King Charles IIIs Birthday: 3ನೇ ಕಿಂಗ್ ಚಾರ್ಲ್ಸ್ ಜನ್ಮದಿನ ಗೌರವ- 30ಕ್ಕೂ ಹೆಚ್ಚು ಭಾರತೀಯ ಮೂಲದ ಹೀರೋಗಳಿಗೆ ಸನ್ಮಾನ
King Charles IIIs Birthday Honours List: ಲಂಡನ್ ಸಿಟಿ ಕಾರ್ಪೊರೇಷನ್ನ ಪ್ರೇಮ್ ಬಾಬು ಗೋಯಲ್ (ಸಾರ್ವಜನಿಕ ಸೇವೆ), ಅಮೆಜಾನ್ ವೆಬ್ ಸರ್ವೀಸಸ್ನ ತನುಜಾ ರಾಂಡೇರಿ (ವ್ಯಾಪಾರ ಮತ್ತು ತಂತ್ರಜ್ಞಾನ) ಮತ್ತು ಕೋವೆಂಟ್ರಿಯ NHSನ ಪ್ರೊಫೆಸರ್ ಜಗತಾರ್ ಸಿಂಗ್ (ಆರೋಗ್ಯ ಸೇವೆ) ಕಮಾಂಡರ್ಸ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (CBE) ಗೌರವಕ್ಕೆ ಆಯ್ಕೆಯಾಗಿದ್ದಾರೆ.


ಲಂಡನ್: 3ನೇ ಕಿಂಗ್ ಚಾರ್ಲ್ಸ್ (King Charles III) ರವರ 2025ರ ಜನ್ಮದಿನ ಗೌರವ ಪಟ್ಟಿಯಲ್ಲಿ (Birthday Honour List) 30ಕ್ಕೂ ಹೆಚ್ಚು ಭಾರತೀಯ ಮೂಲದ (Indian-Origin) ವೃತ್ತಿಪರರನ್ನು ಗುರುತಿಸಲಾಗಿದೆ. ಸಾರ್ವಜನಿಕ ಸೇವಕರು, ಆರೋಗ್ಯ, ತಂತ್ರಜ್ಞಾನ ತಜ್ಞರು, ಕಲಾವಿದರು, ಮತ್ತು ಶಿಕ್ಷಣತಜ್ಞರು ಈ ಪಟ್ಟಿಯಲ್ಲಿದ್ದಾರೆ. ಈ ಗೌರವ ಪಟ್ಟಿಯನ್ನು 76 ವರ್ಷದ ಬ್ರಿಟಿಷ್ ರಾಜನ ಜನ್ಮದಿನಾಚರಣೆಗೆ ಶುಕ್ರವಾರ ರಾತ್ರಿ ಬಿಡುಗಡೆ ಮಾಡಲಾಯಿತು.
ಲಂಡನ್ ಸಿಟಿ ಕಾರ್ಪೊರೇಷನ್ನ ಪ್ರೇಮ್ ಬಾಬು ಗೋಯಲ್ (ಸಾರ್ವಜನಿಕ ಸೇವೆ), ಅಮೆಜಾನ್ ವೆಬ್ ಸರ್ವೀಸಸ್ನ ತನುಜಾ ರಾಂಡೇರಿ (ವ್ಯಾಪಾರ ಮತ್ತು ತಂತ್ರಜ್ಞಾನ) ಮತ್ತು ಕೋವೆಂಟ್ರಿಯ NHSನ ಪ್ರೊಫೆಸರ್ ಜಗತಾರ್ ಸಿಂಗ್ (ಆರೋಗ್ಯ ಸೇವೆ) ಕಮಾಂಡರ್ಸ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (CBE) ಗೌರವಕ್ಕೆ ಆಯ್ಕೆಯಾಗಿದ್ದಾರೆ. ಮಾಜಿ ಇಂಗ್ಲೆಂಡ್ ಫುಟ್ಬಾಲ್ ನಾಯಕ ಡೇವಿಡ್ ಬೆಕ್ಹ್ಯಾಮ್ ಕ್ರೀಡೆ ಮತ್ತು ಚಾರಿಟಿ ಕೆಲಸಕ್ಕಾಗಿ ನೈಟ್ಹುಡ್ ಪಡೆದಿದ್ದಾರೆ.
“ಈ ಗೌರವ ಪಟ್ಟಿ ದೇಶದ ಪ್ರತಿಯೊಂದು ಮೂಲೆಯಲ್ಲಿರುವ ಸಮರ್ಪಣೆ, ಕರುಣೆ, ಮತ್ತು ಸೇವೆಯನ್ನು ಪ್ರತಿಬಿಂಬಿಸುತ್ತದೆ,” ಎಂದು ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಹೇಳಿದ್ದಾರೆ. ಅರೋರಾ ಚಾರಿಟೇಬಲ್ ಫೌಂಡೇಷನ್ನ ಸುನೀತಾ ಅರೋರಾ, NHSನ ನರ್ಸ್ ಅವಿಂದರ್ಜಿತ್ ಭಾಟಿಯಾ, ಮತ್ತು ರೀಟಾ ಹಿರಾನಿ ಆಫೀಸರ್ಸ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (OBE) ಗೌರವಕ್ಕೆ ಆಯ್ಕೆಯಾಗಿದ್ದಾರೆ.
ಈ ಸುದ್ದಿಯನ್ನೂ ಓದಿ: Ahmedabad Plane Crash: ಅಹಮದಾಬಾದ್ ವಿಮಾನ ದುರಂತ: ಕೇಂದ್ರ ಸರ್ಕಾರದಿಂದ ಉನ್ನತ ಮಟ್ಟದ ತನಿಖಾ ಸಮಿತಿ ರಚನೆ
ಚಾಕು ದಾಳಿಯಿಂದ ಮಗ ರೊನಾನ್ನನ್ನು ಕಳೆದುಕೊಂಡ ಪೂಜಾ ಕಾಂಡಾ, ಚಾಕು ಅಪರಾಧ ತಡೆಗಾಗಿ ಆಫೀಸರ್ಸ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ ಪಡೆದಿದ್ದಾರೆ. ಡಾ.ಕುಲೀನ್ ಕಾಂತಿಲಾಲ್ ಪಟೇಲ್, ವೈಭವ್ ಪುರಿ, ಪ್ರೊಫೆಸರ್ ಪಂಕಜ್ ಶರ್ಮಾ, ರಂಜಿತ್ ಸಿಂಗ್, ಡಾ. ಪರಾಗ್ ಸಿಂಗಲ್ ಮತ್ತು ಕ್ಯಾಪ್ಟನ್ ಜಗಜಿತ್ ಸಿಂಗ್ ಸೊಹಲ್ ಸಹ OBE ಗೌರವಕ್ಕೆ ಪಾತ್ರರಾಗಿದ್ದಾರೆ. ಭಾರತೀಯ ಶಾಸ್ತ್ರೀಯ ಸಂಗೀತಗಾರ ಸುರ್ದರ್ಶನ್ ಸಿಂಗ್ ಚಾನಾ ಮತ್ತು ನರ್ತಕಿ ಸೋನಿಯಾ ಸಬ್ರಿ ಮೆಂಬರ್ಸ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (MBE) ಗೌರವಕ್ಕೆ ಆಯ್ಕೆಯಾಗಿದ್ದಾರೆ.
ಸ್ಕಾಟಿಷ್ ಹಿಂದೂ ಫೌಂಡೇಷನ್ನ ಡಾ.ರಿಚಾ ಸಿನ್ಹಾ ಮತ್ತು ಲಂಡನ್ ವಿಶ್ವವಿದ್ಯಾಲಯದ ಪ್ರೊಫೆಸರ್ ರಾಮನ್ ಕಾಂತ್ ಪ್ರಿಂಜಾ MBE ಗೌರವಕ್ಕೆ ಭಾಜನರಾಗಿದ್ದಾರೆ. ಆದರ್ಶ್ ಖುಲ್ಲರ್, ಸಂತೋಷ್ ಶರ್ಮಾ, ರಾಮ್ ಪ್ರಕಾಶ್ ಗುಪ್ತಾ, ಮತ್ತು ಅಮಿಶ್ ದಿಪಕ್ಕುಮಾರ್ ಪಟೇಲ್ ಸಮುದಾಯ ಸೇವೆಗಾಗಿ BEM ಗೌರವ ಪಡೆದಿದ್ದಾರೆ. 3ನೇ ಕಿಂಗ್ ಚಾರ್ಲ್ಸ್ ರವರ ಜನ್ಮದಿನ ನವೆಂಬರ್ 14ರಂದಾದರೂ, ಜೂನ್ನಲ್ಲಿ ಟ್ರೂಪಿಂಗ್ ದಿ ಕಲರ್ ಸಮಾರಂಭದೊಂದಿಗೆ ಆಚರಣೆ ನಡೆಯುತ್ತದೆ.