. ರಾಜ್ಯ ಸರಕಾರದ ಲೆಕ್ಕಾಚಾರವೂ, ಇದನ್ನು ಯಥಾವತ್ತಾಗಿ ಜಾರಿಗೊಳಿಸುವುದಕ್ಕಿಂತ ಹೆಚ್ಚಾಗಿ ‘ನುಡಿದಂತೆ’ ಜಾತಿಗಣತಿಯನ್ನು ಪರಿಗಣಿಸಿ ದ್ದೇವೆ ಎನ್ನುವ ಸಂದೇಶವನ್ನು ರಾಜ್ಯದ ಜನರಿಗೆ ಅದರಲ್ಲಿಯೂ ಅಹಿಂದ ಸಮುದಾಯಕ್ಕೆ ರವಾನಿಸುವುದೇ ಆಗಿದೆ. ಆ ಕೆಲಸವನ್ನು ಅದು ಅಚ್ಚುಕಟ್ಟಾಗಿ ಮಾಡಿದೆ.

ಈ ನಡೆಯಿಂದ ರಾಜಕೀಯವಾಗಿ, ಸಾಮಾಜಿಕವಾಗಿ ಹಾಗೂ ಕಾನೂನಾತ್ಮಕವಾಗಿ ಯಾವೆಲ್ಲ ‘ಸೈಡ್ ಎಫೆಕ್ಟ್’ಗಳಾಗಲಿವೆ ಎನ್ನುವುದನ್ನು ಕಾದು ನೋಡಬೇಕಿದೆ.