ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dodda Alada Mara: ಬೆಂಗಳೂರಿನಲ್ಲಿದೆ ದೇಶದ 4ನೇ ದೊಡ್ಡ ಆಲದ ಮರ; ಪ್ರಕೃತಿಪ್ರಿಯರು ಭೇಟಿ ನೀಡಲೇಬೇಕಾದ ಜಾಗ ಇದು

Big Banyan Tree: ಪ್ರಕೃತಿ ಸಮತೋಲನಕ್ಕೆ ಆಲದ ಮರಗಳ ಕೊಡುಗೆ ಗಣನೀಯ. ವಿಶಾಲವಾಗಿ ಹರಡಿ ಬೆಳೆಯುವ ಇವು ಅನೇಕ ಜೀವ ವೈವಿಧ್ಯಗಳಿಗೆ ಆಶ್ರಯತಾಣ ಎನಿಸಿಕೊಳ್ಳುತ್ತವೆ. ಬೆಂಗಳೂರಿನಲ್ಲಿ ಅಂತಹ ಬೃಹತ್‌ ಗ್ರಾತದ ಆಲದ ಮರವೊಂದಿದೆ. ಬರೋಬ್ಬರಿ 3 ಎಕ್ರೆಯಲ್ಲಿ ಹರಡಿರುವ ಈ 1 ಮರ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದು ಎನಿಸಿಕೊಂಡಿದೆ. ಇಲ್ಲಿಗೆ ತೆರಳುವುದು ಹೇಗೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿದೆ ದೇಶದ 4ನೇ ದೊಡ್ಡ ಆಲದ ಮರ

ಬೆಂಗಳೂರಿನ ದೊಡ್ಡ ಆಲದ ಮರ.

Profile Ramesh B Apr 17, 2025 1:53 PM

ಬೆಂಗಳೂರು: ತನ್ನ ಬಿಳಲನ್ನು ಬಿಟ್ಟು ಅದರಲ್ಲಿ ಹೊಸ ಚಿಗುರನ್ನು ಸೃಷ್ಟಿಸಿ ಎತ್ತರದ ಬದಲು ಅಗಲವಾಗಿ ಬೆಳೆಯುತ್ತ ಹೋಗುವುದು ಆಲದ ಮರದ (Banyan Tree) ವೈಶಿಷ್ಟ್ಯ. ಕೆಲವೊಮ್ಮೆ ಈ ಮರ ಎಕ್ರೆಗಟ್ಟಲೆ ವ್ಯಾಪಿಸುವುದೂ ಉಂಟು. ಭಾರತ ಏಕೆ ವಿಶ್ವದಲ್ಲೆ ಅತೀ ದೊಡ್ಡ ಆಲದ ಮರ ಎನ್ನುವ ಖ್ಯಾತಿ ಆಂಧ್ರ ಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಪುಟ್ಟ ಗ್ರಾಮ ಕದಿರಿಯಲ್ಲಿನ ತಿಮ್ಮಮ್ಮ ಮರ‍್ರಿಮಾನು (ತಿಮ್ಮಮ್ಮ ಆಲದ ಮರ)ವಿಗಿದೆ. ಇದೊಂದೇ ಮರ ಸುಮಾರು 5 ಎಕ್ರೆಯಲ್ಲಿ ವ್ಯಾಪಿಸಿಕೊಂಡಿದೆ. ಆಂಧ್ರ ಅಷ್ಟೇ ಏಕೆ ನಮ್ಮ ಕರುನಾಡಿನಲ್ಲಿಯೂ ಇಂತಹ ಮಹಾವೃಕ್ಷವೊಂದಿದೆ. ಅದುವೇ ಬೆಂಗಳೂರಿನಲ್ಲಿರುವ ದೊಡ್ಡ ಆಲದ ಮರ (Dodda Alada Mara). ಹೆಸರೇ ಹೇಳುವಂತೆ ಇದರ ಗಾತ್ರ ಹಿರಿದಾಗಿದ್ದು, ದೇಶದಲ್ಲೇ 4ನೇ ಅತೀ ದೊಡ್ಡ ಆಲದ ಮರ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ.

ಹೌದು, ಬೆಂಗಳೂರಿನ ಹೊರ ವಲಯದಲ್ಲಿರುವ ದೊಡ್ಡ ಆಲದ ಮರ ಪ್ರವಾಸಿಗರ ಆಕರ್ಷಣೆ ಕೇಂದ್ರಬಿಂದು ಎನಿಸಿಕೊಂಡಿದೆ. ಇದು ಬೆಂಗಳೂರಿನಿಂದ 28 ಕಿ.ಮೀ. ದೂರದಲ್ಲಿರುವ ಕೇತೋಹಳ್ಳಿಯಲ್ಲಿದೆ.

ಈ ಸುದ್ದಿಯನ್ನೂ ಓದಿ: Thimmamma Marrimanu: ಬರೋಬ್ಬರಿ 5 ಎಕ್ರೆಯಲ್ಲಿ ಹರಡಿಕೊಂಡಿದೆ ಈ ಮರ; ಮಹಾವೃಕ್ಷದ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ ಮಾಹಿತಿ ಇಲ್ಲಿದೆ

Dodda Alada Mara

400 ವರ್ಷಗಳ ಇತಿಹಾಸ

ಈ ದೈತ್ಯ ಮರದ ವಯಸ್ಸು ಕೇಳಿದರೆ ನೀವು ಒಂದುಕ್ಷಣ ದಂಗಾಗುವುದು ಖಚಿತ. ಯಾಕೆಂದರೆ ಈ ಮರ ಸುಮಾರು 400 ವರ್ಷಗಳಷ್ಟು ಹಳೆಯದ್ದು ಎಂದು ಅಂದಾಜಿಸಲಾಗಿದೆ. ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆಯು ಈ ದೊಡ್ಡ ಆಲದ ಮರದ ಸಂರಕ್ಷಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು, ಆಲದ ಮರದ ಸುತ್ತಮುತ್ತಲಿನ ಪ್ರದೇಶಕ್ಕೆ ಕಬ್ಬಿಣದ ಗ್ರಿಲ್ ಹಾಕಿ, ಪ್ರವಾಸಿಗರಿಗಾಗಿ ಬೆಂಚುಗಳ ವ್ಯವಸ್ಥೆ ಮಾಡಿದೆ. ಇನ್ನು ಪ್ರವಾಸೋದ್ಯಮ ಇಲಾಖೆ ದೊಡ್ಡ ಆಲದ ಮರವನ್ನು ಪಾರಂಪರಿಕ ವೃಕ್ಷವೆಂದು ಘೋಷಿಸಿದೆ. ಜತೆಗೆ ಪ್ರವಾಸಿಗರಿಗಾಗಿ ಕುಡಿಯುವ ನೀರನ್ನೂ ಒದಗಿಸಲಾಗುತ್ತಿದೆ. ಪ್ರವೇಶ ಉಚಿತ.

ಜೀವ ವೈವಿಧ್ಯಗಳ ತಾಣ

ಈ ಬೃಹತ್ ಮರ ಪ್ರವಾಸಿಗರ ಆಕರ್ಷಣೆಯ ಕೇಂದ್ರವಷ್ಟೇ ಅಲ್ಲದೆ ಜೀವ ವೈವಿಧ್ಯಗಳ ಆಶ್ರಯ ತಾಣ ಎನಿಸಿಕೊಂಡಿದೆ. ಹಲವು ಬಗೆಯ ಪಕ್ಷಿಗಳು, ಕೋತಿ, ಅಳಿಲು ಮುಂತಾದ ಜೀವಿಗಳು ಇಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿವೆ. ಆ ಮೂಲಕ ನಗರದ ಮಧ್ಯೆ, ಕಾಂಕ್ರೀಟ್ ಕಾಡಿನ ನಡುವೆ ಹಸುರಿನಿಂದ ವ್ಯಾಪಿಸಿ ತಂಪನ್ನೀಯುವ ಜತೆ ಶುದ್ಧ ಗಾಳಿಯನ್ನೂ ಒದಗಿಸುತ್ತಿದೆ.

ಒಂದೇ ಮರ

2000 ಇಸವಿಯಲ್ಲಿ ಮರದ ಮುಖ್ಯ ಕಾಂಡವು ರೋಗಕ್ಕೆ ತುತ್ತಾಗಿ ನಶಿಸಿತು. ಬಳಿಕ ಮರ ಅನೇಕ ಕೊಂಬೆಗಳ ಪೋಷಣೆಯಿಂದ ವೇಗವಾಗಿ, ಅಷ್ಟೇ ಬಲಿಷ್ಠವಾಗಿ ಬೆಳೆಯುತ್ತಿದೆ. ಉದ್ದಕ್ಕೆ ಚಾಚಿಕೊಂಡಿರುವ ಕೊಂಬೆಗಳು ನಿರಂತರ ಜಟೆಯಂತೆ ಬೇರು ಅರ್ಥಾತ್ ಬಿಳಲುಗಳನ್ನು ನೆಲದಾಳಕ್ಕೆ ಇಳಿಬಿಡುತ್ತಿವೆ. ಅಲ್ಲೇ ಚಿಗುರಿ ಮತ್ತುಷ್ಟು ವ್ಯಾಪ್ತಿಗೆ ವಿಸ್ತರಿಸುತ್ತಿದೆ. ಹೀಗಾಗಿ ಇದು ಬೇರೆ ಬೇರೆ ಮರದ ರೀತಿ ಕಾಣಿಸುತ್ತಿದೆ ಎನ್ನುತ್ತಾರೆ ಅಧಿಕಾರಿಗಳು. ಇದರ ವ್ಯಾಪ್ತಿ ಹಿರಿದಾಗುತ್ತಲೇ ಇದೆ.

ಹೀಗೆ ಹೋಗಿ

ಈ ಮರ ಬೆಂಗಳೂರಿನಿಂದ 28 ಕಿ.ಮೀ. ದೂರದಲ್ಲಿ ಬೆಂಗಳೂರು - ಮೈಸೂರು ರಸ್ತೆಯಲ್ಲಿದೆ. ಬಸ್ ಮುಖಾಂತರ ಮೆಜೆಸ್ಟಿಕ್‌ನಿಂದ ಕೆಂಗೇರಿಗೆ, ನಂತರ ಕೆಂಗೇರಿಯಿಂದ ದೊಡ್ಡ ಆಲದ ಮರಕ್ಕೆ ಹೋಗಬಹುದು. ಕೆ.ಆರ್. ಮಾರುಕಟ್ಟೆಯಿಂದ ದೊಡ್ಡ ಆಲದ ಮರಕ್ಕೆ ನೇರ ಬಸ್ಸುಗಳಿವೆ. ಪ್ರತಿ ದಿನ ಬೆಳಗ್ಗೆ 7ರಿಂದ ಸಂಜೆ 6ರ ತನಕ ಇಲ್ಲಿಗೆ ಭೇಟಿ ನೀಡಬಹುದು. ಇಲ್ಲಿ ಒಂದು ಪುರಾತನ ಮುನೀಶ್ವರ ದೇವರ ದೇವಾಲಯ ಕೂಡಾ ಇದೆ.

saligrama

ಸಾಲಿಗ್ರಾಮ

ದೊಡ್ಡ ಆಲದ ಮರಕ್ಕೆ ನೀವು ಭೇಟಿ ನೀಡಿದರೆ ಸಮೀಪದಲ್ಲೇ ಇರುವ ಸಾಲಿಗ್ರಾಮ ವೆಂಕಟೇಶ್ವರ ದೇವಸ್ಥಾನಕ್ಕೂ ತೆರಳಬಹುದು. ಇಲ್ಲಿಂದ ಸುಮಾರು 3 ಕಿ.ಮೀ. ದೂರಲ್ಲಿ ಈ ದೇವಸ್ಥಾನವಿದೆ. ನಗರ ಗಿಜಿಗಿಜಿಯಿಂದ ದೂರವಾಗಿ ನಿಸರ್ಗದ ನಡುವೆ ಈ ದೇಗುಲವಿರುವುದರಿಂದ ನೆಮ್ಮದಿಯಿಂದ ಕಾಲ ಕಳೆಯಲು ಇದು ಉತ್ತಮ ಸ್ಥಳ ಎನಿಸಿಕೊಂಡಿದೆ. ಜತೆಗೆ ಸಮೀಪದಲ್ಲಿ ಬೃಹತ್‌ ಕೆರೆಯೊಂದಿದ್ದು, ದಂಡೆಯಲ್ಲಿ ಓಡಾಡಬಹುದು.