Prashanth Neel: ʼಕೆಜಿಎಫ್ʼ ಸಾಮ್ರಾಜ್ಯ ಕಟ್ಟಿ ಸ್ಯಾಂಡಲ್ವುಡ್ ಘಮ ಬೀರಿದ ಚಿತ್ರ ಮಾಂತ್ರಿಕ ಪ್ರಶಾಂತ್ ನೀಲ್ಗೆ ಹುಟ್ಟುಹಬ್ಬದ ಸಂಭ್ರಮ
KGF: 2014ರಲ್ಲಿ ತೆರೆಕಂಡ ʼಉಗ್ರಂʼ ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್ವುಡ್ನಲ್ಲಿ ಛಾಪು ಮೂಡಿಸಿದ ಪ್ರಶಾಂತ್ ನೀಲ್ ಬಳಿಕ ʼಕೆಜಿಎಫ್ʼ ಸರಣಿ ಸಿನಿಮಾಗಳ ಮೂಲಕ ಇಡೀ ದೇಶಕ್ಕೆ ಚಿರ ಪರಿಚಿತರಾದರು. ಸದ್ಯ ತೆಲುಗು ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಪ್ರಶಾಂತ್ ನೀಲ್ ಅವರಿಗೆ ಜೂ. 4ರಂದು ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಅವರು ನಿರ್ದೇಶಿಸಿದ ಟಾಪ್ ಚಿತ್ರಗಳ ಮಾಹಿತಿ ಇಲ್ಲಿದೆ.

ಪ್ರಶಾಂತ್ ನೀಲ್.


45ನೇ ಹುಟ್ಟುಹಬ್ಬ
1980ರ ಜೂ. 4ರಂದು ಜನಿಸಿದ ಪ್ರಶಾಂತ್ ನೀಲ್ ಬುಧವಾರ ತಮ್ಮ 45ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕಮರ್ಶಿಯಲ್ ಚಿತ್ರಗಳಿಗೆ ಹೊಸದೊಂದು ಭಾಷ್ಯ ಬರೆದ ಅವರಿಗೆ ಚಿತ್ರರಂದ ಗಣ್ಯರು ಶುಭಾಶಯ ತಿಳಿಸಿದ್ದಾರೆ. ಚಿತ್ರ ನಿರ್ದೇಶಕರಿಗೆ ಸ್ಟಾರ್ ಪಟ್ಟ ತಂದುಕೊಟ್ಟವರಲ್ಲಿ ಇವರು ಕೂಡ ಒಬ್ಬರು. ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಕೂಡ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನೀಲ್ ಜತೆಗಿನ ಫೋಟೊ ಹಂಚಿಕೊಂಡಿದ್ದಾರೆ.

ʼಉಗ್ರಂʼ
2014ರಲ್ಲಿ ತೆರೆಕಂಡ ʼಉಗ್ರಂʼ ಚಿತ್ರದ ಮೂಲಕ ಪ್ರಶಾಂತ್ ನೀಲ್ ಸ್ಯಾಂಡಲ್ವುಟ್ಗೆ ಕಾಲಿಟ್ಟರು. ಶ್ರೀಮುರಳಿ, ಹರಿಪ್ರಿಯಾ, ತಿಲಕ್, ಅವಿನಾಶ್, ಪದ್ಮಜಾ ರಾವ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ಈ ಚಿತ್ರ ಸೂಪರ್ ಹಿಟ್ ಎನಿಸಿಕೊಂಡಿತ್ತು. ಶ್ರೀಮುರಳಿ ಮತ್ತು ಹರಿಪ್ರಿಯಾ ವೃತ್ತಿ ಜೀವನಕ್ಕೆ ಬ್ರೇಕ್ ಕೊಟ್ಟ ಈ ಸಿನಿಮಾ ಈಗಲೂ ಹಲವರ ಫೆವರೇಟ್ ಎನಿಸಿಕೊಂಡಿದೆ.

ʼಕೆಜಿಎಫ್: ಚಾಪ್ಟರ್ 1ʼ
2018ರಲ್ಲಿ ಬಿಡುಗಡೆಯಾದ ತಮ್ಮ 2ನೇ ಚಿತ್ರ ʼಕೆಜಿಎಫ್: ಚಾಪ್ಟರ್ 1ʼ ಮೂಲಕ ಪ್ರಶಾಂತ್ ನೀಲ್ ಹೊಸದೊಂಡು ಇತಿಹಾಸ ಬರೆದಿದ್ದಾರೆ. ಜಾಗತಿಕ ಚಿತ್ರರಂಗವೇ ಸ್ಯಾಂಡಲ್ವುಡ್ನತ್ತ ತಿರುಗಿ ನೋಡುವಂತೆ ಮೂಡಿ ಬಂದ ʼಕೆಜಿಎಫ್: ಚಾಪ್ಟರ್ 1ʼ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ಅನಂತ್ ನಾಗ್, ಮಾಳವಿಕಾ ಅವಿನಾಶ್, ವಶಿಷ್ಠ ಸಿಂಹ ಮತ್ತಿತರರು ನಟಿಸಿದ್ದಾರೆ. ಕನ್ನಡದ ಜತೆಗೆ ಪ್ಯಾನ್ ಇಂಡಿಯಾ ಮಟ್ಟದಲ್ಲೂ ಇದು ಸದ್ದು ಮಾಡಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಡಿ ಈ ಸಿನಿಮಾ ತಯಾರಾಗಿದೆ.

'ಕೆಜಿಎಫ್: ಚಾಪ್ಟರ್ 2'
'ಕೆಜಿಎಫ್' ಚಿತ್ರದ ಮುಂದುವರಿದ 'ಕೆಜಿಎಫ್: ಚಾಪ್ಟರ್ 2' ಚಿತ್ರ 2022ರಲ್ಲಿ ತೆರೆಕಂಡು ಮತ್ತೊಂದು ಚರಿತ್ರೆ ಸೃಷ್ಟಿಸಿತು. ಭಾರತದಲ್ಲಿ ಅತೀ ಹೆಚ್ಚು ಗಳಿಸಿದ ಟಾಪ್ 5 ಚಿತ್ರದಲ್ಲಿ ಇದೂ ಕೂಡ ಒಂದು ಎನ್ನುವುದು ಕನ್ನಡಿಗರಿಗೆಲ್ಲ ಹೆಮ್ಮೆಯ ಸಂಗತಿ. ಮೊದಲ ಭಾಗದಲ್ಲಿನ ತಾರಾಗಣದ ಜತೆಗೆ ಮತ್ತುಷ್ಟು ಸ್ಟಾರ್ಗಳು ಈ ಭಾಗದಲ್ಲಿ ನಟಿಸಿ ಗಮನ ಸೆಳೆದರು. ಬಾಲಿವುಡ್ನ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್ ಮುಖ್ಯ ಪಾತ್ರದಲ್ಲಿ ಮೋಡಿ ಮಾಡಿದರು.

'ಸಲಾರ್: ಪಾರ್ಟ್ 1'
2023ರಲ್ಲಿ ತೆರೆಕಂಡ ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ನಟನೆಯ 'ಸಲಾರ್: ಪಾರ್ಟ್ 1' ಪ್ರಶಾಂತ್ ನೀಲ್ ನಿರ್ದೇಶನದ ಮೊದಲ ತೆಲುಗು ಚಿತ್ರ. 'ಉಗ್ರಂ' ಚಿತ್ರದ ಆಧಾರದಲ್ಲಿ ಪ್ರಶಾಂತ್ ನೀಲ್ ಇದರ ಕಥೆ ಬರೆದಿದ್ದಾರೆ. ಪ್ರಭಾಸ್ ಜತೆಗೆ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಮುಂದಿನ ಭಾಗ ಶೀಘ್ರದಲ್ಲಿಯೇ ಸೆಟ್ಟೇರಲಿದೆ.

ʼಎನ್ಟಿಆರ್ನೀಲ್ʼ
ಸದ್ಯ ಪ್ರಶಾಂತ್ ನೀಲ್ ಟಾಲಿವುಡ್ ಸೂಪರ್ ಸ್ಟಾರ್ ಜೂ.ಎನ್ಟಿರ್ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ʼಎನ್ಟಿಆರ್ನೀಲ್ʼ ತಾತ್ಕಾಲಿಕ ಶೀರ್ಷಿಕೆಯ ಈ ಚಿತ್ರದ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಕನ್ನಡತಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ.