S L M Patil Column: ಹೀಗಿತ್ತು ಎ.ಕೆ.ರಾಮಾನುಜನ್ʼರ ಸೌಹಾರ್ದಮಯ ಒಡನಾಟ
ಎ.ಕೆ.ರಾಮಾನುಜನ್ ಅವರು ಭಾರತದಲ್ಲಿದ್ದ ದಿನಗಳಲ್ಲಿ ಒಡನಾಡಿದ ಮುಖ್ಯವಾದ ನಗರ ಗಳೆಂದರೆ ಮೈಸೂರು, ಬೆಳಗಾವಿ ಮತ್ತು ಧಾರವಾಡ. ಮೈಸೂರಿನಲ್ಲಿ ಯು.ಆರ್.ಅನಂತಮೂರ್ತಿ, ಅಡಿಗ ರೊಂದಿಗೆ, ಬೆಳಗಾವಿಯಲ್ಲಿ ಸುಮತೀಂದ್ರ ನಾಡಿಗ, ಚಂದ್ರಶೇಖರ ಕಂಬಾರರೊಂದಿಗೆ, ಧಾರವಾಡದಲ್ಲಿ ಚೆನ್ನವೀರ ಕಣವಿ, ಕೀರ್ತಿನಾಥ ಕುರ್ತಕೋಟಿ, ಶಂಕರ ಮೊಖಾಶಿ ಪುಣೇಕರ ರೊಂದಿಗೆ ಅವರ ಒಡನಾಟವಿತ್ತು.


ಸಂಸ್ಮರಣೆ
ಎಸ್.ಎಲ್.ಎಂ.ಪಾಟೀಲ
ವಿಶ್ವಮಾನ್ಯ ಕವಿ, ಪ್ರಾಧ್ಯಾಪಕ, ಚಿಂತಕ, ಭಾಷಾಂತರಕಾರ, ಭಾಷಾತಜ್ಞ ಹೀಗೆ ಬಹುಮುಖ ಪ್ರತಿಭೆ ಗಳ ಅನುಪಮ ಸಂಗಮ ಎನಿಸಿಕೊಂಡಿದ್ದ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಹತ್ವದ ಕೊಡುಗೆ ಕೊಟ್ಟಿದ್ದರ ಜತೆಗೆ ‘ಕನ್ನಡ-ಕಸ್ತೂರಿ’ಯ ಕಂಪನ್ನು ಇಂಗ್ಲಿಷ್ ಭಾಷೆಯ ಮೂಲಕ ವಿಶ್ವದೆಲ್ಲೆಡೆ ಪಸರಿಸಿದ ಅತ್ತಿಪಟ್ ಕೃಷ್ಣಸ್ವಾಮಿ ರಾಮಾನುಜನ್ (ಎ.ಕೆ.ರಾಮಾನು ಜನ್) ಅವರು ನಿಧನರಾಗಿದ್ದು ೧೯೯೩ರ ಜುಲೈ ೧೩ರಂದು. ಅವರ ಸವಿನೆನಪಿಗಾಗಿ ಈ ಲೇಖನ.
ಎ.ಕೆ.ರಾಮಾನುಜನ್ ಅವರು ಭಾರತದಲ್ಲಿದ್ದ ದಿನಗಳಲ್ಲಿ ಒಡನಾಡಿದ ಮುಖ್ಯವಾದ ನಗರ ಗಳೆಂದರೆ ಮೈಸೂರು, ಬೆಳಗಾವಿ ಮತ್ತು ಧಾರವಾಡ. ಮೈಸೂರಿನಲ್ಲಿ ಯು.ಆರ್.ಅನಂತಮೂರ್ತಿ, ಅಡಿಗರೊಂದಿಗೆ, ಬೆಳಗಾವಿಯಲ್ಲಿ ಸುಮತೀಂದ್ರ ನಾಡಿಗ, ಚಂದ್ರಶೇಖರ ಕಂಬಾರರೊಂದಿಗೆ, ಧಾರವಾಡದಲ್ಲಿ ಚೆನ್ನವೀರ ಕಣವಿ, ಕೀರ್ತಿನಾಥ ಕುರ್ತಕೋಟಿ, ಶಂಕರ ಮೊಖಾಶಿ ಪುಣೇಕರ ರೊಂದಿಗೆ ಅವರ ಒಡನಾಟವಿತ್ತು.
ಬೆಳಗಾವಿಯ ಲಿಂಗರಾಜ ಕಾಲೇಜಿಗೆ ಅವರು 1952ರಲ್ಲಿ ಕಿರಿಯ ಇಂಗ್ಲಿಷ್ ಉಪನ್ಯಾಸಕರೆಂದು ಬಂದರು. ಯಾವ ಊರಿನಲ್ಲೂ 2 ವರ್ಷಕ್ಕಿಂತ ಹೆಚ್ಚಿಗೆ ಇರಕೂಡದೆಂದು ತಾವೇ ವಿಧಿಸಿಕೊಂಡ ನಿಯಮ ಮೀರಿ, ಆರ್ಥಿಕ ಕಾರಣದಿಂದ ಅವರು 1957ರವರೆಗೂ ಬೆಳಗಾವಿಯಲ್ಲೇ ಇದ್ದರು. ಇದು ಅವರ ಜೀವನದಲ್ಲಿನ ಪ್ರಮುಖ ಕಾಲಘಟ್ಟವಾಗಿತ್ತು. ಆಗಿನ ಪ್ರಸಿದ್ಧ ಇಂಗ್ಲಿಷ್ ವಾರಪತ್ರಿಕೆ The Illustrated Weekly Of Indiaದಲ್ಲಿ ಅವರ ಕವನಗಳು ಪ್ರಕಟವಾದವು. ಆದರೆ ಎಲ್ಲಕ್ಕಿಂತ ಮಹತ್ವದ ಬೆಳವಣಿಗೆಯೆಂದರೆ, ಅವರು ಕನ್ನಡದ ವಚನಗಳನ್ನು ಇಂಗ್ಲಿಷ್‌ಗೆ ಅನುವಾದಿಸಲು ಶುರು ಮಾಡಿದ್ದು ಇಲ್ಲಿದ್ದಾಗಲೇ.
ಆ ಕೆಲಸ ಮಾಡುವಾಗ ಅವರು ಆಗಾಗ್ಗೆ ಭೂಗತರಾಗುತ್ತಿದ್ದರು ಎನ್ನುತ್ತಿದ್ದರು ಅವರ ಸಹೋದ್ಯೋಗಿಗಳು. ಗಿರೀಶ್ ಕಾರ್ನಾಡರು ಹೇಳುವಂತೆ, ಆ ಕಾಲದಲ್ಲಿ ವಚನಗಳು ಕೇವಲ ಧಾರ್ಮಿಕ ಕೃತಿಗಳಾಗಿದ್ದು, ಕನ್ನಡದ ಎಷ್ಟೋ ಪ್ರೊಫೆಸರ್‌ಗಳಿಗೇ ಅವುಗಳ ಬಗ್ಗೆ ಜಾಸ್ತಿ ಅರಿವಿರ ಲಿಲ್ಲ. ರಾಮಾನುಜನ್ ಮಾತ್ರ ಅವನ್ನು ಕಾವ್ಯಗಳೆಂದು ಪರಿಗಣಿಸಿ Speaking of Siva ಎಂದರು.
ಇದನ್ನೂ ಓದಿ: K Janardhana Thunga Column: ಮಗ ಬರೆದ ಅಪ್ಪನ ಆತ್ಮಕಥೆ
ಉಳಿದ ಅನುವಾದಗಳಿಗಿಂತ ಇವರದ್ದು ಭಿನ್ನವಾಗಿತ್ತು. ಈ ಅನುವಾದದಿಂದಾಗಿ ಕನ್ನಡದ ವಚನಕಾರರು ವಿಶ್ವದ ಗಮನ ಸೆಳೆದರು. ಜತೆಗೆ ರಾಮಾನುಜನ್‌ರಿಗೂ ಅಪಾರವಾದ ಅಂತಾರಾ ಷ್ಟ್ರೀಯ ಖ್ಯಾತಿ ಬಂದಿತು. ಧಾರವಾಡದ ಹಿರಿಯ ಪ್ರೊಫೆಸರ್ ಹಾಗೂ ಖ್ಯಾತ ವಿದ್ವಾಂಸ ಆರ್ಮೆಂಡೋ ಮೆನೆಜಿಸ್‌ರ ವಚನಗಳ ಅನುವಾದದ ಬಗ್ಗೆ ನಾನು ಕೇಳಿದಾಗ ರಾಮಾನುಜನ್ ಅವರ ಬಗ್ಗೆ ಗೌರವ ವ್ಯಕ್ತಪಡಿಸಿದರು,
ಆದರೆ ಅವು ಕಾವ್ಯವಾಗಿಲ್ಲ ಎಂದರು. ಕುತೂಹಲಕಾರಿ ವಿಷಯವೆಂದರೆ, ಶಿಕಾಗೋದ ಅವರ ಮನೆಯಲ್ಲಿ ಮೆನೆಜಿಸ್‌ರ ಶಿಷ್ಯೆಯೊಬ್ಬರು ಭೇಟಿಯಾಗಿ, ‘ರಾಮಾನುಜನ್, ನಿಮ್ಮ ಅನುವಾದಕ್ಕಿಂತ ಮೆನೆಜಿಸ್ ಅವರದ್ದು ಚೆನ್ನಾಗಿದೆ’ ಎಂದಾಗ ರಾಮಾನುಜನ್ ಸುಮ್ಮನಿದ್ದರಂತೆ. ಆದರೆ ಮರುದಿನ ಫೋನ್ ಮಾಡಿ, ‘ನೀವು ಹೇಳಿದ್ದು ಸರಿಯಿದೆ’ ಎಂದರಂತೆ. ಕನ್ನಡದ ಈ ವಚನಗಳನ್ನು ಹಾಗೂ ಆಳ್ವಾರರ ಪದ್ಯಗಳನ್ನು ರಾಮಾನುಜನ್ ಕೊನೆಯವರೆಗೂ ನೆನಪಿಸಿಕೊಳ್ಳುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ ಯು.ಆರ್.ಅನಂತಮೂರ್ತಿಯವರು.
ಇದೇ ಸಮಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕಾಗಿ ‘ಗಾದೆಗಳು’ ಎಂಬ ನಾಲ್ಕಾಣೆ ಮುಖ ಬೆಲೆಯ ಪುಸ್ತಕ ಮಾಡಿಕೊಟ್ಟರು. ಇದು ಕೂಡ ತುಂಬಾ ಜನಪ್ರಿಯವಾಯಿತು. ಕಾರ್ನಾಡರೇ ಹೇಳುವಂತೆ, ಇಂಗ್ಲಿಷ್ ಅಧ್ಯಾಪಕರೊಬ್ಬರು ಕನ್ನಡದ ಗಾದೆಗಳು, ಒಗಟುಗಳ ಬಗ್ಗೆ ಕೆಲಸ ಮಾಡಿದ್ದು ಅಂದು ಕೆಲವರಿಗೆ ವಿಚಿತ್ರ ಎನಿಸಿತ್ತಂತೆ. ಪ್ರೊ.ಎಂ.ಎಂ.ಕಲಬುರ್ಗಿಯವರು ಗಾದೆಗಳ ಪುಸ್ತಕವನ್ನು ಮೆಚ್ಚಿಕೊಂಡಿದ್ದರೂ, ವಚನಗಳ ಅನುವಾದ, ಅಂದರೆ ಅಂಕಿತನಾಮದ ಅನುವಾದವು ಬಹಳ ಜನರಂತೆ ಅವರಿಗೂ ಇಷ್ಟವಾಗಿರಲಿಲ್ಲ.
ಹನುಮಂತನನ್ನು ‘ಗಾಡ್ ಆಫ್ ಮಂಕೀಸ್’ ಅಂತಾರಾ ರಾಮಾನುಜನ್? ಎಂದು ನನ್ನನ್ನು ಕೇಳಿದ್ದರು (ಆದರೆ, ಅಡಿಗರ ಒಂದು ಪದ್ಯದ ಅನುವಾದದಲ್ಲಿ ರಾಮಾನುಜನ್ ಹಾಗೇ ಮಾಡಿ ದ್ದುಂಟು). ಈಡಿಪಸ್ ಕತೆಯ ಹೊಸದೊಂದು ಅವತಾರ ರಾಮಾನುಜನ್‌ರಿಗೆ ಸಿಕ್ಕಿದ್ದು ಕೂಡ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ. ಈ ಕತೆ ಹೇಳಿದ ಅನಕ್ಷರಸ್ಥ ಅಜ್ಜಿಗೆ ಕೂಡ ಒಂದು ಕಣ್ಣು ಕುರುಡಾಗಿತ್ತು. ಈ ಕತೆಯನ್ನು ಅವರು ‘ಭಾರತದ ಈಡಿಪಸ್’ ಎಂದು ವಿಶ್ಲೇಷಿಸಿದ್ದಾರೆ.
ಒಬ್ಬ ಅಧ್ಯಾಪಕರಾಗಿ ತುಂಬಾ ಜನಪ್ರಿಯರಾಗಿದ್ದ ರಾಮಾನುಜನ್‌ರಲ್ಲಿ, ತಮ್ಮ ಕತೆ, ಜೋಕ್ಸ್ ಮೂಲಕವೂ ಪಾಠ ಹೇಳುವ ವಿಶೇಷತೆಯಿತ್ತು. ಒಮ್ಮೆ ವಿದ್ಯಾರ್ಥಿಗಳು ‘ಜೋಕ್ ಹೇಳಿ’ ಎಂದಾಗ ರಾಮಾನುಜನ್ ತಮ್ಮ ದೇಹವನ್ನು ನಿರ್ದೇಶಿಸಿ ‘ಇದೇ ಒಂದು ಜೋಕ್’ ಎಂದಾಗ ಹುಡುಗರು ನಕ್ಕರು.
ಮುಂದುವರಿದು, ‘ಇದು ನನ್ನ ತಂದೆಯ ಜೋಕ್’ ಎಂದಾಗ ಮತ್ತೆ ನಗು. ‘ನನಗೂ ನಿಮಗೂ ವ್ಯತ್ಯಾಸವೇನಿಲ್ಲ’ ಎಂದಾಗ ಮತ್ತೆ ಮತ್ತೆ ನಗು. ತರಗತಿಯೊಂದರಲ್ಲಿ ವಿದ್ಯಾರ್ಥಿಗಳು ಹುಯಿಲೆ ಬ್ಬಿಸಿದಾಗ ರಾಮಾನುಜನ್, Remember you are on benches, not on branches ಎಂದರಂತೆ. ಆಗ ವಿದ್ಯಾರ್ಥಿಗಳು, ‘ಸರ್, ಇದು ನಿಮ್ಮ ಹಳೆಯ ಜೋಕ್’ ಅಂದಾಗ ರಾಮಾನುಜನ್, I didn't know monkeys have memory also ಅಂದರಂತೆ!
ಹುಡುಗರನ್ನು ಸುಮ್ಮನಿರಿಸಲು ಕೆಲವೊಮ್ಮೆ ಇಂಗ್ಲಿಷ್‌ನ articles ಮತ್ತು prepositions ಹೇಳುತ್ತಿದ್ದ ರಂತೆ. ನಂತರ ರಾಮಾನುಜನ್ ಬರೋಡಾಕ್ಕೆ ತೆರಳಿದಾಗ, ಪ್ರತಿಯೊಂದು ತರಗತಿಯಲ್ಲೂ ಅವರಿಗೆ ಬೀಳ್ಕೊಡುಗೆ ಸಮಾರಂಭ ಆಯಿತಂತೆ. ನನ್ನ ವಿದ್ಯಾರ್ಥಿಯೊಬ್ಬ, ‘ರಾಮಾನುಜನ್‌ರ ತರಗತಿಗಳು ಅದ್ಭುತವಾಗಿರುತ್ತಿದ್ದವು’ ಎಂದೆಲ್ಲ ಉತ್ತರ ಪತ್ರಿಕೆಯಲ್ಲಿ ಬರೆದಿದ್ದ. ನಾನು ಅವನನ್ನು ಕರೆದು, ‘ಅಲ್ಲಪ್ಪಾ, ರಾಮಾನುಜನ್ ತೀರಿಕೊಂಡಾಗ ನೀನಿನ್ನೂ ಹುಟ್ಟಿರಲಿಲ್ಲ, ಮತ್ತೆ ಹೀಗೆಲ್ಲಾ ಬರೆದಿದ್ದೀಯಲ್ಲಾ?’ ಎಂದು ಕೇಳಿದೆ.
ಆಗ ಅವನು, ‘ನಮ್ಮ ಅಜ್ಜ ಹಾಗೆ ಹೇಳಿದರು’ ಎಂದ. ಕಾರ್ನಾಡರು ಹೇಳುವಂತೆ, ಆ ಕಾಲದಲ್ಲಿ ಬೆಳಗಾವಿಯ ಲಿಂಗರಾಜ ಕಾಲೇಜು ಮತ್ತು ಧಾರವಾಡದ ಕರ್ನಾಟಕ ಕಾಲೇಜುಗಳ ಮಧ್ಯೆ ಒಂದು ಆರೋಗ್ಯಕರ ಸ್ಪರ್ಧೆಯಿತ್ತು- ಆಕ್ಸ್ ಫರ್ಡ್ ಮತ್ತು ಕೇಂಬ್ರಿಜ್ ತರಹ. ಕೆಲವು ಸಲ ರಾಮಾನುಜನ್ ವಿದ್ಯಾರ್ಥಿಗಳನ್ನು ಕರೆದುಕೊಂಡು ಧಾರವಾಡಕ್ಕೆ ಬರುತ್ತಿದ್ದರಂತೆ. ಆ ದಿನಗಳಲ್ಲಿ ರಾಮಾನುಜನ್ ಜತೆ ನಿಕಟವಾಗಿದ್ದ ಕಾರ್ನಾಡರು ಅವರ ಪ್ರತಿಭೆಗೆ ಮಾರುಹೋಗಿದ್ದರ ಬಗ್ಗೆ ಬರೆದಿದ್ದಾರೆ.
ಚೆನ್ನವೀರ ಕಣವಿಯವರು ನನ್ನೊಡನೆ ನೆನಪಿಸಿಕೊಂಡ ಹಾಗೆ, 1956ರಲ್ಲಿ ಮೈಸೂರು ರಾಜ್ಯ ಉದಯವಾಗುವ ಕೆಲವೇ ದಿನಗಳ ಮೊದಲು ಬೆಳಗಾವಿಯ ಮೈದಾನವೊಂದರಲ್ಲಿ ಪೊಲೀಸ್ ರಕ್ಷಣೆಯಲ್ಲಿ ದೊಡ್ಡ ಸಭೆ ಏರ್ಪಡಿಸಲಾಗಿತ್ತು. ಈ ಐತಿಹಾಸಿಕ ಸಮಾರಂಭದ ಅಧ್ಯಕ್ಷತೆಯನ್ನು ರಾಮಾನುಜನ್ ವಹಿಸಿದ್ದರು.
ರಾಮಾನುಜನ್‌ರ ಆತ್ಮೀಯ ಸ್ನೇಹಿತರಾಗಿದ್ದ ಕೀರ್ತಿನಾಥ ಕುರ್ತಕೋಟಿಯವರು, ಅವರ ಕುರಿತಂತೆ ಒಂದೆರಡು ಸ್ವಾರಸ್ಯಕರ ವಿಷಯಗಳನ್ನು ನನಗೆ ಹೇಳಿದರು. ಶಂಕರ ಮೊಖಾಶಿ ಪುಣೇಕರರು ಬೆಳಗಾವಿಯಲ್ಲಿ ರಾಮಾನುಜನ್‌ರನ್ನು ಭೇಟಿ ಮಾಡಿ ಬಂದ ಮೇಲೆ ಧಾರವಾಡದಲ್ಲಿ ಕುರ್ತಕೋಟಿ ಯವರೊಡನೆ ಹೀಗೆಂದರಂತೆ: ‘ಬೆಳಗಾವಿಗೆ ರಾಮಾನುಜನ್ ಅಂತ ಒಬ್ಬ ಇಂಗ್ಲಿಷ್ ಲೆಕ್ಚರರ್ ಬಂದಾನಪ್ಪ.
ಅಂವಾ ಏನೋ ಮಾರಾಯಾ, ಮಿಲ್ಟನ್ ಕವೀನ ಅಲ್ಲ ಅಂತಾನ!’. ರಾಮಾನುಜನ್‌ರಿಗೆ ಕಾವ್ಯದ ಬಗ್ಗೆ ತಮ್ಮವೇ ಆದ ನಿರೀಕ್ಷೆಗಳಿದ್ದವು. ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಅವರು ತಮ್ಮ ಪದ್ಯಗಳನ್ನು ಓದಿದಾಗ ಕೇಳುಗರೊಬ್ಬರು, ‘ನಿಮ್ಮ ಪದ್ಯಗಳನ್ನು ಪದ್ಯ ಎಂದು ಏಕೆ ಕರೆಯಬೇಕು?’ ಎಂದಾಗ ರಾಮಾನುಜನ್ ಅವರ ಉತ್ತರ- ‘ಕರೆಯಬೇಡಿ’!
ಮೇಲ್ನೋಟಕ್ಕೆ ಇದು ಒರಟು ಉತ್ತರವೆನಿಸಿದರೂ, ಅವರಿಗೆ ಕಾವ್ಯದ ಬಗ್ಗೆ ತಮ್ಮದೇ ಕಲ್ಪನೆ ಇದ್ದಿದ್ದನ್ನು ಅದು ಹೇಳುತ್ತದೆ (‘ರಾಮಾನುಜನ್ ನಿಮ್ಮನ್ನು ನಿರುತ್ತರರನ್ನಾಗಿಸುತ್ತಾರೆ’ ಎಂದೂ ಕುರ್ತಕೋಟಿಯವರು ನನಗೆ ಒಮ್ಮೆ ಹೇಳಿದ್ದರು). ಇನ್ನೊಂದು ವಿಷಯವೆಂದರೆ, ಬೇಂದ್ರೆಯವರ ಸಮ್ಮುಖದಲ್ಲಿ ರಾಮಾನುಜನ್ ಸ್ವಲ್ಪ ‘ನರ್ವಸ್’ ಆಗುತ್ತಾರೆ ಎಂದೂ ಅವರು ಹೇಳಿದ್ದರು. ಕಾರಣ ಕೇಳಬೇಕಿತ್ತು ಎಂದು ಈಗ ಅನಿಸುತ್ತದೆ.
ವೃತ್ತಿ ಸಂಬಂಧಿತ ಅಸೂಯೆಯೋ ಏನೋ, ಲಿಂಗರಾಜ ಕಾಲೇಜಿನಲ್ಲಿ ಅವರ ಸಹೋದ್ಯೋಗಿ ಯಾಗಿದ್ದ ಕನ್ನಡದ ಕವಿಯೊಬ್ಬರು ನನ್ನೊಡನೆ ಮಾತಾಡುವಾಗ, ‘ಏನ್ರೀ ನಿಮ್ಮ ರಾಮಾನುಜನ್ ಅವರಿಗೆ ಕನ್ನಡ ಗ್ರಾಮರ್ರೇ ಗೊತ್ತಿಲ್ಲ..’ಎಂದಾಗ ದಂಗಾಗಿದ್ದೆ. ಬೆಳಗಾವಿಯಲ್ಲಿ ಕೆ.ಬಿ.ಕುಲಕರ್ಣಿ ಎಂಬ ಚಿತ್ರಕಲಾವಿದರಿದ್ದರು. ಅವರೊಡನೆ ರಾಮಾನುಜನ್ ಸಾಯಂಕಾಲ ಊರ ಹೊರಗೆ ಕುಳಿತು ಹರಟುತ್ತಿದ್ದರು.
ರಾಮಾನುಜನ್‌ರಿಗೆ ಮರಾಠಿ ಬಾರದು, ಕುಲಕರ್ಣಿಯವರಿಗೆ ಕನ್ನಡ ಬಾರದು. ಹಾಗಾಗಿ ಮಾತೆಲ್ಲಾ ಇಂಗ್ಲಿಷ್‌ನಲ್ಲಿ. ರಾಮಾನುಜನ್ ಒಮ್ಮೆ ಅಂದರಂತೆ, ‘ಕುಲಕರ್ಣಿಯವರೇ, ಈ ಹೆಣ್ಣು ಮಕ್ಕಳು ಜಗಳವಾಡಿದಾಗ, ಆಕಾಶದಲ್ಲಿ ಗುಡುಗಿದಂತೆ ಅನಿಸುತ್ತದಲ್ಲ!’. ಅವರು ಮತ್ತೆ ಹೇಳಿದ್ದು ಏನೆಂದರೆ, ‘ನಾನು ಎಂದಾದರೂ ಅಧ್ಯಾತ್ಮದ ಕಡೆಗೆ ತಿರುಗಿದರೆ, ಅದು ರಾಮಕೃಷ್ಣ ಪರಮಹಂಸರದ್ದು ಆಗಿರುತ್ತದೆ’. ರಾಮಕೃಷ್ಣರ salt dol* ಪ್ರತಿಮೆ ರಾಮಾನುಜನ್‌ರಿಗೆ ಇಷ್ಟವಾಗಿತ್ತು.
ರಾಮಾನುಜನ್ ಭಾರತಕ್ಕೆ ಒಮ್ಮೆ ಬಂದಾಗ ಕುಲಕರ್ಣಿಯವರನ್ನು ಭೇಟಿಯಾಗಲು ಬೆಳಗಾವಿಗೆ ಬಂದಿದ್ದರು. ‘ಕುಲಕರ್ಣಿಯವರೇ, ನಾನೀಗ ವಿವಾಹಿತ, ಗೊತ್ತಾ?’ ಎಂದರಂತೆ ರಾಮಾನುಜನ್. ‘ನಿಮಗೆ ನನ್ನ ಸಹಾನುಭೂತಿಗಳು’ ಎಂದರಂತೆ ಕುಲಕರ್ಣಿ. ‘ನೀವು ಹೀಗೇ ಹೇಳ್ತೀರ ಅಂತ ಗೊತ್ತಿತ್ತು’ ಎಂದರಂತೆ ರಾಮಾನುಜನ್ (ಕುಲಕರ್ಣಿ ಅವಿವಾಹಿತರಾಗಿದ್ದರು). ಸ್ವಲ್ಪ ಸಮಯದ ನಂತರ ರಾಮಾನುಜನ್, ಕುಲಕರ್ಣಿಯವರ ಚಿತ್ರಗಳನ್ನು ವೀಕ್ಷಿಸಿದರು.
ವಿದೇಶದಲ್ಲಿರುವ ಆ ಮಿತ್ರನ ಅಭಿಪ್ರಾಯ ತಿಳಿಯಲು ಬಯಸಿದ ಕುಲಕರ್ಣಿಯವರು, ‘ನನ್ನ ಚಿತ್ರಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?’ ಎಂದು ಕೇಳಿದರು. ಅದಕ್ಕೆ ರಾಮಾನುಜನ್, ‘ತುಂಬ ಚೆನ್ನಾಗಿವೆ. ನನಗೆ ಇಷ್ಟವಾಯ್ತು. ಆದರೆ ನಿಮ್ಮ ಚಿತ್ರಗಳಲ್ಲಿ ನೀವೇಕೆ jump ಮಾಡುವುದಿಲ್ಲ?’ ಎಂದರಂತೆ. ಈ jump ಏನಿರಬಹುದೆಂದು ಕುಲಕರ್ಣಿ ಆಶ್ಚರ್ಯಪಟ್ಟರು.
‘ನಾವು ಕಾವ್ಯದಲ್ಲಿ ನಡೆಯುವುದಿಲ್ಲ, jump ಮಾಡುತ್ತೇವೆ’ ಎಂದೆಲ್ಲ ಸ್ವಲ್ಪ ವಿವರಿಸಿದರು ರಾಮಾನುಜನ್. ‘ಸರಿ, ಆದರೆ ಚಿತ್ರಕಲೆಯ ಭಾಷೆಯೇ ಬೇರೆ’ ಎಂದರು ಕುಲಕರ್ಣಿ. ರಾಮಾನುಜನ್ ಒಪ್ಪಿಕೊಂಡರು. ಆದರೂ ಅವರ ಸೂಚನೆ ಹೊಸದಾಗಿದ್ದು ಕುಲಕರ್ಣಿಯವರನ್ನು ಪ್ರಭಾವಿಸಿತ್ತು. ‘ನನಗೊಂದು ಉದಾಹರಣೆ ಕೊಡಿ, ನಿಮ್ಮ ಸೂಚನೆಯಂತೆ ಮಾಡುತ್ತೇನೆ’ ಎಂದರು ಕುಲಕರ್ಣಿ.
ಇದು ನಡೆದದ್ದು ದೀಪಾವಳಿಯ ಒಂದು ದಿನ. ಬೆಳಗಿನ 10 ಗಂಟೆಯಾದರೂ ಇನ್ನೂ ಚಳಿ. ‘ಕುಲಕರ್ಣಿ, ಬಿಸಿಲು ಚಿತ್ರಿಸುವಾಗ ನೀವೇಕೆ ನೀಲಿ (ತಂಪು) ಬಣ್ಣ ಉಪಯೋಗಿಸಬಾರದು?’ ಎಂದ ರಾಮಾನುಜನ್, ‘ಹೊಸ forms, ವರ್ಣಗಳ ಬಗ್ಗೆ ಚಿಂತಿಸಿ’ ಎಂದೂ ಸೂಚಿಸಿದರು. ಅದರಂತೆ ಪ್ರಯತ್ನಿಸಿ ಕುಲಕರ್ಣಿಯವರು ಯಶಸ್ವಿಯೂ ಆದರು. ‘ನನಗಿಂತ ಅವರು ಚಿಕ್ಕವರಿದ್ದರೂ, ನನಗೆ ಗುರುವಾದರು’ ಎನ್ನುತ್ತ ಮುಗುಳ್ನಕ್ಕರು ಕುಲಕರ್ಣಿ.
‘ರಾಮಾನುಜನ್ ಒಬ್ಬ ಮಧುರ, ಸಾದಾ, ನೇರ ಮಾತಿನ ಮನುಷ್ಯ. ಅವರ ನೆನಪುಗಳು ನನಗೆ ತೊಂದರೆ ಮಾಡುವುದಿಲ್ಲ. ಅವರನ್ನು ಮತ್ತೊಮ್ಮೆ ನೋಡಬೇಕು ಎನಿಸುತ್ತದೆ’ ಎಂದರು ಕುಲಕರ್ಣಿ.
(ಲೇಖಕರು ನಿವೃತ್ತ ಇಂಗ್ಲಿಷ್ ಅಧ್ಯಾಪಕರು ಮತ್ತು ಅನುವಾದಕರು)