Oxidised Jewel Fashion: ಡಿಫರೆಂಟ್ ಲುಕ್ ನೀಡುವ ಆಕ್ಸಿಡೈಸ್ಡ್ ಜ್ಯುವೆಲರಿಗಳಿವು
Oxidised Jewel Fashion: ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತಿರುವ ನಾನಾ ಬಗೆಯ ಆಕ್ಸಿಡೈಸ್ಡ್ ಸಿಲ್ವರ್ ಜ್ಯುವೆಲರಿಗಳು ಇತ್ತೀಚೆಗೆ ಜನಪ್ರಿಯವಾಗತೊಡಗಿವೆ. ಎಲ್ಲಾ ವಯಸ್ಸಿನ ಮಹಿಳೆಯರಿಗೂ ಪ್ರಿಯವಾಗುತ್ತಿವೆ. ಮಿಕ್ಸ್ - ಮ್ಯಾಚ್ ಹಾಗೂ ದೇಸಿ ಲುಕ್ ನೀಡುವ ಈ ಜ್ಯುವೆಲರಿಗಳ ಕುರಿತಂತೆ ಇಲ್ಲಿದೆ ವಿವರ.

ಚಿತ್ರಕೃಪೆ: ಪಿಕ್ಸೆಲ್

- ಶೀಲಾ ಸಿ. ಶೆಟ್ಟಿ, ಬೆಂಗಳೂರು
ಆಕ್ಸಿಡೈಸ್ಡ್ ಸಿಲ್ವರ್ ಜ್ಯುವೆಲರಿಗಳು ಇಂದು ಎಲ್ಲಾ ವಯಸ್ಸಿನ ಮಾನಿನಿಯರನ್ನು ಆವರಿಸಿಕೊಂಡಿವೆ. ಹೌದು, ಧರಿಸಿದಾಗ ಮಿನುಗದ ಈ ಜ್ಯುವೆಲರಿಗಳು, ಡಲ್ ಫಿನಿಶಿಂಗ್ ಹೊಂದಿರುತ್ತವೆ. ಇಂತಹ ಜ್ಯುವೆಲರಿ ಇಷ್ಟಪಡುವವರು ಇತ್ತೀಚೆಗೆ ಹೆಚ್ಚಾಗಿದ್ದಾರೆ. ಕನಿಷ್ಠ ಪಕ್ಷ ಒಂದಾದರೂ ಇಂತಹ ಆಭರಣಗಳನ್ನು ಹೊಂದಿರುವ ಯುವತಿಯರು ಕಾಣ ಸಿಗುತ್ತಾರೆ. ಆ ಮಟ್ಟಿಗೆ ಆಕ್ಸಿಡೈಸ್ಡ್ ಜ್ಯುವೆಲರಿಗಳು (Oxidised Jewel Fashion) ತಮ್ಮ ಜಾದೂ ಮೂಡಿಸಿವೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರಾಜಿ. ಅವರ ಪ್ರಕಾರ, ಬ್ಲಾಕ್ -ವೈಟ್ ಮೆಟಲ್‌ನ ಆಕ್ಸಿಡೈಸ್ಡ್ ಜ್ಯುವೆಲರಿಗಳು ಇಂದು ಆಭರಣ ಲೋಕದಲ್ಲಿ ಟ್ರೆಂಡಿಯಾಗಿವೆ.

ದೇಸಿ ಲುಕ್‌ಗೆ ಸಾಥ್
ಧರಿಸುವ ಉಡುಗೆಗೆ ಬಂಗಾರದ ಆಭರಣ ಬೇಡವೆನ್ನುವವರು, ಯಾವ ಕಾಲಕ್ಕೂ ಸಲ್ಲುವ ಹ್ಯಾಂಡ್ ಆಕ್ಸಿಡೈಸಿಂಗ್ ಆಭರಣಗಳನ್ನು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಇಂಡೋ-ವೆಸ್ಟರ್ನ್ ಹಾಗೂ ಮಿಕ್ಸ್ ಮ್ಯಾಚ್ ದೇಸಿ ಲುಕ್ ಬಯಸುವ ಕಾರ್ಪೋರೇಟ್ ಯುವತಿಯರು ಕೂಡ ಧರಿಸುತ್ತಿದ್ದಾರೆ. ಇನ್ನು, ಹೆಚ್ಚು ಬೆಲೆ ಕೊಟ್ಟು ಕೊಂಡು ಕೊಳ್ಳಲು ಇಷ್ಟಪಡದವರು ಇಂತಹ ಜ್ಯುವೆಲರಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಜ್ಯುವೆಲ್ ಪ್ರೇಮಿ ರೀಟಾ ಹಾಗೂ ರಕ್ಷಾ.

ವೈವಿಧ್ಯಮಯ ವಿನ್ಯಾಸ
ಈ ಜ್ಯುವೆಲ್‌ಗಳ ಒಂದೊಂದು ವಿನ್ಯಾಸವೂ ಒಂದೊಂದು ಡಿಸೈನ್ ಹೊಂದಿರುತ್ತವೆ. ಪ್ರತಿ ಜ್ಯುವೆಲರಿಗಳು ಕಲಾತ್ಮಕ ವಿನ್ಯಾಸ ಹೊಂದಿರುತ್ತವೆ. ಇವುಗಳಲ್ಲಿ ಸಿಲ್ವರ್ ಸ್ಟಡ್ಸ್, ಥೀಮ್ ಇಯರಿಂಗ್ಸ್, ಹಾರ, ನೆಕ್ಲೇಸ್, ಫಿಂಗರ್‌ರಿಂಗ್ಸ್, ಹ್ಯಾಂಗಿಂಗ್ಸ್ ಮತ್ತು ಬಗೆಬಗೆಯ ಜುಮಕಿಗಳು ಬಹು ಬೇಡಿಕೆಯ ಜ್ಯುವೆಲರಿಗಳೆನ್ನಬಹುದು. ಒಂದಕ್ಕಿಂತ ಒಂದು ಆಕರ್ಷಕವಾಗಿ ಕಾಣಿಸುತ್ತವೆ ಎನ್ನುತ್ತಾರೆ ಮಾರಾಟಗಾರರು.

ಫಂಕಿ ವಿನ್ಯಾಸದವು ಲಭ್ಯ
ಚಿತ್ರ-ವಿಚಿತ್ರ ಜೆಮೆಟ್ರಿಕಲ್ ಡಿಸೈನ್‌ನವು, ಟ್ರಾಪಿಕಲ್ ಹಾಗೂ ಫ್ಲೋರಲ್, ಅನಿಮಲ್, ಬರ್ಡ್ಸ್ ಹೀಗೆ ಊಹೆಗೂ ನಿಲುಕದ ಡಿಸೈನ್‌ನ ಆಕ್ಸಿಡೈಸ್ಡ್ ಆಭರಣಗಳು ಈ ಸೀಸನ್‌ನಲ್ಲಿ ಫಂಕಿ ವಿನ್ಯಾಸದಲ್ಲಿ ದೊರಕುತ್ತಿವೆ. ಇವುಗಳ ಬೆಲೆ ನೂರು ರೂಪಾಯಿಗಳಿಂದಿಡಿದು ಸಾವಿರದವರೆಗೂ ಇದೆ. ಕೆಲವಕ್ಕಂತೂ ಬ್ರಾಂಡ್ ಟ್ಯಾಗ್ ಆಧಾರದ ಮೇಲೆ ಇನ್ನು ಹೆಚ್ಚಿನ ಬೆಲೆ ಇದೆ ಎನ್ನುತ್ತಾರೆ ಕೃತಕ ಜ್ಯುವೆಲರಿ ಅಂಗಡಿಯ ಮಾಲೀಕರು.
ಈ ಸುದ್ದಿಯನ್ನೂ ಓದಿ | Sling Bag Fashion: ಯುವತಿಯರ ಟ್ರಾವೆಲ್ ಫ್ಯಾಷನ್‌ಗೆ ಸಾಥ್ ನೀಡುವ ಶೋಲ್ಡರ್ ಸ್ಲಿಂಗ್ ಬ್ಯಾಗ್
ಆಕ್ಸಿಡೈಸ್ಡ್ ಆಭರಣಗಳ ಪ್ರಿಯರ ಗಮನಕ್ಕೆ
- ಫಿನಿಶಿಂಗ್ ಚೆನ್ನಾಗಿರುವುದನ್ನು ನೋಡಿ ಖರೀದಿಸಿ.
- ಭಾರವಿರುವುದನ್ನು ಖರೀದಿಸಬೇಡಿ.
- ನಿಮ್ಮ ಸಾಕಷ್ಟು ಉಡುಗೆಗಳಿಗೆ ಮ್ಯಾಚ್ ಆಗುವಂತವನ್ನು ಕೊಳ್ಳಿ.
- ತೆಗೆದಿಡುವಾಗ ಇತರೆ ಜ್ಯುವೆಲರಿಗಳೊಂದಿಗೆ ಇರಿಸಬೇಡಿ.
- ಟ್ರೆಂಡಿ ಡಿಸೈನ್ಸ್ ನಯಾ ಲುಕ್ ನೀಡುತ್ತದೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)