Kitchen Hacks: ಮಳೆಗಾಲದಲ್ಲಿ ದಿನಸಿ ಕೆಡದಂತೆ ಕಾಪಾಡುವುದು ಹೇಗೆ?
ದಿನಸಿ ಸಂಗ್ರಹಿಟ್ಟಲ್ಲಿ ತೇವಾಂಶ ಹೆಚ್ಚಿದ್ದರೆ ಅದು ಹಾಳು ಆಗುತ್ತದೆ. ಆದರೆ ದಿನಸಿ ಸಂಗ್ರಹವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿದರೆ ಹೆಚ್ಚು ಕಾಲ ಸುರಕ್ಷಿತವಾಗಿ ಇರಿಸಬಹುದು. ಆ ಟ್ರಿಕ್ಸ್ ಅನ್ನು ನೀವು ತಿಳಿದುಕೊಳ್ಳಬೇಕಾ...? ಹಾಗಾದ್ರೆ ಈ ಸುದ್ದಿ ಓದಿ.


ಮಳೆಗಾಲ(Rainy Season) ದಲ್ಲಿ ಅಡುಗೆಮನೆಯ ದಾಸ್ತಾನು(Dinasi) ಸುಧಾರಿಸುವುದು ಸುಲಭಕ್ಕಿಲ್ಲ. ಧಾನ್ಯಗಳು, ಕಾಳು-ಬೇಳೆಗಳು, ಹಿಟ್ಟುಗಳು ಮತ್ತು ಮಸಾಲೆ ವಸ್ತುಗಳನ್ನೆಲ್ಲ ಸುರಕ್ಷಿತವಾಗಿ ಇರಿಸಿಕೊಳ್ಳುವುದು ಕೆಲವೊಮ್ಮೆ ಸವಾಲಾಗುತ್ತದೆ. ಗಂಟಾಗುವುದು, ಅಂಟಾಗುವುದು, ಮುದ್ದೆಯಾಗುವುದು, ಫಂಗಸ್ ಬರುವುದು, ಹುಳು ಬರುವುದು- ಇಂಥವೆಲ್ಲ ತೇವಾಂಶ ಹೆಚ್ಚಿರುವ ವಾತಾವರಣದಲ್ಲಿ ಎದುರಿಸಬೇಕಾದ ಸವಾಲುಗಳು. ಎಷ್ಟೇ ಒಳ್ಳೆಯ ಗುಣಮಟ್ಟದ ದಿನಸಿಯನ್ನು ಖರೀದಿಸಿ ತಂದರೂ, ಅದನ್ನು ವಾತಾವರಣದ ತೇವದಿಂದ ರಕ್ಷಿಸಿಕೊಳ್ಳಲು ವಿಫಲವಾದರೆ ವಸ್ತುಗಳೂ ಹಾಳು, ಹಣವೂ ದಂಡ ಎಂಬಂತೆ ಆಗುತ್ತದೆ. ಮಳೆಗಾಲದಲ್ಲಿ ಮನೆಯ ದಿನಸಿ ದಾಸ್ತಾನುಗಳನ್ನು ರಕ್ಷಿಸಿಟ್ಟುಕೊಳ್ಳುವುದು ಹೇಗೆ? ಇದಕ್ಕಾಗಿ ರಾಸಾಯನಿಕ ಮುಕ್ತವಾದ ಸುರಕ್ಷಿತ ಮಾರ್ಗಗಳು ಉಂಟೇ?
ಬೇವಿನ ಎಲೆಗಳು: ಹಿಂದಿನ ಕಾಲದಲ್ಲಿ ಭತ್ತದ ದೊಡ್ಡ ಉಗ್ರಾಣಗಳ ಮೇಲೆ ಕಹಿಬೇವಿನ ಹಸಿ ಸೊಪ್ಪುಗಳನ್ನು ತಂದು ದಪ್ಪನೆಯ ಹಾಸನ್ನೇ ನಿರ್ಮಿಸುತ್ತಿದ್ದರು. ಇದರಿಂದ ಭತ್ತದ ದಾಸ್ತಾನನ್ನು ಸುರಕ್ಷಿತವಾಗಿ ಕಾಯ್ದುಕೊಳ್ಳಬಹುದು ಎಂಬುದು ಹಿಂದಿನವರ ಅನುಭವವಾಗಿತ್ತು. ಇದು ಇಂದಿಗೂ ಸತ್ಯ. ಅಕ್ಕಿ, ಗೋದಿ ಮುಂತಾದ ಧಾನ್ಯಗಳನ್ನು ಶೇಖರಿಸಿಡುವಾಗ ಮೇಲಿನಿಂದ ಒಂದು ತೆಳುವಾದ ಹಾಸಿನಂತೆ ಕಹಿಬೇವಿನ ಎಲೆಗಳನ್ನು ಹರಡಿ. ಇದು ಹುಳುಗಳು ಬರುವುದನ್ನು ತಡೆಯುತ್ತದೆ.
ಕೆಂಪುಮೆಣಸಿನಕಾಯಿ: ಯಾವುದೇ ರವೆ, ಹಿಟ್ಟುಗಳನ್ನು ಡಬ್ಬಿ ತುಂಬಿಸುವಾಗ ಒಂದಿಷ್ಟು ಗರಿಯಾದ ಕೆಂಪು ಮೆಣಸಿನ ಕಾಯಿಗಳನ್ನು ಇಡಿಯಾಗಿ ಸೇರಿಸಿ. ಇದರ ಘಾಟೇ ಸಾಕು ಹುಳುಗಳನ್ನು ದೂರ ಓಡಿಸುವುದಕ್ಕೆ. ಇದು ಮಾತ್ರವಲ್ಲ, ತಾಜಾ ಮೆಣಸಿನ ಕಾಳುಗಳನ್ನೂ ಇಡಿಯಾಗಿ ಹಿಟ್ಟು, ರವೆಗಳ ಜೊತೆಗೆ ಸೇರಿಸಿ ಇರಿಸಲಾಗುತ್ತದೆ. ಇದೂ ಸಹ ಘಾಟುಮದ್ದಿನಂತೆ ಕೆಲಸ ಮಾಡುತ್ತದೆ.
ದಾಲ್ಚಿನಿ, ಲವಂಗ: ಇಂಥ ಮಸಾಲೆಗಳ ಪರಿಮಳ ನಮಗೆ ಹಿತವಾದರೂ, ಹುಳುಗಳಿಗೆ ಇಷ್ಟವಾಗುವುದಿಲ್ಲ. ಹಾಗಾಗಿ ರವೆಗಳು, ಅವಲಕ್ಕಿ, ಶಾವಿಗೆ, ಸಕ್ಕರೆ ಇತ್ಯಾದಿಗಳನ್ನು ಡಬ್ಬಿ ತುಂಬಿಸುವಾಗ ಹತ್ತಾರು ಲವಂಗಗಳು ಅಥವಾ ಒಂದು ದಾಲ್ಚಿನ್ನಿ ಎಲೆಯನ್ನೋ ಸೇರಿಸಿ. ಇದರಿಂದ ಕಾಳು-ಕಡಿಗಳು ತಾಜಾ ಪರಿಮಳದಿಂದ ಕೂಡಿರುತ್ತವೆ ಮತ್ತು ಕೀಟಗಳಿಂದಲೂ ಮುಕ್ತವಾಗಿರುತ್ತವೆ.
ಬೆಳ್ಳುಳ್ಳಿ: ಚೆನ್ನಾಗಿ ಒಣಗಿರುವ ಮತ್ತು ತಾಜಾ ಇರುವಂಥ ಬೆಳ್ಳುಳ್ಳಿಯ ಎಸಳುಗಳನ್ನು ಬೇಳೆಗಳು, ಕಾಳುಗಳು ಮತ್ತು ಧಾನ್ಯಗಳ ನಡುವೆ ಇರಿಸಬಹುದು. ಇದರ ಕಟು ವಾಸನೆಯಿಂದ ಹುಳುಗಳು ಹತ್ತಿರವೂ ಸುಳಿಯುವುದಿಲ್ಲ. ನೀವು ಡಬ್ಬಗಳನ್ನು ಇರಿಸುವ ಪ್ಯಾಂಟ್ರಿ ಅಥವಾ ಶೆಲ್ಫ್‌ಗಳ ಆಚೀಚೆ ಗಂಧದ ಕಡ್ಡಿಗಳು, ಕರ್ಪೂರಗಳಂಥ ಸುವಾಸನೆಭರಿತ ವಸ್ತುಗಳನ್ನು ಇರಿಸಿ. ಇದರಿಂದಲೂ ಜಿರಳೆಯಂಥ ಒಂದಿಷ್ಟು ಕೀಟಗಳನ್ನು ನಿಯಂತ್ರಣಕ್ಕೆ ತರಬಹುದು.
ಉಪ್ಪು: ಇದು ಎಷ್ಟೋ ಶತಮಾನಗಳಿಂದ ಸಂರಕ್ಷಕವಾಗಿಯೂ ಬಳಕೆಯಾಗುತ್ತಿದೆ. ಹಾಗಾಗಿ ಗೊಜ್ಜುಗಳು, ತೊಕ್ಕುಗಳು, ಪೇಸ್ಟ್ ಮಾದರಿಯ ಯಾವುದಕ್ಕೇ ಆದರೂ ನಾವು ನೆಚ್ಚಿಕೊಳ್ಳುವುದು ಉಪ್ಪನ್ನೇ. ಚಳಿಗಾಲಕ್ಕೆ ಅಥವಾ ಮಳೆಗಾಲಕ್ಕೆಂದು ತರಕಾರಿಗಳನ್ನು ಸಂರಕ್ಷಿಸಿ ಇರಿಸಿಕೊಳ್ಳಬೇಕಾದ ಸ್ಥಳಗಳಲ್ಲಿ, ಅವುಗಳನ್ನು ಉಪ್ಪಿನಲ್ಲಿ ನೆನೆಸಿ ಒಣಗಿಸಿಟ್ಟುಕೊಳ್ಳುವ ಕ್ರಮವೂ ಇದೆ.
ಸಕ್ಕರೆ, ಅಕ್ಕಿ: ಮಳೆಗಾಲದ ಸಂಜೆಗಳಿಗೆ ಬೇಕೆಂದು ಗರಿಯಾದ ಬಿಸ್ಕಿಟ್ ಅಥವಾ ರುಚಿಯಾದ ಕುಕಿಗಳನ್ನು ತಂದಿರಿಸಿಕೊಂಡಿದ್ದೀರಿ. ಘಮ್ಮೆನ್ನುವ ಕಾಫಿ ಪುಡಿಯನ್ನೂ ಡಬ್ಬಿ ತುಂಬಿಸಿದ್ದೀರಿ. ಆದರೆ ಡಬ್ಬಿ ತೆಗೆದಾಗ ಎಲ್ಲವೂ ಮೆತ್ತಗಾಗಿವೆ. ಇಂಥ ಸನ್ನಿವೇಶಗಳನ್ನು ತಪ್ಪಿಸುವುದಕ್ಕೂ ಉಪಾಯಗಳಿವೆ. ಸಕ್ಕರೆಯ ಕಾಗದದ ಪೊಟ್ಟಣಗಳನ್ನು ಇಂಥ ಡಬ್ಬಿಯಲ್ಲಿ ಇರಿಸಬಹುದು; ಅದಿಲ್ಲದಿದ್ದರೆ ಅಕ್ಕಿಯನ್ನು ಸಣ್ಣ ಬಟ್ಟೆಯ ಸಂಚಿಗಳಲ್ಲಿ ತುಂಬಿಸಿ ಬಿಸ್ಕಿಟ್ ಇಲ್ಲವೇ ಕಾಫಿಪುಡಿ ಡಬ್ಬಿಯಲ್ಲಿ ಇರಿಸಬಹುದು. ಇದರಿಂದ ಹೆಚ್ಚುವರಿ ತೇವಾಂಶವನ್ನೆಲ್ಲ ಈ ಸಕ್ಕರೆ/ಅಕ್ಕಿಯ ಪೊಟ್ಟಣಗಳು ಹೀರಿಕೊಳ್ಳುತ್ತವೆ. ಬಿಸ್ಕಿಟ್ ಮತ್ತೆಗಾಗುವುದಿಲ್ಲ; ಕಾಫಿಪುಡಿ ಮುದ್ದೆಯಾಗುವುದೂ ಇಲ್ಲ.
ತೈಲ: ಬೇಳೆ-ಕಾಳುಗಳನ್ನು ರಕ್ಷಿಸಿಕೊಳ್ಳಲು ಖಾದ್ಯತೈಲಗಳೂ ನೆರವಾಗಬಲ್ಲವು. ಕೊಬ್ಬರಿ ಎಣ್ಣೆ ಅಥವಾ ಸಾಸಿವೆ ಎಣ್ಣೆಯ ಕೆಲವು ಹನಿಗಳನ್ನು ಧಾನ್ಯ, ಬೇಳೆ, ಕಾಳುಗಳ ಮೇಲೆ ಸಿಂಪಡಿಸಿ, ಚೆನ್ನಾಗಿ ಕೈಯಾಡಿಸಿ. ಇದರಿಂದ ಆಹಾರಧಾನ್ಯಗಳ ಮೇಲೆ ತೆಳುವಾದ ರಕ್ಷಾಕವಚವೊಂದು ಸೃಷ್ಟಿಯಾಗುತ್ತದೆ. ಇದನ್ನು ಗಾಳಿಯಾಡದ ಡಬ್ಬಗಳಲ್ಲಿ ತುಂಬಿಸಿಡಿ.
ಸ್ವಚ್ಛತೆ: ಡಬ್ಬಿಯಲ್ಲಿದ್ದ ರವೆಯೋ ಅವಲಕ್ಕಿಯೋ ಖಾಲಿಯಾಯಿತೇ? ಹೊಸದನ್ನು ಇದಕ್ಕೆ ತುಂಬಿಸುವ ಮುನ್ನ, ಆ ಡಬ್ಬಿಯನ್ನು ಚೆನ್ನಾಗಿ ತೊಳೆದು, ಒರೆಸಿ, ತೇವವನ್ನು ಆರಿಸಿ. ಈ ರೀತಿ ಪ್ರತಿ ಬಾರಿಯೂ ಶೇಖರಿಸುವ ಡಬ್ಬಗಳನ್ನು ಸ್ವಚ್ಛಗೊಳಿಸುವುದರಿಂದ ದಿನಸಿಗಳನ್ನು ತಾಜಾ ಇರಿಸಿಕೊಳ್ಳಬಹುದು. ಹೀಗೆ ಯಾವುದೇ ರಾಸಾಯನಿಕಗಳು ಇಲ್ಲದೆಯೂ ಮಳೆಗಾಲದ ದಿನಗಳಲ್ಲಿ ದಿನಸಿಗಳನ್ನು ಕೆಡದಂತೆ ಸುರಕ್ಷಿತವಾಗಿ ಇರಿಸಿಕೊಳ್ಳುವುದಕ್ಕೆ ಸಾಧ್ಯವಿದೆ.