ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pralhad Joshi: ಅಪಘಾತಕ್ಕೀಡಾದ ಬೈಕ್ ಸವಾರರನ್ನು ಬೆಂಗಾವಲು ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿದ ಸಚಿವ ಜೋಶಿ

Pralhad Joshi: ಇತ್ತೀಚೆಗೆ ಬೆಳಗಾವಿಗೆ ತೆರಳುವಾಗ ಸಹ ಒಂದು ಘಟನೆಯಲ್ಲಿ ಗಾಯಾಳುಗಳ ನೆರವಿಗೆ ಸಚಿವ ಪ್ರಲ್ಹಾದ್‌ ಜೋಶಿ ಅವರು ಧಾವಿಸಿದ್ದರು. ಇದೀಗ ಹುಬ್ಬಳ್ಳಿಯಲ್ಲಿ ಸವಾರರು ಆಕಸ್ಮಿಕ ಅಪಘಾತಕ್ಕೀಡಾಗಿ ತೀವ್ರ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲು ಸಚಿವರು ನೆರವಾಗಿದ್ದಾರೆ.

ಗಾಯಾಳುಗಳನ್ನು ಬೆಂಗಾವಲು ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿದ ಸಚಿವ ಜೋಶಿ

Profile Prabhakara R Apr 20, 2025 4:42 PM

ಹುಬ್ಬಳ್ಳಿ: ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡ ಬೈಕ್ ಸವಾರರನ್ನು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು, ತಮ್ಮ ಬೆಂಗಾವಲು ಪಡೆಯ ವಾಹನದಲ್ಲೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ನಗರದ ಶಿರೂರು ಪಾರ್ಕ್ ರಸ್ತೆಯಲ್ಲಿ ಭಾನುವಾರ ಮಧ್ಯಾಹ್ನ ಸಚಿವರು ಬೆಂಗಾವಲು ಪಡೆ ವಾಹನದೊಂದಿಗೆ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನ ಸವಾರರು ಆಕಸ್ಮಿಕ ಅಪಘಾತಕ್ಕೀಡಾಗಿ ತೀವ್ರ ಗಾಯಗೊಂಡಿರುವುದು ಕಂಡುಬಂತು. ಗಾಯಾಳುಗಳ ಸ್ಥಿತಿ ನೋಡಿದ ಸಚಿವರು, ತಕ್ಷಣವೇ ತಮ್ಮ ಬೆಂಗಾವಲು ಪಡೆಯ ವಾಹನದಲ್ಲಿ ಕಿಮ್ಸ್‌ಗೆ ಕಳುಹಿಸಿಕೊಟ್ಟರು.

ಅಲ್ಲದೇ, ಕಿಮ್ಸ್ ನಿರ್ದೇಶಕರಿಗೆ ಸ್ವತಃ ಕರೆ ಮಾಡಿದ ಸಚಿವರು, ಗಾಯಾಳುಗಳಿಗೆ ತ್ವರಿತವಾಗಿ ಚಿಕಿತ್ಸೆ ನೀಡಿ ಉಪಚರಿಸುವಂತೆ ನಿರ್ದೇಶನ ಸಹ ನೀಡಿದರು.

Pralhad Joshi (4)

ಸದಾ ಸಹಾಯಕ್ಕೆ ನಿಲ್ಲುವ ಸಚಿವರು:

ಅಪಘಾತ ಸಂಭವಿಸಿ ಅಪರಿಚಿತರು ರಕ್ತದ ಮಡುವಿನಲ್ಲಿ ಬಿದ್ದಿದ್ದರೆ ಕೆಲವರು ನಮಗೇಕೆ ಉಸಾಬರಿ ಎಂದು ತಮ್ಮ ಪಾಡಿಗೆ ತಾವು ಹೋಗುವುದನ್ನು ಕಂಡಿದ್ದೇವೆ. ಆದರೆ, ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ಈ ವಿಚಾರದಲ್ಲಿ ವಿಭಿನ್ನ. ಎಲ್ಲಿ...ಯಾರೇ... ಅಪಘಾತಕ್ಕೆ ಈಡಾಗಿರಲಿ, ಮೊದಲು ರಕ್ಷಣಾ ಕಾರ್ಯಕ್ಕೆ ಇಳಿಯುತ್ತಾರೆ. 'ಜೀವ ರಕ್ಷಣೆ ಮೊದಲು - ಕಾನೂನು ಕಟ್ಟಳೆಗಳೆಲ್ಲ ಆಮೇಲೆ' ಎನ್ನುವಂತೆ ಗಾಯಾಳುಗಳ ಚಿಕಿತ್ಸೆಗೆ ಸ್ಪಂದಿಸುತ್ತಾರೆ. ಇತ್ತೀಚೆಗೆ ಬೆಳಗಾವಿಗೆ ತೆರಳುವಾಗ ಸಹ ಇಂಥದ್ದೇ ಒಂದು ಘಟನೆಯಲ್ಲಿ ಗಾಯಾಳುಗಳ ನೆರವಿಗೆ ಧಾವಿಸಿದ್ದರು ಸಚಿವರು. ಧಾರವಾಡ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತದಲ್ಲಿ ತೀವ್ರ ಗಾಯಗೊಂಡವರನ್ನು ಬೆಂಗಾವಲು ಪಡೆ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ತೋರಿದ್ದರು.

ಇಂದು ಸಹ ಹುಬ್ಬಳ್ಳಿಯ ಶಿರೂರು ಪಾರ್ಕ್ ರಸ್ತೆ ಬಳಿ ವಾಹನದಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ಸಚಿವರು, ಅಪಘಾತವೊಂದರಲ್ಲಿ ರಕ್ತದ ಮಡುವಿನಲ್ಲಿದ್ದ ಗಾಯಾಳು ಸ್ಥಿತಿ ಕಂಡು ಸಹಾಯಕ್ಕೆ ನಿಂತರು.

ಈ ಸುದ್ದಿಯನ್ನೂ ಓದಿ | Caste census: ಜಾತಿ ಗಣತಿ ವಿಚಾರವಾಗಿ ನಾಳೆ ಕಾಂಗ್ರೆಸ್ ಒಕ್ಕಲಿಗ ಶಾಸಕರ ಜತೆ ಚರ್ಚೆ: ಡಿಸಿಎಂ ಡಿಕೆಶಿ

ಬೆಂಗಾವಲು ಪಡೆ ವಾಹನದಲ್ಲೇ ಗಾಯಾಳುವನ್ನು ಆಸ್ಪತ್ರೆಗೆ ಕಳಿಸಿ ಕಿಮ್ಸ್ ವೈದ್ಯರಿಗೂ ಫೋನ್ ಕರೆ ಮಾಡಿ ತಿಳಿಸಿ ತ್ವರಿತ ಚಿಕಿತ್ಸೆಗೆ ಸ್ಪಂದಿಸಿದರು. ಅಲ್ಲದೇ, "ಅಮೂಲ್ಯ ಜೀವ ಉಳಿಸಿಕೊಳ್ಳಲು ದಯವಿಟ್ಟು ಹೆಲ್ಮೆಟ್ ಧರಿಸಿಯೇ ವಾಹನ ಏರಿ" ಎಂದು ನೆರೆದವರಲ್ಲಿ ಕಳಕಳಿಯಿಂದ ಮನವಿ ಮಾಡಿದರು. ಸಚಿವರ ಮಾನವೀಯ ಕಾರ್ಯಕ್ಕೆ ಸ್ಥಳದಲ್ಲಿದ್ದ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.