Chikkaballapur News: ಭಗೀರಥರ ಪ್ರಯತ್ನದ ಮಾದರಿಯನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳಿ : ಅಪರ ಜಿಲ್ಲಾಧಿಕಾರಿ ಡಾ.ಎನ್ ಭಾಸ್ಕರ್
ಶ್ರೀ ಭಗೀರಥ ಮಹರ್ಷಿ ತಮ್ಮ ಪೂರ್ವಜರಿಗೆ ಸದ್ಗತಿ ದೊರಕಿಸಿಕೊಡುವುದಕ್ಕಾಗಿ ದೇವಗಂಗೆಯನ್ನೇ ಭೂಲೋಕಕ್ಕೆ ತರಲು ಮಾಡಿದ ನಿರಂತರ ಪ್ರಯತ್ನ ಎಲ್ಲರಿಗೂ ಮಾದರಿ. ಈ ನಿರಂತರ ಪ್ರಯತ್ನದ ಮಾರ್ಗವನ್ನು ಸಾಮಾಜಿಕ ಸೇವೆ ನೀಡುವ ಗುರಿಗಾಗಿ ನಾವುಗಳು ಜೀವನ ದಲ್ಲಿ ಅಳವಡಿಸಿಕೊಂಡರೆ ಎಲ್ಲರಿಗೂ ಒಳಿತಾಗುತ್ತದೆ

ಭಗೀರಥರ ಪ್ರಯತ್ನದ ಮಾದರಿಯನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳಿ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್ ಭಾಸ್ಕರ್ ತಿಳಿಸಿದರು.

ಚಿಕ್ಕಬಳ್ಳಾಪುರ : ಶ್ರೀ ಭಗೀರಥ ಮಹರ್ಷಿ ತಮ್ಮ ಪೂರ್ವಜರಿಗೆ ಸದ್ಗತಿ ದೊರಕಿಸಿಕೊಡುವುದಕ್ಕಾಗಿ ದೇವಗಂಗೆಯನ್ನೇ ಭೂಲೋಕಕ್ಕೆ ತರಲು ಮಾಡಿದ ನಿರಂತರ ಪ್ರಯತ್ನ ಎಲ್ಲರಿಗೂ ಮಾದರಿ. ಈ ನಿರಂತರ ಪ್ರಯತ್ನದ ಮಾರ್ಗವನ್ನು ಸಾಮಾಜಿಕ ಸೇವೆ ನೀಡುವ ಗುರಿಗಾಗಿ ನಾವುಗಳು ಜೀವನ ದಲ್ಲಿ ಅಳವಡಿಸಿಕೊಂಡರೆ ಎಲ್ಲರಿಗೂ ಒಳಿತಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್ ತಿಳಿಸಿದರು. ನಗರದ ಡಾ.ಬಿ.ಅರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭಗೀರಥ ಜಯಂತಿ''ಯ ಕಾರ್ಯಕ್ರಮದಲ್ಲಿ ಶ್ರೀ ಭಗೀರಥರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಭಗೀರಥನು ಇಕ್ಷ್ವಾಕು ರಾಜವಂಶ ದಿಲೀಪ ರಾಜನ ಮಗನಾಗಿ ಜನಿಸಿದನು. ಭಗೀರಥ ಶಿವನನ್ನು ಕುರಿತು ತಪಸ್ಸು ಮಾಡಿದಾಗ ಶಿವ ಪ್ರತ್ಯಕ್ಷನಾಗಿ ಭಗೀರಥರ ಕೋರಿಕೆಯಂತೆ ಗಂಗೆಯು ಆಕಾಶದಿಂದ ಧುಮ್ಮಿಕ್ಕಿದಳು. ಶಿವನ ಜಟೆಯಲ್ಲಿ ಧರಿಸಿದ ಗಂಗೆಯು ಭೂಮಿಗಿಳಿದು ಭಗೀರಥನ ರಥದ ಹಿಂದೆ ಹರಿಯುತ್ತಾ ಹೊರಟಳು. ಮುಟ್ಟಿದ ಜಾಗವನ್ನೆಲ್ಲಾ ಪವಿತ್ರಗೊಳಿಸುತ್ತಾ ಭಗೀರಥನ ತಂದೆ ತಾತಂದಿರಿಗೆ ಸ್ವರ್ಗ ಪ್ರಾಪ್ತಿಯಾಗುವ ಹಾಗೆ ಮಾಡಿದಳು ಎಂಬ ಪ್ರತೀತಿ ಇದೆ ಎಂದರು.
ಇದನ್ನೂ ಓದಿ: Chikkaballapur News: ಜಿಲ್ಲಾ ಕೇಂದ್ರ ಬಸ್ ನಿಲ್ದಾಣದಲ್ಲಿ ಯಶಸ್ವಿಯಾಗಿ ನಡೆದ ಆಪರೇಷನ್ ಅಭ್ಯಾಸ್ ಅಣಕು ಕವಾಯತು
ಯಾವುದೇ ಕಾರ್ಯವನ್ನು ಆರಂಭಿಸಿದ ಮೇಲೆ ಅದು ಎಷ್ಟೇ ಬಾರಿ ವಿಫಲ ಆದರೂ ತಮ್ಮ ಗುರಿಯನ್ನು ಬದಲಾವಣೆ ಮಾಡಬಾರದು, ಏಕಾಗ್ರತೆಯಿಂದ ಆ ಕೆಲಸ ಪೂರ್ಣ ಮಾಡಲು ನಿರಂತರ ಪ್ರಯತ್ನ ಮಾಡಬೇಕು ಎಂಬ ಭಗೀರಥರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸಬೇಕು. ಪ್ರಯತ್ನವನ್ನು ಪದೇ ಪದೇ ಮಾಡುತ್ತಿದ್ದರೆ ತಕ್ಕ ಪ್ರತಿಫಲ ಸಿಗುತ್ತದೆ ಅದಕ್ಕೆ ನಮಗೆಲ್ಲ ಸ್ಪಷ್ಟ ಉದಾಹರಣೆಯೇ ಭಗೀರಥ. ಅದಕ್ಕಾಗಿಯೇ "ಭಗೀರಥ ಪ್ರಯತ್ನ"ಎಂಬ ಮಾತು ಜನಜನಿತವಾಗಿದೆ. ಕಪಿಲ ಮಹರ್ಷಿ ಕೋಪಾಗ್ನಿಗೆ ತುತ್ತಾಗಿ ಬೂದಿಯಾದ ಪೂರ್ವಜರಿಗೆ ಸದ್ಗತಿ ದೊರಕಿಸಿಕೊಡಲು ಅವರು ನಡೆಸಿದ ನಿರಂತರ ಪ್ರಯತ್ನ ಇಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅವರು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭೂಮಾಪನ ಇಲಾಖೆಯ ನಿವೃತ ಜಂಟಿ ನಿರ್ದೇಶಕ ವಿ ಅಜ್ಜಪ್ಪ ಮತನಾಡಿ ಇದು ಜ್ಞಾನದ ಯುಗವಾಗಿರುವುದರಿಂದ ಎಲ್ಲರೂ ಶಿಕ್ಷಣದ ಕಡೆ ಮುಖ ಮಾಡಬೇಕು. ನಾವು ನಮ್ಮ ಜೀವನದಲ್ಲಿ ಮುಖ್ಯವಾಗಿ ಎರಡು ರೀತಿಯ ಅಧಿಕಾರವನ್ನು ಪಡೆದುಕೊಳ್ಳಲು ಎಲ್ಲರೂ ಪ್ರಯತ್ನ ಮಾಡುತ್ತಾರೆ. ಒಂದು ರಾಜಕೀಯ ಅಧಿಕಾರ ಮತ್ತೊಂದು ನೌಕರಶಾಹಿ ಅಧಿಕಾರ. ಅಧಿಕಾರ ಪಡೆಯುವ ಶಕ್ತಿ ನಮ್ಮಲ್ಲಿಯೇ ಇದೆ. ಉತ್ತಮ ಶಿಕ್ಷಣವನ್ನು ಪಡೆದು, ಉತ್ತಮ ವಾದ ಹುದ್ದೆಗಳನ್ನು ಅಲಂಕರಿಸಲು ನಿರಂತರ ಪ್ರಯತ್ನ ಮಾಡಿದರೆ ಅದು ನಿಜವಾದ ಭಗೀರಥನ ಪ್ರಯತ್ನ ಆಗುತ್ತದೆ ಈ ನಿಟ್ಟಿನಲ್ಲಿ ಸಮುದಾಯದ ವಿದ್ಯಾರ್ಥಿಗಳು ಪ್ರಯತ್ನ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭಗೀರಥ ಸಮುದಾಯ ಭವನ ಕಟ್ಟಲು ಒಂದು ಎಕರೆ ಜಾಗ ಮಂಜೂರು ಮಾಡಲು ಸಮುದಾಯದವರು ಜಿಲ್ಲಾಡಳಿತಕ್ಕೆ ಈ ವೇಳೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸದ ಮಕ್ಕಳಿಗೆ ಹಾಗೂ ಸಮುದಾಯದ ಹಿರಿಯ ಮುಖಂಡರಿಗೆ ಸನ್ಮಾನಿಸಿ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎನ್ ರಮೇಶ್, ತಹಸಿಲ್ದಾರ್ ಅನಿಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ ರವಿಕುಮಾರ್, ಸಮುದಾಯದ ಮುಖಂಡರಾದ ಬಿ.ವೆಂಕಟೇಶ್ , ಎನ್ ಜಯರಾಮ್, ವೆಂಕಟಕೃಷ್ಣ, ಮುನಿರಾಜು, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.