Drug Smuggling: ಚೂಡಿದಾರ್ ಡ್ರೆಸ್ ಪೀಸ್ಗಳಲ್ಲಿ 10 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ!; ಬೆಂಗಳೂರಲ್ಲಿ ನೈಜೀರಿಯಾ ಯುವತಿ ಅರೆಸ್ಟ್
Drug Smuggling: ಬೆಂಗಳೂರಿನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ನೈಜೀರಿಯಾ ಮೂಲದ ಯುವತಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ 5.325 ಕೆಜಿ ಮೌಲ್ಯದ ಎಂಡಿಎಂಎ ಕ್ರಿಸ್ಟೆಲ್, ಒಂದು ಆ್ಯಪಲ್ ಮೊಬೈಲ್ ಹಾಗೂ 11 ಹೊಸ ಚೂಡಿದಾರ್ ಡ್ರೆಸ್ ಪೀಸ್ಗಳನ್ನು ವಶಕ್ಕೆ ಪಡೆಯಲಾಗಿದೆ.


ಬೆಂಗಳೂರು: ನಗರದಲ್ಲಿ ಬರೋಬ್ಬರಿ 10 ಕೋಟಿ ಮೌಲ್ಯದ ಎಂಡಿಎಂಎ ಕ್ರಿಸ್ಟಲ್ ಡ್ರಗ್ಸ್ ಜಪ್ತಿ ಮಾಡಲಾಗಿದ್ದು, ಇದಕ್ಕೆ ಸಂಬಂಧಿಸಿ ನೈಜೀರಿಯಾ ಮೂಲದ ಮಹಿಳೆಯನ್ನು ಬಂಧಿಸಲಾಗಿದೆ. ದೆಹಲಿಯಿಂದ ಬಸ್ ಮೂಲಕ ಬೆಂಗಳೂರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ವಿದೇಶಿ ಯುವತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಯುವತಿಯಿಂದ 10 ಕೋಟಿ ಮೌಲ್ಯದ ಎಂಡಿಎಂಎ ಕ್ರಿಸ್ಟಲ್ ಡ್ರಗ್ಸ್ ಜಪ್ತಿ ಮಾಡಿಕೊಳ್ಳಲಾಗಿದೆ. ಪೊಲೀಸರ ಕಣ್ತಪ್ಪಿಸಲು ಡ್ರಗ್ಸ್ ಅನ್ನು ಪ್ಯಾಕ್ ಮಾಡಿದ್ದ ಚೂಡಿದಾರ್ ಡ್ರೆಸ್ ಪೀಸ್ಗಳಲ್ಲಿಟ್ಟು ನಗರಕ್ಕೆ ತಂದಿದ್ದಳು ಎಂದು ತಿಳಿದುಬಂದಿದೆ.
ನೈಜೀರಿಯಾ ಮೂಲದ ಪ್ರಿನ್ಸೆಸ್ (25) ಬಂಧಿತೆ. ಆರೋಪಿಯಿಂದ 5.325 ಕೆಜಿ ಮೌಲ್ಯದ ಎಂಡಿಎಂಎ ಕ್ರಿಸ್ಟೆಲ್, ಒಂದು ಆ್ಯಪಲ್ ಮೊಬೈಲ್ ಹಾಗೂ 11 ಹೊಸ ಚೂಡಿದಾರ್ ಡ್ರೆಸ್ ಪೀಸ್ಗಳನ್ನು ವಶಕ್ಕೆ ಪಡೆಯಲಾಗಿದೆ. ಜಪ್ತಿಯಾದ ಎಂಡಿಎಂಎ ಮೌಲ್ಯ ಸುಮಾರು 10 ಕೋಟಿ ರೂ ಆಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ವಿದೇಶಿ ಯುವತಿ ತಲೆಮರೆಸಿಕೊಂಡಿದ್ದು, ಆಕೆಯ ಬಂಧನಕ್ಕಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಬಂಧಿತ ಆರೋಪಿ ವಿರುದ್ಧ ಎನ್ಡಿಪಿಎಸ್ ಹಾಗೂ ವಿದೇಶಿ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ಧಾರೆ.
ಬಂಧಿತ ಯುವತಿ ವಿದ್ಯಾರ್ಥಿ ವೀಸಾದಡಿ 2021ರಲ್ಲಿ ದೆಹಲಿಗೆ ಬಂದು ನೆಲೆಸಿದ್ದಳು. ತೆಲಂಗಾಣದ ಚೈತನ್ಯ ಡೀಮ್ಡ್ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಳು. ಆದರೆ ಕಾಲೇಜಿಗೆ ಹೋಗದೆ ದೆಹಲಿಯಲ್ಲಿ ವಾಸವಾಗಿದ್ದಳು. 2022ರಲ್ಲಿ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿದ್ದಳು. ಜೀವನಕ್ಕಾಗಿ ಜಡೆ ಹಾಕುವ ಹಾಗೂ ಪೆಡಿಕ್ಯೂರ್ ಆಗಿ ಕೆಲಸ ಮಾಡುತ್ತಿದ್ದಳು. ಈಕೆಗೆ ನೈಜೀರಿಯಾದ ಮತ್ತೊಬ್ಬ ಮಹಿಳೆ ಪರಿಚಯವಾಗಿದೆ. ಹೇಳಿದ ಜಾಗಕ್ಕೆ ಬಸ್ನಲ್ಲಿ ತೆರಳಿ ಡ್ರಗ್ಸ್ ತಲುಪಿಸಿದರೆ ಕೈ ತುಂಬಾ ಹಣ ನೀಡುವುದಾಗಿ ಆಕೆ ಆಮಿಷವೊಡ್ಡಿದ್ದಳು. ಹಣದಾಸೆಗಾಗಿ ಅಪರಿಚಿತ ಮಹಿಳೆ ಸೂಚನೆಯಂತೆ ಚೂಡಿದಾರ್ ಪೀಸ್ಗಳಲ್ಲಿ ಡ್ರಗ್ಸ್ ಇಟ್ಟುಕೊಂಡು ನಗರದ ರಾಜಾನುಕುಂಟೆ ಬಳಿ ಬರುವಾಗ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ.
ಈ ಸುದ್ದಿಯನ್ನೂ ಓದಿ | Bike Taxi Ban: ಓಲಾ, ಉಬರ್, ರ್ಯಾಪಿಡೋಗೆ ಶಾಕ್; ಬೈಕ್ ಟ್ಯಾಕ್ಸಿ ಸೇವೆ ನಿರ್ಬಂಧ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ