2025ರ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ದಿನಾಂಕ ಪ್ರಕಟ; ಬೆಂಗಳೂರಿನಲ್ಲಿ ಉದ್ಘಾಟನ ಪಂದ್ಯ
Women's ODI World Cup 2025: ಐದು ತಾಣಗಳಾದ ಬೆಂಗಳೂರು, ಗುವಾಹಟಿ, ಇಂದೋರ್, ವಿಶಾಖಪಟ್ಟಣಂ, ಮತ್ತು ಕೊಲಂಬೊದಲ್ಲಿ ಒಟ್ಟು 28 ಲೀಗ್ ಪಂದ್ಯಗಳನ್ನು ನಿಗದಿಪಡಿಸಲಾಗಿದೆ. ಭಾರತ 2013 ರ ನಂತರ ದೇಶವು ಮೊದಲ ಬಾರಿಗೆ ಮಹಿಳಾ ಕ್ರಿಕೆಟ್ ವಿಶ್ವಕಪ್ ಅನ್ನು ಆಯೋಜಿಸುತ್ತಿದೆ.


ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) 13 ನೇ ಆವೃತ್ತಿಯ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ 2025(Women's ODI World Cup 2025) ಮತ್ತು 2026 ರಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಯ(Women's T20 World Cup 2026) ದಿನಾಂಕ ಮತ್ತು ತಾಣವನ್ನು ಪ್ರಕಟಿಸಿದೆ. 2025ರ ಏಕದಿನ ವಿಶ್ವಕಪ್ ಸೆಪ್ಟೆಂಬರ್ 30 ರಿಂದ ನವೆಂಬರ್ 2 ರವರೆಗೆ ನಡೆಯಲಿದ್ದು, ಪಂದ್ಯಗಳು ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿವೆ ಎಂದು ದೃಢಪಡಿಸಿದೆ. 2026ರ ಟಿ20 ವಿಶ್ವಕಪ್ ಜೂನ್ 12 ರಿಂದ ಜುಲೈ 5, 2026 ರವರೆಗೆ ಇಂಗ್ಲೆಂಡ್ ಆತಿಥ್ಯದಲ್ಲಿ ನಡೆಯಲಿದೆ ಎಂದು ಐಸಿಸಿ ತನ್ನ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ.
ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಎಂಟು ತಂಡಗಳು ರೌಂಡ್-ರಾಬಿನ್ ಸ್ವರೂಪದಲ್ಲಿ ಸ್ಪರ್ಧಿಸಲಿವೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸ್ಪರ್ಧಿಸಲಿರುವ ತಂಡಗಳು.
ಬೆಂಗಳೂರಿನಲ್ಲಿ ಉದ್ಘಾಟನ ಪಂದ್ಯ
ಆತಿಥೇಯ ಭಾರತ ತಂಡವು ಬೆಂಗಳೂರಿನಲ್ಲಿ ಪಂದ್ಯ ಆಡುವುದರೊಂದಿಗೆ ತನ್ನ ಅಭಿಯಾನ ಆರಂಭಿಸಲಿದೆ. ಐದು ತಾಣಗಳಾದ ಬೆಂಗಳೂರು, ಗುವಾಹಟಿ, ಇಂದೋರ್, ವಿಶಾಖಪಟ್ಟಣಂ, ಮತ್ತು ಕೊಲಂಬೊದಲ್ಲಿ ಒಟ್ಟು 28 ಲೀಗ್ ಪಂದ್ಯಗಳನ್ನು ನಿಗದಿಪಡಿಸಲಾಗಿದೆ. ಭಾರತ 2013 ರ ನಂತರ ದೇಶವು ಮೊದಲ ಬಾರಿಗೆ ಮಹಿಳಾ ಕ್ರಿಕೆಟ್ ವಿಶ್ವಕಪ್ ಅನ್ನು ಆಯೋಜಿಸುತ್ತಿದೆ. ಭಾರತದಲ್ಲಿ ನಡೆದ ಕೊನೆಯ ಜಾಗತಿಕ ಮಹಿಳಾ ಈವೆಂಟ್ 2016 ರಲ್ಲಿ ನಡೆದಿದ್ದ ಐಸಿಸಿ ಮಹಿಳಾ ಟಿ 20 ವಿಶ್ವಕಪ್ ಆಗಿತ್ತು.
ನಾಕೌಟ್ ಹಂತವು ಅಕ್ಟೋಬರ್ 29 ರಂದು ಆರಂಭವಾಗಲಿದೆ. ಮೊದಲ ಸೆಮಿಫೈನಲ್ ಪಂದ್ಯ ಗುವಾಹಟಿ ಅಥವಾ ಕೊಲಂಬೊದಲ್ಲಿ ನಡೆಯಲಿದ್ದು, ನಂತರ ಎರಡನೇ ಸೆಮಿಫೈನಲ್ ಪಂದ್ಯ ಅಕ್ಟೋಬರ್ 30 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಫೈನಲ್ ಪಂದ್ಯವು ನವೆಂಬರ್ 2 ರ ಭಾನುವಾರದಂದು ನಿಗದಿಯಾಗಿದ್ದು, ಬೆಂಗಳೂರು ಅಥವಾ ಕೊಲಂಬೊದಲ್ಲಿ ನಡೆಯಲಿದೆ.
ಪಾಕಿಸ್ತಾನ ತಂಡದ ಅರ್ಹತೆಯನ್ನು ಅವಲಂಬಿಸಿ ಮೊದಲ ಸೆಮಿಫೈನಲ್ ಮತ್ತು ಫೈನಲ್ ಪಂದ್ಯದ ಸ್ಥಳಗಳು ಬದಲಾವಣೆಗೆ ಒಳಪಟ್ಟಿರುತ್ತವೆ. ಪಾಕಿಸ್ತಾನ ಸೆಮಿಫೈನಲ್ ಅಥವಾ ಫೈನಲ್ ತಲುಪಿದರೆ, ಕೊಲಂಬೊವನ್ನು ಆತಿಥೇಯ ಸ್ಥಳವಾಗಿ ಬಳಸಲಾಗುತ್ತದೆ.
ಟಿ20 ಸ್ಥಳ, ದಿನಾಂಕ ಪ್ರಕಟ
2026 ರ ಐಸಿಸಿ ಮಹಿಳಾ ಟಿ 20 ವಿಶ್ವಕಪ್ ಟೂರ್ನಿ ಜೂನ್ 12 ರಿಂದ ಜುಲೈ 5ರವರೆಗೆ ಇಂಗ್ಲೆಂಡ್ನಲ್ಲಿ ಆಯೋಜಿಸಲಿದೆ ಎಂದು ಐಸಿಸಿ ದೃಢಪಡಿಸಿದೆ. ಫೈನಲ್ ಪಂದ್ಯ ಜುಲೈ 5 ರಂದು ಐಕಾನಿಕ್ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಒಟ್ಟು 33 ಪಂದ್ಯಗಳು ನಡೆಯಲಿದ್ದು, ಕ್ರಿಕೆಟ್ನ ಶಕ್ತಿಶಾಲಿ ರಾಷ್ಟ್ರಗಳಾದ ಆಸ್ಟ್ರೇಲಿಯಾ, ಭಾರತ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಜತೆಗೆ ಆತಿಥೇಯ ಇಂಗ್ಲೆಂಡ್ ಮತ್ತು ಇತರ ಐದು ತಂಡಗಳು ಆಡಲಿದೆ. 2025 ರಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಮೂಲಕ ಇನ್ನೂ ನಾಲ್ಕು ತಂಡಗಳು ತಮ್ಮ ಸ್ಥಾನವನ್ನು ಖಚಿತಪಡಿಸಬೇಕಿದೆ.