Badar Khan Suri: ಹಮಾಸ್ ಜೊತೆ ನಂಟು ಆರೋಪ-ಅಮೆರಿಕದಲ್ಲಿ ಅರೆಸ್ಟ್ ಆಗಿದ್ದ ಭಾರತದ ವಿದ್ವಾಂಸ ರಿಲೀಸ್; ಬಿಡುಗಡೆ ಬೆನ್ನಲ್ಲೇ ಈತ ಹೇಳಿದ್ದೇನು?
Badar Khan Suri: ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ವಿದ್ವಾಂಸ ಮತ್ತು ಭಾರತೀಯ ಶಿಕ್ಷಣತಜ್ಞ ಬದರ್ ಖಾನ್ ಸುರಿ ಅವರು, ಅಮೆರಿಕದ ವಲಸೆ ಪ್ರಾಧಿಕಾರದಿಂದ ಹಮಾಸ್ ಗುಂಪಿನೊಂದಿಗೆ ಸಂಬಂಧ ಇದೆ ಎಂಬ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದರು. ಈ ವಾರ ಅವರು ಬಿಡುಗಡೆ ಆಗಿದ್ದು, ಬಂಧನದ ಸಮಯದಲ್ಲಿ ತಾವು ಎದುರಿಸಿದ ಕಷ್ಟದ ಅನುಭವವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಬದರ್ ಖಾನ್ ಸುರಿ

ವಾಷಿಂಗ್ಟನ್: ಜಾರ್ಜ್‌ಟೌನ್ ವಿಶ್ವವಿದ್ಯಾಲಯದ (Georgetown University) ವಿದ್ವಾಂಸ ಮತ್ತು ಭಾರತೀಯ ಶಿಕ್ಷಣತಜ್ಞ (Indian Academic) ಬದರ್ ಖಾನ್ ಸುರಿ (Badar Khan Suri) ಅವರು, ಅಮೆರಿಕದ ವಲಸೆ ಪ್ರಾಧಿಕಾರದಿಂದ ಹಮಾಸ್ (Hamas) ಗುಂಪಿನೊಂದಿಗೆ ಸಂಬಂಧ ಇದೆ ಎಂಬ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದರು. ಈ ವಾರ ಅವರು ಬಿಡುಗಡೆ ಆಗಿದ್ದು, ಬಂಧನದ ಸಮಯದಲ್ಲಿ ತಾವು ಎದುರಿಸಿದ ಕಷ್ಟದ ಅನುಭವವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಟೆಕ್ಸಾಸ್‌ನ ಪ್ರೇರಿಲ್ಯಾಂಡ್ ಡಿಟೆನ್ಷನ್ ಸೆಂಟರ್‌ನಿಂದ ಬಿಡುಗಡೆಯಾದ ಬಳಿಕ ಅಮೆರಿಕದ ಮಾಧ್ಯಮಗಳೊಂದಿಗೆ ಮಾತನಾಡಿದ ಸುರಿ, “ನನ್ನನ್ನು ಸಂಪೂರ್ಣವಾಗಿ ಸರಪಳಿಯಿಂದ ಕಟ್ಟಿಹಾಕಲಾಗಿತ್ತು. ನಾನು ನನ್ನ ನೆರಳನ್ನೇ ಕಾಣದಂತಹ ಸ್ಥಿತಿಯಲ್ಲಿದ್ದೆ,” ಎಂದು ಬೇಸರ ವ್ಯಕ್ತಪಡಿಸಿದರು. ವರ್ಜೀನಿಯಾದ ಅಲೆಕ್ಸಾಂಡ್ರಿಯಾದಲ್ಲಿ ಯುಎಸ್ ಜಿಲ್ಲಾ ನ್ಯಾಯಾಧೀಶರಾದ ಪ್ಯಾಟ್ರಿಷಿಯಾ ಗಿಲ್ಸ್, ಬುಧವಾರ ಸುರಿ ಅವರನ್ನು ತಕ್ಷಣ ಬಿಡುಗಡೆಗೊಳಿಸಿ, ಅವರ ಕುಟುಂಬದೊಂದಿಗೆ ಮರಳಲು ಅವಕಾಶ ನೀಡಿದರು. ಸುರಿ ಅವರ ಬಂಧನವು ಅಮೆರಿಕ ಸಂವಿಧಾನದ ಮೊದಲ ತಿದ್ದುಪಡಿಯನ್ನು ಉಲ್ಲಂಘಿಸಿದೆ ಎಂದು ನ್ಯಾಯಾಧೀಶೆ ತೀರ್ಪಿನಲ್ಲಿ ತಿಳಿಸಿದರು.
ಈ ಸುದ್ದಿಯನ್ನು ಓದಿ: Viral Video: 'ವಿಶ್ವ ಸುಂದರಿ' ಸ್ಪರ್ಧಿಗಳ ಪಾದ ತೊಳೆದ ಮಹಿಳೆಯರು; ಏನಿದು ವೈರಲ್ ಸುದ್ದಿ
“ಯಾವುದೇ ಆರೋಪವಿರಲಿಲ್ಲ, ಯಾವುದೇ ಕಾರಣವಿರಲಿಲ್ಲ. ಅವರು ನನ್ನನ್ನು ಮಾನವೀಯತೆಯಿಲ್ಲದ ರೀತಿಯಲ್ಲಿ ನಡೆಸಿಕೊಂಡರು” ಎಂದು ಸುರಿ ಹೇಳಿದರು. ವರ್ಜೀನಿಯಾದ ಅರ್ಲಿಂಗ್ಟನ್‌ನಲ್ಲಿರುವ ತಮ್ಮ ಮನೆಯ ಹೊರಗಡೆ ಫೆಡರಲ್ ಏಜೆಂಟ್‌ಗಳಿಂದ ಬಂಧಿಸಲ್ಪಟ್ಟು ಎರಡು ತಿಂಗಳ ಕಾಲ ಬಂಧನದಲ್ಲಿದ್ದ ಸುರಿ, ಹಮಾಸ್‌ನೊಂದಿಗೆ ಸಂಬಂಧವಿದೆ ಎಂಬ ಆರೋಪವನ್ನು ಎದುರಿಸಿದ್ದರು. ಅಮೆರಿಕವು ಹಮಾಸ್‌ನನ್ನು ಭಯೋತ್ಪಾದಕ ಸಂಘಟನೆಯೆಂದು ಗೊತ್ತುಪಡಿಸಿದೆ.
“ಮೊದಲ ಏಳೆಂಟು ದಿನಗಳ ಕಾಲ ನಾನು ನನ್ನ ನೆರಳನ್ನೇ ಕಾಣದಂತಹ ಸ್ಥಿತಿಯಲ್ಲಿದ್ದೆ. ಎಲ್ಲಿಗೆ ಕರೆದೊಯ್ಯುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿರಲಿಲ್ಲ. ನನ್ನ ಕಾಲು, ಕೈ, ದೇಹ ಎಲ್ಲವೂ ಸರಪಳಿಯಿಂದ ಕಟ್ಟಲ್ಪಟ್ಟಿತ್ತು,” ಎಂದು ಸುರಿ ತಿಳಿಸಿದ್ದಾರೆ. “ನನ್ನ ಮಕ್ಕಳ ಬಗ್ಗೆ ಮಾತ್ರ ಚಿಂತೆಯಿತ್ತು. ಅವರು ನನ್ನ ಕಾರಣದಿಂದ ಕಷ್ಟಪಡುತ್ತಿದ್ದಾರೆ. ನನ್ನ ದೊಡ್ಡ ಮಗನಿಗೆ ಕೇವಲ ಒಂಬತ್ತು ವರ್ಷ, ಅವನಿಗೆ ನಾನು ಎಲ್ಲಿದ್ದೇನೆ ಎಂದು ಗೊತ್ತಿತ್ತು. ಮಗ ಅಳುತ್ತಿದ್ದಾನೆ ಎಂದು ನನ್ನ ಪತ್ನಿ ಹೇಳುತ್ತಿದ್ದಳು” ಎಂದು ಸುರಿ ಭಾವುಕರಾಗಿ ಹೇಳಿದರು. ಅವರ ಜೊತೆಗಿರುವ ಇಬ್ಬರು ಕಿರಿಯ ಮಕ್ಕಳಿಗೆ ಐದು ವರ್ಷ ವಯಸ್ಸು.
ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಮಾಜಿ ವಿದ್ಯಾರ್ಥಿಯಾಗಿರುವ ಸುರಿ, ವರ್ಜೀನಿಯಾದಲ್ಲಿ ಒಂದು ದಿನ ಕಳೆದ ಬಳಿಕ, ಸ್ಥಳದ ಕೊರತೆಯಿಂದ ಲೂಯಿಸಿಯಾನಾ ಮೂಲಕ ಟೆಕ್ಸಾಸ್‌ಗೆ ವರ್ಗಾಯಿಸಲ್ಪಟ್ಟಿದ್ದರು. ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ವೆಬ್‌ಸೈಟ್ ಪ್ರಕಾರ, ಸುರಿ ಅವರು ಭಾರತದಿಂದ ಶಾಂತಿ ಮತ್ತು ಸಂಘರ್ಷ ಅಧ್ಯಯನದಲ್ಲಿ ಪಿಎಚ್‌ಡಿ ಪಡೆದಿದ್ದು, “ದಕ್ಷಿಣ ಏಷಿಯಾದಲ್ಲಿ ಬಹುಸಂಖ್ಯಾತವಾದ ಮತ್ತು ಅಲ್ಪಸಂಖ್ಯಾತರ ಹಕ್ಕುಗಳು” ಎಂಬ ವಿಷಯದಲ್ಲಿ ಕೋರ್ಸ್ ಕಲಿಸುತ್ತಿದ್ದರು.