ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Infosys layoffs: ಇನ್ಫೋಸಿಸ್‌ ಮೈಸೂರು ಕ್ಯಾಂಪಸ್‌ನಲ್ಲಿ ಮತ್ತೆ 240 ಟ್ರೈನಿಗಳ ವಜಾ!

Infosys layoffs: ಕೆಲಸದಿಂದ ವಜಾ ಮಾಡಿರುವ ಬಗ್ಗೆ ಟ್ರೈನಿಗಳಿಗೆ ಇನ್ಫೋಸಿಸ್‌ ಕಂಪನಿಯಿಂದ ಇ-ಮೇಲ್‌ ಕಳುಹಿಸಲಾಗಿದೆ. ಫೆಬ್ರವರಿಯಲ್ಲಿ 300 ಉದ್ಯೋಗಿಗಳನ್ನು ಏಕಾಏಕಿ ವಜಾಗೊಳಿಸಲಾಗಿತ್ತು. ಇದರ ಬೆನ್ನಲ್ಲೇ ಈಗ ಮತ್ತೊಮ್ಮೆ ಇನ್ಫೋಸಿಸ್‌ ಮೈಸೂರು ಕ್ಯಾಂಪಸ್‌ನಲ್ಲಿ 240 ಟ್ರೈನಿಗಳನ್ನು ಕಂಪನಿ ವಜಾಗೊಳಿಸಿರುವುದು ಕಂಡುಬಂದಿದೆ.

ಇನ್ಫೋಸಿಸ್‌ ಮೈಸೂರು ಕ್ಯಾಂಪಸ್‌ನಲ್ಲಿ ಮತ್ತೆ 240 ಟ್ರೈನಿಗಳ ವಜಾ!

Profile Prabhakara R Apr 22, 2025 3:10 PM

ಮೈಸೂರು: ಫೆಬ್ರವರಿಯಲ್ಲಿ 300 ಉದ್ಯೋಗಿಗಳನ್ನು ಏಕಾಏಕಿ ವಜಾಗೊಳಿಸಿದ್ದ ಬೆನ್ನಲ್ಲೇ ಇದೀಗ ಮತ್ತೊಮ್ಮೆ ಇನ್ಫೋಸಿಸ್‌ ಮೈಸೂರು ಕ್ಯಾಂಪಸ್‌ನಲ್ಲಿ (Infosys layoffs) 240 ಟ್ರೈನಿಗಳನ್ನು ಕಂಪನಿ ವಜಾಗೊಳಿಸಿರುವುದು ಕಂಡುಬಂದಿದೆ. ಆಂತರಿಕ ಮೌಲ್ಯಮಾಪನ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ ನೀಡಿ 240 ಟ್ರೈನಿಗಳನ್ನು ವಜಾಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಕೆಲಸದಿಂದ ವಜಾ ಮಾಡಿರುವ ಬಗ್ಗೆ ಟ್ರೈನಿಗಳಿಗೆ ಇ-ಮೇಲ್‌ ಕಳುಹಿಸಲಾಗಿದ್ದು, ಒಂದು ತಿಂಗಳ ಸಂಬಳ ಪಾವತಿ, ಬೇರೆಲ್ಲಾದರೂ ಉದ್ಯೋಗಾವಕಾಶಗಳನ್ನು ಅರಸಲು ಸಹಾಯವಾಗುವಂತೆ ಎನ್‌ಐಐಟಿ ಮತ್ತು ಅಪ್‌ಗ್ರೇಡ್‌ ಜತೆಗೂಡಿ ತರಬೇತಿ ನೀಡಲಾಗುವುದು. 1 ತಿಂಗಳು ಮೈಸೂರಿನ ತರಬೇತಿ ಕೇಂದ್ರದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗುವುದು ಹಾಗೂ ಬೆಂಗಳೂರು ಅಥವಾ ಹುಟ್ಟೂರಿಗೆ ಮರಳಲು ಭತ್ಯೆಗಳಂತಹ ಸೌಲಭ್ಯಗಳನ್ನು ಕಂಪನಿಯ ವತಿಯಿಂದ ಒದಗಿಸಲಾಗುವುದು ಎಂದು ಭರವಸೆ ನೀಡಿಲಾಗಿದೆ.

ಇನ್ಫೋಸಿಸ್‌ನಲ್ಲಿ ಜೆನೆರಿಕ್ ಫೌಂಡೇಶನ್ ತರಬೇತಿ ಕಾರ್ಯಕ್ರಮದಡಿ ಟ್ರೈನಿ ಉದ್ಯೋಗಿಗಳಿಗೆ ತರಬೇತಿ ನೀಡಲಾಗುತ್ತದೆ. ಆಂತರಿಕ ಮೌಲ್ಯಮಾಪನ ಇದರ ಒಂದು ಭಾಗವಾಗಿದ್ದು, ತರಬೇತಿದಾರರಿಗೆ ಮೌಲ್ಯಮಾಪನ ಪೂರ್ಣಗೊಳಿಸಲು ಮೂರು ಪ್ರಯತ್ನಗಳನ್ನು ನೀಡಲಾಗುತ್ತದೆ. ಹೆಚ್ಚುವರಿ ತಯಾರಿ ಸಮಯ, ಸಂದೇಹ ನಿವಾರಣಾ ಅವಧಿ ಮತ್ತು ಹಲವು ಅಣಕು ಪರೀಕ್ಷೆ ಮಾಡಲಾಗುತ್ತದೆ. ಆದರೂ ಈ ಆಂತರಿಕ ಮೌಲ್ಯಮಾಪನ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ವಿಫಲರಾದವರನ್ನು ವಜಾಗೊಳಿಸಲಾಗಿದೆ ಎಂದು ಉದ್ಯೋಗಿಗಳಿಗೆ ಕಂಪನಿ ತಿಳಿಸಿದೆ.

ಫೆಬ್ರವರಿಯಲ್ಲೂ 300 ನೌಕರರ ವಜಾ

ಫೆಬ್ರವರಿಯಲ್ಲಿ ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌ನಿಂದ 300 ನೌಕರರನ್ನು ವಜಾ ಮಾಡಲಾಗಿತ್ತು. ಏಕಾಏಕಿ ವಜಾ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ್ದ ಕಂಪನಿ, ‘ಯಾರನ್ನೂ ಬಲವಂತದಿಂದ ಹೊರಹಾಕಿಲ್ಲ. ಬದಲಿಗೆ ಅವರನ್ನೆಲ್ಲಾ ನಿಯಮಾನುಸಾರವೇ ವಜಾಗೊಳಿಸಲಾಗಿದೆ’ ಎಂದು ಸ್ಪಷ್ಟನೆ ನೀಡಿತ್ತು. ಇದಲ್ಲದೆ, ಮುಂದಿನ ಆರ್ಥಿಕ ವರ್ಷದಲ್ಲಿ ಕಂಪನಿ 20 ಸಾವಿರ ನೌಕರರನ್ನು ನೇಮಕಾತಿ ಮಾಡಿಕೊಳ್ಳಲು ಯೋಚಿಸುತ್ತಿದೆ ಎಂದು ಹೇಳಿಕೆ ಬಿಡುಗಡೆ ಮಾಡಿತ್ತು. ‌

ಈ ಸುದ್ದಿಯನ್ನೂ ಓದಿ | Road Rage Case: ವಿಂಗ್‌ ಕಮಾಂಡರ್‌ ವಿರುದ್ಧ ಎಫ್‌ಐಆರ್‌; ಯಾರೇ ತಪ್ಪು ಮಾಡಿದರೂ ಕಾನೂನು ಕ್ರಮ ಎಂದ ಸಿಎಂ

ಆಂತರಿಕ ಪರೀಕ್ಷೆಯಲ್ಲಿ ಸತತ 3 ಬಾರಿ ಅನುತ್ತೀರ್ಣರಾದ ಕಾರಣ ನೀಡಿ 300ಕ್ಕೂ ಹೆಚ್ಚು ಹೊಸ ಸಿಬ್ಬಂದಿಯನ್ನು ಇನ್ಫೋಸಿಸ್‌ ಇತ್ತೀಚೆಗೆ ತೆಗೆದು ಹಾಕಿದೆ. ಐಟಿ ಉದ್ಯೋಗಿಗಳ ಸಂಘಟನೆಗಳು, ಕೆಲಸದಿಂದ ತೆಗೆದುಹಾಕಿದವರ ಸಂಖ್ಯೆ 700ಕ್ಕಿಂತ ಹೆಚ್ಚಿದೆ ಎಂದು ಆರೋಪಿಸಿತ್ತು. ಜೊತೆಗೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ಪತ್ರ ಬರೆದು ಮನವಿ ಮಾಡಿತ್ತು.