Amaal Mallik: ಮೀ ಟೂ ಆರೋಪ ಬೆನ್ನಲ್ಲೇ ಖ್ಯಾತ ಗಾಯಕನನ್ನು ದೂರವಿಟ್ಟ ಸಂಬಂಧಿಕರು
ಖ್ಯಾತ ಸಂಗೀತ ನಿಯೋಜಕ ಅಮಾಲ್ ಮಲ್ಲಿಕ್, ತಮ್ಮ ಚಿಕ್ಕಪ್ಪ ಅನು ಮಲ್ಲಿಕ್ ಜೊತೆ ಯಾವುದೇ ವೈಯಕ್ತಿಕ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮೀಟೂ ಸಂದರ್ಭದಲ್ಲಿ ಅನು ಮಲ್ಲಿಕ್ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳು ಕೇಳಿಬಂದಾಗ, ಈ ವಿಷಯದಲ್ಲಿ ಮೌನವಾಗಿದ್ದಕ್ಕೆ ಕಾರಣವನ್ನು ಇತ್ತೀಚಿನ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.


ಮುಂಬೈ: ಖ್ಯಾತ ಸಂಗೀತ ಸಂಯೋಜಕ ಅಮಾಲ್ ಮಲ್ಲಿಕ್ (Amaal Mallik), ತಮ್ಮ ಚಿಕ್ಕಪ್ಪ ಅನು ಮಲ್ಲಿಕ್ (Anu Malik) ಜೊತೆ ಯಾವುದೇ ವೈಯಕ್ತಿಕ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮೀಟೂ (MeToo) ಸಂದರ್ಭದಲ್ಲಿ ಅನು ಮಲ್ಲಿಕ್ ವಿರುದ್ಧ ಲೈಂಗಿಕ ಕಿರುಕುಳ (Sexual Harassment)ಆರೋಪಗಳು ಕೇಳಿಬಂದಾಗ, ಈ ವಿಷಯದಲ್ಲಿ ಮೌನವಾಗಿದ್ದಕ್ಕೆ ಕಾರಣವನ್ನು ಇತ್ತೀಚಿನ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.
"ಅನು ಮಲ್ಲಿಕ್ ವಿರುದ್ಧ ಮೀಟೂ ಆರೋಪಗಳು ಬಂದಾಗ ನಾನು ಯಾವುದೇ ಬೆಂಬಲ ನೀಡಲಿಲ್ಲ ಅಥವಾ ಮಾತನಾಡಲಿಲ್ಲ. ಅವರನ್ನು ನಾನು ಕುಟುಂಬದವರೆಂದು ಭಾವಿಸುವುದಿಲ್ಲ. ಆ ಆರೋಪಗಳಿಂದ ನನಗೆ ತೀವ್ರ ಮುಜುಗರವಾಯಿತು. ನಮ್ಮ ನಡುವೆ ಎಂದೂ ಸಂಬಂಧ ಇರಲಿಲ್ಲ. ಆದರೆ, ಇಷ್ಟೊಂದು ಜನ ಆರೋಪ ಮಾಡಿದ್ದಾರೆಂದರೆ, ಇದರಲ್ಲಿ ಕೆಲವಾದರೂ ಸತ್ಯವಿರಬೇಕು. ಇಲ್ಲದಿದ್ದರೆ ಯಾಕೆ ಜನ ಆರೋಪ ಮಾಡುತ್ತಾರೆ? ಒಬ್ಬ ವ್ಯಕ್ತಿಯ ವಿರುದ್ಧ ಐದು ಜನ ಒಟ್ಟಾಗಿ ಮಾತನಾಡಲು ಸಾಧ್ಯವಿಲ್ಲ" ಎಂದು ಅಮಾಲ್ ಹೇಳಿದ್ದಾರೆ.
ಮೀಟೂ ಚಳವಳಿಯ ಉತ್ತುಂಗದಲ್ಲಿ ಅನು ಮಲ್ಲಿಕ್ ವಿರುದ್ಧ ಹಲವು ಮಹಿಳೆಯರು ಅನುಚಿತ ವರ್ತನೆಯ ಆರೋಪ ಮಾಡಿದ್ದರು. ಹಲವು ಮಹಿಳಾ ಕಲಾವಿದರ ಜೊತೆ ಕೆಲಸ ಮಾಡಿರುವ ಅಮಾಲ್, ತಮ್ಮ ತಂದೆ ಕೂಡ ತಮ್ಮ ಬಗ್ಗೆಯೂ ಇಂತಹ ಆರೋಪಗಳು ಬರಬಹುದೇ ಎಂದು ಆತಂಕ ವ್ಯಕ್ತಪಡಿಸಿದ್ದರು ಎಂದು ತಿಳಿಸಿದರು. "ನನ್ನ ತಂದೆ ನನ್ನನ್ನು ನೀನೂ ಕೂಡ ಇದರಲ್ಲಿ ಸಿಲುಕಿಕೊಳ್ಳುತ್ತಿಯಾ ಎಂದು ಕೇಳಿದರು. ನಾನು, ಅದು ಸಾಧ್ಯವೇ ಇಲ್ಲ. ಹಾಡುಗಳಿಗೆ ಬದಲಾಗಿ ದೈಹಿಕ ಸೌಲಭ್ಯ ಕೇಳುವ ವ್ಯಕ್ತಿಯಲ್ಲ ಎಂದು ತಿಳಿಸಿದೆ ಎಂದು ಎಂದು ಅಮಾಲ್ ಮಲ್ಲಿಕ್ ಹೇಳಿದರು.
ಅನು ಮಲ್ಲಿಕ್ ಜೊತೆಗಿನ ಪ್ರಸ್ತುತ ಸಂಬಂಧದ ಬಗ್ಗೆ ಮಾತನಾಡಿದ ಅಮಾಲ್, "ಸಾರ್ವಜನಿಕವಾಗಿ ಭೇಟಿಯಾದಾಗ ಗೌರವವನ್ನು ತೋರಿಸುತ್ತೇನೆ. ಆದರೆ, ಅವರ ತಪ್ಪುಗಳನ್ನು ತಿಳಿದ ಮೇಲೆ ಒಳ್ಳೆಯ ಸಂಬಂಧವಿಲ್ಲ. ಅವರ ಕುಟುಂಬದ ಜೊತೆ ಯಾವುದೇ ಸಂಪರ್ಕವಿಲ್ಲ. ವರ್ಷಗಳಿಂದ ಭೇಟಿಯಾಗಿಲ್ಲ ಎಂದರು.