ಭಾರತದಲ್ಲಿ ಹೃದಯಾಘಾತ ಎಂಬ ಟೈಮ್ ಬಾಂಬ್ : ವಯಸ್ಸು 30 ಆಗಿದ್ದರೆ ಕೊಲೆಸ್ಟ್ರಾಲನ್ನು ನಿರ್ಲಕ್ಷಿಸಬೇಡಿ
ಸಾಮಾನ್ಯವಾಗಿ, ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿರುವುದಕ್ಕೂ ವಯಸ್ಸಿಗೂ ಸಂಬಂಧವಿರುತ್ತದೆ. ಆದರೂ, 30ರ ಹರೆಯದವರಲ್ಲೂ, 20ರ ಹರೆಯದವರಲ್ಲೂ ಕೆಲವರಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿರುವುದು ರೋಗನಿರ್ಣಯದಲ್ಲಿ ಪತ್ತೆಯಾಗಿದೆ. ಅಧಿಕವಾಗಿರುವ ಕೊಲೆಸ್ಟ್ರಾಲ್, ನಿಶ್ಶಬ್ದ ಕೊಲೆಗಾರ. ಏಕೆಂದರೆ ಇದು ಯಾವುದೇ ರೋಗಲಕ್ಷಣಗಳನ್ನು ಅಥವಾ ಯಾವುದೇ ಲಕ್ಷಣಗಳನ್ನು ಪ್ರದರ್ಶಿಸುವುದಿಲ್ಲ


ಬೆಂಗಳೂರು: ಕೊಲೆಸ್ಟ್ರಾಲ್, ನಮ್ಮ ದೇಹದ ಎಲ್ಲ ಜೀವಕೋಶಗಳಲ್ಲಿಯೂ ಕಂಡು ಬರುವ ಕೊಬ್ಬಿನಂತಹ ವಸ್ತು. ಇದು ಲಿಪೊಪ್ರೋಟೀನು ಗಳೆಂಬ ಸಣ್ಣ ಸಣ್ಣ ಪ್ಯಾಕ್ಗಳಲ್ಲಿ ದೇಹದಾದ್ಯಂತ ಚಲಿಸುತ್ತದೆ. ಲಿಪೊಪ್ರೋಟೀನ್ಗಳಲ್ಲಿ ಮೂರು ವಿಧ: ಎಲ್.ಡಿ.ಎಲ್. ಅಥವಾ ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್; ಎಚ್.ಡಿ.ಎಲ್. ಅಥವಾ ಹೆಚ್ಚಿನ ಸಾಂದ್ರತೆಯ ಕೊಲೆಸ್ಟ್ರಾಲ್ ಅಥವಾ ಉತ್ತಮ ಕೊಲೆಸ್ಟ್ರಾಲ್; ಮತ್ತು ಟ್ರೈಗ್ಲಿಸರೈಡ್ಗಳು. ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿದ್ದರೆ ಹೃದಯ ಸಮಸ್ಯೆಗಳು ಮತ್ತು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ.
ಸಾಮಾನ್ಯವಾಗಿ, ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿರುವುದಕ್ಕೂ ವಯಸ್ಸಿಗೂ ಸಂಬಂಧವಿರುತ್ತದೆ. ಆದರೂ, 30ರ ಹರೆಯದವರಲ್ಲೂ, 20ರ ಹರೆಯದವರಲ್ಲೂ ಕೆಲವರಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿರುವುದು ರೋಗನಿರ್ಣಯದಲ್ಲಿ ಪತ್ತೆಯಾಗಿದೆ. ಅಧಿಕವಾಗಿರುವ ಕೊಲೆಸ್ಟ್ರಾಲ್, ನಿಶ್ಶಬ್ದ ಕೊಲೆಗಾರ. ಏಕೆಂದರೆ ಇದು ಯಾವುದೇ ರೋಗಲಕ್ಷಣಗಳನ್ನು ಅಥವಾ ಯಾವುದೇ ಲಕ್ಷಣಗಳನ್ನು ಪ್ರದರ್ಶಿಸುವುದಿಲ್ಲ. ಹಾಗಾಗಿ ಪತ್ತೆಯಾಗದೆ ಮುಂದುವರಿಯುತ್ತದೆ. ಮಾರಕವಾಗುವ ಮೊದಲು ಕೊಲೆಸ್ಟ್ರಾಲ್ ಮಟ್ಟವನ್ನು ಸರಿಪಡಿಸಿಕೊಳ್ಳಲು ತಕ್ಷಣವೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳು ವುದು ಬಹಳ ಮುಖ್ಯ.
ಇದನ್ನೂ ಓದಿ: Heart Attack: ನಿಷ್ಕರುಣಿ ಹೃದಯಾಘಾತಕ್ಕೆ 6ನೇ ತರಗತಿ ವಿದ್ಯಾರ್ಥಿನಿ ಬಲಿ
ಆದರೆ, ಲಿಪಿಡ್ಗಳೆಲ್ಲವೂ ದೇಹಕ್ಕೆ ಕೆಟ್ಟದ್ದಲ್ಲ. ಎಲ್.ಡಿ.ಎಲ್. ಕೆಟ್ಟದ್ದು ಏಕೆಂದರೆ, ಅದು ನಮ್ಮ ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಶೇಖರಣೆಗೆ ಕಾರಣವಾಗುತ್ತದೆ. ಇದು ಪ್ಲೇಕ್ ನಿರ್ಮಾಣಕ್ಕೆ ಕಾರಣವಾಗಬಹುದು ಮತ್ತು ಅಂತಿಮವಾಗಿ ರಕ್ತಸಂಚಲನೆಗೆ ಅಡಚಣೆಯನ್ನು ಉಂಟುಮಾಡಿ ಅಂತಿಮವಾಗಿ ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಎಚ್.ಡಿ.ಎಲ್. ಅಥವಾ ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್, ದೇಹಕ್ಕೆ ಒಳ್ಳೆಯದು. ಏಕೆಂದರೆ, ಇದು ದೇಹದ ಇತರ ಭಾಗಗಳಿಂದ ಕೊಲೆಸ್ಟ್ರಾಲನ್ನು ಯಕೃತ್ತಿಗೆ (ಲಿವರ್ ಗೆ) ಹಿಂತಿರುಗಿಸುತ್ತದೆ. ಇದು, ರಕ್ತದಿಂದ ಕೊಲೆಸ್ಟ್ರಾಲನ್ನು ತೆಗೆದುಹಾಕುತ್ತದೆ. ಟ್ರೈಗ್ಲಿಸರೈಡ್ಗಳು ದೇಹಕ್ಕೆ ಕೆಟ್ಟವು; ಅವು ನಿಮ್ಮ ದೇಹದಲ್ಲಿ ಸಂಗ್ರಹವಾಗಿರುವ ಒಂದು ರೀತಿಯ ಕೊಬ್ಬಿನಂಶವಾಗಿದ್ದು ಶಕ್ತಿಯ ಒಂದು ಮೂಲವಾಗಿದೆ.
ನಿಮ್ಮ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಕೆಲರಿಗಳನ್ನು (ವಿಶೇಷವಾಗಿ ಸಕ್ಕರೆ ಮತ್ತು ಕೊಬ್ಬು) ಸೇವಿಸಿದಾಗ ಅವು ಹೆಚ್ಚಾಗುತ್ತವೆ. ಹೀಗಾಗಿ, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ನಾವು ಎಚ್.ಡಿ.ಎಲ್. ನ ಆರೋಗ್ಯಕರ ಮಟ್ಟವನ್ನು ಕಾಪಾಡಿಕೊಳ್ಳುತ್ತಲೇ ಎಲ್.ಡಿ.ಎಲ್. ಮತ್ತು ಟ್ರೈಗ್ಲಿಸರೈಡ್ಗಳ ಮಟ್ಟಗಳನ್ನು ನಿಯಂತ್ರಿಸಬೇಕು. ಟ್ರೈಗ್ಲಿಸರೈಡ್ ಮಟ್ಟ ಹೆಚ್ಚಿದ್ದರೆ ಅಪಧಮನಿ ಗಳು ಗಟ್ಟಿಯಾಗಬಹುದು ಅಥವಾ ದಪ್ಪವಾಗಬಹುದು.
ಇದರಿಂದ ಪಾರ್ಶ್ವವಾಯು, ಹೃದಯಾಘಾತ ಮತ್ತು ಪ್ಯಾಂಕ್ರಿಯಾಟೈಟಿಸ್ ಅಪಾಯ ಹೆಚ್ಚಬಹುದು. ಡಿಸ್ಲಿಪಿಡೆಮಿಯಾ ದಲ್ಲಿ, ಮೂರು ವಿಧದ ಲಿಪಿಡ್ಗಳನ್ನೂ ಪರೀಕ್ಷಿಸಲಾಗುತ್ತದೆ. ಎಲ್.ಡಿ.ಎಲ್. ಮತ್ತು ಟ್ರೈಗ್ಲಿಸರೈಡ್ಗಳು ಕ್ರಮವಾಗಿ 100 mg/dl ಮತ್ತು 150 mg/dl ಗಿಂತ ಹೆಚ್ಚಿದ್ದರೆ ಮತ್ತು ಪುರುಷರಲ್ಲಿ ಎಚ್.ಡಿ.ಎಲ್. 40 mg/dl ಮತ್ತು ಮಹಿಳೆಯರಲ್ಲಿ 50 mg/dl ಗಿಂತ ಕಡಿಮೆಯಿದ್ದರೆ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿದೆ ಎಂದರ್ಥ.
ಕೊಲೆಸ್ಟ್ರಾಲ್ ಮಟ್ಟ ಹೆಚುತ್ತಿರುವುದು ಬಹುತೇಕ ತಿಳಿಯುವುದಿಲ್ಲ. ಆದರೆ ಸಕಾಲದಲ್ಲಿ ಕೆಲವೊಂದು ಲಕ್ಷಣಗಳನ್ನು ಗಮನಿಸಿದರೆ, ಅವುಗಳಿಗೆ ಕಾರಣ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿ ರುವುದು ಇರಬಹುದು ಎಂದು ತಿಳಿಯಬಹುದು. ಉದಾಹರಣೆಗೆ: ಕಣ್ಣುಗಳ ಸುತ್ತ ಕ್ಸಾಂಥೆಲಾಸ್ಮಾ ಅಥವಾ ಹಳದಿ ಬಣ್ಣದ ಜಮಾವಣೆಗಳು. ಇದು ಕೊಲೆಸ್ಟ್ರಾಲ್ ಹೆಚ್ಚಿದೆ ಎಂದು ಸೂಚಿಸುತ್ತದೆ. ಎದೆ ಅಥವಾ ಆಂಜೈನಾ ನೋವಿಗೆ ಕಾರಣ: ಕೊಲೆಸ್ಟ್ರಾಲ್ ಶೇಖರಣೆ ಮತ್ತು ಹೃದಯಕ್ಕೆ ರಕ್ತದ ಹರಿವು ಕಡಿಮೆಯಾಗುವುದರಿಂದ ಅಪಧಮನಿಗಳು ನಿರ್ಬಂಧಿಸಲ್ಪಟ್ಟಿರುವುದು ಆಗಿರಬಹುದು.
ಕಾಲಿನಲ್ಲಿ ವಿವರಿಸಲಾಗದ ನೋವು ಅಥವಾ ಮರಗಟ್ಟಿದಂತಹ ಅನುಭವ... ಇಂತಹವುಗಳ ಬಗ್ಗೆ ಗಮನವಿರಲಿ. ಇದಕ್ಕೆ ಕಾರಣ, ಕಳಪೆ ರಕ್ತಪರಿಚಲನೆ, ಅಧಿಕ ಕೊಲೆಸ್ಟ್ರಾಲ್ ಇರಬಹುದು. ಕೊಲೆಸ್ಟ್ರಾಲ್ ನಿಂದ ಹೃದಯದ ತೊಂದರೆಗಳು ಉಂಟಾಗಿದ್ದರೆ ತೀವ್ರ ಉಸಿರಾಟದ ತೊಂದರೆಗಳು ಅಥವಾ ಆಯಾಸ ಆಗುತ್ತಿರಬಹುದು. ಕಾಕೇಶಿಯನ್ನರಂತಹವರಿಗೆ ಹೋಲಿಸಿದರೆ ದಕ್ಷಿಣ ಏಷ್ಯಾದಂತಹ ಕೆಲವು ಜನಾಂಗದವರಲ್ಲಿ ಕೊಲೆಸ್ಟ್ರಾಲ್ ಮಟ್ಟ ಅಧಿಕವಾಗುವ ಅಪಾಯಗಳು ಹೆಚ್ಚು ಎಂದು ಸಂಶೋಧನೆಗಳು ತೋರಿಸಿವೆ. ಇದಕ್ಕೆ ಭಾಗಶಃ, ಅವರ ಆಹಾರ ಪದ್ಧತಿ ಕಾರಣ ಮತ್ತು ಮುಖ್ಯವಾಗಿ, ವಸಾಹತುಶಾಹಿ ಆಳ್ವಿಕೆಯಲ್ಲಿ ಅನುಭವಿಸಿದ ಹಸಿವು ಮತ್ತು ಕ್ಷಾಮಗಳು ಅವರ ದೇಹದ ಮೇಲೆ ಮಾಡಿರುವ ಪರಿಣಾಮಗಳು ಕಾರಣವಾಗಿವೆ.
ಕೊಲೆಸ್ಟ್ರಾಲ್ ಸಮಸ್ಯೆಯ ಬಗ್ಗೆ ಮಾತನಾಡಿದ ಶ್ರೀ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ಹೃದ್ರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮಧುಕರ ಎಚ್.ಎಂ.: "ಯುವ ಜನತೆ ಕವಲುದಾರಿಯಲ್ಲಿ ನಿಂತಿದೆ. ಅವರಿಗೆ ಸಮಯವೇ ಇಲ್ಲ. ಯಾವಾಗಲೂ ಕೆಲಸ ಕೆಲಸ ಕೆಲಸ. ಹಾಗಾಗಿ ವ್ಯಾಯಾಮಕ್ಕೆ ಅಥವಾ ಅಡುಗೆ ಮಾಡುವುದಕ್ಕೆ ಅವರಿಗೆ ಸಮಯವೇ ಸಿಗುವು ದಿಲ್ಲ. ಹೀಗಾಗಿ ಅವರು ಸಂಸ್ಕರಿಸಿದ ಆಹಾರಗಳು ಮತ್ತು ಟೇಕ್-ಔಟ್ ಆರ್ಡರ್ಗಳನ್ನು ಅವಲಂಬಿ ಸುತ್ತಾರೆ. ಇದಲ್ಲದೆ ಅವರು ಕೆಲಸ ಮಾಡುವಾಗಲೂ ಬಹಳ ಹೊತ್ತು ಒಂದೇ ಕಡೆ ಕುಳಿತಿರುತ್ತಾರೆ. ಮೊದಲೆಲ್ಲ, ವಾರಾಂತ್ಯಗಳಲ್ಲಿ ಕುಟುಂಬಕ್ಕಾಗಿ ದಿನಸಿ, ಹಣ್ಣುಗಳು ಮತ್ತು ತರಕಾರಿಗಳ ಶಾಪಿಂಗ್ ಮಾಡುತ್ತಿದ್ದರು.
ಈಗ ಅದೆಲ್ಲ ಇಲ್ಲ. ಎಲ್ಲ ಮನೆ ಬಾಗಿಲಿಗೇ ಬರುತ್ತದೆ. ಈಗೆಲ್ಲ ವಾರಾಂತ್ಯದಲ್ಲಿಯೂ ಕೆಲಸ ಮಾಡಬೇಕಾಗಿ ಬರುತ್ತಿದೆ ಮತ್ತು ಅನೇಕರು ಕೆಲಸದ ಸಲುವಾಗಿ ತಮ್ಮ ಕುಟುಂಬಗಳಿಂದ ದೂರವಿರುತ್ತಾರೆ. ಹೀಗಾಗಿ, ಮನೆಯ ಜವಾಬ್ದಾರಿಗಳನ್ನು ಹಂಚಿಕೊಳ್ಳಲು ಅವರಿಗೆ ಯಾರೂ ಇರುವುದಿಲ್ಲ. ಯುವಕರಲ್ಲಿ ಸಾಮಾನ್ಯವಾಗಿ ಕಂಡುಬರುವ ಧೂಮಪಾನ ಮತ್ತು ಮದ್ಯಪಾನ ಕೂಡ ಕೊಲೆಸ್ಟ್ರಾಲ್ ಅಧಿಕವಾಗುವ ಅಪಾಯವನ್ನು ಹೆಚ್ಚಿಸುತ್ತದೆ."
ಸಮತೋಲಿತ ಆರೋಗ್ಯಕರ ಜೀವನವನ್ನು ನಡೆಸಲು ಸಂಕಲ್ಪ ಮಾಡುವುದು ಅತ್ಯಗತ್ಯ ವಾಗಿದೆ. ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಆರೋಗ್ಯಕರ ಆಹಾರ ಸುಲಭವಾಗಿ ದೊರೆಯುವಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕು, ಮತ್ತು ಯುವಕರು ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ವ್ಯಾಯಾಮ ಮಾಡಬೇಕು ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಚಿಪ್ಸ್, ಕುಕೀಸ್, ಕೇಕ್, ಇನ್ಸ್ಟೆಂಟ್ ನೂಡಲ್ಸ್ ನಂತಹ ಜಂಕ್ ಫುಡ್ ಗಳನ್ನು ತಿನ್ನುವ ಬದಲು ಬೀಜಗಳು, ಹಣ್ಣುಗಳು, ತರಕಾರಿಗಳನ್ನು ತಿನ್ನುವುದು ಉತ್ತಮ. ಬೊಜ್ಜು, ಕೊಲೆಸ್ಟ್ರಾಲನ್ನು ಹೆಚ್ಚಿಸುತ್ತದೆ. ದೇಹದ ತೂಕವನ್ನು ಕನಿಷ್ಠ 5% ನಷ್ಟು ಕಡಿಮೆ ಮಾಡಿಕೊಂಡರೂ ಎಲ್.ಡಿ.ಎಲ್. ಅನ್ನು ಕಡಿಮೆ ಮಾಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಮದ್ಯಪಾನ ಮತ್ತು ಧೂಮಪಾನವನ್ನು ಮಾಡಬಾರದು. ಒತ್ತಡದ ನೆಪದಲ್ಲಿ ಈ ಎರಡೂ ದುಶ್ಚಟಗಳು ಅಂಟಿಕೊಳ್ಳಬಹುದು. ತಕ್ಷಣಕ್ಕೆ ಏನೋ ಆರಾಮ ಅನಿಸಿದರೂ, ಮುಂದೆ ಹಲವಾರು ಹೃದಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಇವು, ಅಂತಹ ಭಯಾನಕ ಚಟಗಳು.