Giridhar Kaje Intervew: ಜಾತಿ ಗಣತಿಯನ್ನು ತಿರಸ್ಕರಿಸಲಿ
ಸಮಾಜದಲ್ಲಿ ಜಾತಿ ಪದ್ಧತಿ ಮೊದಲಿನಿಂದಲೂ ಬಂದಿದೆ. ಆದರೆ ಅದನ್ನು ಪ್ರತ್ಯೇಕವಾಗಿ ಒಂದೊಂದು ಜಾತಿಯಲ್ಲಿ ಎಷ್ಟೆಷ್ಟು ಜನರಿದ್ದಾರೆ ಎಂದು ಆ ಸಂಖ್ಯೆಯನ್ನು ನಿರ್ಧಾರ ಮಾಡುವ ವಿಚಾರ ಜಾತ್ಯತೀತ ತತ್ವಕ್ಕೆ ವಿರುದ್ಧವಾದದ್ದು. ಈಗ ಮಾಡಿರುವ ಗಣತಿಯಲ್ಲಿ ಬ್ರಾಹ್ಮಣರು ಎನ್ನುವ ಕಾಲಂ, ಇನ್ನೊಂದು ಕಡೆ ಹವ್ಯಕರು ಎಂದು ಇತ್ತು. ಹವ್ಯಕರು ಬ್ರಾಹ್ಮಣರೂ ಹೌದು, ಹವ್ಯಕರೂ ಹೌದು


ಅಪರ್ಣಾ ಎ.ಎಸ್ ಬೆಂಗಳೂರು
ಉತ್ತರ ಕನ್ನಡವೊಂದರಲ್ಲಿಯೇ 2 ಲಕ್ಷ ಬ್ರಾಹ್ಮಣರಿರುವಾಗ 85 ಸಾವಿರ ಹವ್ಯಕರಿದ್ದಾರೆ ಎಂದು ಹೇಳಿರುವುದು ಎಷ್ಟು ಸರಿ? ಸರಕಾರ ನಡೆಸಿರುವ ಈ ಜಾತಿ ಗಣತಿಯೇ ಅವೈಜ್ಞಾನಿಕ ವಾಗಿದ್ದು, ಕೂಡಲೇ ಇದನ್ನು ತಿರಸ್ಕರಿಸಬೇಕು ಎಂದು ಹವ್ಯಕ ಮಹಾಸಭಾ ಅಧ್ಯಕ್ಷ ಗಿರಿಧರ ಕಜೆ ಆಗ್ರಹಿಸಿದ್ದಾರೆ. ‘ವಿಶ್ವವಾಣಿ’ಯೊಂದಿಗೆ ಮಾತನಾಡಿದ ಅವರ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.
ಜಾತಿ ಗಣತಿಯ ಬಗ್ಗೆ ನಿಮ್ಮ ನಿಲುವೇನು?
ಸಮಾಜದಲ್ಲಿ ಜಾತಿ ಪದ್ಧತಿ ಮೊದಲಿನಿಂದಲೂ ಬಂದಿದೆ. ಆದರೆ ಅದನ್ನು ಪ್ರತ್ಯೇಕವಾಗಿ ಒಂದೊಂದು ಜಾತಿಯಲ್ಲಿ ಎಷ್ಟೆಷ್ಟು ಜನರಿದ್ದಾರೆ ಎಂದು ಆ ಸಂಖ್ಯೆಯನ್ನು ನಿರ್ಧಾರ ಮಾಡುವ ವಿಚಾರ ಜಾತ್ಯತೀತ ತತ್ವಕ್ಕೆ ವಿರುದ್ಧವಾದದ್ದು. ಈಗ ಮಾಡಿರುವ ಗಣತಿಯಲ್ಲಿ ಬ್ರಾಹ್ಮಣರು ಎನ್ನುವ ಕಾಲಂ, ಇನ್ನೊಂದು ಕಡೆ ಹವ್ಯಕರು ಎಂದು ಇತ್ತು. ಹವ್ಯಕರು ಬ್ರಾಹ್ಮಣರೂ ಹೌದು, ಹವ್ಯಕರೂ ಹೌದು. ಹಾಗಾದರೆ ಅವರು ಯಾವುದರಲ್ಲಿ ಗುರುತು ಮಾಡಬೇಕಾಗಿರುವುದು? ಮುಸ್ಲಿಂರಲ್ಲಿ ಬೇರೆ ಬೇರೆ ಪಂಗಡಗಳಿದ್ದರೂ ಮುಸ್ಲಿಂರು ಎಂದು ಗುರುತು ಮಾಡಲು ಒಂದೇ ಕಾಲಂಗೆ ಅವಕಾಶಕೊಟ್ಟರು. ಅದೇ ರೀತಿಯಲ್ಲಿ ಬ್ರಾಹ್ಮಣರು ಎಂದು ಗುರುತು ಮಾಡಲು ಒಂದೇ ಕಾಲಂ ಕೊಡಬೇಕಲ್ಲವೇ? ಲಿಂಗಾಯತರಲ್ಲೂ ಬೇರೆ ಬೇರೆ ಪಂಗಡವಿದ್ದರೂ ಮೊದಲ ಹೆಡ್ಡಿಂಗ್ ಲಿಂಗಾಯತರು ಎಂದು ಹಾಕಿ ಗುರುತು ಮಾಡಲು ಅವಕಾಶ ನೀಡಿದ್ದರೆ ಆಗ ಸಂಖ್ಯೆ ಸರಿಯಾಗು ತ್ತಿತ್ತು. ಆ ರೀತಿಯಲ್ಲಿ ಮಾಡಬಹುದಿತ್ತು. ಈಗ ಬ್ರಾಹ್ಮ ಣರಲ್ಲೂ ಹೊಯ್ಸಳ ಕರ್ನಾಟಕ, ಬಬ್ಬೂರು ಕೆಮ್ಮೆ, ಬಡಗನಾಡು ಎಂದು ಬೇರೆ ಬೇರೆ ಇರುವುದನ್ನು ಬ್ರಾಹ್ಮಣರು ಬಡಗನಾಡು ಎಂದು ಮಾಡಬಹುದಿತ್ತು. ಆದರೆ ಕಾಲಂನ್ನೇ ಪ್ರತ್ಯೇಕವಾಗಿ ಮಾಡುವುದು ಮೂಲತಃ ತಪ್ಪು. ಇದು ಅವೈಜ್ಞಾನಿಕವಾಗಿದೆ.
ಸಮುದಾಯವನ್ನು ಕಡಿಮೆ ತೋರಿಸಲಾಗಿದೆ ಎನ್ನುವ ಆರೋಪ ನಿಜವೇ?
ಹವ್ಯಕರನ್ನು ಕೇವಲ 85 ಸಾವಿರ ಎಂದು ತೋರಿಸಿದ್ದಾರೆ. ಮೊನ್ನೆ ನಡೆದ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ 2.25 ಲಕ್ಷಜನ ಹವ್ಯಕರು ಸೇರಿದ್ದಾರೆ. ಅದರಲ್ಲಿ ಬೇರೆಯವರೂ ಬಂದಿದ್ದಾರೆ. ಆದರೂ ಸಮ್ಮೇಳನಕ್ಕೆ ಕನಿಷ್ಠವೆಂದರೂ 2 ಲಕ್ಷ ಜನರು ಬಂದಿದ್ದಾರೆ. ಹಾಗಿರುವಾಗ 85 ಸಾವಿರ ಎಂದು ತೋರಿಸಿರುವುದು ಯಾವ ರೀತಿಯಲ್ಲೂ ಸರಿಯಾಗಿಲ್ಲ. ಸಮುದಾಯವನ್ನು ಚಿಕ್ಕದು ಮಾಡಿ ತೋರಿಸಿದಂತಾಯಿತು. ಬ್ರಾಹ್ಮಣರು 40 ಲಕ್ಷಕ್ಕೂ ಅಧಿಕ ಇದ್ದಾರೆ ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿಯವರು ಹೇಳಿದ್ದಾರೆ. ಆದರೆ ಸರಕಾರದ ಗಣತಿಯಲ್ಲಿ 17 ಲಕ್ಷ ಎಂದು ತೋರಿಸಿದ್ದಾರೆ.
ಇದನ್ನೂ ಓದಿ: Lifestyle Interview: ಮೇರುನಟ ಡಾ. ರಾಜ್‌ಕುಮಾರ್‌ರಿಂದ ಪ್ರಶಂಸೆ ಗಳಿಸಿದ್ದ ಸಬೀಹಾ ಬಾನು
ಹವ್ಯಕ ಮಹಾಸಭಾದ ಮುಂದಿನ ದಾರಿ ಏನು?
ಸರಕಾರಕ್ಕೆ ನೇರವಾಗಿ ಈ ವರದಿಯನ್ನು ತಿರಸ್ಕಾರ ಮಾಡಬೇಕೆಂದು ಆಗ್ರಹಿಸುತ್ತೇವೆ. ಜಾತಿಗಣತಿ ನಡೆಸುವುದಿದ್ದರೆ ನಾವೆಲ್ಲವನ್ನೂ ಜಾತ್ಯಾತೀತ ಎಂದು ಹೇಳ್ತಾ ಜಾತಿಗೆ ಅತೀತವಾಗಿ ಜಾತಿಯನ್ನು ದಾಟಿ ಎಲ್ಲವನ್ನೂ ಮಾಡುವುದು ಎಂದು ಹೇಳಿದ ಮೇಲೆ ಸಮಾಜವನ್ನು ಜಾತಿಯ ನೆಲೆಯಲ್ಲಿ ಒಡೆಯುವ ಕಾರ್ಯ ಮಾಡಬಾರದು. ಎಲ್ಲ ಜಾತಿಗಳೂ ಅವರ ವರ ಸಂಬಂಧಕ್ಕೆ, ಧಾರ್ಮಿಕ ಕಾರ್ಯಕ್ಕೆ, ಅವರ ಮನೆಗೆ, ಕುಟುಂಬಕ್ಕೆ ಸಂಬಂಧಿಸಿದ ಕಾರ್ಯಗಳಿಗೆ ಆ ಜಾತಿಯಿರುತ್ತದೆ. ಮದುವೆ, ಶುಭ ಸಮಾರಂಭ, ಉಪನಯನ ಎನ್ನುವ ಕಾರ್ಯಕ್ರಮಗಳಿಗೆ ಬೇಕು. ಯಾವುದೇ ಸರಕಾರದ ಅರ್ಜಿಗಳಲ್ಲಿ ಯಾವ ಜಾತಿ ಎಂದು ಕೇಳುವಂತಹದ್ದೇ ತಪ್ಪು. ಜಾತ್ಯತೀತ ಎಂದು ಹೇಳಿದ ಮೇಲೆ ಸರಕಾರದ ಯಾವುದೇ ಅರ್ಜಿಗಳಲ್ಲಿ ಯಾವ ಜಾತಿ ಎಂದು ಕೇಳುವಂತಹದ್ದು ತಪ್ಪು. ಅದರ ಮುಂದಿನ ಹಂತ ಈ ರೀತಿ ಜಾತಿಗಣತಿ ಮಾಡುತ್ತಿರುವಂತಹದ್ದು.
ಮೀಸಲು ಹೆಚ್ಚಿಸಲು ಮಾಡಿರುವ ಶಿಫಾರಸು ಸರಿಯೇ?
ಹಿಂದೆ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ ಒಂದು ಮಾತು ಹೇಳಿದ್ದರು. ಹವ್ಯಕರು ಮೀಸಲಾತಿ ಕೇಳಬೇಕಾದ ಅಗತ್ಯವಿಲ್ಲ. ಏಕೆಂದರೆ ಎಲ್ಲರಿಗೂ ಮೀಸಲಾತಿ ಕೊಡುತ್ತಾ ಕೊನೆಗೆ ಮೀಸಲಾತಿ ಇಲ್ಲದವರು ಹವ್ಯಕ ಅಥವಾ ಬ್ರಾಹ್ಮಣರು ಮಾತ್ರ ಎಂದಾಗಿದೆ. ಹಾಗಾಗಿ ಉಳಿದದ್ದಷ್ಟು ಬ್ರಾಹ್ಮಣರಿಗೆ ಇದ್ದ ಮೀಸಲಾತಿ ಹಾಗೇ ಅನ್ನಿಸುತ್ತದೆ ಎಂದು ಲೇವಡಿ ಮಾಡಿದ್ದರು. ಅಂದರೆ ಮೀಸಲಾತಿ ಯಾವ ರೀತಿ ತಪ್ಪಾಗಿ ಹೋಗುತ್ತದೆ ಎನ್ನುವುದನ್ನು ಅವರು ತೋರಿಸಿದ್ದರು. ಆರ್ಥಿಕವಾಗಿ ಯಾರು ದುರ್ಬಲರಾಗಿದ್ದಾರೆ ಅವರಿಗೆ ಮೀಸಲಾತಿ ಕೊಡುವಂತಹದ್ದು ಸರಿ. ಅದು ಬಿಟ್ಟು ಜಾತಿ ಆಧಾರದಲ್ಲಿ ಕೊಡುವಂತಹದ್ದು, ಅದನ್ನೂ ಮೀರಿ ಧರ್ಮದ ಆಧಾರದಲ್ಲಿ ಮೀಸಲಾತಿ ಕೊಡಲು ಹೊರಟಿದ್ದಾರೆ. ಇದು ಶುದ್ಧ ತಪ್ಪು. ಈ ಮೀಸಲಾತಿಯನ್ನೇ ಮಾಡುತ್ತಾ ಹೋದರೆ ಸಮಾಜದ ಒಟ್ಟಾರೆ ಕಾರ್ಯಕ್ಷಮತೆ ಅದು ತುಂಬಾ ಕಡಿಮೆಯಾಗುತ್ತಾ ಹೋಗುತ್ತದೆ. ಎಲ್ಲ ವರ್ಗಗಳಲ್ಲಿ ಆರ್ಥಿಕವಾಗಿ ಕಷ್ಟದಲ್ಲಿರುವವರು ಇದ್ದಾರೆ. ಅವರಿಗಾದರೂ ಆರ್ಥಿಕ ಸಹಾಯ ಮಾಡಬೇಕು. ಅಲ್ಲಿ ಮೀಸಲಾತಿಯನ್ನೇ ಕೊಡಬೇಕು ಎಂದಲ್ಲ. ಆ ಮೂಲಕ ಪ್ರತ್ಯೇಕ ಸಮಾಜ ವನ್ನು, ಸಮುದಾಯವನ್ನು ಸರಕಾರ ಮುಂದೆ ತರಲು ಸಾಧ್ಯವಿದೆ. ಅದನ್ನು ಬಿಟ್ಟು ಕೇವಲ ಮೀಸಲಾತಿಯನ್ನೇ ಕೊಡುವಂತಹದ್ದಲ್ಲ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾಯಿತು, ಇನ್ನೂ ಮೀಸಲಾತಿಯನ್ನೇ ಮುಂದುವರಿಸುತ್ತಾ ಇದ್ದರೆ ದೇಶದ ಬೆಳವಣಿಗೆ ಖಂಡಿತವಾಗಿ ನಿಧಾನ ಗತಿಯಲ್ಲಿ ಸಾಗುತ್ತದೆ. ಅದನ್ನು ಬಿಟ್ಟು ಮೀಸಲಾತಿ ಬೇಡ ಅದಿಲ್ಲದೆ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಸಿದ್ಧರಿದ್ದೇವೆ ಎಂದು ಜನರು ಹೇಳಲು ತಯಾರಾಗಬೇಕು. ಹಾಗಾದಾಗ ಮಾತ್ರ ಸಮಾಜ ತುಂಬಾ ಚೆನ್ನಾಗಿ ಬೆಳೆಯಲು ಸಾಧ್ಯವಿದೆ.
ಜನಿವಾರ ತೆಗೆಸಿದ ವಿವಾದಕ್ಕೆ ನಿಮ್ಮಅಭಿಪ್ರಾಯವೇನು?
ಮೊದಲನೇಯದು ಕಾನೂನಿನ ಪ್ರಕಾರ ಇದು ಶುದ್ಧ ತಪ್ಪು. ಇದನ್ನು ಸಿಇಟಿ ಸೆಲ್‌ನವರು ಒಪ್ಪಿ ಕೊಂಡಿದ್ದಾರೆ, ಮಂತ್ರಿಗಳು ಕೂಡ ಒಪ್ಪಿಕೊಂಡಿದ್ದಾರೆ. ಸರಕಾರವೂ ಒಪ್ಪಿಕೊಂಡಿದೆ. ಇದನ್ನು ಯಾವುದೇ ರೀತಿಯಲ್ಲಿ ಯಾರೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಕಾನೂನು ರೀತಿ ಇದು ತಪ್ಪಾದ ಕ್ರಮ. ಸಿಇಟಿಯ ಯಾವುದೇ ನೀತಿ ನಿಯಮಗಳಲ್ಲಿ ಜನಿವಾರವನ್ನು ತೆಗೆಯಬೇಕು, ಜನಿವಾರವನ್ನು ಹಾಕುವಂತಿಲ್ಲ ಎಂಬ ಪ್ರಶ್ನೆಯೇ ಬಂದಿಲ್ಲ. ಹಾಗಾಗಿ ಕಾನೂನು ರೀತಿ ತಪ್ಪು. ಎರಡನೇಯದು ಸಭ್ಯತೆ. ಶಿಷ್ಟಾಚಾರ ಮತ್ತು ಸಭ್ಯತೆ ಎನ್ನುವಂತಹದ್ದು ಒಬ್ಬ ಮನುಷ್ಯನಿಗೆ ಬೇಕು. ಇದೆಲ್ಲರಿಗೂ ಗೊತ್ತಿದೆ. ಸಮಾಜದಲ್ಲಿ ಪರಂಪರೆಯಿಂದಲೇ ಬಂದಿರುವಂತಹ ಸಂಪ್ರದಾಯ, ಇದನ್ನು ಗೌರವಿಸಬೇಕು, ಸಮಾಜದಲ್ಲಿ ಬೇರೆ ಬೇರೆ ರೀತಿಯಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸಂಪ್ರದಾಯ ಅನುಸರಿಸುತ್ತಾರೆ. ಲಿಂಗಾಯತರು ಲಿಂಗಧಾರಣೆ ಮಾಡುತ್ತಾರೆ. ಬ್ರಾಹ್ಮಣರು, ಕ್ಷತ್ರಿಯರು, ವಿಶ್ವಕರ್ಮರು, ವೈಶ್ಯರಲ್ಲಿ ಅನೇಕರು ಜನಿವಾರ ಹಾಕುತ್ತಾರೆ. ಹೀಗೆ ಅನೇಕ ಸಮುದಾ ಯದಲ್ಲಿ ಜನಿವಾರ ಹಾಕುವಂತಹ, ಯಜ್ಞೋಪವೀತವನ್ನು ಧಾರಣೆ ಮಾಡುವಂತಹ ಪದ್ಧತಿಯಿದೆ.
ಸಂಪ್ರದಾಯದಿಂದಲೇ ಬಂದಿರುವುದರಿಂದ ಅದನ್ನು ಗೌರವಿಸಬೇಕು. ಇನ್ನು ಜನಿವಾರವನ್ನಿಟ್ಟು ಕೊಂಡು ನೇಣು ಹಾಕಿದರೆ ಎಂದು ಹೇಳಬೇಕಾದರೆ ಅವರ ಸಾಮಾನ್ಯ ಜ್ಞಾನ ಎಷ್ಟು ಕಳಪೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಅದು ಈ ಮೀಸಲಾತಿಯ ಪ್ರಭಾವದಿಂದಲೇ ಈ ರೀತಿ ಆಗುವಂತಹದ್ದು. ಯಾಕೆಂದರೆ ಮನುಷ್ಯನ ದೇಹದ ತೂಕ ಎಷ್ಟಿರುತ್ತದೆ ಅದನ್ನು ಒಂದು ಜನಿವಾರದಲ್ಲಿ ನೇಣು ಹಾಕಲು ಸಾಧ್ಯವಿದೆಯಾ ಎಂದು ಆಲೋಚಿಸಲು ಸಾಧ್ಯವಿಲ್ಲದಷ್ಟು ಆ ವ್ಯಕ್ತಿಗೆ, ಅಧಿಕಾರಿಗೆ ಆ ರೀತಿಯ ಜ್ಞಾನವಿಲ್ಲ, ಸಭ್ಯತೆಯಿಲ್ಲ ಎನ್ನುವುದನ್ನೂ ತೋರಿಸುತ್ತದೆ.
ಈ ಬಗ್ಗೆ ಮುಂದೆ ಯಾವ ರೀತಿಯ ಹೋರಾಟ ಮಾಡುವಿರಿ?
ಸರಕಾರ ಈಗಾಗಲೇ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದೆ. ತಪ್ಪು ನಡೆ ಎಂದು ಹೇಳಿದೆ. ಆ ವಿದ್ಯಾರ್ಥಿಗೆ ಯಾವ ರೀತಿ ಪರಿಹಾರ ನೀಡುತ್ತದೆ ಎಂದು ನಾವು ಗಮನಿಸುತ್ತೇವೆ. ಸರಕಾರ ಕ್ರಮ ಕೈಗೊಳ್ಳಲಿಲ್ಲ ಎಂದಾದರೆ, ಸರಕಾರ ಈಗಾಗಲೇ ಒಂದು ಹೆಜ್ಜೆ ಎಡವಿದೆ, ಮತ್ತೆ ಮತ್ತೆ ಎಡವುತ್ತಾ ಹೋದರೆ ತುಂಬಾ ಕಷ್ಟವಾಗುತ್ತದೆ. ಹಾಗಾಗಿ ಪರಿಹಾರ ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ಬರುವವರೆಗೂ ಹೋರಾಟವನ್ನು ನಿರಂತರವಾಗಿ ಹಾಗೂ ಪ್ರಯತ್ನವನ್ನು ನಿರಂತರವಾಗಿ ಮುಂದು ವರಿಸುತ್ತೇವೆ. ಅದಕ್ಕಿಂತಲೂ ಹೆಚ್ಚು ಇಲ್ಲಿ ಆ ತಪ್ಪಿತಸ್ಥರಿಗೆ ಶಿಕ್ಷೆ ಮಾತ್ರವಲ್ಲ, ಅಂತಹ ಉತ್ತಮ ವಾತಾವರಣವನ್ನು ಸರಕಾರ ಸಮಾಜದಲ್ಲಿ ನೀಡುವಂತಹದ್ದು ಕರ್ತವ್ಯ. ಆ ಸೌಹಾರ್ದತೆಯ ವಾತಾವರಣ ನಿರ್ಮಿಸದಿದ್ದರೆ ಹೀಗೆ ತಪ್ಪು ಕೆಲಸಕ್ಕೆ ಕೈ ಹಾಕುವಂತಹದ್ದು ಆಗುತ್ತದೆ. ಕಾನೂನನ್ನು ಮೀರಿ, ಮೂಲಭೂತ ಹಕ್ಕುಗಳನ್ನು ಮೀರಿ, ಸಭ್ಯತೆಯನ್ನು ಮೀರಿ, ಶಿಷ್ಟಾಚಾರವನ್ನು ಬದಿಗೊತ್ತಿ, ಸಂಸ್ಕಾರವಿಲ್ಲದೆ ಇಂತಹ ಕೆಲಸ ಮಾಡುವುದನ್ನು ತಡೆಯಲು ಸರಕಾರ ಮುಂದಾಗಬೇಕು. ಅಲ್ಲಿಯವರೆಗೆ ನಮ್ಮ ಪ್ರಯತ್ನವನ್ನು, ನಮ್ಮ ಸಂಘಟನೆಯ ಮೂಲಕ, ಸಮಾಜದ ಮೂಲಕ ನಾವು ಮಾಡಲು ಮುಂದಾಗುತ್ತೇವೆ.
*
ಜಾತಿಗಣತಿ ಎಲ್ಲರನ್ನೂ ತಲುಪಿಲ್ಲ ಎನ್ನುವುದು ದುರ್ದೈವದ ಸಂಗತಿ. ಜಾತಿಗಣತಿ ನಿಖರ ವಾಗಿರಬೇಕಾದರೆ ಪ್ರತಿಯೊಂದು ಮನೆಯನ್ನೂ ತಲುಪಿ ಸಂಪೂರ್ಣ ಮಾಹಿತಿಯನ್ನು ಪಡೆದು ಕೊಳ್ಳಬೇಕಿತ್ತು. ಹವ್ಯಕರ ಸಂಖ್ಯೆ 85000 ಎಂದು ಈಗಿನ ದಾಖಲೆಗಳಲ್ಲಿ ಹೇಳಲಾಗಿದೆ. ಉತ್ತರಕನ್ನಡ ಕ್ಷೇತ್ರದಲ್ಲಿ 2 ಲಕ್ಷದಷ್ಟು ಬ್ರಾಹ್ಮಣರು ಇದ್ಧಾರೆ. ಇವರು ಮತದಾನದ ಹಕ್ಕು ಪಡೆದವರು, ಇನ್ನು 18 ವರ್ಷದೊಳಗಿನ ಮಕ್ಕಳು ಪ್ರತ್ಯೇಕವಾಗಿದ್ದಾರೆ. 2.50 ಲಕ್ಷದಷ್ಟು ಜನರು ಅಲ್ಲೇ ಇದ್ದಾರೆ. ಹೀಗಿರುವಾಗ 85 ಸಾವಿರ ಎನ್ನಲು ಹೇಗೆ ಸಾಧ್ಯ?
-ಗಿರಿಧರ ಕಜೆ, ಹವ್ಯಕ ಮಹಾಸಭಾ ಅಧ್ಯಕ್ಷ