Monisha Unni: ಬಾಲ್ಯದಲ್ಲೇ ಚಿತ್ರರಂಗಕ್ಕೆ ಎಂಟ್ರಿ...16ನೇ ವಯಸ್ಸಿನಲ್ಲಿ ರಾಷ್ಟ್ರ ಪ್ರಶಸ್ತಿ...ಕೇವಲ 21 ವಯಸ್ಸಿನಲ್ಲಿ ದುರಂತ ಅಂತ್ಯಕಂಡ ಈ ನಟಿ ಯಾರು?
ಕನ್ನಡವೂ ಸೇರಿದಂತೆ ಸಾಕಷ್ಟು ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದ ನಟಿ ಮೊನಿಷಾ ಉಣ್ಣಿ ತಮಿಳು, ತೆಲುಗು ಸಿನಿಮಾರಂಗಗಳಲ್ಲೂ ಮಿಂಚಿದ್ದರು. ಇವರು ಮೊಟ್ಟಮೊದಲ ಸಿನಿಮಾದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಕೂಡ ಪಡೆದುಕೊಂಡಿದ್ದರು. ಆದರೆ ಕೇವಲ 21 ವಯಸ್ಸಿನಲ್ಲಿಯೇ ಅವರು ದುರಂತ ಅಂತ್ಯ ಕಂಡರು.

Monisha Unni


ಕೆಲವೊಮ್ಮೆ ಬದುಕಿನಲ್ಲಿ ಎಷ್ಟೇ ಸಕಸ್ಸ್ ಕಂಡರೂ ವಿಧಿ ಅನ್ನೋದು ಬದುಕಿಗೆ ಅಂತ್ಯವನ್ನೇ ತಂದು ಬಿಡುತ್ತದೆ. ಇನ್ನೂ ಬಾಳಿ ಬದುಕಬೇಕಾಗಿದ್ದ ನಟಿ ಮೊನಿಷಾ ಉಣ್ಣಿ ಕೇವಲ 21ನೇ ವಯಸ್ಸಿಗೆ ನಿಧನ ಹೊಂದಿದ್ದರು. ಅಷ್ಟು ಚಿಕ್ಕ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ನಟಿಯ ಸಾವಿನ ಸುದ್ದಿ ಇಡೀ ಚಿತ್ರ ರಂಗವನ್ನೇ ಬೆಚ್ಚಿಬೀಳಿಸಿತ್ತು. ಇಂದಿಗೂ ಅವರ ಅಭಿಮಾನಿಗಳಿಗೆ ಈ ಆಘಾತದಿಂದ ಹೊರಬರಲು ಸಾಧ್ಯವಾಗಿಲ್ಲ.

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಖ್ಯಾತಿ ಪಡೆದ ನಟಿ ಮೋನಿಷಾ ಉಣ್ಣಿ ಕೇರಳ ಮೂಲದವರು. ಆಕೆ ಪ್ರಖ್ಯಾತ ಮೋಹಿನಿಯಾಟಂ ಕಲಾವಿದರಾದ ಶ್ರೀದೇವಿ ಉಣ್ಣಿ ಮತ್ತು ನಾರಾಯಣ ಉಣ್ಣಿ ದಂಪತಿ ಪುತ್ರಿ. ಬಾಲ್ಯದಲ್ಲಿಯೇ ನೃತ್ಯ ಮತ್ತು ಕಲೆಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಮೋನಿಷಾ ಕೇವಲ 5ನೇ ವಯಸ್ಸಿನಲ್ಲೇ ಡ್ಯಾನ್ಸ್ ,ಅಭಿನಯದಲ್ಲಿ ಪರಿಣಿತಿ ಹೊಂದಿದ್ದರು.

ಕೇವಲ 14ನೇ ವಯಸ್ಸಿನಲ್ಲಿ ʼಭಾವಯ' ಕಿರುಚಿತ್ರದಲ್ಲಿ ನಟಿಸಿ ಖ್ಯಾತಿ ಪಡೆದಿದ್ದರು. ಮಲಯಾಳಂನಲ್ಲಿ ನಟಿಸಿದ ಮೊಟ್ಟಮೊದಲ ಸಿನಿಮಾ 'ಪ್ರಥಮಂ'ನ ಅಮೋಘ ಅಭಿನಯಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರ ಚಲನಚಿತ್ರ ಪ್ರಸಸ್ತಿ ಕೂಡ ಪಡೆದಿದ್ದರು. ನಟಿ ಮೊನಿಷಾಗೆ ಆಗ ಕೇವಲ 16 ವರ್ಷ ವಯಸ್ಸು. ಇವರು ಕನ್ನಡದ 'ಚಿರಂಜೀವಿ ಸುಧಾಕರ್' ಚಿತ್ರದಲ್ಲಿ ನಟ ರಾಘವೇಂದ್ರ ರಾಜ್ ಕುಮಾರ್ ಜೋಡಿಯಾಗಿ ನಟಿಸಿದ್ದರು.

6 ವರ್ಷಗಳಲ್ಲಿ ಮೋನಿಷಾ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ತಮಿಳಿನಲ್ಲಿ, 'ಮೆಸೇಜ್ ಆಫ್ ಫ್ಲವರ್ಸ್', 'ದ್ರಾವಿಡ್'ನಂತಹ ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅವರ ಅಭಿನಯಕ್ಕೆ ಪ್ರಿಯದರ್ಶನ್, ಕಮಲ್, ಹರಿಹರಣ್ ಸೇರಿ ಅನೇಕ ಪ್ರಮುಖ ನಿರ್ದೇಶಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದರು.

ಇನ್ನೇನು ಸ್ಟಾರ್ ನಟಿಯಾಗಿ ಬೆಳೆಯುತ್ತಿದ್ದಾರೆ ಎನ್ನುವ ಸಂದರ್ಭದಲ್ಲೇ ಅವರ ಪಾಲಿಗೆ ಅನಿರೀಕ್ಷಿತ ಸಾವು ಬಂದು ಬಿಟ್ಟಿತ್ತು. 1992ರ ಡಿಸೆಂಬರ್ 5ರಂದು ಮೋನಿಷಾ ಮತ್ತು ಅವರ ತಾಯಿ ಪ್ರಯಾಣಿಸುತ್ತಿದ್ದ ಕಾರಿಗೆ ಕೇರಳ ಸರ್ಕಾರಿ ಬಸ್ಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತ ದಲ್ಲಿ ಮೋನಿಷಾ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ದುರ್ಘಟನೆ ದಕ್ಷಿಣ ಭಾರತೀಯ ಚಿತ್ರರಂಗವನ್ನು ಬೆಚ್ಚಿಬೀಳುವಂತೆ ಮಾಡಿತ್ತು.