Dr J N Jagannath Column: ರೆಪೋ ದರದ ಸುತ್ತಮುತ್ತ
ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ಬಿಐ) ‘ಮಾನಿಟರಿ ಪಾಲಿಸಿ ಕಮಿಟಿ’ಯ (ಎಂಪಿಸಿ) ಸಭೆಯು ಮೊನ್ನೆ ಜೂನ್ 6ರಂದು ನಡೆಯಿತು. ಈ ಸಭೆಯಲ್ಲಿ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ ನಷ್ಟು ಇಳಿಸುವ ನಿರೀಕ್ಷೆಯಿತ್ತು. ಆದರೆ ಆರ್ಬಿಐನ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು, 50 ಬೇಸಿಸ್ ಪಾಯಿಂಟ್ ಇಳಿಸಿರುವುದಾಗಿ ಸಭೆಯ ನಂತರ ತಿಳಿಸಿದ್ದಾರೆ.


ವಿತ್ತಲೋಕ
ಡಾ.ಜೆ.ಎನ್.ಜಗನ್ನಾಥ್
ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ಬಿಐ) ‘ಮಾನಿಟರಿ ಪಾಲಿಸಿ ಕಮಿಟಿ’ಯ (ಎಂಪಿಸಿ) ಸಭೆಯು ಮೊನ್ನೆ ಜೂನ್ 6ರಂದು ನಡೆಯಿತು. ಈ ಸಭೆಯಲ್ಲಿ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ ನಷ್ಟು ಇಳಿಸುವ ನಿರೀಕ್ಷೆಯಿತ್ತು. ಆದರೆ ಆರ್ಬಿಐನ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು, 50 ಬೇಸಿಸ್ ಪಾಯಿಂಟ್ ಇಳಿಸಿರುವುದಾಗಿ ಸಭೆಯ ನಂತರ ತಿಳಿಸಿದ್ದಾರೆ.
ರೆಪೋ ದರವು ಭಾರತದಲ್ಲಿ ಬೇರೆ ಎಲ್ಲಾ ಬಡ್ಡಿದರಗಳಿಗೆ ಮಾರ್ಗದರ್ಶಿ ಆಗಿರುತ್ತದೆ. ಬ್ಯಾಂಕುಗಳು ಸರಕಾರಿ ಬಾಂಡುಗಳನ್ನು ಕೊಂಡುಕೊಳ್ಳುತ್ತವೆ. ಅವನ್ನು ಆರ್ಬಿಐನಲ್ಲಿ ಒತ್ತೆಯಿಟ್ಟು, ಅವಶ್ಯಕತೆಯ ಪ್ರಕಾರ ಸಾಲ ಪಡೆಯುತ್ತವೆ. ಆ ಸಾಲಕ್ಕೆ ನಿಗದಿಪಡಿಸುವ ಬಡ್ಡಿದರವೇ ‘ರೆಪೋ ದರ’. ರಿಸರ್ವ್ ಬ್ಯಾಂಕ್ ನಿಂದ ಸಾಲ ಪಡೆದ ಬ್ಯಾಂಕುಗಳು, ತಮ್ಮ ಸಾಲಗಾರರಿಗೆ ನೀಡುವ ಸಾಲದ ಮೇಲಿನ ಬಡ್ಡಿದರವು ರೆಪೋ ದರದ ಮೇಲೆ ಅವಲಂಬಿತವಾಗಿರುತ್ತದೆ.
ಉದಾಹರಣೆಗೆ, ರೆಪೋ ದರವು ಶೇ.೬ರಷ್ಟು ಇದ್ದರೆ, ಬ್ಯಾಂಕುಗಳು ರೆಪೋ ದರದ ಮೇಲೆ ಶೇ.2ರಷ್ಟು ಲಾಭ ನಿಗದಿ ಮಾಡಿ ಸಾಲ ನೀಡಿದರೆ, ಗ್ರಾಹಕನ ಸಾಲದ ಬಡ್ಡಿ ಶೇ.8ರಷ್ಟು ಆಗಿರುತ್ತದೆ. ರೆಪೋ ದರ ಇಳಿದು ಶೇ.5.5ರಷ್ಟು ಆದರೆ, ಅದೇ ಸಾಲದ ಬಡ್ಡಿಯು ಶೇ.8ರ ಬದಲು, ಶೇ.7.5 ಆಗುತ್ತದೆ.
ಅಂದರೆ ಗ್ರಾಹಕರ ಗೃಹಸಾಲ, ವಾಹನದ ಮೇಲಿನ ಸಾಲ, ಕಂಪನಿಗಳ ಸಾಲ ಇವುಗಳ ಮೇಲಿನ ಬಡ್ಡಿಯು ಶೇ.0.5ರಷ್ಟು ಕಡಿಮೆ ಆಗುತ್ತದೆ. ಇಡೀ ಪ್ರಪಂಚದಲ್ಲಿಯೇ ಅತ್ಯಂತ ಪ್ರಬಲ ಆರ್ಥಿಕತೆ ಹೊಂದಿರುವ ದೇಶವೆಂದರೆ ಅಮೆರಿಕ. ಇಲ್ಲಿ 2024ರಲ್ಲಿ 100 ಬೇಸಿಸ್ ಪಾಯಿಂಟ್ ಬಡ್ಡಿ ಇಳಿಸ ಲಾಗಿತ್ತು. ಆದರೆ 2025ರಲ್ಲಿ ಬಡ್ಡಿದರ ಬದಲಾಗಿಲ್ಲ. 2024ರ ಡಿಸೆಂಬರ್ 18ರಿಂದ ಶೇ.4.25ರಿಂದ ಶೇ.4.5ರವರೆಗೆ ಬಡ್ಡಿದರ ಸ್ಥಿರವಾಗಿದೆ, ಬದಲಾವಣೆ ಆಗಿಲ್ಲ.
ಇದನ್ನೂ ಓದಿ: Repo Rate: ಸಾಲಗಾರರಿಗೆ ಬಿಗ್ ರಿಲೀಫ್! ಆರ್ಬಿಐ ರೆಪೊ ದರ 0.50% ಕಡಿತ, ಇಳಿಯಲಿದೆ ಗೃಹ, ಕಾರು ಸಾಲ ಇಎಂಐ
ಅಮೆರಿಕದ ಸುಂಕನೀತಿ ಏನಾಗಬಹುದು ಎಂಬುದು ಇನ್ನೂ ಗೊತ್ತಾಗಿಲ್ಲ. ಇದರಿಂದಾಗಿ, ಯುರೋಪಿನ ಸೆಂಟ್ರಲ್ ಬ್ಯಾಂಕ್ 8 ಬಾರಿ ಬಡ್ಡಿದರ ಇಳಿಸಿ ಈಗ ಅದು ಶೇ.2ಕ್ಕೆ ಬಂದು ನಿಂತಿದೆ. ಆದರೆ ಯುರೋಪಿನ ಹಣದುಬ್ಬರ ಶೇ.1.6ಕ್ಕೆ ಇಳಿದಿದೆ. ಇದು ತುಂಬಾ ಉತ್ತಮವಾದ ಸ್ಥಿತಿ.
ಭಾರತದಲ್ಲಿ ಹಣದುಬ್ಬರವು 2024ರ ಅಕ್ಟೋಬರ್ನಲ್ಲಿ ಶೇ.6.21ರಷ್ಟಿತ್ತು. ಇದರಿಂದಾಗಿ 2024ರಲ್ಲಿ ಭಾರತದಲ್ಲಿ ರೆಪೋ ದರ ಯಾವುದೇ ಬದಲಾವಣೆಯನ್ನು ಕಾಣಲಿಲ್ಲ. 2025ರಲ್ಲಿ ಆರ್ ಬಿಐ ಗವರ್ನರ್ ಬದಲಾದರು. ನಂತರ ನಡೆದ ಮೂರು ಸಭೆಗಳಲ್ಲಿ ರೆಪೋ ದರವನ್ನು ಶೇ.6.5ರಿಂದ ಶೇ.5.5ಕ್ಕೆ ಇಳಿಸಲಾಗಿದೆ.
ಹಣದುಬ್ಬರ ಹೆಚ್ಚಾದಾಗ ರೆಪೋ ದರ ಏರಿಸಿ ಸಾಲದ ಬಡ್ಡಿ ಏರಿದಾಗ ಜನರ ಬಳಿ ಹಣ ಕಡಿಮೆ ಯಿದ್ದು ಸರಕುಗಳಿಗೆ ಬೇಡಿಕೆ ಕಡಿಮೆಯಾಗುತ್ತದೆ. ಆಗ ವಸ್ತುಗಳ ಬೆಲೆ ಕಡಿಮೆಯಾಗುತ್ತದೆ. ಹಣದುಬ್ಬರವನ್ನು ಶೇ.4ಕ್ಕಿಂತ ಕಡಿಮೆ ಮಾಡಬೇಕು ಎಂದು ಆರ್ಬಿಐ ಯೋಜಿಸಿತ್ತು. ಈಗ ವರ್ಷದ ಹಣದುಬ್ಬರ ಶೇ.3.7ರಷ್ಟು ಎಂದು ಅಂದಾಜು ಮಾಡಲಾಗಿದೆ.
ಹಣದುಬ್ಬರವು 2024ರ ಅಕ್ಟೋಬರ್ನಲ್ಲಿ ಶೇ.6.21ರಷ್ಟು ಇದ್ದುದು ಕ್ರಮೇಣ ಕಡಿಮೆಯಾಗುತ್ತಾ ಬಂದಿದೆ. ಆಹಾರ ಹಣದುಬ್ಬರವು ಬಹಳವಾಗಿ ಕಡಿಮೆಯಾಗಿದೆ. ಬಡ್ಡಿದರ ಕಡಿಮೆಯಾದಾಗ ಕಂಪನಿಗಳ ಖರ್ಚು ಕಡಿಮೆಯಾಗಿ ಲಾಭ ಹೆಚ್ಚುವುದರಿಂದ, ಹೆಚ್ಚಿನ ಉತ್ಪಾದನೆ, ಬೇಡಿಕೆ, ಉದ್ಯೋಗ ಸೃಷ್ಟಿ, ಲಾಭ ಆಗುತ್ತದೆ. ಅದರಿಂದಾಗಿ ದೇಶದ ಪ್ರಗತಿಯಾಗುತ್ತದೆ. ಆದರೆ ರೆಪೋ ದರ ಇಳಿದಾಗ ಬ್ಯಾಂಕುಗಳು ಠೇವಣಿದಾರರಿಗೆ ನೀಡುವ ಬಡ್ಡಿ ಕಡಿಮೆಯಾಗುತ್ತದೆ.
ಠೇವಣಿ ಮೇಲೆ ನೀಡುವ ಬಡ್ಡಿ ಕಡಿಮೆಯಾದಾಗ, ಪಿಂಚಣಿದಾರರಿಗೆ, ನಿಶ್ಚಿತ ಆದಾಯದವರಿಗೆ ಜೀವನವು ಬಹಳ ಕಷ್ಟಕರವಾಗುತ್ತದೆ. ಏಕೆಂದರೆ, ಅವರು ತಾವು ಕೆಲಸದಲ್ಲಿದ್ದಾಗ ಜೀವನಪೂರ್ಣ ಉಳಿಸಿದ ಹಣದ ಮೇಲಿನ ಬಡ್ಡಿ ಕಡಿಮೆಯಾಗುತ್ತದೆ. ಅವರಿಗೆ ಬೇರೆ ಆದಾಯ ಇರುವುದಿಲ್ಲ. ಹಣದುಬ್ಬರ ಇದ್ದು ಬಡ್ಡಿ ಕಡಿಮೆಯಾದಾಗ ಅವರಿಗೆ ಜೀವನ ಮಾಡುವುದು ಕಷ್ಟಕರವಾಗುತ್ತದೆ.
ಈಗಾಗಲೇ ಬ್ಯಾಂಕುಗಳಲ್ಲಿ ಠೇವಣಿ ಸಂಗ್ರಹಣೆ ಕಡಿಮೆಯಾಗಿ ಸಾಲ ನೀಡುವುದು ಹೆಚ್ಚಾಗಿದೆ. ಸಾಲ ಮತ್ತು ಠೇವಣಿಯ ಅನುಪಾತವು ಬಹಳ ಏರಿಕೆ ಕಂಡಿದೆ. ಬ್ಯಾಂಕಿನಲ್ಲಿನ ಠೇವಣಿ 100 ರುಪಾಯಿ ಇದ್ದು, 75 ರುಪಾಯಿ ಸಾಲವನ್ನು ಕೊಟ್ಟಿದ್ದರೆ ಅನುಪಾತ ಉತ್ತಮವಾಗಿದೆ ಎಂದರ್ಥ. ಆದರೆ ಈಗಾಗಲೇ ಠೇವಣಿಯು 100 ರು.ನಷ್ಟಿದ್ದು, ಸಾಲವು 80ರಿಂದ 85 ರು.ವರೆಗೆ ಏರಿದೆ.
ಠೇವಣಿ ಮೇಲಿನ ಬಡ್ಡಿ ಕಡಿಮೆಯಾದಾಗ ಠೇವಣಿ ಸಂಗ್ರಹಣೆ ಕಡಿಮೆಯಾಗುತ್ತದೆ. ಸಾಲದ ಮೇಲಿನ ಬಡ್ಡಿ ಕಡಿಮೆಯಾದಾಗ ಸಾಲದ ಪ್ರಮಾಣ ಏರುತ್ತದೆ. ಆಗ ಅನುಪಾತ ಇನ್ನಷ್ಟು ಕೆಡುತ್ತದೆ. ಅದು ಬ್ಯಾಂಕುಗಳ ಭದ್ರತೆಗೆ ಉತ್ತಮವಲ್ಲ.
ಭಾರತದಲ್ಲಿ ಕಳೆದ ವರ್ಷ ಹಣದುಬ್ಬರವು ಹೆಚ್ಚು ಇದ್ದುದು ಈ ವರ್ಷ ಕಡಿಮೆಯಾಗಿದೆ. ಜಿಡಿಪಿ (ಉತ್ಪಾದನೆ) ಈ ವರ್ಷ ಕಡಿಮೆಯಾಗುವ ನಿರೀಕ್ಷೆ ಇದೆ. ಮತ್ತೆ ಹಣದುಬ್ಬರ ಹೆಚ್ಚಿದರೆ ತೊಂದರೆ ಯಾಗಬಹುದು. ರೆಪೋ ದರವನ್ನು ಈ ವರ್ಷ 100 ಬೇಸಿಸ್ ಪಾಯಿಂಟ್ ಇಳಿಸಿರುವುದು ಆಶ್ಚರ್ಯ ಉಂಟುಮಾಡಿದೆ. ಆರ್ಥಿಕ ಬದಲಾವಣೆಗಳಲ್ಲಿನ ಈ ನಿರ್ಣಯ ಎಷ್ಟು ಸರಿ ಎಂಬುದನ್ನು ಕಾದುನೋಡಬೇಕು.
(ಲೇಖಕರು ಆರ್ಥಿಕ ತಜ್ಞರು)