ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Terror Attack: ಉಗ್ರರ ದಾಳಿ; ಕಾಶ್ಮೀರದಿಂದ ಶಿವಮೊಗ್ಗ ಉದ್ಯಮಿ ಮೃತದೇಹ ತರಲು ರಾಜ್ಯ ಸರ್ಕಾರ ವ್ಯವಸ್ಥೆ

Pahalgam Terror Attack: ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಅಧಿಕಾರಿಗಳ ಒಂದು ತಂಡ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದೆ. ಮುಂದಿನ ಕ್ರಮಗಳ ಉಸ್ತುವಾರಿ ನೋಡಿಕೊಳ್ಳುವಂತೆ ದೆಹಲಿಯ ರೆಸಿಡೆಂಟ್ ಕಮಿಷನರ್ ಅವರಿಗೆ ಸೂಚನೆ ಕೂಡ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕಾಶ್ಮೀರದಿಂದ ಶಿವಮೊಗ್ಗ ಉದ್ಯಮಿ ಮೃತದೇಹ ತರಲು ರಾಜ್ಯ ಸರ್ಕಾರ ವ್ಯವಸ್ಥೆ

Profile Prabhakara R Apr 22, 2025 8:17 PM

ಬೆಂಗಳೂರು: ಕಾಶ್ಮೀರದಲ್ಲಿ ಕನ್ನಡಿಗರು ಉಗ್ರರ ದಾಳಿಗೆ (Pahalgam Terror Attack) ಗುರಿಯಾಗಿರುವ ಸುದ್ದಿ ತಿಳಿದ ತಕ್ಷಣ ಮುಖ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಂಡು, ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದು, ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಅಧಿಕಾರಿಗಳ ಒಂದು ತಂಡ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದೆ. ಮುಂದಿನ ಕ್ರಮಗಳ ಉಸ್ತುವಾರಿ ನೋಡಿಕೊಳ್ಳುವಂತೆ ದೆಹಲಿಯ ರೆಸಿಡೆಂಟ್ ಕಮಿಷನರ್ ಅವರಿಗೆ ಸೂಚನೆ ಕೂಡ ನೀಡಿದ್ದೇನೆ. ಇಡೀ ಘಟನೆಯ ಮೇಲೆ ನಾವು ತೀವ್ರನಿಗಾ ವಹಿಸಿದ್ದು, ದಾಳಿಯ ಸಂತ್ರಸ್ತರಾಗಿರುವ ನಮ್ಮವರ ನೆರವಿಗೆ ನಿಂತಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ.

ಇನ್ನು ಕಾಶ್ಮೀರದಲ್ಲಿ ಕನ್ನಡಿಗರು ಉಗ್ರರ ದಾಳಿಗೆ ಗುರಿಯಾಗಿರುವ ಸುದ್ದಿ ತಿಳಿದ ತಕ್ಷಣ ಮುಖ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿರುವ ಸಿಎಂ ಸಿದ್ದರಾಮಯ್ಯ ಅವರು, ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಅಧಿಕಾರಿಗಳ ತಂಡ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಲು ಸೂಚಿಸಿದ್ದಾರೆ. ಅದರಂತೆ ಅಧಿಕಾರಿ ಚೇತನ್. ಆರ್ ಮತ್ತು ಇನ್ನಿತರ ಅಧಿಕಾರಿಗಳ ತಂಡ ಕಾಶ್ಮೀರಕ್ಕೆ ತೆರಳಿದೆ. ಮುಖ್ಯಮಂತ್ರಿಗಳ ಸೂಚನೆಯಂತೆ ಸಚಿವ ಸಂತೋಷ್ ಲಾಡ್ ಅವರು ಕಾಶ್ಮೀರಕ್ಕೆ ತೆರಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸಹಾಯವಾಣಿ ಆರಂಭ

ಇನ್ನು ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ಹಿನ್ನೆಲೆ ಕೇಂದ್ರ ಸರ್ಕಾರದಿಂದ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಲಾಗಿದೆ.

ತುರ್ತು ನಿಯಂತ್ರಣ ಕೊಠಡಿ – ಶ್ರೀನಗರ: 0194-2457543, 0194-2483651 ಆದಿಲ್ ಫರೀದ್, ಎಡಿಸಿ ಶ್ರೀನಗರ – 7006058623. ಪಹಲ್ಗಾಮ್ ಭಯೋತ್ಪಾದಕ ಘಟನೆಯ ಕುರಿತು ಸಹಾಯಕ್ಕಾಗಿ ಸಹಾಯವಾಣಿ ಎಂದು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.

ಕನ್ನಡಿಗರನ್ನು ವಾಪಸ್​ ಕರೆತರಲು ಎಲ್ಲ ಕ್ರಮ

ಘಟನೆ ಬಗ್ಗೆ ಕಾನೂನು ಸಚಿವ ಎಚ್​.ಕೆ.ಪಾಟೀಲ್​ ಮಾತನಾಡಿ, ಘಟನೆ ಕುರಿತು ನಾನು ಸಿಎಂ ಜೊತೆಗೆ ಚರ್ಚಿಸಿದ್ದೇನೆ. ಕರ್ನಾಟಕದ ಹಿರಿಯ ಅಧಿಕಾರಿಗಳನ್ನು ಕಳುಹಿಸಿದ್ದೇವೆ. ಕನ್ನಡಿಗರನ್ನು ವಾಪಸ್​ ತರಲು ಎಲ್ಲ ಕ್ರಮಕೈಗೊಳ್ಳುತ್ತೇವೆ. ಒಟ್ಟು 15 ಜನ ಸಿಲುಕಿರುವ ಮಾಹಿತಿ ಇದೆ. ಸಹಾಯವಾಣಿ ತೆರೆಯುವ ಬಗ್ಗೆ ಕಾರ್ಯಪ್ರವೃತ್ತರಾಗುತ್ತೇವೆ ಎಂದು ಹೇಳಿದ್ದಾರೆ. IPS ಅಧಿಕಾರಿ ಚೇತನ್ ಆರ್ ಮತ್ತು ಇನ್ನಿತರ ಅಧಿಕಾರಿಗಳ ತಂಡ ಕಾಶ್ಮೀರಕ್ಕೆ ತೆರಳಿದೆ ಎಂದು ತಿಳಿದುಬಂದಿದೆ.

ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಮಾತನಾಡಿ, ಮೃತ ಮಂಜುನಾಥ್​ ಅವರ ಪತ್ನಿ ಪಲ್ಲವಿಯವರನ್ನು ಸಂಪರ್ಕಿಸಲಾಗಿದೆ. ಮಂಜುನಾಥ್ ಮೃತದೇಹ ಬೆಟ್ಟದ ಮೇಲಿರುವುದರಿಂದ, ಮೃತದೇಹ ಕೆಳಗೆ ತರಲು ಅಧಿಕಾರಿಗಳ ಜತೆ ಸಂಪರ್ಕ ಮಾಡಿದ್ದೇನೆ. ಅಲ್ಲಿನ ಸ್ಥಳೀಯ ಅಧಿಕಾರಿಗಳನ್ನ ಸಂಪರ್ಕ ಮಾಡಿದ್ದೇವೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಇರುವ ಬಗ್ಗೆ ಮಾಹಿತಿ ಇದೆ. ಮಂಜುನಾಥ್​ ಅವರ ಶವ ತರಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ಪತ್ನಿ, ಮಗನೆದುರೇ ಶಿವಮೊಗ್ಗ ಉದ್ಯಮಿ ತಲೆಗೆ ಹೊಕ್ಕ ಗುಂಡು; ಹೋಗಿ ಮೋದಿಗೆ ಹೇಳಿ ಎಂದ ಉಗ್ರರು!

ಬೆಂಗಳೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ (Pahalgam Terror Attack) ಶಿವಮೊಗ್ಗದ ಉದ್ಯಮಿಯೊಬ್ಬರು ಮೃತಪಟ್ಟಿದ್ದಾರೆ. ಪತ್ನಿ ಹಾಗೂ ಮಗನ ಕಣ್ಣೆದುರೇ ಉದ್ಯಮಿ ಮಂಜುನಾಥ್‌ ರಾವ್‌ ಅವರನ್ನು ಉಗ್ರರು ಕೊಂದಿದ್ದಾರೆ. ಈ ವೇಳೆ ನನ್ನ ಹಾಗೂ ಮಗನನ್ನೂ ಕೊಂದುಬಿಡಿ ಎಂದು ಮಂಜುನಾಥ್‌ ಪತ್ನಿ ಪಲ್ಲವಿ ಹೇಳಿದಾಗ, ನಿಮ್ಮನ್ನು ಕೊಲ್ಲಲ್ಲ, ಹೋಗಿ ಮೋದಿಗೆ ಹೇಳಿ ಎಂದು ಉಗ್ರರು ಹೇಳಿರುವುದಾಗಿ ತಿಳಿದುಬಂದಿದೆ.

ಹೌದು, ಈ ಬಗ್ಗೆ ಉದ್ಯಮಿ ಮಂಜುನಾಥ್‌ ಅವರ ಪತ್ನಿ ಪಲ್ಲವಿ ಮಾಹಿತಿ ಹಂಚಿಕೊಂಡಿದ್ದಾರೆ. ಏ.19ರಂದು ಪ್ರವಾಸಕ್ಕೆ ಹೋಗಿದ್ದೆವು. ನಮ್ಮ ಕಣ್ಣೆದುರಿಗೇ ಪತಿಯ ತಲೆಗೆ ಗುಂಡಿಟ್ಟು ಕೊಂದರು. ನೀವು ಹಿಂದುಗಳಾ ಎಂದು ಕೇಳಿ ಗಂಡಸರನ್ನು ಕೊಂದಿದ್ದಾರೆ. ಪತಿಯನ್ನು ಕೊಲ್ಲುವಾಗ ನನ್ನ ಹಾಗೂ ಮಗನನ್ನು ಕೊಂದುಬಿಡಿ ಎಂದು ನಾವು ಉಗ್ರರಿಗೆ ಹೇಳಿದೆವು. ಆಗ ಅವರು ನಿಮ್ಮನ್ನು ಕೊಲ್ಲಲ್ಲ, ಹೋಗಿ ಮೋದಿಗೆ ಹೇಳಿ ಎಂದರು. ನನ್ನ ಪತಿ ಮೃತದೇಹವನ್ನು ಶಿವಮೊಗ್ಗಕ್ಕೆ ಸಾಗಿಸಲು ರಾಜ್ಯ ಸರ್ಕಾರ ಫ್ಲೈಟ್‌ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ | Pahalgam Terror Attack: ಪಹಲ್ಗಾಮ್‌ ಉಗ್ರರ ದಾಳಿ; ವಿದೇಶಿ ಪ್ರವಾಸಿಗರು ಸೇರಿ 27ಜನ ಬಲಿ

ಮೃತ ಮಂಜುನಾಥ್‌ ರಾವ್‌ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಕುಣಿಮಕ್ಕಿ ಮೂಲದವರು. ಅವರ ತಂದೆ ಶಿವಮೊಗ್ಗದ ಮ್ಯಾಮ್ ಕೋಸ್‌ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿದ್ದರು. ಹಾಗಾಗಿ 20 ವರ್ಷಗಳ ಹಿಂದೆಯೇ ಕುಟುಂಬಸ್ಥರೊಂದಿಗೆ ಶಿವಮೊಗ್ಗಕ್ಕೆ ತೆರಳಿದ್ದ ಮಂಜುನಾಥ್‌ ತಂದೆ ನಿವೃತ್ತಿ ಬಳಿಕ ಅಲ್ಲೇ ನೆಲೆಸಿದ್ದರು. ಇವರು ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ತೊಡಗಿದ್ದರು. ಪತ್ನಿ ಕಡೂರು ತಾಲೂಕಿನ ಬೀರೂರು ಮ್ಯಾಮ್ ಕೋಸ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.