Cabinet Meeting: ಬೆಂಗಳೂರು ಗ್ರಾಮಾಂತರ ಇನ್ನುಮುಂದೆ ʼಬೆಂ. ಉತ್ತರ ಜಿಲ್ಲೆʼ, ಭಾಗ್ಯನಗರ ಆಗಲಿದೆ ಬಾಗೇಪಲ್ಲಿ; ಸಚಿವ ಸಂಪುಟ ತೀರ್ಮಾನ
Cabinet Meeting: 1986ರಲ್ಲಿ ಬೆಂಗಳೂರು ನಗರ ಜಿಲ್ಲೆಯಿಂದ ಪ್ರತ್ಯೇಕಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ರಚಿಸಲಾಗಿತ್ತು. ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಹೆಸರು ಬದಲಿಸಲು ಅನುಮೋದನೆ ನೀಡಲಾಗಿದೆ. ಅದೇ ರೀತಿ ಬಾಗೇಪಲ್ಲಿ ಪಟ್ಟಣಕ್ಕೆ ಭಾಗ್ಯನಗರ ಎಂದು ಮರುನಾಮಕರಣ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.


ಬೆಂಗಳೂರು: ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿದ ಬೆನ್ನಲ್ಲೇ ಇದೀಗ ಮತ್ತೊಂದು ಜಿಲ್ಲೆ ಹಾಗೂ ತಾಲೂಕಿನ ಹೆಸರು ಬದಲಾವಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಇನ್ನುಮುಂದೆ ʼಬೆಂಗಳೂರು ಉತ್ತರ ಜಿಲ್ಲೆʼ (Bangalore North District) ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣವು ಭಾಗ್ಯನಗರ (Bhagyanagar) ಆಗಲಿದೆ. ಮರುನಾಮಕರಣಕ್ಕೆ ಸಂಬಂಧಿಸಿ ನಂದಿ ಬೆಟ್ಟದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ತೀರ್ಮಾನ ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಭಾಗವನ್ನು ರಿಯಲ್ ಎಸ್ಟೇಟ್ ಪರಿಭಾಷೆಯಲ್ಲಿ ಬೆಂಗಳೂರು ಉತ್ತರ ಎಂದೇ ಕರೆಯಲಾಗುತ್ತದೆ. 'ಬ್ರ್ಯಾಂಡ್ ಬೆಂಗಳೂರು' ಮೌಲ್ಯ ಮತ್ತು ಲಾಭವನ್ನು ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಿಗೂ ವಿಸ್ತರಿಸಲು ಈ ನಿರ್ಣಯ ಕೈಗೊಳ್ಳುತ್ತಿರುವುದಾಗಿ ಸರ್ಕಾರ ಈಗಾಗಲೇ ಸಮರ್ಥಿಸಿಕೊಂಡಿತ್ತು.
1986ರಲ್ಲಿ ಬೆಂಗಳೂರು ನಗರ ಜಿಲ್ಲೆಯಿಂದ ಪ್ರತ್ಯೇಕಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ರಚಿಸಲಾಯಿತು. ಆ ಸಮಯದಲ್ಲಿ ರಾಮನಗರ ಜಿಲ್ಲೆಯ ತಾಲೂಕುಗಳೂ ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿದ್ದವು. ನಂತರ 2007ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ವಿಭಜಿಸಿ ರಾಮನಗರ ಜಿಲ್ಲೆ ರಚಿಸಲಾಯಿತು. ಇತ್ತೀಚೆಗೆ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡಲಾಗಿದೆ. ಈಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಹೆಸರು ಬದಲಿಸಲು ಅನುಮೋದನೆ ನೀಡಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಹೆಸರನ್ನು 'ಭಾಗ್ಯನಗರ' ಎಂದು ಬದಲಿಸುವಂತೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಇದಕ್ಕೂ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ.
ಎತ್ತಿನಹೊಳೆ ಯೋಜನೆಯಲ್ಲಿ 9 ಜಿಲ್ಲೆಗಳ 75 ಲಕ್ಷ ಜನರಿಗೆ ಕುಡಿಯುವ ನೀರು
ಸಚಿವ ಸಂಪುಟ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿ, ಶೇ.90 ರಷ್ಟು ಬೆಂಗಳೂರು ವಿಭಾಗದ ವಿಷಯಗಳನ್ನೇ ಈ ವಿಶೇಷ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡಿದ್ದೇವೆ. ಒಟ್ಟು 48 ವಿಷಯಗಳು ಚರ್ಚೆಯಾಗಿದೆ. 3400 ಕೋಟಿ ಮೊತ್ತವನ್ನು ಮಂಜೂರು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
2050 ಕೋಟಿ ಬೆಂಗಳೂರು ಜಿಲ್ಲಾ ಭಾಗಕ್ಕೇ ಕೊಟ್ಟಿದ್ದೇವೆ. ಎತ್ತಿನಹೊಳೆ ಯೋಜನೆಗೆ ಒಟ್ಟು 23251 ಕೋಟಿ ಪರಿಷ್ಕೃತ ಅಂದಾಜು ಮಾಡಲಾಗಿದ್ದು, ಇಲ್ಲಿಯವರೆಗೂ 17147 ಕೋಟಿ ಖರ್ಚಾಗಿದೆ. ಮೂಲತಃ ಕುಡಿಯುವ ನೀರಿನ ಯೋಜನೆ ಇದಾಗಿದೆ. ಕೆರೆಗಳಿಗೆ ನೀರು ತುಂಬಿಸುವುದು ನಂತರದ ಆದ್ಯತೆಯಾಗಿದೆ.
ಈ ಸುದ್ದಿಯನ್ನೂ ಓದಿ | Karnataka SC survey: ಆನ್‌ಲೈನ್‌ನಲ್ಲೂ ಪರಿಶಿಷ್ಟ ಜಾತಿ ಸಮೀಕ್ಷೆಗೆ ಮಾಹಿತಿ ನೀಡಬಹುದು: ಸಿಎಂ
24.1 TMC ನೀರಿನಲ್ಲಿ ಕುಡಿಯುವ ನೀರಿಗೆ 14 TMC ಬೇಕಾಗಿದೆ. ಆದ್ದರಿಂದ ಮೊದಲು ಕುಡಿಯುವ ನೀರನ್ನು ಕೊಡುವ ಯೋಜನೆ ಮುಗಿಸಲು ಸಂಪುಟ ಸಭೆ ತೀರ್ಮಾನ. ಎರಡು ವರ್ಷಗಳಲ್ಲಿ ಉದ್ದೇಶಿತ ಜಿಲ್ಲೆ, ತಾಲೂಕುಗಳಿಗೆ ನೀರು ಕೊಡುತ್ತೇವೆ. 9807 ಕೋಟಿಮೊತ್ತದಲ್ಲಿ ಗ್ರಾವಿಟಿ ಮುಖ್ಯ ಕೆನಲ್ ನ ಕೆಲಸ 85% ಮಗಿದಿದೆ. ಹೆಚ್ಚುವರಿಯಾಗಿ ಇದಕ್ಕೆ 8000 ಕೋಟಿ ಬೇಕಾಗಿದೆ. ಬಾಕಿ ಉಳಿದಿರುವುದು 6000 ಚಿಲ್ಲರೆ ಕೋಟಿ. ಒಟ್ಟು 9 ಜಿಲ್ಲೆಗಳ 75 ಲಕ್ಷ ಜನರಿಗೆ ಕುಡಿಯುವ ನೀರು ಕೊಡ್ತೀವಿ. ಬೆಂಗಳೂರು ಜಿಲ್ಲೆಗಳ 31 ವಿಷಯಗಳು ಚರ್ಚೆಯಾಗಿ 2250 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.