Swim David: ಮೈದಾನದಲ್ಲೇ ಈಜಾಡಿದ ಆರ್‌ಸಿಬಿಯ ಟಿಮ್ ಡೇವಿಡ್; ಇಲ್ಲಿದೆ ವಿಡಿಯೊ
ಕಳೆದ ಮೂರು ದಿನಗಳಿಂದ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಮಳೆ ಬಿರುಸುಗೊಂಡಿದೆ. ಹೀಗಾಗಿ ಶನಿವಾರದ ಐಪಿಎಲ್ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿದೆ. ಮಳೆಯಿಂದ ಪಂದ್ಯ ರದ್ದಾದರೂ ಆರ್‌ಸಿಬಿ ನೇರವಾಗಿ ಪ್ಲೇ ಆಫ್ ಪ್ರವೇಶ ಪಡೆಯಲಿದೆ.


ಬೆಂಗಳೂರು: ಶನಿವಾರ (ಮೇ 17) ನಡೆಯಲಿರುವ ಐಪಿಎಲ್(IPL 2025) ಪಂದ್ಯದ ಪೂರ್ವಸಿದ್ಧತೆಗಾಗಿ ಆರ್‌ಸಿಬಿ ತಂಡ ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದ(M Chinnaswamy Stadium) ನೆಟ್ಸ್‌ನಲ್ಲಿ ಕಠಿಣ ಅಭ್ಯಾಸ ಮಾಡಿತು. ಆದರೆ ಮುಸ್ಸಂಜೆಗೆ ಮಳೆ ಬಂದ ಕಾರಣ ಕೆಕೆಆರ್ ಮತ್ತು ಆರ್‌ಸಿಬಿ ತಂಡದ ಆಟಗಾರರ ಬೇಗನೆ ಅಭ್ಯಾಸ ನಿಲ್ಲಿಸಿದ್ದರು. ಇದೇ ವೇಳೆ ಆರ್‌ಸಿಬಿಯ(RCB) ಸ್ಫೋಟಕ ಬ್ಯಾಟರ್ ಡಿಮ್ ಡೇವಿಡ್(Tim David) ಮೈದಾನಕ್ಕೆ ಹೊದಿಸಿದ್ದ ಕವರ್‌ಗಳಲ್ಲಿ ತುಂಬಿದ ನೀರಿನ ಮೇಲೆ ಈಜಾಡಿ(Swim David) ಚಿಕ್ಕ ಮಕ್ಕಳಂತೆ ಸಂಭ್ರಮಿಸಿದ್ದಾರೆ. ಈ ವಿಡಿಯೊವನ್ನು ಆರ್‌ಸಿಬಿ ತನ್ನ ಅಧಿಕೃತ ಟ್ವಿಟರ್ ಎಕ್ಸ್‌ನಲ್ಲಿ ಹಂಚಿಕೊಂಡು 'ಟಿಮ್ ಡೇವಿಡ್ ಅಲ್ಲ ಸ್ವಿಮ್ ಡೇವಿಡ್' ಎಂದು ಬರೆದುಕೊಂಡಿದೆ. ಟಿಮ್ ಡೇವಿಡ್ ಕೆಲ ಕಾಲ ನೀರಲ್ಲಿ ಈಜಾಡುತ್ತಾ, ಜಾರುತ್ತಾ ಕಾಲ ಕಳೆದರು.
ಸೋಮವಾರವಷ್ಟೇ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ವಿರಾಟ್ ಕೊಹ್ಲಿ ಕೂಡ ಲವಲವಿಕೆಯಿಂದ ಅಭ್ಯಾಸದಲ್ಲಿ ಪಾಲ್ಗೊಂಡರು. ಸಹ ಆಟಗಾರರೊಂದಿಗೆ ಕೀಟಲೆ ಮಾಡುತ್ತ, ನಗುತ್ತ ತಾಲೀಮು ಮಾಡಿದರು.
Tim David ❌
— Royal Challengers Bengaluru (@RCBTweets) May 16, 2025
Swim David ✅
Bengaluru rain couldn’t dampen Timmy’s spirits… Super TD Sopper came out in all glory. 😂
This is Royal Challenge presents RCB Shorts. 🩳🤣#PlayBold #ನಮ್ಮRCB #IPL2025 pic.twitter.com/PrXpr8rsEa
ತಂಡದ ಪ್ರಮುಖ ವೇಗಿ, ಆಸ್ಟ್ರೇಲಿಯಾದ ಜೋಶ್ ಹೇಜಲ್‌ವುಡ್ ಬೆಂಗಳೂರಿಗೆ ಮರಳಿದ್ದಾರೆ. ಇದು ಆರ್‌ಸಿಬಿ ತಂಡದ ಆತ್ಮವಿಶ್ವಾಸ ಹೆಚ್ಚಿಸುವಂತೆ ಮಾಡಿದೆ. ಭಾರತ–ಪಾಕ್ ಸಂಘರ್ಷದ ಕಾರಣ ಐಪಿಎಲ್ ಟೂರ್ನಿಗೆ ಒಂದು ವಾರ ಬಿಡುವು ನೀಡಿದ್ದ ಸಂದರ್ಭದಲ್ಲಿ ಬಹುತೇಕ ವಿದೇಶಿ ಆಟಗಾರರು ತಮ್ಮ ತವರಿಗೆ ಮರಳಿದ್ದರು. ಅದರಲ್ಲಿ ಬಹಳಷ್ಟು ಜನರು ಮರಳಿ ಬಂದಿಲ್ಲ.
ಇದನ್ನೂ ಓದಿ IPL 2025: ಪ್ಲೇ ಆಫ್ ಪಂದ್ಯಕ್ಕೆ ಗುಜರಾತ್ ಟೈಟಾನ್ಸ್ ಸೇರಿದ ಕುಸಲ್ ಮೆಂಡಿಸ್
ಪಂದ್ಯಕ್ಕೆ ಮಳೆ ಭೀತಿ
ಕಳೆದ ಮೂರು ದಿನಗಳಿಂದ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಮಳೆ ಬಿರುಸುಗೊಂಡಿದೆ. ಹೀಗಾಗಿ ಶನಿವಾರದ ಐಪಿಎಲ್ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿದೆ. ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದಾದರೆ ಆರ್‌ಸಿಬಿ ನೇರವಾಗಿ ಪ್ಲೇ ಆಫ್ ಪ್ರವೇಶ ಪಡೆಯಲಿದೆ. ಸದ್ಯ ಆರ್‌ಸಿಬಿ 16 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಮಳೆಯಿಂದ ರದ್ದಾದರೆ ಒಂದು ಅಂಕ ಲಭಿಸಲಿದೆ. ಆಗ 17 ಅಂಕದೊಂದಿಗೆ ಪ್ಲೇ ಆಫ್ ಪ್ರವೇಶ ಪಡೆಯಲಿದೆ.