ಜಸ್ಪ್ರೀತ್ ಬುಮ್ರಾ ಅಲ್ಲ! ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆಯುವ ಬೌಲರ್ ಆರಿಸಿದ ಆರ್ ಅಶ್ವಿನ್!
R Ashwin on Chris Woaks: ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿಯ ಆರಂಭಕ್ಕೆ ಒಂದು ದಿನ ಬಾಕಿ ಇದೆ. ಈ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ಗಳನ್ನು ಪಡೆಯಬಲ್ಲ ಬೌಲರ್ ಬಗ್ಗೆ ಸ್ಪಿನ್ ದಿಗ್ಗಜ ಆರ್ ಅಶ್ವಿನ್ ಭವಿಷ್ಯ ನುಡಿದಿದ್ದಾರೆ. ಆದರೆ, ಅವರು ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಕಡೆಗಣಿಸಿ ಅಚ್ಚರಿ ಮೂಡಿಸಿದ್ದಾರೆ.

ಕ್ರಿಸ್ ವೋಕ್ಸ್ ಅತಿ ಹೆಚ್ಚು ವಿಕೆಟ್ ಪಡೆಯಲಿದ್ದಾರೆಂದ ಆರ್ ಅಶ್ವಿನ್.

ಲೀಡ್ಸ್: ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿ (IND vs ENG) ಜೂನ್ 20 ರಂದು ಆರಂಭವಾಗಲಿದೆ. ಮೊದಲನೇ ಟೆಸ್ಟ್ ಪಂದ್ಯ ಇಲ್ಲಿನ ಹೆಡಿಂಗ್ಲೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರದಿಂದ ಆರಂಭವಾಗಲಿದೆ. ಈ ಸರಣಿಯ ಮೂಲಕ ಉಭಯ ತಂಡಗಳು ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (WTC 2025-27) ಅಭಿಯಾನವನ್ನು ಆರಂಭಿಸಲಿವೆ. ಜೇಮ್ಸ್ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಚಷಿಸಿದ ಬಳಿಕ ಜೋಫ್ರಾ ಆರ್ಚರ್ ಮತ್ತು ಮಾರ್ಕ್ ವುಡ್ ಅವರು ಇಂಗ್ಲೆಂಡ್ ತಂಡಕ್ಕೆ ಕೀ ಬೌಲರ್ಸ್ ಆಗಿದ್ದಾರೆ. ಈ ಇಬ್ಬರೂ ಗಾಯದಿಂದ ಗುಣಮುಖರಾಗುತ್ತಿರುವ ಕಾರಣ ಇಂಗ್ಲೆಂಡ್ ತಂಡ ತನ್ನ ಯುವ ಬೌಲರ್ಗಳ ಮೂಲಕ ಕಣಕ್ಕೆ ಇಳಿಯಲಿದೆ.
ಮತ್ತೊಂದು ಕಡೆ ಭಾರತ ತಂಡ ಕೂಡ ಆರ್ ಅಶ್ವಿನ್, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಆಡಲಿದೆ. ಈ ಮೂವರು ಆಟಗಾರರು ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಮತ್ತೊಂದು ಕಡೆ ಮೊಹಮ್ಮದ್ ಶಮಿ ಕೂಡ ಫಿಟ್ನೆಸ್ ಕಾರಣ ಆಡುತ್ತಿಲ್ಲ. ಜಸ್ಪ್ರೀತ್ ಬುಮ್ರಾ ವರ್ಕ್ಲೋಡ್ ಮ್ಯಾನೇಜ್ಮೆಂಟ್ ಕಾರಣ ಕೇವಲ ಮೂರು ಪಂದ್ಯಗಳನ್ನು ಮಾತ್ರ ಆಡಲಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ಎರಡು ತಂಡಗಳು ಕೂಡ ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಆಡಲಿವೆ.
IND vs ENG: ಲೀಡ್ಸ್ನಲ್ಲಿ ಭಾರತಕ್ಕೆ ಒಲಿಯಲಿ ಗೆಲುವಿನ ಲೀಡ್
ಕ್ರಿಸ್ ವೋಕ್ಸ್ ಪರ ಆರ್ ಅಶ್ವಿನ್ ಬ್ಯಾಟಿಂಗ್
ಭಾರತ ಹಾಗೂ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ಗಳನ್ನು ಪಡೆಯಬಲ್ಲ ಬೌಲರ್ ಬಗ್ಗೆ ಆರ್ ಅಶ್ವಿನ್ ಭವಿಷ್ಯ ನುಡಿದಿದ್ದಾರೆ. ಇಂಗ್ಲೆಂಡ್ ತಂಡದ ವೇಗದ ಬೌಲರ್ ಕ್ರಿಸ್ ವೋಕ್ಸ್ ಅವರು ಈ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ಗಳನ್ನು ಕಬಳಿಸಲಿದ್ದಾರೆಂದು ಸ್ಪಿನ್ ದಂತಕತೆ ಭವಿಷ್ಯ ನುಡಿದಿದ್ದಾರೆ. ಭಾರತದ ಪರ ಮೊಹಮ್ಮದ್ ಸಿರಾಜ್ ಹೆಚ್ಚಿನ ವಿಕೆಟ್ಗಳನ್ನು ಪಡೆಯಬಹುದೆಂದು ಅವರು ಅಂದಾಜಿಸಿದ್ದಾರೆ.
"ಕ್ರಿಸ್ ವೋಕ್ಸ್ ಈ ಸರಣಿಯಲ್ಲಿ ಎಲ್ಲಾ ಐದು ಪಂಖದ್ಯಗಳನ್ನು ಆಡಲಿದ್ದಾರೆ ಹಾಗೂ ಅವರು ಈ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ಗಳನ್ನು ಕಬಳಿಸಬಹುದು ಅಥವಾ ಸ್ಪಿನ್ನರ್ ಶೋಯೆಬ್ ಬಶೀರ್ಗೂ ಕೂಡ ಅವಕಾಶವಿದೆ. ಭಾರತ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಎಲ್ಲಾ ಪಂದ್ಯಗಳನ್ನು ಆಡುವುದಿಲ್ಲ. ಹಾಗಾಗಿ ಮೊಹಮ್ಮದ್ ಸಿರಾಜ್ ಭಾರತದ ಪರ ಅತಿ ಹೆಚ್ಚು ವಿಕೆಟ್ಗಳನ್ನು ಕಬಳಿಸಬಹುದು," ಎಂದು ಆರ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ತಿಳಿಸಿದ್ದಾರೆ.
IND vs ENG 1st Test: ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್
ರಿಷಭ್ ಪಂತ್ ಅತಿ ಹೆಚ್ಚು ರನ್ ಗಳಿಸಲಿದ್ದಾರೆ: ಅಶ್ವಿನ್
ಇನ್ನು ಬ್ಯಾಟಿಂಗ್ ಬಗ್ಗೆ ಮಾತನಾಡಿದ ಆರ್ ಅಶ್ವಿನ್, ರಿಷಭ್ ಪಂತ್ ಈ ಸರಣಿಯಲ್ಲಿ ಲೀಡಿಂಗ್ ರನ್ ಸ್ಕೋರರ್ ಆಗಲಿದ್ದಾರೆಂದು ಅಂದಾಜಿಸಿದ್ದಾರೆ. ಆದರೆ, ಇವರು ಆರಂಭದಲ್ಲಿ ಕೆಎಲ್ ರಾಹುಲ್ ಪರ ಬ್ಯಾಟ್ ಬೀಸಿದ್ದರು. ಆದರೆ, ಅವರು ಇದೀಗ ತಮ್ಮ ಅಭಿಪ್ರಾಯವನ್ನು ಬದಲಿಸಿಕೊಂಡಿದ್ದಾರೆ. ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸುವ ಮೂಲಕ ಅವರು ಕೆಲವೊಂದು ಕಡಿಮೆ ರನ್ಗೆ ವಿಕೆಟ್ ಒಪ್ಪಿಸಲಿದ್ದಾರೆಂದು ಹೇಳಿದ್ದಾರೆ. ಇಂಗ್ಲೆಂಡ್ ಪರ ಜೋ ರೂಟ್ ಹೆಚ್ಚಿನ ಮೊತ್ತವನ್ನು ಕಲೆ ಹಾಕಲಿದ್ದಾರೆಂದು ಕೂಡ ಸ್ಪಿನ್ ದಿಗ್ಗಜ ಭವಿಷ್ಯ ನುಡಿದಿದ್ದಾರೆ.
"ಕೆಎಲ್ ರಾಹುಲ್ ಅತಿ ಹೆಚ್ಚು ರನ್ ಗಳಿಸಲಿದ್ದಾರೆಂದು ಹೇಳಬಹುದು. ಆದರೆ ಅವರು ಇನಿಂಗ್ಸ್ ಆರಂಭಿಸುವ ಮೂಲಕ ಕೆಲ ಇನಿಂಗ್ಸ್ಗಳಲ್ಲಿ ಅವರು ವೈಫಲ್ಯತೆ ಅನುಭವಿಸಬಹುದು. ಹಾಗಾಗಿ ನಾನು ರಿಷಭ್ ಪಂತ್ ಅವರನ್ನು ಆಯ್ಕೆ ಮಾಡುತ್ತೇನೆ. ಅತಿ ಹೆಚ್ಚು ರನ್ ಹೊಡೆಯುವ ಸಾಮರ್ಥ್ಯ ರಿಷಭ್ ಪಂತ್ಗೆ ಇದೆ. ಇಂಗ್ಲೆಂಡ್ ತಂಡದ ಪರ ಜೋ ರೂಟ್ ಕೂಡ ಮಿಂಚಬಹುದು, ಹಾಗೆಯೇ ಬೆನ್ ಡಕೆಟ್ ಮೇಲೆಯೂ ನೀವು ವಿಶ್ವಾಸ ಇಡಬಹುದು," ಎಂದು ಆರ್ ಅಶ್ವಿನ್ ಹೇಳಿದ್ದಾರೆ.