Nidradevi Next Door Movie: ‘ನಿದ್ರಾದೇವಿ Next Door’ ಚಿತ್ರದ ‘ಸ್ಲೀಪ್ ಲೆಸ್ ಆಂಥೆಮ್’ ಹಾಡಿಗೆ ಪ್ರೇಕ್ಷಕರು ಫಿದಾ
ಸುರಾಗ್ ನಿರ್ದೇಶನದ ʼನಿದ್ರಾದೇವಿ Next Doorʼ ಚಿತ್ರದ ʼಸ್ಲೀಪ್ ಲೆಸ್ ಆಂಥೆಮ್ʼ ಹಾಡಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ʼಸರಿಗಮʼದಲ್ಲೂ ಈ ಹಾಡು ಭಾರೀ ಟ್ರೆಂಡಿಂಗ್‌ನಲ್ಲಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ʼಸ್ಲೀಪ್ ಲೆಸ್ ಆಂಥೆಮ್ʼ ಸಖತ್ ಸದ್ದು ಮಾಡುತ್ತಿದೆ.


ಬೆಂಗಳೂರು: ಸುರಮ್ ಮೂವೀಸ್ ಲಾಂಛನದಲ್ಲಿ ಜಯರಾಮ ದೇವಸಮುದ್ರ ನಿರ್ಮಿಸಿರುವ ಹಾಗೂ ಸುರಾಗ್ ನಿರ್ದೇಶನದ ʼನಿದ್ರಾದೇವಿ Next Doorʼ ಚಿತ್ರದ (Nidradevi Next Door Movie) ʼಸ್ಲೀಪ್ ಲೆಸ್ ಆಂಥೆಮ್ʼ ಹಾಡನ್ನು ಇತ್ತೀಚೆಗೆ ದುನಿಯಾ ವಿಜಯ್ ಕುಮಾರ್ ಅನಾವರಣ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದರು. ಬಿಡುಗಡೆಯಾದ ಕ್ಷಣದಿಂದಲೇ ನಿದ್ದೆ ಬಾರದ ಹಾಡಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ʼಸರಿಗಮʼದಲ್ಲೂ ಈ ಹಾಡು ಭಾರೀ ಟ್ರೆಂಡಿಂಗ್‌ನಲ್ಲಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ʼಸ್ಲೀಪ್ ಲೆಸ್ ಆಂಥೆಮ್ʼ ಸಖತ್ ಸದ್ದು ಮಾಡುತ್ತಿದೆ. ಅಧಿಕ ಸಂಖ್ಯೆಯಲ್ಲಿ ಯುವಜನತೆ ಈ ಹಾಡಿಗೆ ಹುಕ್ ಸ್ಟೆಪ್ ಹಾಕುತ್ತಿರುವುದು ಹಾಡಿನ ಜನಪ್ರಿಯತೆಗೆ ಸಾಕ್ಷಿ.
Rap ಶೈಲಿಯ ಈ ಗೀತೆಗೆ ಗುಬ್ಬಿ ಮತ್ತು ಸೈಫ್ ಖಾನ್ ಸಾಹಿತ್ಯ ಬರೆದು ಹಾಡಿದ್ದಾರೆ. ನಕುಲ್ ಅಭಯಂಕರ್ ಸಂಗೀತ ನಿರ್ದೇಶನವಿರುವ ʼಸ್ಲಿಪ್ ಲೆಸ್ ಆಂಥೆಮ್ʼ ಸಾಂಗ್ಗೆ ನಾಯಕ ಪ್ರವೀರ್ ಶೆಟ್ಟಿ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗೆ ನಿರ್ದೇಶಕ ಸುರಾಗ್ ಅವರ ಪತ್ನಿ ಸಹನಾ ರಾಮಸ್ವಾಮಿ ಸಹ ನಿರ್ದೇಶಕರಾಗಿ ಸಾಥ್ ಕೊಟ್ಟಿದ್ದಾರೆ. ಭರತ್ ಪರಶುರಾಮ್ ಕ್ಯಾಮರಾ ಹಿಡಿದಿದ್ದಾರೆ.
ʼನಿದ್ರಾದೇವಿ Next Doorʼ ಸಿನಿಮಾದಲ್ಲಿ ಪ್ರವೀರ್‌ಗೆ ಜೋಡಿಯಾಗಿ ರಿಷಿಕಾ ನಟಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಶ್ರುತಿ ಹರಿಹರನ್, ಹಿರಿಯ ನಟ ಕೆ.ಎಸ್. ಶ್ರೀಧರ್, ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಶ್ರೀವತ್ಸ, ಅನೂಪ್, ಐಶ್ವರ್ಯಾ ಗೌಡ, ಮಾಸ್ಟರ್ ಸುಜಯ್ ರಾಮ್, ಕಾರ್ತಿಕ್ ಪತ್ತಾರ್ ಮತ್ತು ಅನುರಾಗ್ ಪಾಟೀಲ್ ಸೇರಿದಂತೆ ಇತರರು ತಾರಾಬಳಗದಲ್ಲಿದ್ದಾರೆ.
ಈ ಸುದ್ದಿಯನ್ನೂ ಓದಿ | Miss Universe Karnataka Tips: ಮಾಡೆಲ್ ಆಗುವ ಹುಡುಗಿಯರಿಗೆ ಮಿಸ್ ಯೂನಿವರ್ಸ್ ಕರ್ನಾಟಕ ವಂಶಿ ನೀಡಿದ 5 ಸಿಂಪಲ್ ಸಲಹೆಗಳಿವು
ನಿರ್ಮಾಪಕ ಜಯರಾಮ ದೇವಸಮುದ್ರ ಈ ಹಿಂದೆ ಇದೇ ಬ್ಯಾನರ್‌ನಲ್ಲಿ ʼರೇವ್ ಪಾರ್ಟಿʼ ಮತ್ತು ʼಎಂಗೇಜ್ಮೆಂಟ್ʼ ಚಿತ್ರಗಳನ್ನು ನಿರ್ಮಿಸಿದ್ದರು. ನಕುಲ್ ಅಭಯಂಕರ್ ಅವರ ಸಂಗೀತ ನಿರ್ದೇಶನವಿರುವ ಬಹು ನಿರೀಕ್ಷಿತ ಈ ಚಿತ್ರಕ್ಕೆ ಅಜಯ್ ಕುಲಕರ್ಣಿ ಛಾಯಾಗ್ರಹಣ, ಉಲ್ಲಾಸ್ ಹೈದೂರ್ ಅವರ ಪ್ರೊಡಕ್ಷನ್ ಡಿಸೈನ್, ಅರ್ಜುನ್ ರಾಜ್ ಸಾಹಸ ನಿರ್ದೇಶನ ಮತ್ತು ಹೇಮಂತ್ ಕುಮಾರ್ ಡಿ. ಅವರ ಸಂಕಲನವಿದೆ.