ಕಾಂಗ್ರೆಸ್‌ನ ʼಲಕ್ಷ್ಮಣ ರೇಖೆʼ ಮೀರಿದ ಶಶಿ ತರೂರ್‌ಗೆ ಕೇಂದ್ರ ಸರ್ಕಾರದ ಮಹತ್ವದ ಜವಾಬ್ದಾರಿ; ಪಾಕ್ ವಿರುದ್ಧದ ರಾಜತಾಂತ್ರಿಕ ಸಮರಕ್ಕೆ ಕೈ ನಾಯಕನ ಸಾರಥ್ಯ!
ಭಾರತೀಯ ಸೇನೆ ಪಾಕಿಸ್ತಾನದ ಉಗ್ರರ ವಿರುದ್ಧ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದ್ದ ತಿರುವನಂತಪುರಂ ಸಂಸದ ಹಾಗೂ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರಿಗೆ ಇದೀಗ ಕೇಂದ್ರ ಸರ್ಕಾರ ಮಹತ್ವದ ಜವಾಬ್ದಾರಿ ನೀಡಲು ಮುಂದಾಗಿದೆ. ಮುಂದಿನ ವಾರ ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಬಹಿರಂಗಪಡಿಸಲು ವಿವಿಧ ದೇಶಗಳಿಗೆ ಭೇಟಿ ನೀಡಲಿರುವ ಸರ್ವಪಕ್ಷ ನಿಯೋಗದ ಸದಸ್ಯರನ್ನಾಗಿ ಶಶಿ ತರೂರ್ ಅವರನ್ನು ಹೆಸರಿಸಲಾಗಿದೆ.

ನರೇಂದ್ರ ಮೋದಿ ಮತ್ತು ಶಶಿ ತರೂರ್.

ಹೊಸದಿಲ್ಲಿ: ಭಾರತೀಯ ಸೇನೆ ಪಾಕಿಸ್ತಾನದ ಉಗ್ರರ ವಿರುದ್ಧ ನಡೆಸಿದ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದ್ದ ತಿರುವನಂತಪುರಂ ಸಂಸದ ಹಾಗೂ ಕಾಂಗ್ರೆಸ್ ನಾಯಕ ಶಶಿ ತರೂರ್ (Shashi Tharoor) ಅವರಿಗೆ ಇದೀಗ ಕೇಂದ್ರ ಸರ್ಕಾರ (Central Government) ಮಹತ್ವದ ಜವಾಬ್ದಾರಿ ನೀಡಲು ಮುಂದಾಗಿದೆ. ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡ ತರೂರ್ ವಿರುದ್ಧ ಅಸಮಾಧಾನಗೊಂಡಿರುವ ಕಾಂಗ್ರೆಸ್ ಅವರು ಲಕ್ಷ್ಮಣ ರೇಖೆಯನ್ನು ಮೀರಿದ್ದಾರೆ ಎಂದು ಹೇಳಿತ್ತು. ಇತ್ತ ಕೇಂದ್ರ ಸರ್ಕಾರ ಅವರ ಅನುಭವವನ್ನು ಬಳಸಿಕೊಳ್ಳಲು ಮುಂದಾಗಿದೆ. ಮುಂದಿನ ವಾರ ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಬಹಿರಂಗಪಡಿಸಲು ವಿವಿಧ ದೇಶಗಳಿಗೆ ಭೇಟಿ ನೀಡಲಿರುವ ಸರ್ವಪಕ್ಷ ನಿಯೋಗದ (All party delegation) ಸದಸ್ಯರನ್ನಾಗಿ ಶಶಿ ತರೂರ್ ಅವರನ್ನು ಹೆಸರಿಸಲಾಗಿದೆ. ಶಶಿ ತರೂರ್ ನೇತೃತ್ವದ ನಿಯೋಗವು ಮೊದಲು ಅಮೆರಿಕ ಮತ್ತು ನಂತರ ಯುರೋಪ್‌ಗೆ ಪ್ರಯಾಣ ಬೆಳೆಸಲಿದೆ ಎಂದು ಮೂಲಗಳು ತಿಳಿಸಿವೆ.
ತರೂರ್ ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿರುವುದರಿಂದ ಅಮೆರಿಕ ಮತ್ತು ಯುರೋಪ್‌ಗೆ ತೆರಳುವ ಬಹುಪಕ್ಷಗಳ ನಿಯೋಗವನ್ನು ಮುನ್ನಡೆಸಲು ಸರ್ಕಾರ ಅವರನ್ನು ಸಂಪರ್ಕಿಸಿದೆ. ತರೂರ್ ಜತೆಗೆ ಇತರ ವಿರೋಧ ಪಕ್ಷದ ಸಂಸದರು ಸಹ ನಿಯೋಗದ ಭಾಗವಾಗಲಿದ್ದಾರೆ ಎಂದು ತಿಳಿದು ಬಂದಿದೆ.
BIG BREAKING NEWS 🚨 Modi Govt will send MPs from various parties to different countries to brief them about India's Operation Sindoor.
— Times Algebra (@TimesAlgebraIND) May 16, 2025
Shashi Tharoor & Asaduddin Owaisi are likely among those deputed 🔥🔥
Each team will be accompanied by a MEA official.
India will expose… pic.twitter.com/Gw9b2OALJZ
ಈ ಸುದ್ದಿಯನ್ನೂ ಓದಿ: India Pak Ceasefire: ಅದರ ಚಾಳಿಯೇ ಅದು...... ಶಾಯರಿ ಮೂಲಕ ಪಾಕಿಸ್ತಾನದ ನೀಚ ಬುದ್ಧಿಯನ್ನು ಹೇಳಿದ ಶಶಿ ತರೂರ್
ಸರ್ಕಾರವು ಸಂಪರ್ಕಿಸಿದ ವಿರೋಧ ಪಕ್ಷದ ನಾಯಕರಲ್ಲಿ ಟಿಎಂಸಿ ಮುಖಂಡ ಸುದೀಪ್ ಬಂಡೋಪಾಧ್ಯಾಯ ಕೂಡ ಒಬ್ಬರು. ಆದಾಗ್ಯೂ ಬಂಡೋಪಾಧ್ಯಾಯ ತಮ್ಮ ಆರೋಗ್ಯ ಸಮಸ್ಯೆಯನ್ನು ಉಲ್ಲೇಖಿಸಿ ಸರ್ಕಾರದ ಪ್ರಸ್ತಾವವನ್ನು ತಿರಸ್ಕರಿಸಿದ್ದಾರೆ. ಅವರ ಹೊರತು ಬೇರೆ ಯಾವುದೇ ಟಿಎಂ ಸಂಸದರಿಗೆ ಸರ್ವಪಕ್ಷ ನಿಯೋಗದ ಭಾಗವಾಗಲು ಕರೆ ಬಂದಿಲ್ಲ. ಸಮಾಜವಾದಿ ಪಾರ್ಟಿಯು ನಿಯೋಗ ಸಭೆಗೆ ರಾಜೀವ್ ರಾಯ್ ಹೆಸರನ್ನು ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಭಯೋತ್ಪಾದನೆ ವಿರುದ್ಧ ಜಾಗತಿಕ ಮಟ್ಟದಲ್ಲಿ ಭಾರತದ ನಡೆಯನ್ನು ಸಮರ್ಥಿಸಿಕೊಳ್ಳಲು ವಿವಿಧ ಪಕ್ಷಗಳ 5-6 ಸಂಸದರನ್ನು ಒಳಗೊಂಡ ಬಹುಪಕ್ಷೀಯ ನಿಯೋಗಗಳನ್ನು ಕೇಂದ್ರ ರಚಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯೊಂದು ಹೇಳಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾಗತಿಕ ವೇದಿಕೆಗೆ ಕಳುಹಿಸುತ್ತಿರುವ ಸರ್ವಪಕ್ಷ ನಿಯೋಗವು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಬಹಿರಂಗಪಡಿಸುವ ರಾಜತಾಂತ್ರಿಕತೆಯ ಪ್ರಮುಖ ಭಾಗ ಎನಿಸಿಕೊಂಡಿದೆ. ಏ. 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪ್ರಾರಂಭಿಸಲಾದ ಆಪರೇಷನ್ ಸಿಂದೂರ್‌ನ ಯಶಸ್ಸಿನ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಸುಮಾರು 10 ದಿನಗಳ ಕಾಲ ಈ ಪ್ರವಾಸ ನಡೆಯಲಿದೆ.
ಸರ್ಕಾರವು ವಿರೋಧ ಪಕ್ಷಗಳು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿದ ಹಲವು ಸಂಸದರನ್ನು ನಿಯೋಗದ ಭಾಗವಾಗಲು ಕೇಳಿಕೊಂಡಿದೆ. ಹಲವು ಪಕ್ಷಗಳು ಈಗಾಗಲೇ ತಮ್ಮ ಪ್ರತಿನಿಧಿಗಳನ್ನು ಕಳುಹಿಸಲು ಅನುಮೋದನೆ ನೀಡಿವೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ವಿವಿಧ ನಿಯೋಗಗಳು 10 ದಿನಗಳಲ್ಲಿ ಬೇರೆ ಬೇರೆ ದೇಶಗಳಿಗೆ ಭೇಟಿ ನೀಡಲಿದೆ.