IED Blast: ತೆಲಂಗಾಣದಲ್ಲಿ ಮಾವೋವಾದಿಗಳಿಂದ ಐಇಡಿ ಸ್ಫೋಟ; ಮೂವರು ಗ್ರೇಹೌಂಡ್ ಸಿಬ್ಬಂದಿ ಬಲಿ
ತೆಲಂಗಾಣದ ಛತ್ತೀಸ್‌ಗಢ ಗಡಿಯಲ್ಲಿ ಗುರುವಾರ (ಮೇ 8) ಸುಧಾರಿತ ಸ್ಫೋಟಕ ವಸ್ತು ಸ್ಫೋಟಗೊಂಡು ತೆಲಂಗಾಣ ಪೊಲೀಸ್‌ನ ಮಾವೋವಾದಿ ನಿಷ್ಕಿಯ ಘಟಕ ಗ್ರೇಹೌಂಡ್‌ನ ಮೂವರು ಸಿಬ್ಬಂದಿ ಮೃತಪಟ್ಟಿದ್ದಾರೆ. ಲಂಗಾಣ-ಛತ್ತೀಸ್‌ಗಢದ ಗಡಿಗೆ ಹೊಂದಿಕೊಂಡಿರುವ ಮುಲುಗು ಜಿಲ್ಲೆಯ ಪೆಂಕಟಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ

ಸಾಂದರ್ಭಿಕ ಚಿತ್ರ.

ಹೈದರಾಬಾದ್: ತೆಲಂಗಾಣದ ಛತ್ತೀಸ್‌ಗಢ ಗಡಿಯಲ್ಲಿ ಗುರುವಾರ (ಮೇ 8) ಸುಧಾರಿತ ಸ್ಫೋಟಕ ವಸ್ತು ಸ್ಫೋಟಗೊಂಡು (IED Blast) ತೆಲಂಗಾಣ ಪೊಲೀಸ್‌ನ ಮಾವೋವಾದಿ ನಿಷ್ಕಿಯ ಘಟಕ ಗ್ರೇಹೌಂಡ್‌ನ (Greyhound) ಮೂವರು ಸಿಬ್ಬಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇತರ ಮೂವರು ಗಾಯಗೊಂಡಿದ್ದಾರೆ. ತೆಲಂಗಾಣ-ಛತ್ತೀಸ್‌ಗಢದ ಗಡಿಗೆ ಹೊಂದಿಕೊಂಡಿರುವ ಮುಲುಗು ಜಿಲ್ಲೆಯ ಪೆಂಕಟಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಪಡೆಗಳು ಕೂಂಬಿಂಗ್ ಕಾರ್ಯಾಚರಣೆ ನಡೆಸುವುದನ್ನು ತಡೆಯಲು ಮಾವೋವಾದಿಗಳು ಐಇಡಿ ಸ್ಫೋಟಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
"ಗ್ರೇಹೌಂಡ್ ಪಡೆಗಳು ಕಾಡುಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾಗ ಐಇಡಿ ಸ್ಫೋಟಗೊಂಡಿದೆ. ಇದರ ಪರಿಣಾಮವಾಗಿ ಮೂವರು ಸಿಬ್ಬಂದಿ ಮೃತಪಟ್ಟಿದ್ದಾರೆ ಮತ್ತು ಇತರ ಮೂವರು ಗಾಯಗೊಂಡಿದ್ದಾರೆ. ಇದೇ ವೇಳೆ ಮಾವೋವಾದಿಗಳು ಮತ್ತುಗ್ರೇಹೌಂಡ್ಸ್ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದೆ. ಕಾರ್ಯಾಚರಣೆಯಲ್ಲಿ ಮಾವೋವಾದಿಗಳನ್ನು ಹಿಮ್ಮೆಟ್ಟಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Naxal Attack: ಛತ್ತೀಸ್‌ಗಢದ ಬಿಜಾಪುರಲ್ಲಿ ಐಇಡಿ ಸ್ಫೋಟ; ಇಬ್ಬರು ಎಸ್‌ಟಿಎಫ್ ಸಿಬ್ಬಂದಿಗೆ ಗಾಯ
ʼʼಮೃತರನ್ನು ರಿಸರ್ವ್ ಸಬ್ ಇನ್ಸ್‌ಪೆಕ್ಟರ್ ರಣಧೀರ್, ಕಾನ್ಸ್‌ಟೇಬಲ್‌ಗಳಾದ ಸಂದೀಪ್ ಮತ್ತು ಪವನ್ ಕಲ್ಯಾಣ್ ಎಂದು ಗುರುತಿಸಲಾಗಿದೆ. ಅವರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಾರಂಗಲ್‌ನ ಎಂಜಿಎಂ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆʼʼ ಎಂದು ಮುಲುಗು ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತೆಲಂಗಾಣ ಡಿಜಿಪಿ ಅಂಜನಿ ಕುಮಾರ್ ಮತ್ತು ಗ್ರೇಹೌಂಡ್ ಡಿಜಿ ಸ್ಟೀಫನ್ ರವೀಂದ್ರ ಮತ್ತಿತರರು ಆಸ್ಪತ್ರೆಗೆ ತೆರಳಿ ಮೃತರಿಗೆ ಅಂತಿಮ ಗೌರವ ಸಲ್ಲಿಸಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಈ ಪ್ರದೇಶದಲ್ಲಿ ಮಾವೋವಾದಿಗಳು ಮತ್ತೆ ಕಾಣಿಸಿಕೊಂಡಿದ್ದಾರೆ ಎಂಬ ಗುಪ್ತಚರ ಮಾಹಿತಿಯ ನಂತರ ಗ್ರೇಹೌಂಡ್ಸ್ ತಂಡಗಳು ವೆಂಕಟಪುರಂನ ಕಾಡುಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ತೊಡಗಿವೆ. ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಗಡಿಯಲ್ಲಿರುವ ಕರ್ರೆಗುಟ್ಟಲು ಅರಣ್ಯದಲ್ಲಿ ಇತ್ತೀಚೆಗೆ ನಡೆದ ಎನ್‌ಕೌಂಟರ್‌ನಲ್ಲಿ 22 ಮಾವೋವಾದಿಗಳು ಸಾವನ್ನಪ್ಪಿದ್ದರು.
ಐಇಡಿ ಸ್ಫೋಟ; ಓರ್ವ ಪೊಲೀಸ್ ಹುತಾತ್ಮ
ರಾಂಚಿ: ಜಾರ್ಖಂಡ್‌ನ ಗುಡ್ಡಗಾಡು ಪ್ರದೇಶದಲ್ಲಿ ಇತ್ತೀಚೆಗೆ ಮಾವೋವಾದಿಗಳು ನಡೆಸಿದ ಸ್ಫೋಟದಲ್ಲಿ ಓರ್ವ ಪೊಲೀಸ್ ಹುತಾತ್ಮರಾಗಿ, ಪ್ಯಾರಾಮಿಲಿಟರಿ ಸಿಬ್ಬಂದಿ ಗಾಯಗೊಂಡಿರುವ ಘಟನೆ ನಡೆದಿತ್ತು. ರಾಜ್ಯದ ಗುಡ್ಡಗಾಡು ಪ್ರದೇಶ ಚೈಬಾಸಾದಲ್ಲಿ ಮಾವೋವಾದಿಗಳು ಇರಿಸಿದ್ದ ಸುಧಾರಿತ ಸ್ಫೋಟಕ ವಸ್ತು ಸ್ಫೋಟಗೊಂಡ ಪರಿಣಾಮ ಪೊಲೀಸ್ ಅಧಿಕಾರಿ ಸುನಿಲ್ ಧನ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದರು. ಪ್ಯಾರಾಮಿಲಿಟರಿ ಸಿಬ್ಬಂದಿ ವಿಷ್ಣು ಸೈನಿ ಗಾಯಗೊಂಡಿದ್ದರು.
ಮಾವೋವಾದಿಗಳ ಹತ್ಯೆ
ರಾಯ್‌ಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೆ ನಡೆದ ಎನ್‌ಕೌಂಟರ್‌ನಲ್ಲಿಇಬ್ಬರು ಶಂಕಿತ ಮಾವೋವಾದಿಗಳನ್ನು ಹೊಡೆದುರುಳಿಸಲಾಗಿತ್ತು. ಇನ್ನು ಈ ಕಾರ್ಯಾಚರಣೆ ವೇಳೆ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಒಬ್ಬ ಸೈನಿಕ ಹುತಾತ್ಮರಾಗಿದ್ದರು. ಬಿಜಾಪುರ ಮತ್ತು ದಂತೇವಾಡ ಜಿಲ್ಲೆಗಳ ಗಡಿಯಲ್ಲಿರುವ ಕಾಡಿನಲ್ಲಿ ಬೆಳಗ್ಗೆ 7 ಗಂಟೆಗೆ ಗುಂಡಿನ ಚಕಮಕಿ ನಡೆದಿದ್ದು, ಗಂಗಲೂರು ಪೊಲೀಸ್ ಠಾಣೆ ಪ್ರದೇಶದ ಅಡಿಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ಪೊಲೀಸ್ ಜಂಟಿ ಕಾರ್ಯಾಚರಣೆ ಕೈಗೆತ್ತಿಕೊಂಡಿತ್ತು. ಹತರಾದ ನಕ್ಸಲರಿಂದ ಬಂದೂಕುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು.