MLC 2025: ಟಿ20 ಕ್ರಿಕೆಟ್‌ನಲ್ಲಿ ಮಹತ್ವದ ದಾಖಲೆ ಬರೆದ ಕೈರೊನ್ ಪೊಲಾರ್ಡ್!
Kieron Pollard scripts history: 2025ರ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ14ನೇ ಪಂದ್ಯದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡ, ಮುಂಬೈ ನ್ಯೂಯಾರ್ಕ್ ತಂಡದ ವಿರುದ್ಧ 47 ರನ್ ಅಂತರದ ಗೆಲುವು ಸಾಧಿಸಿದೆ. ಆದರೆ ಈ ಪಂದ್ಯದಲ್ಲಿ ಆಲ್‌ರೌಂಡರ್ ಪ್ರದರ್ಶನ ತೋರಿಸಿದ್ಧ ಎಂಐ ನ್ಯೂಯಾರ್ಕ್ ತಂಡದ ಸ್ಟಾರ್ ಆಟಗಾರ ಕೈರೊನ್ ಪೊಲಾರ್ಡ್ ಟಿ20 ಕ್ರಿಕೆಟ್‌ನಲ್ಲಿ 700 ಪಂದ್ಯವಾಡುವ ಮೂಲಕ ವಿಶ್ವದಾಖಲೆಯನ್ನು ಬರೆದಿದ್ದಾರೆ.

ಕೈರೊನ್ ಪೊಲಾರ್ಡ್ ಟಿ20 ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ.

ಡಲ್ಲಾಸ್: ಟಿ20 ಕ್ರಿಕೆಟ್‌ನಲ್ಲಿ 700 ಪಂದ್ಯಗಳನ್ನಾಡಿದ ಮೊದಲ ಆಟಗಾರ ಎಂಬ ದಾಖಲೆಗೆ ವೆಸ್ಟ್ ಇಂಡೀಸ್ ತಂಡದ ಮಾಜಿ ಆಲ್‌ರೌಂಡರ್ ಕೈರೊನ್ ಪೊಲಾರ್ಡ್ (Kieron Pollard) ಪಾತ್ರರಾಗಿದ್ದಾರೆ. ಜೂನ್ 23 ರಂದು ಸೋಮವಾರ ನಡೆದಿದ್ದ 2025ರ ಮೇಜರ್ ಲೀಗ್ ಕ್ರಿಕೆಟ್ (MLC 2025) ಟೂರ್ನಿಯ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡದ ವಿರುದ್ಧ ಮುಂಬೈ ನ್ಯೂಯಾರ್ಕ್ (MI New York) ತಂಡದ ಆಟಗಾರ ಈ ನೂತನ ಮೈಲುಗಲ್ಲು ಸ್ಥಾಪಿಸಿದ್ದಾರೆ. ಈ ಪಂದ್ಯದಲ್ಲಿ ಮುಂಬೈ ನ್ಯೂಯಾರ್ಕ್ ತಂಡ 47 ರನ್‌ಗಳಿಂದ ಸೋಲು ಅನುಭವಿಸಿತು.
ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ವಿಶ್ವದ ಬಹುತೇಕ ಫ್ರಾಂಚೈಸಿ ಲೀಗ್‌ಗಳಲ್ಲಿ ಆಡಿರುವ ವೆಸ್ಟ್ ಇಂಡೀಸ್ ಆಟಗಾರ, ಈ ಪಂದ್ಯಕ್ಕೂ ಮುನ್ನ ಆಡಿದ 699 ಟಿ20 ಪಂದ್ಯದಿಂದ 31.34ರ ಸರಾಸರಿಯಲ್ಲಿ 13,634 ರನ್ ಗಳಿಸಿದ್ದು, 8.26ರ ಎಕಾನಮಿಯಲ್ಲಿ 326 ವಿಕೆಟ್‌ಗಳನ್ನು ಪಡೆದಿದ್ದಾರೆ.
IPL 2025: ಆರ್‌ಸಿಬಿಗೆ ಕಪ್ ಗೆದ್ದುಕೊಡಬಲ್ಲ ನಾಲ್ವರು ಸ್ಟಾರ್‌ಗಳನ್ನು ಆರಿಸಿದ ವಿಜಯ್ ಮಲ್ಯ!
ಆಲ್‌ರೌಂಡರ್ ಪ್ರದರ್ಶನ ತೋರಿದ ಪೊಲಾರ್ಡ್
ಈ ಪಂದ್ಯದಲ್ಲಿ ಆಲ್‌ರೌಂಡರ್ ಪ್ರದರ್ಶನ ತೋರಿದ ಕೈರೊನ್ ಪೊಲಾರ್ಡ್, ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡದ ನಾಯಕ ಮ್ಯಾಥ್ಯೂ ಶಾರ್ಟ್ ಹಾಗೂ ಜೇಕ್ ಮೆಗರ್ಕ್ ಅವರ ವಿಕೆಟ್ ಪಡೆದಿದ್ದರು. ನಂತರ ಅವರು ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿ 16 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 212.50ರ ಸ್ಟ್ರೆಕ್ ರೇಟ್‌ನಲ್ಲಿ 34* ರನ್ ಗಳಿಸಿ ಮಿಂಚಿದ್ದರು.
ಎಂಐ ನ್ಯೂಯಾರ್ಕ್‌ಗೆ 47 ರನ್ ಸೋಲು
ಡಲ್ಲಾಸ್‌ನಲ್ಲಿ ನಡೆದ 2025ರ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ 14ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡ, ನಾಯಕ ಮ್ಯಾಥ್ಯೂ ಶಾರ್ಟ್ (91 ರನ್) ಜೇಕ್ ಮೆಗರ್ಕ್ (64 ರನ್) ಅವರ ಅರ್ಧಶತಕ ಹಾಗೂ ಹಸನ್ ಖಾನ್ (31* ರನ್) ಸ್ಫೋಟಕ ಆಟದ ಬಲದಿಂದ ತನ್ನ ಪಾಲಿನೆ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 246 ರನ್ ಗಳಿಸಿತು. ಇದು ಎಂಎಲ್‌ಸಿಯಲ್ಲಿ ಎರಡನೇ ಗರಿಷ್ಠ ಮೊತ್ತವಾಗಿದೆ. ಮುಂಬೈ ಪರ ಕೈರೊನ್ ಪೊಲಾರ್ಡ್ (31ಕ್ಕೆ 2) ಯಶಸ್ವಿ ಬೌಲರ್ ಎನಿಸಿಕೊಂಡರು.
Hi fives all round fo five in a row 👏#GoCorns pic.twitter.com/Qt9hHj8xAA
— San Francisco Unicorns (@SFOUnicorns) June 24, 2025
ಎಂಐ ನ್ಯೂಯಾರ್ಕ್‌ಗೆ 47 ರನ್ ಸೋಲು
247 ರನ್ ಕಠಿಣ ಗುರಿ ಹಿಂಬಾಲಿಸಿದ ನಿಕೋಲಸ್ ಪೂರನ್ ಸಾರಥ್ಯದ ಎಂಐ ನ್ಯೂಯಾರ್ಕ್, ಆರಂಭಿಕ ಆಟಗಾರರಾದ ಕ್ವಿಂಟನ್ ಡಿ ಕಾಕ್ (70 ರನ್) ಹಾಗೂ ಮೊನಾಕ್ ಪಟೇಲ್ (60 ರನ್) ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ಮೊದಲ ವಿಕೆಟ್‌ಗೆ 9.3 ಓವರ್‌ಗಳಲ್ಲಿ 119 ರನ್ ಗಳಿಸಿ ಉತ್ತಮ ಆರಂಭ ಪಡೆದಿತ್ತು. ಆದರೆ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡದ ಬೌಲರ್‌ಗಳಾದ ರೊಮ್ಯಾರಿಯೊ ಶೆಫರ್ಡ್ (30ಕ್ಕೆ2), ಕ್ಸೇವಿಯರ್ ಬ್ರಟ್ ಲೆಟ್ (35ಕ್ಕೆ2) ಬೌಲಿಂಗ್ ದಾಳಿಗೆ ಸಿಲುಕಿ 20 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 47 ರನ್ ಅಂತರದ ಸೋಲು ಕಂಡಿತು. ಮ್ಯಾಥ್ಯೂ ಶಾರ್ಟ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
Kieron 𝗜𝗠𝗣𝗔𝗖𝗧 Pollard 💥#OneFamily #MINewYork #MLC #MINYvSFU pic.twitter.com/HsWKpgit5s
— MI New York (@MINYCricket) June 24, 2025
ಟಿ20 ಕ್ರಿಕೆಟ್‌ನಲ್ಲಿ 700 ಪಂದ್ಯಗಳನ್ನಾಡುವ ಮೂಲಕ ಕೈರೊನ್ ಪೊಲಾರ್ಡ್ ಅಗ್ರ ಸ್ಥಾನದಲ್ಲಿದ್ದರೆ, ವೆಸ್ಟ್ ಇಂಡೀಸ್‌ನ ಡ್ವೇನ್ ಬ್ರಾವೋ (582 ಪಂದ್ಯ, 6970 ರನ್, 631 ವಿಕೆಟ್), ಪಾಕಿಸ್ತಾನದ ಶೋಯೆಬ್ ಮಲಿಕ್ (557 ಪಂದ್ಯ, 13571 ರನ್, 187 ವಿಕೆಟ್) ವೆಸ್ಟ್ ಇಂಡೀಸ್‌ನ ಆಂಡ್ರೆ ರಸೆಲ್ (556 ಪಂದ್ಯ, 9195 ರನ್, 480 ವಿಕೆಟ್), ಸುನೀಲ್ ನರೇನ್ (551 ಪಂದ್ಯ, 4649 ರನ್, 587 ವಿಕೆಟ್) ಅಗ್ರ 5ರಲ್ಲಿ ಸ್ಥಾನವನ್ನು ಪಡೆದಿದ್ದಾರೆ.