Stock Market: ಕೊಚ್ಚಿನ್ ಶಿಪ್ ಯಾರ್ಡ್ ಸ್ಟಾಕ್ ಏರುತ್ತಿರುವುದೇಕೆ? ಓಲಾ ಇಳಿಯುತ್ತಿರುವುದೇಕೆ?
Cochin Shipyard: ಕೊಚ್ಚಿನ್ ಶಿಪ್ ಯಾರ್ಡ್ ಕಂಪನಿಯ ಷೇರು ದರ ಇತ್ತೀಚೆಗೆ ಏರಿಕೆಯ ಹಾದಿಯಲ್ಲಿದೆ. ಕಳೆದ 5 ದಿನಗಳಲ್ಲಿ 18% ಹೆಚ್ಚಳವಾಗಿದೆ. ಈಗ 2,330 ರೂ. ಮಟ್ಟದಲ್ಲಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಈ ಷೇರಿನ ದರದಲ್ಲಿ 38% ಏರಿಕೆಯಾಗಿರುವುದು ಅತ್ಯಂತ ಗಮನಾರ್ಹ. ಇದಕ್ಕೆ ಕಾರಣ ಏನು ಎಂಬುದರ ಕುರಿತ ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ.

ಕೇಶವ ಪ್ರಸಾದ್ ಬಿ.
ಕೊಚ್ಚಿನ್ ಶಿಪ್ ಯಾರ್ಡ್ ಕಂಪನಿಯ ಷೇರು ದರ (Stock Market) ಇತ್ತೀಚೆಗೆ ಏರಿಕೆಯ ಹಾದಿಯಲ್ಲಿದೆ. ಕಳೆದ 5 ದಿನಗಳಲ್ಲಿ 18% ಹೆಚ್ಚಳವಾಗಿದೆ. ಈಗ 2,330 ರೂಪಾಯಿಗಳ ಮಟ್ಟದಲ್ಲಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಈ ಷೇರಿನ ದರದಲ್ಲಿ 38% ಏರಿಕೆಯಾಗಿರುವುದು ಅತ್ಯಂತ ಗಮನಾರ್ಹ. ಇದಕ್ಕೆ ಕಾರಣ ಏನು ಎಂಬುದರ ಕುರಿತ ವಿವರ ಇಲ್ಲಿದೆ.
ಕೊಚ್ಚಿನ್ ಶಿಪ್ ಯಾರ್ಡ್-Cochin Shipyard Ltd
ಷೇರಿನ ಈಗಿನ ದರ: 2,347/-
1 ವರ್ಷ ಹಿಂದಿನ ದರ: 1,684/-
1 ವರ್ಷದಲ್ಲಿ ಏರಿಕೆ ಎಷ್ಟು: 38%
5 ವರ್ಷದ ಹಿಂದಿನ ದರ: 121/-
5 ವರ್ಷದಲ್ಲಿ ಏರಿಕೆ ಎಷ್ಟು: 1,814%
ಕಂಪನಿಯ ಮಾರ್ಕೆಟ್ ಕ್ಯಾಪ್: 61,000 ಕೋಟಿ ರುಪಾಯಿ
52 wk high: 2,979/-
52 wk low: 1,180
ಕೊಚ್ಚಿನ್ ಶಿಪ್ ಯಾರ್ಡ್ ಕಂಪನಿ ಕುರಿತು ಒಂದಷ್ಟು ಮಾಹಿತಿ
ಕೊಚ್ಚಿನ್ ಶಿಪ್ ಯಾರ್ಡ್ ಭಾರತದಲ್ಲಿ ಅತ್ಯಂತ ದೊಡ್ಡ ಶಿಪ್ ಬಿಲ್ಡಿಂಗ್ ಮತ್ತು ಮೇಂಟೇನನ್ಸ್ ಇರುವ ಪ್ರಮುಖವಾದ ಬಂದರಾಗಿದೆ. ಕೇರಳದ ಬಂದರು ನಗರ ಕೊಚ್ಚಿಗೆ ಸಮೀಪವಿದೆ. ಸಾರ್ವಜನಿಕ ವಲಯದ ಕಂಪನಿ ಇದಾಗಿದ್ದು, ಮಿನಿರತ್ನ ಸ್ಥಾನಮಾನ ಹೊಂದಿದೆ. 53 ವರ್ಷಗಳ ಹಿಂದೆ ಸ್ಥಾಪನೆಯಾಗಿದೆ.
ಕೊಚ್ಚಿನ್ ಶಿಪ್ ಯಾರ್ಡ್ ಬಂದರಿನಲ್ಲಿ ಹಡಗುಗಳ ವಿನ್ಯಾಸ, ಉತ್ಪಾದನೆ, ದುರಸ್ತಿ ಕೆಲಸಗಳು ನಡೆಯುತ್ತದೆ. ಏರ್ ಕ್ರಾಫ್ಟ್ ಕ್ಯಾರಿಯರ್ಸ್, ಟ್ಯಾಂಕರ್ಗಳು, ಗಸ್ತು ಕಾವಲಿಗೆ ಬಳಸುವ ದೋಣಿಗಳು, ನೌಕೆಗಳನ್ನು ನಿರ್ಮಿಸಲಾಗುತ್ತದೆ. 2017ರಲ್ಲಿ ಇದರ ಐಪಿಒ ನಡೆಯಿತು. 1981ರಲ್ಲಿ ಇಲ್ಲಿ ಎಂಬಿ ರಾಣಿ ಪದ್ಮಿನಿ ಎಂಬ ಹಡಗನ್ನು ತಯಾರಿಸಲಾಯಿತು. ಇದೇ ಶಿಪ್ ಯಾರ್ಡ್ನಲ್ಲಿ ಭಾರತದ ಮೊದಲ ಸ್ವದೇಶಿ ನಿರ್ಮಾಣದ ಏರ್ ಕ್ರಾಫ್ಟ್ ಕ್ಯಾರಿಯರ್ ಯುದ್ಧ ನೌಕೆ ಐಎನ್ಎಸ್ ವಿಕ್ರಾಂತ್ ಅನ್ನು ನಿರ್ಮಿಸಲಾಗಿದೆ. 2022ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇದನ್ನು ಲೋಕಾರ್ಪಣೆ ಮಾಡಿದ್ದರು. ಭಾರತೀಯ ನೌಕಾಪಡೆಗೆ ಇದು ಬಳಕೆಯಾಗುತ್ತಿದೆ.
ಕೊಚ್ಚಿನ್ ಶಿಪ್ ಯಾರ್ಡ್ ಷೇರಿನ ದರ ಏರಿಕೆಗೆ ಕಾರಣವೇನು?
ಡಿಫೆನ್ಸ್ ಸ್ಟಾಕ್ಸ್ಗಳ ಬಗ್ಗೆ ಪಾಸಿಟಿವ್ ಸೆಂಟಿಮೆಂಟ್ ಈಗ ಉಂಟಾಗಿದೆ. ಅದರ ಸಕಾರಾತ್ಮಕ ಪ್ರಭಾವ ಕೊಚ್ಚಿನ್ ಶಿಪ್ ಯಾರ್ಡ್ ಮೇಲೂ ಆಗಿದೆ. ಇದು ಷೇರು ದರ ಏರಿಕೆಗೆ ಪುಷ್ಟಿ ನೀಡಿದೆ. ಇತ್ತೀಚೆಗೆ ಜಿಯೊ-ಪೊಲಿಟಿಕಲ್ ಟೆನ್ಷನ್ಗಳು ಹೆಚ್ಚಾಗಿರುವುದರಿಂದ ಹೊಸ ಡಿಫೆನ್ಸ್ ಆರ್ಡರ್ಗಳು ಏರ್ಪಡುವ ಮತ್ತು ರಕ್ಷಣಾ ವಲಯದ ಕಂಪನಿಗಳ ಆದಾಯ ಹೆಚ್ಚುವ ನಿರೀಕ್ಷೆ ಉಂಟಾಗಿದೆ. ಕೊಚ್ಚಿನ್ ಶಿಪ್ ಯಾರ್ಡ್ನಿಂದ ಯಾವುದೇ ಹೊಸ ಘೋಷಣೆಯಾಗಲಿ, ನೋಟಿಫಿಕೇಶನ್ ಆಗಲಿ ಸ್ಟಾಕ್ ಎಕ್ಸ್ಚೆಂಜ್ ರವಾನೆಯಾಗಿಲ್ಲ. ಆದರೂ ಷೇರು ದರ ಏರಿಕೆಯಾಗಿದೆ. ಅಂದರೆ ದರ ಏರಿಕೆಯು ನ್ಯೂಸ್ ಸೆಂಟ್ರಿಕ್ ಆಗಿರಲಿಲ್ಲ.
ಕೊಚ್ಚಿನ್ ಶಿಪ್ ಯಾರ್ಡ್ ಕಂಪನಿಯ ಆರ್ಡರ್ ಬುಕ್ ಉತ್ತಮವಾಗಿದ್ದು, ಹೂಡಿಕೆದಾರರ ವಿಶ್ವಾಸವನ್ನು ಉಳಿಸಿಕೊಂಡಿದೆ. ಕಂಪನಿಯು ಈಗ 22,500 ಕೋಟಿ ರೂ.ಗಳ ಆರ್ಡರ್ಗಳನ್ನು ಒಳಗೊಂಡಿದೆ. ಡಿಫೆನ್ಸ್ ಪ್ರಾಜೆಕ್ಟ್ಗಳು, ಕಮರ್ಶಿಯಲ್ ಡೊಮೆಸ್ಟಿಕ್ ಆರ್ಡರ್ಗಳು ಮತ್ತು ಕಮರ್ಶಿಯಲ್ ಎಕ್ಸ್ಪೋರ್ಟ್ ಆರ್ಡರ್ಗಳನ್ನು ಇದು ಒಳಗೊಂಡಿದೆ. ಹೀಗಾಗಿ ಷೇರುಗಳ ದರ ಏರಿಕೆಯಾಗುತ್ತಿದೆ.
ಕೊಚ್ಚಿನ್ ಶಿಪ್ ಯಾರ್ಡ್ ಹಣಕಾಸು ಪರಿಸ್ಥಿತಿ ಚೆನ್ನಾಗಿದೆ. ಒಂದು ಕಡೆ ಭಾರಿ ಆರ್ಡರ್ಗಳು, ಮತ್ತೊಂದು ಕಡೆ ಸರ್ಕಾರದ ಪೂರ್ಣ ಬೆಂಬಲ ಇದಕ್ಕಿದೆ. ಕೊಚ್ಚಿನ್ ಶಿಪ್ ಯಾರ್ಡ್ ಕಳೆದ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ 287 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. 11% ಹೆಚ್ಚಳವಾಗಿದೆ.
ಕೊಚ್ಚಿನ್ ಶಿಪ್ ಯಾರ್ಡ್ 1982ರಿಂದಲೂ ಹಡಗುಗಳ ದುರಸ್ತಿ ಸೇವೆ ನೀಡುತ್ತಿದೆ. ಎಲ್ಲ ವಿಧದ ಹಡಗುಗಳ ರಿಪೇರಿ ಕೆಲಸಗಳನ್ನು ಮಾಡುತ್ತದೆ. ಇಂಡಿಯನ್ ನೇವಿ, ಇಂಡಿಯನ್ ಕೋಸ್ಟಲ್ ಗಾರ್ಡ್, ಲಕ್ಷದ್ವೀಪ, ಮೀನುಗಾರರ ನೌಕೆಗಳ ದುರಸ್ತಿಗಳನ್ನು ನಿರ್ವಹಿಸುತ್ತದೆ. ಮರೀನ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತದೆ.
ಎಲೆಕ್ಟ್ರಿಕ್ ಟೂ ವ್ಹೀಲರ್ ಉತ್ಪಾದಕ ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಸಂಸ್ಥೆಯ ಷೇರುಗಳು ಇತ್ತೀಚೆಗೆ ಇಳಿಕೆಯ ಹಾದಿಯಲ್ಲಿದೆ. ಇದಕ್ಕೆ ಕಾರಣವೇನು ಎಂಬುದರ ಕುರಿತ ಮಾಹಿತಿ ಇಲ್ಲಿದೆ.
ಮೊದಲನೆಯದಾಗಿ ಕಳೆದ ಜನವರಿ-ಮಾರ್ಚ್ ಅವಧಿಯಲ್ಲಿ ಓಲಾ ಎಲೆಕ್ಟ್ರಿಕ್ 870 ಕೋಟಿ ರೂ.ಗಳ ನಿವ್ವಳ ನಷ್ಟ ಅನುಭವಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ನಷ್ಟ ಎರಡು ಪಟ್ಟು ಜಾಸ್ತಿಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಗೆ 410 ಕೋಟಿ ರೂ. ನಷ್ಟವಾಗಿತ್ತು.
ಎರಡನೆಯದಾಗಿ ಓಲಾ ಸ್ಕೂಟರ್ಗಳ ಮಾರಾಟದಲ್ಲಿ ಇಳಿಕೆಯಾಗುತ್ತಿದೆ. 2024ರ ಜನವರಿ-ಮಾರ್ಚ್ ಅವಧಿಯಲ್ಲೊ ಓಲಾ ಎಲೆಕ್ಟ್ರಿಕ್ 1 ಲಕ್ಷದ 15 ಸಾವಿರ ಸ್ಕೂಟರ್ಗಳನ್ನು ಮಾರಾಟ ಮಾಡಿತ್ತು. ಆದರೆ 2025ರ ಜನವರಿ-ಮಾರ್ಚ್ ಅವಧಿಯಲ್ಲಿ ಕೇವಲ 51,375 ಸ್ಕೂಟರ್ ಮಾರಾಟವಾಗಿದೆ. 51% ಇಳಿಕೆಯಾಗಿದೆ. ಈ ಬಿಗ್ ಡ್ರಾಪ್ ಹೂಡಿಕೆದಾರರಲ್ಲಿ ಕಳವಳ ಉಂಟು ಮಾಡಿದೆ.
ಟಿವಿಎಸ್ ಮೋಟಾರ್ ಕಂಪನಿಯು ಭಾರತದಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ದ್ವಿ ಚಕ್ರ ವಾಹನ ಮಾರಾಟ ವಿಭಾಗದಲ್ಲಿ ಅಗ್ರ ಸ್ಥಾನಕ್ಕೇರಿದೆ. ಓಲಾವನ್ನು ಹಿಂದಿಕ್ಕಿದೆ. 2025ರ ಏಪ್ರಿಲ್ನಲ್ಲಿ ಟಿವಿಎಸ್ ಮೋಟಾರ್ 19,736 ಎಲೆಕ್ಟ್ರಿಕ್ ಟೂ ವೀಲರ್ಗಳನ್ನು ಮಾರಾಟ ಮಾಡಿತ್ತು. ಓಲಾ 19,709 ಮಾರಿತ್ತು. ಮೇನಲ್ಲಿ ಟಿವಿಎಎಸ್ 24,560 ಎಲೆಕ್ಟ್ರಿಕ್ ಸ್ಕೂಟರ್ ಮಾರಿತ್ತು. ಮೇನಲ್ಲಿ ಓಲಾ 35,000 ಎಲೆಕ್ಟ್ರಿಕ್ ಸ್ಕೂಟರ್ ಮಾರಿ ಮತ್ತೆ ಅಗ್ರ ಸ್ಥಾನಕ್ಕೇರಿದ್ದರೂ, ಟಿವಿಎಸ್ ಪೈಪೋಟಿ ನೀಡುತ್ತಿದೆ.
ಓಲಾದ ಆಫ್ಟರ್ ಸೇಲ್ ಸರ್ವೀಸ್ ಬಗ್ಗೆ ಗ್ರಾಹಕರಲ್ಲಿ ಒಂದಷ್ಟು ಆಕ್ಷೇಪಗಳಿವೆ. ಅದನ್ನು ಸಂಸ್ಥೆ ಸರಿಪಡಿಸಬೇಕಾಗಿದೆ. ಓಲಾ ಎಲೆಕ್ಟ್ರಿಕ್ ಷೇರು ದರ ಕಳೆದ ಒಂದು ವರ್ಷದಿಂದೀಚೆಗೆ 45% ಇಳಿಕೆಯಾಗಿದೆ. ಕಳೆದ ವರ್ಷ ಆಗಸ್ಟ್ನಲ್ಲಿ 91 ರುಪಾಯಿ ಇತ್ತು. ಈಗ 49 ರುಪಾಯಿಗೆ ಇಳಿಕೆಯಾಗಿದೆ.
ಈ ಸುದ್ದಿಯನ್ನೂ ಓದಿ | HPCL Recruitment 2025: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ನಲ್ಲಿದೆ 411 ಹುದ್ದೆ; ದ್ವಿತೀಯ ಪಿಯು ಪಾಸಾದವರು ಅಪ್ಲೈ ಮಾಡಿ