RBI: ಸೆಪ್ಟೆಂಬರ್ ನಂತರ ATM ಯಂತ್ರಗಳಲ್ಲಿ 500 ರೂಪಾಯಿ ನೋಟುಗಳು ಸಿಗೋದಿಲ್ವಾ?
500 ರೂಪಾಯಿ ನೋಟುಗಳನ್ನು ಎಟಿಎಂಗಳಲ್ಲಿ ವಿತರಿಸದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕುಗಳಿಗೆ ಸೂಚನೆ ನೀಡಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಆದರೆ, ಸರ್ಕಾರದ ಫ್ಯಾಕ್ಟ್ ಚೆಕ್ ವಿಭಾಗವಾದ ಪಿಐಬಿ ಈ ಮಾಹಿತಿಯನ್ನು ಸುಳ್ಳು ಎಂದು ತಳ್ಳಿಹಾಕಿದೆ.


ನವದೆಹಲಿ: 500 ರೂಪಾಯಿ ನೋಟುಗಳನ್ನು ಎಟಿಎಂಗಳಲ್ಲಿ ವಿತರಿಸದಂತೆ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಬ್ಯಾಂಕುಗಳಿಗೆ (Banks) ಸೂಚನೆ ನೀಡಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ (Social Media) ವೈರಲ್ ಆಗಿದೆ. ಆದರೆ, ಸರ್ಕಾರದ ಫ್ಯಾಕ್ಟ್ ಚೆಕ್ (Fact Check) ವಿಭಾಗವಾದ ಪಿಐಬಿ ಈ ಮಾಹಿತಿಯನ್ನು ಸುಳ್ಳು ಎಂದು ತಳ್ಳಿಹಾಕಿದೆ.
2025ರ ಸೆಪ್ಟೆಂಬರ್ 30ರ ನಂತರ ಎಟಿಎಂಗಳಲ್ಲಿ 500 ರೂ. ನೋಟುಗಳ ವಿತರಣೆಯನ್ನು ನಿಷೇಧಿಸಲಾಗಿದೆ ಎಂದು ಆರ್‌ಬಿಐ ಆದೇಶಿಸಿದೆ ಎಂಬ ಪೋಸ್ಟ್‌ಗಳು ವಾಟ್ಸಾಪ್ ಮತ್ತು ಫೇಸ್‌ಬುಕ್‌ನಲ್ಲಿ ಹರಡುತ್ತಿವೆ. ಕೇವಲ 200 ರೂ. ಮತ್ತು 100 ರೂ. ನೋಟುಗಳನ್ನು ಮಾತ್ರ ವಿತರಿಸಲಾಗುವುದು ಎಂದು ಈ ಸಂದೇಶಗಳು ತಿಳಿಸಿವೆ. ಆದರೆ, ಪಿಐಬಿ ಫ್ಯಾಕ್ಟ್ ಚೆಕ್ ತಂಡವು ಈ ಸುದ್ದಿಯನ್ನು ನಕಲಿ ಎಂದು ಸ್ಪಷ್ಟಪಡಿಸಿದೆ.
ಪಿಐಬಿಯ ಎಕ್ಸ್ ಖಾತೆಯಲ್ಲಿ ವೈರಲ್ ಸಂದೇಶದ ಸ್ಕ್ರೀನ್‌ಶಾಟ್‌ನೊಂದಿಗೆ, "500 ರೂ. ನೋಟುಗಳ ವಿತರಣೆ ನಿಷೇಧದ ಬಗ್ಗೆ ಆರ್‌ಬಿಐ ಯಾವುದೇ ಆದೇಶ ನೀಡಿಲ್ಲ. ಈ ನೋಟುಗಳು ಸಿಂಧುವಾಗಿವೆ" ಎಂದು ತಿಳಿಸಲಾಗಿದೆ. "ಜನರು ಸುಳ್ಳು ಸುದ್ದಿಗಳನ್ನು ನಂಬದಿರಿ. ಅಧಿಕೃತ ಮೂಲಗಳಿಂದ ಮಾಹಿತಿ ಪರಿಶೀಲಿಸಿ, ನಂತರ ಶೇರ್ ಮಾಡಿ" ಎಂದು ಪಿಐಬಿ ಸಲಹೆ ನೀಡಿದೆ.
ಈ ಸುದ್ದಿಯನ್ನು ಓದಿ: Viral Video: ಸಚಿವರ ಕಾರ್ಯಕ್ರಮಕ್ಕೆ ಮದ್ಯದ ಅಮಲನಲ್ಲಿ ಬಂದ ಅಧಿಕಾರಿ; ಬಂಧನದ ಆದೇಶ
20 ರೂ. ಹೊಸ ನೋಟುಗಳ ಬಿಡುಗಡೆ: ಆರ್‌ಬಿಐ 20 ರೂ. ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ, ಇವುಗಳಲ್ಲಿ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಹಸ್ತಾಕ್ಷರ ಇರಲಿದೆ. ಈಗಿರುವ 20 ರೂ. ನೋಟುಗಳು ಅಮಾನ್ಯವಾಗದೆ ಸಿಂಧುವಾಗಿ ಮುಂದುವರಿಯಲಿವೆ.