ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ರಕ್ತದಾನಕ್ಕೆ ಮೊದಲು, ನಂತರ ಬೇಕಾಗುವ ಆರೈಕೆಯೇನು?

ಜೀವ ಕೊಟ್ಟಾದರೂ ಇನ್ನೊಬ್ಬರನ್ನು ಬದುಕಿಸುವ ಮಾತುಗಳು ಕೇವಲ ಕಥೆ-ಕಾದಂಬರಿಗಳಲ್ಲಿ ಎಂದು ತೆಗೆದು ಹಾಕುವಂತಿಲ್ಲ. ಅಂಗಾಂಗ ಮತ್ತು ರಕ್ತದಾನಗಳು ಇದೇ ಸಾಲಿಗೆ ಸೇರುವಂಥವು. ಜೀವಕಾರುಣ್ಯದ ಉನ್ನತ ನಿದರ್ಶನಗಳೆಂದೇ ಹೇಳಲಾಗುವ ಇಂಥ ದಾನಗಳು, ಅದನ್ನು ಸ್ವೀಕರಿಸಿದವರ ಪಾಲಿಗೆ ಬದುಕು ನೀಡುವಂಥದ್ದಾದರೂ, ಕೊಟ್ಟವರಿಗೆ…? ಅವರ ಆರೋಗ್ಯಕ್ಕೆ ತೊಂದರೆ ಆಗಬಾರದಲ್ಲ. ಹಾಗಾಗಿ ರಕ್ತದಾನ(Blood Donate) ಮಾಡಿದ ಮೇಲೆ, ರಕ್ತದಾನಿಗಳು ತಮ್ಮ ಆರೋಗ್ಯದ ಬಗ್ಗೆ ಮಾಡಬೇಕಾದ ಕಾಳಜಿಗಳೇನು?

ರಕ್ತದಾನ ಮಾಡುವ ಮೊದಲು ಈ ವಿಷಯದ ಬಗ್ಗೆ ಇರಲಿ ಅರಿವು!

Profile pavithra Jun 17, 2025 5:00 AM

ಪ್ರತಿ ವರ್ಷ ತಮ್ಮ ಹುಟ್ಟುಹಬ್ಬಕ್ಕೆ ಅಥವಾ ಇನ್ನಾವುದೋ ಸಂದರ್ಭದಲ್ಲಿ ನಿಯಮಿತವಾಗಿ ರಕ್ತದಾನ ಮಾಡುವವರಾಗಲಿ, ಮೊದಲಬಾರಿಗೆ ಮಾಡುವವರಾಗಲಿ- ಎಲ್ಲರಿಗೂ ಈ ನಿಯಮಗಳು ಒಂದೇ. ಈ ಸರಳ ಕ್ರಿಯೆಗೆ ದೈಹಿಕವಾಗಿ ಕೆಲವು ತಯಾರಿಗಳನ್ನು ಮಾಡಿಕೊಂಡರೆ, ಚೇತರಿಕೆ ತ್ವರಿತವಾಗುತ್ತದೆ. ಸುಸ್ತು, ಆಯಾಸ, ತಲೆಸುತ್ತು, ಕಣ್ಣು ಕತ್ತಲಾಗುವುದು ಮುಂತಾದ ಯಾವುದೇ ಸಮಸ್ಯೆಗಳು ತಲೆದೋರದಂತೆ ಆರಾಮದಲ್ಲಿ ಇರಬಹುದು. ದೇಹವೂ ಸಶಕ್ತವಾಗಿ ಸಹಕರಿಸಬಹುದು. ಹಾಗಾದರೆ ರಕ್ತದಾನ(Blood Donate) ಮಾಡುವ ಮುನ್ನ ಮತ್ತು ಮಾಡಿದ ತೆಗೆದುಕೊಳ್ಳಬೇಕಾದ ಕ್ರಮಗಳೇನು?

ರಕ್ತದಾನಕ್ಕೆ ಮುನ್ನ

ಸಾಕಷ್ಟು ನೀರು ಕುಡಿದು, ದೇಹಕ್ಕೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಿ. ಜೊತೆಗೆ ಪೋಷಕಾಂಶಗಳ ಕೊರತೆ ಉಂಟಾಗದಂತೆ ಸಮತೋಲನದ ಆಹಾರವನ್ನು ಸೇವಿಸಿ. ಏನು ಹಾಗೆಂದರೆ? ಏನನ್ನು ತಿನ್ನಬೇಕು ಅಥವಾ ತಿನ್ನಬಾರದು?

ಕಬ್ಬಿಣಾಂಶದ ಆಹಾರಗಳು

ರಕ್ತದಾನ ಮಾಡುತ್ತಿದ್ದಂತೆ ತಾತ್ಕಾಲಿಕವಾಗಿ ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾಗುತ್ತದೆ. ಹಾಗಾಗಿ ರಕ್ತದಾನಕ್ಕೆ ಕೆಲವು ದಿನಗಳ ಮೊದಲಿನಿಂದ ಕಬ್ಬಿಣಾಂಶ ಹೆಚ್ಚಿರುವ ಆಹಾರಗಳನ್ನು ಸೇವಿಸಿ. ಸಬ್ಬಸಿಗೆ, ಪಾಲಕ್‌, ಮೆಂತೆ ಮುಂತಾದ ಹಸಿರು ಸೊಪ್ಪುಗಳು, ಕಡಲೆ, ಬಟಾಣಿಯಂಥ ಕಾಳುಗಳು, ಒಣಹಣ್ಣುಗಳು ಮತ್ತು ಬೀಜಗಳನ್ನು ತಪ್ಪದೆ ಸೇವಿಸಿ.

ವಿಟಮಿನ್‌ ಸಿ

ಎಷ್ಟೇ ಕಬ್ಬಿಣಾಂಶಯುಕ್ತ ಆಹಾರವನ್ನು ತಿಂದರೂ ಅದನ್ನು ಸಮರ್ಪಕವಾಗಿ ಹೀರಿಕೊಳ್ಳುವುದಕ್ಕೆ ವಿಟಮಿನ್‌ ಸಿ ಅಂಶ ಭರಪೂರ ಬೇಕಾಗುತ್ತದೆ. ಹಾಗಾಗಿ ಸಿ ಜೀವಸತ್ವ ಹೆಚ್ಚಿರುವಂಥ ಆಹಾರಗಳನ್ನು ಸೇವಿಸಿ. ಕಿತ್ತಳೆ ಹಣ್ಣು, ನೆಲ್ಲಿಕಾಯಿ, ದ್ರಾಕ್ಷಿಯಂಥ ಸಿಟ್ರಸ್‌ ಹಣ್ಣುಗಳು, ದಾಳಿಂಬೆ, ಪಪ್ಪಾಯ ಮುಂತಾದವು ನಿಮ್ಮ ನಿತ್ಯ ಆಹಾರದ ಭಾಗವಾಗಿರಲಿ.

ರಕ್ತದಾನದ ದಿನ

ರಕ್ತ ನೀಡುವ ಸುಮಾರು ಎರಡು ತಾಸುಗಳ ಮೊದಲು ಪೌಷ್ಟಿಕವಾದ ಆಹಾರ ಸೇವಿಸಿ. ಇದರಲ್ಲಿ ಇಡೀ ಧಾನ್ಯಗಳು, ಮೊಟ್ಟೆ/ ಪನೀರ್‌ನಂಥ ಪ್ರೊಟೀನ್‌ಗಳು, ಸಾಕಷ್ಟು ತರಕಾರಿಗಳು ಇರಲಿ. ಚೆನ್ನಾಗಿ ನೀರು ಕುಡಿಯಿರಿ, ಎಳನೀರು, ತಾಜಾ ಹಣ್ಣಿನ ರಸಗಳು, ಮಜ್ಜಿಗೆಯಂಥವು ಈ ನಿಟ್ಟಿನಲ್ಲಿ ನೆರವಾಗುತ್ತವೆ.

ಇವು ಬೇಡ

ಹಸಿದ ಹೊಟ್ಟೆಯಲ್ಲಿ ರಕ್ತದಾನ ಮಾಡಬೇಡಿ. ಇದರಿಂದ ತಲೆಸುತ್ತು, ಸುಸ್ತು ಇತ್ಯಾದಿ ತೊಂದರೆಗಳು ಬರಬಹುದು. ಅತಿಯಾದ ಕೊಬ್ಬಿನ ತಿನಿಸುಗಳು, ಕರಿದ ಆಹಾರಗಳು ಸೂಕ್ತವಲ್ಲ. ಸಿಕ್ಕಾಪಟ್ಟೆ ಕೆನೆ, ಜಿಡ್ಡು ಸೇರಿದ ಗ್ರೇವಿಗಳು, ಸಂಸ್ಕರಿತ ಆಹಾರಗಳು ಈ ಸಂದರ್ಭದಲ್ಲಿ ಸರಿಯಲ್ಲ.

ರಕ್ತದಾನದ ನಂತರ

ದೇಹದಲ್ಲಿ ಕಡಿಮೆಯಾದ ರಕ್ತವನ್ನು ತನ್ನಷ್ಟಕ್ಕೆ ಮರುಪೂರಣ ಮಾಡಿಕೊಳ್ಳುವುದಕ್ಕೆ ದೇಹಕ್ಕೆ ಕೊಂಚ ನೆರವು ಬೇಕಾಗುತ್ತದೆ. ಇದರಿಂದ ಶೀಘ್ರವಾಗಿ ಚೇತರಿಸಿಕೊಂಡು, ಜೀವನದ ಎಂದಿನ ಲಯಕ್ಕೆ ಮರಳುವುದಕ್ಕೆ ಸಾಧ್ಯ.

ರಕ್ತದಾನದ ನಂತರ 2-3 ಗ್ಲಾಸ್‌ ನೀರು, ಎಳನೀರು ಅಥವಾ ತಾಜಾ ಹಣ್ಣಿನ ರಸವನ್ನು ಕುಡಿಯಿರಿ. ಇದರಿಂದ ದೇಹ ನಿರ್ಜಲೀಕರಣಕ್ಕೆ ತುತ್ತಾಗುವುದನ್ನು ತಪ್ಪಿಸಬಹುದು. ಅರ್ಧ ಗಂಟೆಯ ವಿಶ್ರಾಂತಿ ಅಗತ್ಯವಾಗಿ ಬೇಕು. ಆಯಾಸ ಎನಿಸಿದರೆ ಸಣ್ಣದೊಂದು ತಿಂಡಿ ಸಹ ಬೇಕಾಗಬಹುದು. ಇದರಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ಸಾಮಾನ್ಯ ಮಟ್ಟಕ್ಕೆ ತರಬಹುದು.

ಈ ಸುದ್ದಿಯನ್ನೂ ಓದಿ:Health Tips: ಸಿಕ್ಕಾಪಟ್ಟೆ ತಿಂದ್ರಾ?: ಹೊಟ್ಟೆಭಾರ ಇಳಿಸಲು ಇಲ್ಲಿವೆ ಟಿಪ್ಸ್‌!

ಆ ದಿನ ಯಾವುದೇ ಕಠಿಣವಾದ ದೇಹ ಶ್ರಮದ ಕೆಲಸಗಳನ್ನು ಮಾಡಬೇಡಿ. ಜಿಮ್‌ನಲ್ಲಿ ಕಸರತ್ತು ಮಾಡುವುದು, ರನ್ನಿಂಗ್‌ ಇತ್ಯಾದಿಗಳು ಬೇಡ. ಮುಂದಿನ ಒಂದೆರಡು ದಿನಗಳ ಕಾಲ ಆಲ್ಕೋಹಾಲ್‌ನಿಂದ ದೂರವಿರಿ. ಕಣ್ತುಂಬ ನಿದ್ರೆ ಮಾಡುವುದು ಸಹ ಚೇತರಿಕೆಯ ಹಾದಿಯನ್ನು ಸುಗಮಗೊಳಿಸುತ್ತದೆ. ಮುಂದಿನ ಹಲವಾರು ದಿನಗಳವರೆಗೆ ಕಬ್ಬಿಣಾಂಶ ಹೆಚ್ಚಿರುವ ಆಹಾರಗಳನ್ನು ತಪ್ಪದೆ ಸೇವಿಸಿ.