Shakti Scheme: ಶಕ್ತಿ ಯೋಜನೆಯಡಿ 500 ಕೋಟಿ ಗಡಿ ದಾಡಿದ ಮಹಿಳಾ ಪ್ರಯಾಣಿಕರ ಸಂಖ್ಯೆ!
Shakti Scheme: ಶಕ್ತಿ ಯೋಜನೆಯಡಿ ಉದ್ಯೋಗ, ಶಿಕ್ಷಣ, ಆರೋಗ್ಯ ಇನ್ನು ಮುಂತಾದ ಕಾರಣಗಳಿಗಾಗಿ ನಾಡಿನ ಹೆಣ್ಣುಮಕ್ಕಳು ಸಾರಿಗೆ ಬಸ್ಗಳಲ್ಲಿ 500 ಕೋಟಿ ಬಾರಿ ಉಚಿತ ಪ್ರಯಾಣ ಮಾಡಿ ಇತಿಹಾಸ ನಿರ್ಮಿಸಿದ್ದಾರೆ. ಈ ಯೋಜನೆಯ ಯಶಸ್ಸಿನ ಶ್ರೇಯ ರಾಜ್ಯದ ಹೆಣ್ಣುಮಕ್ಕಳಿಗೆ ಸಲ್ಲಬೇಕು. ನಾಡಿನಲ್ಲಿ ಶಕ್ತಿ ಸಂಚಾರ ಮತ್ತಷ್ಟು ಯಶಸ್ವಿಯಾಗಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಶಕ್ತಿ ಯೋಜನೆಯಡಿ 500ನೇ ಕೋಟಿಯ ಟಿಕೆಟ್ ಅನ್ನು ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಮಹಿಳೆಯೊಬ್ಬರಿಗೆ ವಿತರಣೆ ಮಾಡಿದರು. (ಫೋಟೋಗಳು: ಸುಧಾಕರ್ ದೇವರಾಜ್, ವಿಶ್ವವಾಣಿ)


ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಯಶಸ್ವಿಯಾಗಿ ಎರಡು ವರ್ಷ ಪೂರೈಸಿದೆ. ಈ ಯೋಜನೆಯಡಿ ಉಚಿತವಾಗಿ ಪ್ರಯಾಣಿಸಿರುವ ಮಹಿಳೆಯರ ಸಂಖ್ಯೆ 500 ಕೋಟಿ ಗಡಿ ದಾಟಿದ್ದು, 500ನೇ ಕೋಟಿಯ ಟಿಕೆಟ್ ಅನ್ನು ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸೋಮವಾರ ವಿತರಣೆ ಮಾಡಿದರು.

ಚಾಮರಾಜಪೇಟೆ ನಿವಾಸಿ ಲತಾ ಎಂಬುವವರಿಗೆ 500ನೇ ಕೋಟಿಯ ಟಿಕೆಟ್ ನೀಡಲಾಗಿದೆ. ಈ ವೇಳೆ ಸಿಎಂಗೆ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ರಾಮಲಿಂಗಾರೆಡ್ಡಿ ಸಿಎಂಗೆ ಸಾಥ್ ನೀಡಿದರು.

ಸಿಎಂ ಟಿಕೆಟ್ ವಿತರಣೆ ವೇಳೆ ಬಸ್ನಲ್ಲಿದ್ದ ಮಹಿಳೆಯರಿಗೆ ಇಳಕಲ್ ಸೀರೆ ಹಾಗೂ ಸಿಹಿ ವಿತರಿಸಲಾಯಿತು. ಇದೇ ವೇಳೆ ಶಕ್ತಿ ಯೋಜನೆ ಫಲಾನುಭವಿಯೊಬ್ಬರು ಸಿಎಂ ಸಿದ್ದರಾಮಯ್ಯ ಅವರಿಗೆ ಉತ್ತರ ಕರ್ನಾಟಕದ ಖಡಕ್ ರೊಟ್ಟಿ ಹಾಗೂ ಶೇಂಗಾ ಹೋಳಿಗೆ ನೀಡಿ ಹಾರೈಸಿದರು.

ಈ ವೇಳೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ಶಕ್ತಿ ಯೋಜನೆಯಡಿ ಉದ್ಯೋಗ, ಶಿಕ್ಷಣ, ಆರೋಗ್ಯ ಇನ್ನು ಮುಂತಾದ ಕಾರಣಗಳಿಗಾಗಿ ನಾಡಿನ ಹೆಣ್ಣುಮಕ್ಕಳು ಸಾರಿಗೆ ಬಸ್ಗಳಲ್ಲಿ 500 ಕೋಟಿ ಬಾರಿ ಉಚಿತ ಪ್ರಯಾಣ ಮಾಡಿ ಇತಿಹಾಸ ನಿರ್ಮಿಸಿದ್ದಾರೆ. ಈ ಯೋಜನೆಯ ಯಶಸ್ಸಿನ ಶ್ರೇಯ ರಾಜ್ಯದ ಹೆಣ್ಣುಮಕ್ಕಳಿಗೆ ಸಲ್ಲಬೇಕು. ನಾಡಿನಲ್ಲಿ ಶಕ್ತಿ ಸಂಚಾರ ಮತ್ತಷ್ಟು ಯಶಸ್ವಿಯಾಗಲಿ ಎಂದು ಹೇಳಿದರು.

ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಡಿ 500ನೇ ಕೋಟಿಯ ಮಹಿಳಾ ಪ್ರಯಾಣಿಕರ ಪ್ರಯಾಣ ಸಂಭ್ರಮದ ಅಂಗವಾಗಿ ಸಾಂಕೇತಿಕವಾಗಿ 500ನೇ ಕೋಟಿಯ ಟಿಕೆಟನ್ನು ಇಂದು ವಿತರಿಸಲಾಗಿದೆ. 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಲಾಗಿತ್ತು.
2023ರ ಮೇ 20 ರಂದು ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಜಾರಿಗೊಳಿಸಲು ಸಚಿವಸಂಪುಟದಲ್ಲಿ ಕೈಗೊಂಡ ತೀರ್ಮಾನದಂತೆ ಜೂನ್ 11 ರಂದು ಶಕ್ತಿ ಯೋಜನೆಗೆ ಚಾಲನೆ ನೀಡಲಾಯಿತು. ಅಂದಿನಿಂದ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಲಾಗಿರುವ ಬಗ್ಗೆ ಮುಖ್ಯಮಂತ್ರಿ ವಿವರಿಸಿದರು.

ಶಕ್ತಿ ಯೋಜನೆಯಡಿ ನಾಡಿನ ಮಹಿಳೆಯರು 500 ಕೋಟಿ ಬಾರಿ ಉಚಿತವಾಗಿ ಪ್ರಯಾಣಿಸಿ ದಾಖಲೆ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಗೆ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಅವರು ಟಿಕೆಟ್ ಅನ್ನು ಕುಮಾರಕೃಪಾ ರಸ್ತೆಯಲ್ಲಿರುವ ವಿಂಡ್ಸರ್ ಸರ್ಕಲ್ ಬಳಿ ವಿತರಿಸಿದರು. ಈ ಪ್ರಯಾಣ ಶಕ್ತಿ ಯೋಜನೆಯ ಯಶಸ್ಸು ಹಾಗೂ ಸದ್ಬಳಕೆಯ ಹೆಗ್ಗುರುತಾಗಿದೆ. ಈವರೆಗಿನ ಒಟ್ಟು ಟಿಕೆಟ್ ಮೌಲ್ಯ 12 ಸಾವಿರ ಕೋಟಿ ರೂ. ದಾಟಿದ್ದು, ನಮ್ಮ ಸರ್ಕಾರದ ಗ್ಯಾರಂಟಿಗಳು ಜನರ ಬದುಕಿನಲ್ಲಿ ಬದಲಾವಣೆ ತರುತ್ತಿದೆ ಎಂದು ಸೌಮ್ಯ ರೆಡ್ಡಿ ತಿಳಿಸಿದ್ದಾರೆ.