ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Axiom Space Mission: ನಾಳೆ ಬಾಹ್ಯಾಕಾಶಕ್ಕೆ ಹಾರಲಿದ್ದಾರೆ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲ

ಹಲವಾರು ವಿಘ್ನಗಳ ಬಳಿಕ ಇದೀಗ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲ ಮತ್ತು ಇತರ ಮೂವರು ಜೂನ್ 25ರಂದು ನಾಸಾದ ಕೆನಡಿ ಸ್ಪೇಸ್ ಸೆಂಟರ್‌ನಲ್ಲಿರುವ ಲಾಂಚ್ ಕಾಂಪ್ಲೆಕ್ಸ್ 39ಎನಿಂದ ಬೆಳಗ್ಗೆ 2.31ಕ್ಕೆ ಆಕ್ಸಿಯಂ ಮಿಷನ್‌ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಭಾರತೀಯ  ಗಗನಯಾತ್ರಿಯೊಂದಿಗೆ ನಾಳೆ ಆಕ್ಸಿಯಂ ಮಿಷನ್ ಉಡಾವಣೆ

ವಾಷಿಂಗ್ಟನ್‌: ಭಾರತೀಯ ಗಗನಯಾತ್ರಿ (Indian astronaut) ಶುಭಾಂಶು ಶುಕ್ಲ ( Subhanshu Shukla) ಅವರನ್ನೊಳಗೊಂಡ ನಾಲ್ವರ ತಂಡ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುವ ಸಮಯ ಕೊನೆಗೂ ಹತ್ತಿರ ಬಂದಿದೆ. ಹಲವಾರು ವಿಘ್ನಗಳ ಬಳಿಕ ಇದೀಗ ಶುಭಾಂಶು ಶುಕ್ಲ ಮತ್ತು ಇತರ ಮೂವರು ಜೂನ್ 25ರಂದು ನಾಸಾದ (NASA) ಕೆನಡಿ ಸ್ಪೇಸ್ ಸೆಂಟರ್‌ನಲ್ಲಿರುವ (NASA’s Kennedy Space Center) ಲಾಂಚ್ ಕಾಂಪ್ಲೆಕ್ಸ್ 39ಎನಿಂದ ಬೆಳಗ್ಗೆ 2.31ಕ್ಕೆ ಆಕ್ಸಿಯಂ ಮಿಷನ್ (Axiom Space Mission)ನಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಹಲವು ವಿಳಂಬಗಳ ಬಳಿಕ ನಾಸಾ, ಆಕ್ಸಿಯಂ ಸ್ಪೇಸ್ ಮತ್ತು ಸ್ಪೇಸ್‌ಎಕ್ಸ್‌ನ ಬಹು ನಿರೀಕ್ಷಿತ ಯೋಜನೆಯಾದ ಆಕ್ಸಿಯಂ ಮಿಷನ್ 4 (ಆಕ್ಸ್-4) ಅನ್ನು ಬುಧವಾರ ಮುಂಜಾನೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಉಡಾವಣೆ ಮಾಡಲು ಸಜ್ಜಾಗಿವೆ.

ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಸ್ಪೇಸ್ ಸೆಂಟರ್‌ನಲ್ಲಿರುವ ಲಾಂಚ್ ಕಾಂಪ್ಲೆಕ್ಸ್ 39ಎಯಿಂದ ಖಾಸಗಿ ಗಗನಯಾತ್ರಿ ಮಿಷನ್ ಬುಧವಾರ ಮುಂಜಾನೆ 2.31ಕ್ಕೆ ಉಡಾವಣೆಯಾಗಲಿದೆ. ಇದರಲ್ಲಿ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲ ಸೇರಿದಂತೆ ಒಟ್ಟು ನಾಲ್ಕು ಮಂದಿ ಹೊಸ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಕಕ್ಷೆಯಲ್ಲಿರುವ ಪ್ರಯೋಗಾಲಯಕ್ಕೆ ಪ್ರಯಾಣಿಸಲಿದ್ದಾರೆ.

ಜೂನ್ 26ರಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಉದ್ದೇಶಿತ ಸ್ಥಳ ತಲುಪುವ ನಿರೀಕ್ಷೆ ಇದೆ. ನಾಸಾದ ವಾಣಿಜ್ಯ ಬಾಹ್ಯಾಕಾಶ ಹಾರಾಟ ಯೋಜನೆಗಳಲ್ಲಿ ಇದು ನಾಲ್ಕನೇ ಖಾಸಗಿ ಹಾರಾಟವಾಗಿದೆ. ಖಾಸಗಿ ಗಗನಯಾತ್ರಿ ಮಿಷನ್ ವೇಳಾಪಟ್ಟಿ ಮತ್ತು ಇತರ ತಾಂತ್ರಿಕ ಕಾರಣಗಳಿಂದಾಗಿ ಹಲವಾರು ಬಾರಿ ಮುಂದೂಡಲಾಗಿತ್ತು. ಉಡಾವಣೆಯ ವೇಳೆ ಹೆಚ್ಚಿನ ಮಾಹಿತಿಗಳನ್ನು ಬಿಡುಗಡೆ ಮಾಡುವುದಾಗಿ ನಾಸಾ ಹೇಳಿದೆ.

ವಿಳಂಬಕ್ಕೆ ಕಾರಣ

ಆಕ್ಸಿಯಂ ಮಿಷನ್ ವಿಳಂಬಕ್ಕೆ ಮೊದಲ ಹವಾಮಾನ, ಅನಂತರ ರಾಕೆಟ್‌ನಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ವಿಳಂಬವಾಗಿತ್ತು. ಬಳಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ದುರಸ್ತಿ ಕಾರಣದಿಂದ ಉಡಾವಣೆಯನ್ನು ಮುಂದೂಡಲಾಗಿತ್ತು.

ಈ ಮೊದಲು ಜೂನ್ 11ರಂದು ಉಡಾವಣೆಗೆ ದಿನ ನಿಗದಿಪಡಿಸಲಾಗಿತ್ತು. ಬಳಿಕ ಫಾಲ್ಕನ್ 9 ರಾಕೆಟ್‌ನ ಬೂಸ್ಟರ್‌ನಲ್ಲಿ ದ್ರವ ಆಮ್ಲಜನಕ ಸೋರಿಕೆಯಾಗಿದ್ದರಿಂದ ಕೊನೆಯ ಕ್ಷಣದಲ್ಲಿ ಉಡಾವಣೆ ರದ್ದುಗೊಂಡಿತ್ತು. ಬಳಿಕ ಸ್ಪೇಸ್‌ಎಕ್ಸ್ ಈ ಸಮಸ್ಯೆಯನ್ನು ಪರಿಹರಿಸಿತ್ತು. ಅನಂತರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ರಷ್ಯಾದ ಕಕ್ಷೆಯ ವಿಭಾಗದ ಪ್ರಮುಖ ಭಾಗವಾದ ಜ್ವೆಜ್ಡಾ ಮಾಡ್ಯೂಲ್‌ನ ದುರಸ್ತಿ ಕಾರಣದಿಂದ ವಿಳಂಬವಾಯಿತು.

nasa1

ಬಾಹ್ಯಾಕಾಶ ಕೇಂದ್ರವಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಐದು ಬಾಹ್ಯಾಕಾಶ ಸಂಸ್ಥೆಗಳು ಜಂಟಿಯಾಗಿ ನಿರ್ವಹಿಸುತ್ತವೆ, ನಾಸಾ (ಅಮೆರಿಕ), ರೋಸ್ಕೋಸ್ಮೋಸ್ (ರಷ್ಯಾ), ಇಎಸ್ಎ (ಯುರೋಪ್), ಜೆಕ್ಸ (ಜಪಾನ್) ಮತ್ತು ಸಿಎಸ್‌ಎ (ಕೆನಡಾ). ಪ್ರತಿಯೊಂದು ಸಂಸ್ಥೆಯು ಇಲ್ಲಿಗೆ ಕಳುಹಿಸಿರುವ ತನ್ನ ಹಾರ್ಡ್‌ವೇರ್ ತಾನೇ ನಿರ್ವಹಿಸುತ್ತದೆ ಮತ್ತು ಅದರ ನಿರ್ವಹಣೆ ಜವಾಬ್ದಾರಿಯನ್ನು ಹೊಂದಿರುತ್ತದೆ.

ಇದನ್ನೂ ಓದಿ: Ahmedabad Plane Crash: ಅಹಮದಾಬಾದ್ ವಿಮಾನ ದುರಂತ; ಸಮಗ್ರ ಪರಿಶೀಲನೆಗೆ ವಿಶೇಷ ತನಿಖಾ ಬ್ಯೂರೋ ರಚನೆ

ಕಳೆದ ವಾರ ರಷ್ಯಾದ ಗಗನಯಾತ್ರಿಗಳು ಜ್ವೆಜ್ಡಾ ಮಾಡ್ಯೂಲ್‌ನಲ್ಲಿ ಗಾಳಿಯ ಸೋರಿಕೆಯನ್ನು ಪತ್ತೆಹಚ್ಚಿದರು. ಇದನ್ನು ತಕ್ಷಣವೇ ಮುಚ್ಚಲಾಯಿತು. ಕಳೆದ 25 ವರ್ಷಗಳಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೂಕ್ಷ್ಮ ಗುರುತ್ವಾಕರ್ಷಣೆಯ ಪ್ರಯೋಗಾಲಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಸುರಕ್ಷತೆಯೇ ಮೊದಲ ಆದ್ಯತೆಯಾಗಿದೆ. ಇದಕ್ಕಾಗಿ ಪಾಲುದಾರ ಸಂಸ್ಥೆಗಳು ಬಾಹ್ಯಾಕಾಶ ನಿಲ್ದಾಣದ ದೀರ್ಘಕಾಲೀನ ವಾಸಯೋಗ್ಯತೆ ಮತ್ತು ಕಾರ್ಯವನ್ನು ಖಚಿತಪಡಿಸಿಕೊಳ್ಳಲು ಅದರ ವ್ಯವಸ್ಥೆಗಳನ್ನು ಮೇಲ್ವಿಚಾರಣೆ ಮಾಡುವುದು, ದುರಸ್ತಿ ಮಾಡುವುದು ಮತ್ತು ನವೀಕರಿಸುವುದನ್ನು ಆಗಾಗ್ಗೆ ಮಾಡುತ್ತಲೇ ಇರುತ್ತವೆ.