ನಾಲ್ಕನೇ ಟೆಸ್ಟ್‌ಗೆ ಕರುಣ್ ನಾಯರ್ ಬದಲು ಸಾಯಿ ಸುದರ್ಶನ್‌ಗೆ ಅವಕಾಶ ನೀಡಬೇಕೆಂದ ದೀಪ್ ದಾಸ್‌ಗುಪ್ತಾ!
ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಕರುಣ್ ನಾಯರ್ ಅವರನ್ನು ಮುಂದಿನ ಪಂದ್ಯಕ್ಕೆ ತಂಡದಿಂದ ಕೈ ಬಿಡಿ ಎನ್ನುವ ಕೂಗು ಜೋರಾಗಿ ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ಈ ಬಗ್ಗೆ ಮಾಜಿ ವಿಕೆಟ್ ಕೀಪರ್ ದೀಪ್ ದಾಸ್‌ಗುಪ್ತಾ ನಾಲ್ಕನೇ ಟೆಸ್ಟ್‌ನಲ್ಲಿ ಕರುಣ್ ನಾಯರ್ ಬದಲಿಗೆ ಸಾಯಿ ಸುದರ್ಶನ್‌ಗೆ ಅವಕಾಶ ನೀಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

ಕರುಣ್ ನಾಯರ್ ಬದಲಿಗೆ ಸಾಯಿ ಸುದರ್ಶನ್‌ಗೆ ಸ್ಥಾನ ನೀಡಬೇಕೆಂದ ದೀಪ್ ದಾಸ್‌ಗುಪ್ತಾ.

ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್ (IND vs ENG) ನಡುವಿನ ನಾಲ್ಕನೇ ಟೆಸ್ಟ್ ತಂಡದ ಪ್ಲೇಯಿಂಗ್ 11ನಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ಎನ್ನುವುದು ತೀರಾ ಕುತೂಹಲ ಮೂಡಿಸಿದೆ. ಇದರ ನಡುವೆ ಹಲವು ಮಾಜಿ ಕ್ರಿಕೆಟಿಗರು ಪ್ಲೇಯಿಂಗ್ 11 ಬದಲಾವಣೆಗಳ ಬಗ್ಗೆ ಸಲಹೆ ನೀಡುತ್ತಿದ್ದಾರೆ. ಅದರಲ್ಲೂ ಬ್ಯಾಟಿಂಗ್ ವಿಭಾಗದಲ್ಲಿ ಕೆಲವು ಬದಲಾವಣೆಗಳಾಗಲೇ ಬೇಕು ಎನ್ನುವುದು ಹಲವರ ವಾದ. ಇದರ ಬೆನ್ನಲ್ಲೆ ಸತತ 8 ವರ್ಷಗಳ ನಂತರ ತಂಡಕ್ಕೆ ಮರಳಿರುವ ಕರುಣ್ ನಾಯರ್ (Karun Nair) ಸರಣಿಯಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಕಾರಣ ಮುಂದಿನ ಪಂದ್ಯಕ್ಕೆ ತಂಡದಿಂದ ಕೈ ಬಿಡಿ ಎನ್ನುವ ಕೂಗು ಜೋರಾಗಿ ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ಈ ಬಗ್ಗೆ ಮಾತನಾಡಿರುವ ಮಾಜಿ ವಿಕೆಟ್ ಕೀಪರ್ ದೀಪ್ ದಾಸ್‌ಗುಪ್ತಾ, ಕರುಣ್ ನಾಯರ್ ಬದಲು ಸಾಯಿ ಸುದರ್ಶನ್‌ಗೆ (Sai Sudarshan) ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದಾರೆ.
"ಮೂರನೇ ಕ್ರಮಾಂಕದಲ್ಲಿ ನಾನು ಏನನ್ನು ನೋಡುತ್ತಿದ್ದೇನೆಂದರೆ, ಕರುಣ್ ನಾಯರ್ ಇನ್ನೂ ಮುಂದುವರಿಯಲಿದ್ದಾರಾ? ಅಥವಾ ಮೊದಲನೇ ಟೆಸ್ಟ್ ಪಂದ್ಯದ ಕೊನೆಯ ಇನಿಂಗ್ಸ್‌ನಲ್ಲಿ ಆರಾಮದಾಯಕವಾಗಿ ಕಂಡಿದ್ದ ಯುವ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್‌ಗೆ ಸ್ಥಾನ ನೀಡುತ್ತೀರಾ?" ಎಂದು ಪಿಟಿಐ ಜೊತೆ ಮಾತನಾಡುವಾಗ ದೀಪ್ ದಾಸ್‌ಗುಪ್ತಾ ಪ್ರಶ್ನೆ ಮಾಡಿದ್ದಾರೆ.
ಲೀಡ್ಸ್‌ನ ಹೆಡಿಂಗ್ಲೆನಲ್ಲಿ ಜೂನ್ 20 ರಂದು ಆರಂಭವಾಗಿದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಸಾಯಿ ಸುದರ್ಶನ್ ಆಡಿದ್ದರು. ಆ ಮೂಲಕ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇವರು ತಮ್ಮ ಪದಾರ್ಪಣೆ ಟೆಸ್ಟ್ ಎರಡೂ ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 0 ಮತ್ತು 30 ರನ್‌ಗಳನ್ನು ಗಳಿಸಿದ್ದರು.
IND vs ENG: ಭಾರತ ತಂಡದಲ್ಲಿ ಮೊಹಮ್ಮದ್ ಸಿರಾಜ್‌ಗೆ ಅನ್ಯಾಯವಾಗುತ್ತಿದೆ ಎಂದ ಆಕಾಶ್ ಚೋಪ್ರಾ!
"ಅವರಿನ್ನೂ ಯುವ ಬ್ಯಾಟ್ಸ್‌ಮನ್ ಮತ್ತು ಭವಿಷ್ಯದ ಹೂಡಿಕೆ. ಕರುಣ್ ಅವರಿಗೆ ಅವಕಾಶಗಳು ಸಿಕ್ಕಿವೆ ಎಂದು ನಾನು ಭಾವಿಸುತ್ತೇನೆ. ಇದು ಅವಕಾಶಗಳ ಬಗ್ಗೆ ಅಲ್ಲ. ಅದಕ್ಕಿಂತ ಹೆಚ್ಚಾಗಿ, ಅವರು ಹೇಗೆ ಆಡುತ್ತಿದ್ದರು ಎಂದು ನಾನು ಭಾವಿಸುತ್ತೇನೆ. ಅವರು ದ್ವಿತೀಯ ಇನಿಂಗ್ಸ್‌ನಲ್ಲಿ ಆರಾಮದಾಯಕವಾಗಿ ಕಾಣುತ್ತಿದ್ದರು, ಆದರೆ ಅವರು ಕೆಲವು ಪ್ರಶ್ನೆಗಳಿಗೆ ಇನ್ನೂ ಉತ್ತರಿಸಲಾಗಿಲ್ಲ ಮತ್ತು ಅದು ನನ್ನನ್ನು ಬೇರೆ ರೀತಿಯಲ್ಲಿ ಯೋಚಿಸುವಂತೆ ಮಾಡುತ್ತದೆ," ಎಂದು ಅವರು ಹೇಳಿದ್ದಾರೆ.
ಕರುಣ್ ನಾಯರ್ ಪ್ರದರ್ಶನ
ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಆಡಿದ ಪಂದ್ಯಗಳ ಕೆಲ ಇನಿಂಗ್ಸ್‌ಗಳಲ್ಲಿ ಉತ್ತಮ ಆರಂಭ ಕಂಡಿದ್ದರೂ ಕರುಣ್ ನಾಯರ್ ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾಗಿದ್ದಾರೆ. ಆಡಿರುವ ಆರು ಇನಿಂಗ್ಸ್‌ಗಳಲ್ಲಿ ಒಂದೇ ಒಂದು ಅರ್ಧಶತಕವನ್ನೂ ಕೂಡ ಬಾರಿಸಿಲ್ಲ. ಇದುವರೆಗೆ ಸರಣಿಯ ಮೂರೂ ಪಂದ್ಯಗಳನ್ನು ಆಡಿರುವ ಕರುಣ್ 131 ರನ್ ಗಳಿಸಿ 21.83ರ ಸರಾಸರಿ ಹೊಂದಿದ್ದಾರೆ. ಮೈದಾನದಲ್ಲಿ ಕೆಲಹೊತ್ತು ಆಡಿದರೂ ವಿಕೆಟ್ ಒಪ್ಪಿಸಿ ವಿಫಲರಾಗುತ್ತಿರುವುದು ತಂಡವನ್ನು ಆತಂಕಕ್ಕೆ ತಳ್ಳಿದೆ.
IND vs ENG 4th Test: ಬುಮ್ರಾಗೆ ಮತ್ತೆ ವಿಶ್ರಾಂತಿ; ನಾಲ್ಕನೇ ಟೆಸ್ಟ್‌ಗೆ ಭಾರತ ತಂಡದಲ್ಲಿ ಹಲವು ಬದಲಾವಣೆ
ಕರುಣ್ ನಾಯರ್ ಟೆಸ್ಟ್ ಕೆರಿಯರ್
ಟೆಸ್ಟ್ ಕ್ರಿಕೆಟ್‌ಗೆ 2016ರಲ್ಲಿ ಇಂಗ್ಲೆಂಡ್ ವಿರುದ್ಧ ಮೊಹಾಲಿಯಲ್ಲಿ ಪದಾರ್ಪಣೆ ಮಾಡಿದ ಕರುಣ್ ನಾಯರ್ ಇಲ್ಲಿಯತನಕ 9 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ಅನುಭವದಲ್ಲಿ ಅವರು 42ಕ್ಕಿಂತಲೂ ಹೆಚ್ಚಿನ ಸರಾಸರಿಯಲ್ಲಿ 505 ರನ್‌ಗಳನ್ನು ಕಲೆಹಾಕಿದ್ದಾರೆ. 2016ರಲ್ಲಿ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ 303 ರನ್‌ಗಳನ್ನು ಗಳಿಸಿ ಅಜೇಯರಾಗಿ ಉಳಿದಿದ್ದರು. ಆದರೆ ನಂತರ ಸತತ ವೈಫಲ್ಯ ಅನುಭವಿಸಿದ ಕಾರಣ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು. ನಂತರ 8 ವರ್ಷಗಳ ಬಳಿಕ ತಂಡಕ್ಕೆ ಮರಳಿರುವ ಕರುಣ್, ಒಂದು ವೇಳೆ 4ನೇ ಪಂದ್ಯದಲ್ಲಿ ಅವಕಾಶ ಸಿಕ್ಕಿಯೂ ನಿರೀಕ್ಷಿತ ಪ್ರದರ್ಶನ ತೋರದಿದ್ದರೆ ತಂಡದಲ್ಲಿ ಅವಕಾಶ ಲಭಿಸುವುದು ಕಷ್ಟ.