Archana Udupa: ನಾನು ಆರೋಗ್ಯವಾಗಿದ್ದೇನೆ; ಕ್ಯಾನ್ಸರ್ ವದಂತಿ ಬಗ್ಗೆ ಗಾಯಕಿ ಅರ್ಚನಾ ಉಡುಪ ಸ್ಪಷ್ಟನೆ
Archana Udupa: ‘ನನಗೆ ಯಾವ ಆರೋಗ್ಯದ ಸಮಸ್ಯೆಯೂ ಇಲ್ಲ. ಕೆಲವರು ನನಗೆ ಕ್ಯಾನ್ಸರ್ ಬಂದಿದೆ ಎಂದು ಮಾತನಾಡಿಬಿಟ್ಟಿದ್ದಾರೆ. ಇದರಿಂದ ನನಗಿಂತಲೂ ಹೆಚ್ಚಾಗಿ ನನ್ನ ತಂದೆ-ತಾಯಿಗೆ, ಸಂಬಂಧಿಕರಿಗೆ, ಸ್ನೇಹಿತರಿಗೆ ತುಂಬಾ ನೋವಾಗಿದೆ ಎಂದು ಖ್ಯಾತ ಗಾಯಕಿ, ನಟಿ ಅರ್ಚನಾ ಉಡುಪ ತಿಳಿಸಿದ್ದಾರೆ.


ಬೆಂಗಳೂರು: ಕನ್ನಡದ ಖ್ಯಾತ ಗಾಯಕಿ, ನಟಿ ಅರ್ಚನಾ ಉಡುಪ (Archana Udupa) ಅವರು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಆದರೆ, ಈ ಬಗ್ಗೆ ಸ್ವತಃ ಅರ್ಚನಾ ಉಡುಪ ಅವರೇ ಇದೀಗ ಸ್ಪಷ್ಟನೆ ನೀಡಿದ್ದು, ನನಗೆ ಯಾವ ಆರೋಗ್ಯ ಸಮಸ್ಯೆಯೂ ಇಲ್ಲ. ಕೆಲವರು ಏನೇನೋ ಊಹೋಪೋಹಗಳನ್ನು ಮಾಡಿಕೊಂಡು, ನನಗೆ ಕ್ಯಾನ್ಸರ್ ಬಂದಿದೆ ಎಂಬ ಹಂತಕ್ಕೆ ಮಾತನಾಡಿದ್ದಾರೆ. ನನ್ನ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಯಾವುದೂ ಸತ್ಯವಲ್ಲ. ನಾನು ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ವಿಡಿಯೋ ಪೋಸ್ಟ್ ಮಾಡಿರುವ ಅರ್ಚನಾ ಉಡುಪ ಅವರು, ಎಲ್ಲರಿಗೂ ನಮಸ್ಕಾರ. ನನ್ನನ್ನು ತುಂಬಾ ದಿನಗಳಿಂದ ಕಾಡುತ್ತಿದ್ದ ಎರಡು ಮುಖ್ಯವಾದ ವಿಚಾರವನ್ನು ಇವತ್ತು ನಾನು ನಿಮ್ಮ ಮುಂದೆ ಹಂಚಿಕೊಳ್ಳಬೇಕು ಅಂತ ಈ ವಿಡಿಯೋ ಮಾಡುತ್ತಿದ್ದೇನೆ. ಈ ವಿಷಯವನ್ನು ನಿಮ್ಮ ಜೊತೆ ಹಂಚಿಕೊಳ್ಳಲೇಬೇಕು.
ಮೂರು-ನಾಲ್ಕು ವರ್ಷಗಳ ಹಿಂದೆ ನಾನು ಒಂದು ಸಂದರ್ಶನ ನೀಡಿದ್ದೆ. ನನಗೆ 20 ವರ್ಷಗಳ ಹಿಂದೆ ಗಂಟಲಿನಲ್ಲಿ ಸಣ್ಣ ಸಮಸ್ಯೆ ಉಂಟಾಗಿ ತಿಂಗಳುಗಳ ಕಾಲ ನನಗೆ ಹಾಡಲು ಆಗುತ್ತಾ ಇರಲಿಲ್ಲ ಎಂಬ ವಿಷಯವನ್ನು ಆ ಸಂದರ್ಶನದಲ್ಲಿ ಹೇಳಿಕೊಂಡಿದ್ದೆ. ಆ ತೊಂದರೆಯಿಂದ ನಾನು ಹೇಗೆ ಹೊರಗೆ ಬಂದೆ? ಮತ್ತೆ ಹೇಗೆ ಹಾಡಲು ಶುರು ಮಾಡಿದೆ ಎಂಬುದನ್ನು ನಾಲ್ಕು ಜನಕ್ಕೆ ಉಪಯೋಗ ಆಗಲಿ ಅಂತ ಹಂಚಿಕೊಂಡಿದ್ದೆ. ಆದರೆ, ಪ್ರಚಾರಕ್ಕಾಗಿ ಕೆಲವರು ಅದರ ಕ್ಲಿಪ್ ಮಾತ್ರ ಹಾಕಿದ್ದಾರೆ. ಪೂರ್ತಿಯಾಗಿ ಸಂದರ್ಶನ ನೋಡದೇ ಕೇವಲ ಚಿಕ್ಕ ತುಣುಕು ನೋಡಿಕೊಂಡು ನನಗೆ ಹಾಡಲು ಆಗುತ್ತಿಲ್ಲ, ಹಾಡುವುದು ನಿಲ್ಲಿಸಿದ್ದೇನೆ, ಗಂಟಲು ಹೊರಟು ಹೋಗಿದೆ ಅಂತ ತುಂಬ ಜನ ಹಬ್ಬಿಸಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ.
‘ಇದು ನನ್ನ ಮನಸ್ಸಿಗೆ ತುಂಬ ನೋವು ಕೊಡುತ್ತಿದೆ. ಎಲ್ಲಿ ಹೋದರೂ ನೀವು ಈಗ ಆರೋಗ್ಯವಾಗಿ ಇದ್ದೀರಾ? ಹಾಡುತ್ತಿದ್ದೀರಾ ಅಂತ ಕೇಳುತ್ತಾರೆ. ನಾನು ಈಗ ಮೊದಲಿಗಿಂತ ಹೆಚ್ಚು ಬ್ಯುಸಿ ಆಗಿದ್ದೇನೆ. ಮೊದಲಿಗಿಂತ ಹೆಚ್ಚು ಹಾಡುಗಳನ್ನು ಹಾಡುತ್ತಿದ್ದೇನೆ. ಇನ್ನೊಂದು ಮುಖ್ಯವಾದ ವಿಷಯವೆಂದರೆ ಏನೆಂದರೆ, ಶಾರ್ಟ್ ಹೇರ್ ಕಟ್. ಇದನ್ನು ಯಾಕೆ ಮಾಡಿಸಿದ್ದು ಎಂದರೆ, ನಾನು ಒಂದು ಹೊಸ ಧಾರಾವಾಹಿಯಲ್ಲಿ ಪಾತ್ರ ಒಪ್ಪಿಕೊಂಡಿದ್ದೇನೆ. ಆ ಪಾತ್ರಕ್ಕೆ ಇದೇ ರೀತಿಯ ಹೇರ್ ಕಟ್ ಮಾಡಿಸಿಕೊಳ್ಳಬೇಕು ಅಂತ ಚಾನೆಲ್ನವರು ಹೇಳಿದ್ದರಿಂದ ನಾನು ಹೀಗೆ ಮಾಡಿಸಿಕೊಳ್ಳಬೇಕಾಯಿತು’ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ | Kichcha Sudeepa: ʼಮುಸ್ಸಂಜೆ ಮಾತುʼ ಚಿತ್ರ ರಿಲೀಸ್ ಆಗಿ 17 ವರ್ಷ; ಅಮ್ಮನನ್ನು ಸುದೀಪ್ ನೆನೆದು ಭಾವುಕ
‘ನನಗೆ ಯಾವ ಆರೋಗ್ಯದ ಸಮಸ್ಯೆಯೂ ಇಲ್ಲ. ಅವರವರೇ ಏನೇನೋ ಊಹೋಪೋಹಗಳನ್ನು ಮಾಡಿಕೊಂಡು, ನನಗೆ ಕ್ಯಾನ್ಸರ್ ಬಂದಿದೆ ಎಂಬ ಹಂತಕ್ಕೆ ಮಾತನಾಡಿಬಿಟ್ಟಿದ್ದಾರೆ. ಇದರಿಂದ ನನಗಿಂತಲೂ ಹೆಚ್ಚಾಗಿ ನನ್ನ ತಂದೆ-ತಾಯಿಗೆ, ಸಂಬಂಧಿಕರಿಗೆ, ಸ್ನೇಹಿತರಿಗೆ ತುಂಬಾ ನೋವಾಗಿದೆ. ನಿಮ್ಮೆಲ್ಲರ ಆಶೀರ್ವಾದ ಸದಾ ನನ್ನ ಮೇಲಿರಲಿ. ನಾನು ದೇವರ ದಯೆಯಿಂದ ಗಟ್ಟಿಮುಟ್ಟಾಗಿ, ಆರೋಗ್ಯವಾಗಿದ್ದೇನೆ’ ಎಂದು ಅರ್ಚನಾ ಉಡುಪ ಅವರು ಸ್ಪಷ್ಟನೆ ನೀಡಿದ್ದಾರೆ.