ಪಶ್ಚಿಮ ಏಷ್ಯಾ ಉದ್ವಿಗ್ನ: ಇರಾನ್, ಇರಾಕ್, ಇಸ್ರೇಲ್ ವಾಯುಪ್ರದೇಶ ತಪ್ಪಿಸಲು ನಿರ್ಧರಿಸಿದ ಏರ್ ಇಂಡಿಯಾ
Israel-Iran Conflict: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಏರ್ ಇಂಡಿಯಾ ಇರಾನ್, ಇರಾಕ್ ಮತ್ತು ಇಸ್ರೇಲ್ನ ವಾಯುಪ್ರದೇಶಗಳನ್ನು ತಪ್ಪಿಸುವುದಾಗಿ ಘೋಷಿಸಿದೆ. ಅಮೆರಿಕವು ಇರಾನ್ನ ಮೂರು ಪರಮಾಣು ಕೇಂದ್ರಗಳ ಮೇಲೆ ಬಾಂಬ್ ದಾಳಿ ನಡೆಸಿದ್ದರಿಂದ ಸಂಘರ್ಷ ಇನ್ನಷ್ಟು ಉಲ್ಬಣವಾಗಿದೆ.

ಸಾಂದರ್ಭಿಕ ಚಿತ್ರ.

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ (West Asia) ಉದ್ವಿಗ್ನತೆ ಹೆಚ್ಚುತ್ತಿದ್ದು, ಇರಾನ್ನ ಪರಮಾಣು ಸೌಲಭ್ಯಗಳ ಮೇಲೆ ಅಮೆರಿಕ ದಾಳಿ (US Strikes) ನಡೆಸಿದೆ. ಹೀಗಾಗಿ ಏರ್ ಇಂಡಿಯಾ (Air India) ಇರಾನ್ (Iran), ಇರಾಕ್ (Iraq) ಮತ್ತು ಇಸ್ರೇಲ್ನ (Israel) ವಾಯುಪ್ರದೇಶಗಳನ್ನು ತಪ್ಪಿಸುವುದಾಗಿ ಘೋಷಿಸಿದೆ. ಅಮೆರಿಕವು ಇರಾನ್ನ ಮೂರು ಪರಮಾಣು ಕೇಂದ್ರಗಳ ಮೇಲೆ ಬಾಂಬ್ ದಾಳಿ ನಡೆಸಿದ್ದರಿಂದ ಸಂಘರ್ಷ ಇನ್ನಷ್ಟು ವಿಸ್ತರಿಸಿದೆ.
ಏರ್ ಇಂಡಿಯಾ ಹೇಳಿಕೆಯೊಂದರಲ್ಲಿ, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ. ಮುಂದಿನ ದಿನಗಳಲ್ಲಿ ಯುಎಇ, ಕತಾರ್, ಒಮಾನ್ ಮತ್ತು ಕುವೈತ್ಗೆ ತೆರಳುವ ಕೆಲವು ವಿಮಾನಗಳು ಪರ್ಯಾಯ ಮಾರ್ಗಗಳನ್ನು ಬಳಸಲಿವೆ ಎಂದು ಹೇಳಿದೆ.
"ಪರ್ಷಿಯನ್ ಗಲ್ಫ್ನಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಏರ್ ಇಂಡಿಯಾ ಇರಾನ್, ಇರಾಕ್ ಮತ್ತು ಇಸ್ರೇಲ್ ವಾಯುಪ್ರದೇಶಗಳ ಮೇಲೆ ವಿಮಾನಗಳನ್ನು ಓಡಿಸುತ್ತಿಲ್ಲ. ಮುಂಜಾಗ್ರತಾ ಕ್ರಮವಾಗಿ, ಮುಂದಿನ ದಿನಗಳಲ್ಲಿ ಪರ್ಷಿಯನ್ ಗಲ್ಫ್ನ ಕೆಲವು ವಾಯುಪ್ರದೇಶಗಳನ್ನು ತಪ್ಪಿಸಿ, ಯುಎಇ, ಕತಾರ್, ಒಮಾನ್ ಮತ್ತು ಕುವೈತ್ಗೆ ಪರ್ಯಾಯ ಮಾರ್ಗಗಳನ್ನು ಬಳಸಲಾಗುವುದು" ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Israel-Iran Conflict: "ವೆಲ್ಕಮ್ ಬಾಯ್ಸ್" ಇರಾನ್ ಮೇಲೆ ದಾಳಿ ನಡೆಸಿದ ಯುದ್ಧ ವಿಮಾನದ ವಿಡಿಯೋ ಹಂಚಿಕೊಂಡ ಅಮೆರಿಕ
ಈ ಬದಲಾವಣೆಯಿಂದಾಗಿ ವಿಮಾನಗಳ ಪ್ರಯಾಣ ಸಮಯ ಹೆಚ್ಚಾಗಬಹುದು ಎಂದು ಏರ್ ಇಂಡಿಯಾ ಹೇಳಿದ್ದು, ಭವಿಷ್ಯದಲ್ಲಿ ಅಗತ್ಯವಿದ್ದರೆ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದೆ. "ಯುರೋಪ್ ಮತ್ತು ಉತ್ತರ ಅಮೆರಿಕದ ಕೆಲವು ವಿಮಾನಗಳ ಸಮಯ ವಿಸ್ತರಿಸಬಹುದು. ನಾವು ಬಾಹ್ಯ ಭದ್ರತಾ ಸಲಹೆಗಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ" ಎಂದು ಏರ್ ಇಂಡಿಯಾ ತಿಳಿಸಿದೆ.
ಚೆನ್ನೈ-ಲಂಡನ್ ವಿಮಾನ ವಾಪಸ್
ಇರಾನ್ ವಾಯುಪ್ರದೇಶ ಮುಚ್ಚಿದ ಕಾರಣ ಚೆನ್ನೈ-ಲಂಡನ್ ಬ್ರಿಟಿಷ್ ಏರ್ವೇಸ್ ವಿಮಾನವು ಮಧ್ಯದಲ್ಲಿ ವಾಪಸ್ ಆಗಿತ್ತು. ಬೆಳಗ್ಗೆ 5:35ಕ್ಕೆ ಹೊರಡಬೇಕಿದ್ದ ವಿಮಾನವು 6:24ಕ್ಕೆ 206 ಪ್ರಯಾಣಿಕರೊಂದಿಗೆ ಟೇಕ್-ಆಫ್ ಆಗಿತ್ತು. ಅರೇಬಿಯನ್ ಸಮುದ್ರ ಪ್ರದೇಶ ಪ್ರವೇಶಿಸಿದ ಬಳಿಕ, ಇರಾನ್ ವಾಯುಪ್ರದೇಶ ಮುಚ್ಚಿರುವ ಮಾಹಿತಿ ಪೈಲಟ್ಗಳಿಗೆ ತಿಳಿದಿದೆ. ತಕ್ಷಣ ಕ್ರಮ ಕೈಗೊಂಡ ಪೈಲಟ್ಗಳು, ಚೆನ್ನೈ ವಾಯುಯಾನ ನಿಯಂತ್ರಣಕ್ಕೆ ಎಚ್ಚರಿಕೆ ನೀಡಿ ವಾಪಸ್ ಆಗಿದ್ದಾರೆ. ವಿಮಾನವು ಬೆಳಗ್ಗೆ 8:50ಕ್ಕೆ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.